ಮೈಸೂರು (ಜೂ.06): ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆದಿದ್ದೇನೆ ಎಂದು ಮೈಸೂರು ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಾನು ರಾಜೀನಾಮೆ ಕೊಟ್ಟಿದ್ದೆ ಒಂದೇ ಉದ್ದೇಶಕ್ಕೆ. ಇಂತಹ ಅಧಿಕಾರಿಗಳು ಯಾವ ಜಾಗದಲ್ಲಿ ಇರಬಾರದು ಅಂತ. ಆದರೆ ಇದೀಗ ನನ್ನ ಹಾಗೂ ಅವರ ವರ್ಗಾವಣೆ ಆಗಿದೆ. ನನ್ನ ರಾಜೀನಾಮೆ ನಿರ್ಧಾರವನ್ನ ವಾಪಸ್ ಪಡೆದಿದ್ದೇನೆ ಎಂದು ಹೇಳಿದರು.
ಮೈಸೂರಿನಲ್ಲಿ ಎಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಮೈಸೂರಿನ ಜನರು ಅತ್ಯುತ್ತಮವಾದ ಸಹಕಾರ ನೀಡಿದ್ದಾರೆ. ನಾವು ಮಾಡಿದ ಆದೇಶವನ್ನು ಜನರು ಪರಿಪಾಲನೆ ಮಾಡಿದ್ದಾರೆ. ಮೈಸೂರಿನ ಜನರು, ಅಧಿಕಾರಿ ವರ್ಗ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ. ನಾನು ಯಾವುದೇ ರಾಜಕೀಯ ದಾಳ ಆಗಲಿಲ್ಲ. ನಾನು ಸರಿ ಇದ್ದ ಕಾರಣಕ್ಕೆ ಪಕ್ಷಾತೀತವಾಗಿ ನನಗೆ ಬೆಂಬಲ ಸಿಕ್ಕಿತು ಎಂದು ಹೇಳಿದರು.
undefined
ಸಿಡಿದೆದ್ದ ಶಿಲ್ಪಾನಾಗ್ : ಸಿಂಧೂರಿ ಆರೋಪಕ್ಕೆ ಅಂಕಿ- ಅಂಶ ಸಮೇತ ಪ್ರತ್ಯುತ್ತರ ..
ಕೆಟ್ಟ ವ್ಯವಸ್ಥೆ ತೊಲಗಲಿ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟೆ. ಯಾವುದೇ ಹೋರಾಟ ಶುರುಮಾಡಿದಾಗ ಈ ರೀತಿ ರಾಜಕೀಯ ಬಣ್ಣ ಬಳಿಯುವುದು ಸಾಮಾನ್ಯ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪ ನಿರಾಧಾರ. ನಾನು ಇದನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ. ಇಂತಹ ಚೀಪ್ ಮೆಂಟಾಲಿಟಿ ಸರಿಯಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾನಾಗ್ ಕಿಡಿ ಕಾರಿದರು.
ಸಿಎಸ್‌ಆರ್‌ನಿಂದ ಬಂದದ್ದು ವಸ್ತುಗಳು. ಅಲ್ಲಿ ಯಾವುದೇ ಹಣ ಇರಲಿಲ್ಲ. ವಾರ್ಡ್‌ಗಳಿಗೆ ಕೊಟ್ಟ ಹಣ ಪಾಲಿಕೆ ಸಭೆಯಲ್ಲಿ ಅನುಮೋದನೆ ಆಗಿರುವುದು ಎಂದು ಸಿಎಸ್‌ಆರ್ ಫಂಡ್ ಬಗ್ಗೆ ಶಿಲ್ಪಾ ನಾಗ್ ಸ್ಪಷ್ಟನೆ ನೀಡಿದರು.
ಯಾರು ತಮ್ಮ ಅಧಿಕೃತ ನಿವಾಸಕ್ಕೆ ಕೆಲವರನ್ನು ಕರೆದುಕೊಂಡು ಏನು ಹೇಳಿಕೊಟ್ಟಿದ್ದಾರೆ ಎನ್ನುವುದು ತಿಳಿದಿದೆ. ತಮ್ಮ ಬೀರುವಿನಲ್ಲಿ ಇಲ್ಲದ ದಾಖಲಾತಿಗಳ ಬಗ್ಗೆ ಮಾತನಾಡಿಸಿದ್ದಾರೆ. ನಾನು ನಿರ್ಗಮಿಸುವ ಕೊನೆಯ ಗಳಿಗೆಯಲ್ಲೂ ಹೆಸರಿಗೆ ಕಪ್ಪು ಚುಕ್ಕೆ ಇಡುವ ಕೆಲಸ ಮಾಡಿದ್ದಾರೆ. ಆದರೆ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್ ಹೇಳಿದರು.
ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಡೀಲರ್ ಇದ್ದಾರೆ. ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ಸ್ ಅನ್ನೋದು ಗೊತ್ತಿದೆ. ನನ್ನ ಟ್ರಾಕ್ ರೆಕಾರ್ಡ್ ನೋಡಲಿ. ಅವರ ಟ್ರಾಕ್ ರೆಕಾರ್ಡ್ ಕೂಡ ನೋಡಲಿ ಎಂದು ರೋಹಿಣಿ ವಿರುದ್ಧ ಗುಡುಗಿದ್ದಾರೆ.
ರೋಹಿಣಿ ರಂಪಾಯಣ: ರಾಜೀನಾಮೆ ನಿರ್ಧಾರದ ಬಗ್ಗೆ ಶಿಲ್ಪಾನಾಗ್ ಸ್ಪಷ್ಟನೆ .
ಅವರು ಯಾವುದಕ್ಕೆ ಲೆಕ್ಕ ಕೇಳಿದ್ದರೋ ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದೇನೆ. ಸುಮ್ಮನೆ ಅನಾವಶ್ಯಕವಾಗಿ ಗಬ್ಬೆಬ್ಬಿಸುವಂತ ಕೆಲಸ ಮಾಡಿದ್ದರು. ಯಾವ ರೀತಿಯ ತನಿಖೆ ಬೇಕಾದರೂ ಮಾಡಿಸಲಿ ಅದಕ್ಕೆ ದಾಖಲೆ ಇದೆ. 12 ಕೋಟಿ ಅಂತ ಹೇಳಿದ್ದಾರೆ ಅದ್ಯಾವ 12 ಕೋಟಿ ಅಂತ ಅವರೇ ಹೇಳಲಿ. ಒಂದೂ ಪೈಸೆಯನ್ನು ನಾವು ಕ್ಯಾಶ್ ನಲ್ಲಿ ತೆಗೆದುಕೊಂಡಿಲ್ಲ. ತೆಗೆದುಕೊಂಡಿರುವುದಕ್ಕೆ ದಾಖಲೆ ಪಾಲಿಕೆಯಲ್ಲಿ ಇದೆ. ಇದು ಕೇವಲ ಮೂರು ದಿನದಲ್ಲೆ ಉಂಟಾದ ಗೊಂದಲ ಅಷ್ಟೇ ಎಂದರು.
ಇನ್ನು ಮೈಸೂರಿನಲ್ಲಿ ಯಾರೇ ಅಧಿಕಾರಿ ಬಂದರೂ ಕೆಲಸ ಮಾಡುತ್ತಾರೆ. ಆದರೆ ಹಾಳು ಮಾಡುವಂತಹ ಅಧಿಕಾರಿ ಬೇಡ. ಇದೇ ಮಾತನ್ನ ನಾನು ಹೇಳಿದ್ದೇನೆ. ನಾನು ಇಂತಹ ಮಾತನಾಡಿರುವುದಕ್ಕೆ ಬೇಸರ ಇಲ್ಲ. ಸರ್ಕಾರದ ನಿರ್ಧಾರ ಸ್ವಾಗತ ಮಾಡುತ್ತೇನೆ. ಸೋಮವಾರ ಹೋಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರ ಸ್ವೀಕಾರ ಮಾಡುವುದಾಗಿ ಮೈಸೂರಿನಲ್ಲಿ ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್ ಹೇಳಿದರು.