ಚಪಾತಿ ಮಾಡಿದ ಕೆಲವೇ ಹೊತ್ತಿಗೆ ಗಟ್ಟಿಯಾಗುತ್ತದೆಯೇ? ಹಿಟ್ಟು ಕಲಸುವಾಗ ಈ ಸೀಕ್ರೆಟ್ ಟ್ರಿಕ್ ಫಾಲೋ ಮಾಡಿ

Published : Nov 01, 2026, 06:53 PM IST
Soft chapati tips Kannada

ಸಾರಾಂಶ

Soft chapati tips Kannada: ಬಿಸಿಬಿಸಿಯಾಗಿ ತಿನ್ನಲು ಆಸೆಯಿಂದ ಮಾಡಿದ ಚಪಾತಿ ಕೆಲವೇ ನಿಮಿಷಗಳಲ್ಲಿ ರಬ್ಬರ್‌ನಂತೆ ಗಟ್ಟಿಯಾಗುತ್ತಿದೆಯಾ? ಹಿಟ್ಟು ಕಲಸುವುದರಿಂದ ಹಿಡಿದು ಹೆಂಚಿನ ಮೇಲೆ ಬೇಯಿಸುವವರೆಗೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಇದಕ್ಕೆ ಮುಖ್ಯ ಕಾರಣ. ಎಣ್ಣೆ ಜಾಸ್ತಿ ಬಳಸದೆಯೇ ಚಪಾತಿ ಹೂವಿನಂತೆ ಮೃದುವಾಗಿರಲು ಮತ್ತು ಪೂರಿಯಂತೆ ಉಬ್ಬಿ ಬರಲು ಇಲ್ಲಿದೆ ಸಿಂಪಲ್ ಕಿಚನ್ ಟಿಪ್ಸ್.

ರಾತ್ರಿ ಊಟಕ್ಕೆ ಬಿಸಿಬಿಸಿಯಾದ, ಹತ್ತಿಯಂತಹ ಮೆತ್ತನೆಯ ಚಪಾತಿ ಜೊತೆಗೆ ಇಷ್ಟವಾದ ಪಲ್ಯ ಅಥವಾ ಗ್ರೇವಿ ತಿನ್ನಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅಡುಗೆ ಮನೆಗೆ ಹೋಗಿ ಎಷ್ಟೇ ಕಷ್ಟಪಟ್ಟು ಮಾಡಿದರೂ, ಹೆಂಚಿನಿಂದ ಕೆಳಗಿಳಿಸಿದ ಕೆಲವೇ ಹೊತ್ತಿಗೆ ಚಪಾತಿ ಹಪ್ಪಳದಂತೆ ಗಟ್ಟಿಯಾಗುತ್ತದೆ ಅಥವಾ ರಬ್ಬರ್‌ನಂತೆ ಎಳೆಯುತ್ತದೆ. ಇದರಿಂದ ಊಟ ಮಾಡುವ ಮೂಡ್ ಹಾಳಾಗುತ್ತದೆ. ಚಪಾತಿ ಗಟ್ಟಿಯಾಗಲು ಕೇವಲ ಗೋಧಿ ಹಿಟ್ಟಿನ ಗುಣಮಟ್ಟವಷ್ಟೇ ಕಾರಣವಲ್ಲ, ಬದಲಿಗೆ ನಾವು ಹಿಟ್ಟು ನಾದಿಕೊಳ್ಳುವ ಮತ್ತು ಬೇಯಿಸುವ ವಿಧಾನದಲ್ಲಿ ಮಾಡುವ ಸಣ್ಣ ತಪ್ಪುಗಳೂ ಕಾರಣ. ಈ ಕೆಳಗಿನ ಕಿಚನ್ ಸೀಕ್ರೆಟ್‌ಗಳನ್ನು ಪಾಲಿಸಿದರೆ ಪ್ರತಿದಿನವೂ ಮೃದುವಾದ ಚಪಾತಿ ಸವಿಯಬಹುದು..

ಹಿಟ್ಟು ಕಲಸುವಾಗ ಈ ತಪ್ಪು ಮಾಡ್ಬೇಡಿ

ಚಪಾತಿ ಸಾಫ್ಟ್ ಆಗಿ ಬರಲು ಹಿಟ್ಟು ಕಲಸುವ ವಿಧಾನವೇ ಅಡಿಪಾಯ. ಸಾಮಾನ್ಯ ತಣ್ಣೀರನ್ನು ಬಳಸುವ ಬದಲು ಉಗುರುಬೆಚ್ಚಗಿನ ನೀರನ್ನು ಬಳಸಿ ಹಿಟ್ಟನ್ನು ಕಲಸಬೇಕು. ಇದರಿಂದ ಹಿಟ್ಟಿನಲ್ಲಿರುವ ಗ್ಲುಟನ್ ಅಂಶ ಸಕ್ರಿಯಗೊಂಡು, ಹಿಟ್ಟು ಮೃದುವಾಗಿ ಹಿಗ್ಗುವ ಗುಣ ಪಡೆಯುತ್ತದೆ. ನೀರನ್ನು ಒಂದೇ ಬಾರಿಗೆ ಸುರಿಯದೆ, ಸ್ವಲ್ಪ ಸ್ವಲ್ಪವೇ ಚಿಮುಕಿಸುತ್ತಾ ಕಲಸಿಕೊಳ್ಳಿ. ಹಿಟ್ಟು ನುಣುಪಾಗುವಂತೆ ಕನಿಷ್ಠ 8 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ನಾದಬೇಕು. ಹಿಟ್ಟು ತೀರಾ ಗಟ್ಟಿಯಾಗಿಯೂ ಇರಬಾರದು, ಅತಿಯಾಗಿ ಮೆತ್ತಗೂ ಇರದೆ ಕಿವಿಯ ಹಾಳೆಯಂತೆ (Ear lobe) ಮೃದುವಾಗಿರಬೇಕು.

ಕಲಸಿದ ತಕ್ಷಣ ಲಟ್ಟಿಸಲು ಹೋಗ್ಬೇಡಿ

ಸಮಯವಿಲ್ಲ ಎಂದು ಹಿಟ್ಟು ಕಲಸಿದ ತಕ್ಷಣ ಚಪಾತಿ ಮಾಡಲು ಪ್ರಾರಂಭಿಸುವುದು ದೊಡ್ಡ ತಪ್ಪು. ಹಿಟ್ಟು ರೆಡಿಯಾದ ಮೇಲೆ ಅದರ ಮೇಲೆ ಅರ್ಧ ಚಮಚ ಎಣ್ಣೆ ಅಥವಾ ತುಪ್ಪ ಸವರಿ, ಒಂದು ತೆಳುವಾದ ತೇವವಾದ ಹತ್ತಿ (ಕಾಟನ್) ಬಟ್ಟೆಯನ್ನು ಮುಚ್ಚಿ ಕನಿಷ್ಠ 20 ರಿಂದ 30 ನಿಮಿಷ ನೆನೆಯಲು ಬಿಡಿ. ಈ ಸಮಯದಲ್ಲಿ ಹಿಟ್ಟು ತೇವಾಂಶವನ್ನು ಹೀರಿಕೊಂಡು ಇನ್ನಷ್ಟು ಮೃದುವಾಗುತ್ತದೆ. ಇದರಿಂದ ಚಪಾತಿ ಲಟ್ಟಿಸುವಾಗ ಸುಲಭವಾಗುವುದಲ್ಲದೆ, ಬೇಯಿಸುವಾಗ ಪೂರಿಯಂತೆ ಚೆನ್ನಾಗಿ ಉಬ್ಬುತ್ತದೆ.

ಒಣ ಹಿಟ್ಟು ಜಾಸ್ತಿ ಬಳಸ್ಬೇಡಿ

ಚಪಾತಿ ಮಣೆಗೆ ಅಂಟಿಕೊಳ್ಳಬಾರದು ಎಂದು ಪದೇ ಪದೇ ಒಣಹಿಟ್ಟು ಹಾಕಿ ಲಟ್ಟಿಸುವುದನ್ನು ತಪ್ಪಿಸಿ. ಹೆಚ್ಚು ಒಣಹಿಟ್ಟು ಬಳಸಿದರೆ ಹೆಂಚಿನ ಮೇಲೆ ಬೇಯುವಾಗ ಆ ಹಿಟ್ಟು ಸೀದುಹೋಗಿ, ಚಪಾತಿಯಲ್ಲಿರುವ ನೈಸರ್ಗಿಕ ತೇವಾಂಶವನ್ನು ಪೂರ್ತಿಯಾಗಿ ಹೀರಿಕೊಳ್ಳುತ್ತದೆ. ಪರಿಣಾಮವಾಗಿ ಚಪಾತಿ ಒಣಗಿ ಗಟ್ಟಿಯಾಗುತ್ತದೆ. ಆದ್ದರಿಂದ ಆದಷ್ಟು ಕಡಿಮೆ ಒಣಹಿಟ್ಟು ಬಳಸಿ, ಅಂಚುಗಳ ಮೇಲೆ ಸಮಾನ ಒತ್ತಡ ಹಾಕಿ ಲಟ್ಟಿಸಿ.

ಹೆಂಚಿನ ಉಷ್ಣತೆ ಸರಿಯಾಗಿರಲಿ

ಹೆಂಚು ಸರಿಯಾಗಿ ಕಾಯುವ ಮೊದಲೇ ಚಪಾತಿ ಹಾಕಿದರೆ ಅದು ಬೇಯಲು ಹೆಚ್ಚು ಸಮಯ ತೆಗೆದುಕೊಂಡು ರಬ್ಬರ್‌ನಂತಾಗುತ್ತದೆ. ಹಾಗೆಯೇ ಅತಿಯಾದ ಉರಿಯಲ್ಲಿಟ್ಟರೆ ಮೇಲ್ಭಾಗ ಸೀದುಹೋಗಿ ಒಳಗೆ ಬೇಯುವುದಿಲ್ಲ. ಹೆಂಚನ್ನು ಮಧ್ಯಮದಿಂದ ಹೆಚ್ಚಿನ ಉರಿಯಲ್ಲಿ (Medium to High flame) ಸರಿಯಾಗಿ ಕಾಯಿಸಿಕೊಳ್ಳಿ. ಚಪಾತಿ ಹಾಕಿದ ತಕ್ಷಣ ಸಣ್ಣ ಗುಳ್ಳೆಗಳು ಏಳುತ್ತಿದ್ದಂತೆ ಮಗುಚಿ ಹಾಕಿ, ಎರಡೂ ಬದಿ ತಿಳಿ ಕಂದು ಬಣ್ಣದ ಚುಕ್ಕೆಗಳು ಬರುವವರೆಗೆ ಮಾತ್ರ ಬೇಯಿಸಿ. ಪದೇ ಪದೇ ತಿರುಗಿಸಬೇಡಿ.

ಬಿಸಿ ಮತ್ತು ತೇವಾಂಶ ಉಳಿಸಿಕೊಳ್ಳುವ ವಿಧಾನ

ಚಪಾತಿ ಬೆಂದ ತಕ್ಷಣ ಅದನ್ನು ಹಾಗೇ ಗಾಳಿಗೆ ಪ್ಲೇಟ್‌ನಲ್ಲಿ ಬಿಟ್ಟರೆ ಕೆಲವೇ ನಿಮಿಷಗಳಲ್ಲಿ ಒಣಗಿ ಗಟ್ಟಿಯಾಗುತ್ತದೆ. ಹೆಂಚಿನಿಂದ ತೆಗೆದ ತಕ್ಷಣವೇ ಚಪಾತಿಯನ್ನು ಒಂದು ಹತ್ತಿ ಬಟ್ಟೆಯಲ್ಲಿ (Cotton cloth) ಸುತ್ತಿ ನಂತರ ಹಾಟ್‌ಬಾಕ್ಸ್ ಅಥವಾ ಮುಚ್ಚಳವಿರುವ ಪಾತ್ರೆಯಲ್ಲಿ ಇಡಬೇಕು. ಇದರಿಂದ ಅದರ ಆವಿಯ ತೇವಾಂಶ ಅಲ್ಲೇ ಉಳಿದು, ಚಪಾತಿ ಗಂಟೆಗಳ ಕಾಲ ಹತ್ತಿಯಂತೆ ಮೃದುವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರೇಮದ ಊರಿಗೆ ವಾಹನ ನಿಷೇಧಿಸಿದರೂ ನಿಲ್ಲದ ಜನಸಾಗರ; ಮಳೆ ಮಲ್ಲೇಶ್ವರ ಸನ್ನಿಧಿಯಲ್ಲಿ ಪ್ರತಿದಿನವೂ ಜಾತ್ರೆ!
ಮಸಾಲೆ ರುಬ್ಬುವ ಟೆನ್ಷನ್ ಇಲ್ಲ, ಕುಕ್ಕರ್ ಬಳಸಿ 10 ನಿಮಿಷದಲ್ಲಿ ಹೋಟೆಲ್ ಸ್ಟೈಲ್ ಚಿಕನ್ ಮಸಾಲ!