ಹತ್ಯೆಯಾದ ದಿನ ಕೋಲ್ಕತ್ತಾ ಟ್ರೈನಿ ವೈದ್ಯೆ ಬರೆದ ಕೊನೆಯ ಡೈರಿಯಲ್ಲಿ ಏನಿತ್ತು?

By Anusha KbFirst Published Aug 16, 2024, 1:52 PM IST
Highlights

ಕೊಲೆಯಾದ ಕೋಲ್ಕತ್ತಾ ಟ್ರೈನಿ ವೈದ್ಯೆ ತಮ್ಮ ಮರಣದ ಕೆಲವೇ ಕ್ಷಣಗಳ ಮೊದಲು ಬರೆದ ಡೈರಿಯಲ್ಲಿ ತಮ್ಮ ಜೀವನದ ಗುರಿಗಳನ್ನು ಬರೆದಿದ್ದಾರೆ. ಎಂಡಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗೆಲ್ಲುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ, ಇದು ಅವರ ಶೈಕ್ಷಣಿಕ ಮಹತ್ವಾಕಾಂಕ್ಷೆಗಳನ್ನು ಮತ್ತು ವೈದ್ಯಕೀಯ ವೃತ್ತಿಗೆ ಇದ್ದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಕೋಲ್ಕತ್ತಾ ಟ್ರೈನಿ ವೈದ್ಯೆ ಹತ್ಯೆಯಾಗುವುದಕ್ಕೂ ಕೆಲ ನಿಮಿಷಗಳ ಮೊದಲು ಡೈರಿ ಬರೆದುಕೊಂಡಿದ್ದು, ಅದರಲ್ಲಿ ತಮ್ಮ ಜೀವನದ ಗುರಿಯ ಬಗ್ಗೆ ಬರೆದಿದ್ದು, ಕಣ್ಣೀರು ತರಿಸುವಂತಿದೆ. ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜುಗಳ ಹಣೆಬರಹವನ್ನು ಬಯಲು ಮಾಡಲು ಕಾರಣವಾದ ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದಿಂದ  ರೊಚಿಗ್ಗೆದಿರುವ ವೈದ್ಯಲೋಕ ದೇಶಾದ್ಯಂತ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆ ನಡೆದಾಗಿನಿಂದಲೂ ಪಶ್ಚಿಮ ಬಂಗಾಳದಲ್ಲಿ ವೈದ್ಯರು ಮುಷ್ಕರದಲ್ಲಿ ತೊಡಗಿದ್ದು, ಆರೋಗ್ಯ ಸೇವೆ ಹದಗೆಟ್ಟಿದೆ. 

ಈ ಮಧ್ಯೆ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಗೊಳಗಾದ ಟ್ರೈನಿ ವೈದ್ಯೆಯ ತಂದೆ, ತನ್ನ ಮಗಳು ಸಾಯುವುದಕ್ಕೂ ಮೊದಲು ಕೊನೆಯದಾಗಿ ತನ್ನ ಡೈರಿಯಲ್ಲಿ ಏನು ಬರೆದಿದ್ದಾಳೆ ಎಂಬುದನ್ನು ಹೇಳಿಕೊಂಡಿದ್ದು, ಕಣ್ಣಂಚನ್ನು ತೇವಗೊಳಿಸುತ್ತಿದೆ.  ಟವಿ ಚಾನೆಲ್‌ವೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನ್ನ ಪುತ್ರಿ ಸದಾ ಅಧ್ಯಯನದಲ್ಲಿ ತೊಡಗಿರುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ತನ್ನ ಗುರಿಯ ಬೆನ್ನಟ್ಟುವುದಕ್ಕಾಗಿ ಆಕೆ ದಿನವೂ 10 ರಿಂದ 12 ಗಂಟೆಗಳ ಕಾಲ ಓದುತ್ತಿದ್ದಳು. ಆಕೆ ಕೊನೆಯದಾಗಿ ಬರೆದ ತನ್ನ ಡೈರಿಯಲ್ಲಿ ಅದೇ ವಿಚಾರವಿದೆ. 

Latest Videos

ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್

ಆಕೆಯ ತಂದೆ ಹೇಳುವಂತೆ  ಎಂಡಿ ಕೋರ್ಸ್‌ನ ಪರೀಕ್ಷೆಯಲ್ಲಿ ಒಳ್ಳೆಯ ಸಾಧನೆ ಮಾಡುವ ಮೂಲಕ ಗೋಲ್ಡ್ ಮೆಡಲಿಸ್ಟ್ ಆಗಬೇಕು ಎಂದು ಆಕೆ ಬರೆದಿದ್ದಳು. ಇದು ಆಕೆಯ ಜೀವನದ ಗುರಿಗಳತ್ತ ಆಕೆಗಿದ್ದ ಆಸಕ್ತಿ ಹಾಗೂ  ವೈದ್ಯಕೀಯ ವೃತ್ತಿಯ ಮೇಲೆ ಆಕೆಗಿದ್ದ ಸಮರ್ಪಣೆಯನ್ನು ತೋರಿಸುತ್ತದೆ. 

ಆಕೆ ಹತ್ಯೆಯಾದ ದಿನ ಕೋಲ್ಕತ್ತಾದ ಆರ್‌ಜಿ ಕಾರ್ ಕಾಲೇಜಿನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದಕ್ಕೆ ಮನೆಯಿಂದ ತೆರಳುವ ಮೊದಲು ಆಕೆ ಈ ಡೈರಿಯನ್ನು ಬರೆದಿದ್ದಳು. ಆದರೆ ಮಗಳ ಸಾವಿನಿಂದ ನಮ್ಮ ಜೀವನ ನಿಂತು ಹೋಗಿದೆ. ನನ್ನ ಮಗಳು ಕಠಿಣ ಪರಿಶ್ರಮ ಪಡುವ ವಿದ್ಯಾರ್ಥಿನಿಯಾಗಿದ್ದಳು. ವೈದ್ಯೆಯಾಗುವ ತನ್ನ ಗುರಿ ಸಾಧಿಸುವುದಕ್ಕಾಗಿ ಆಕೆ ನಿರಂತರ ಹೋರಾಡಿದ್ದಳು ಹಾಗೂ ಆಕೆಯನ್ನು ಈ ಹಂತಕ್ಕೆ ಬೆಳೆಸುವಲ್ಲಿ ಕುಟುಂಬವೂ ಕೂಡ ಸಾಕಷ್ಟು ತ್ಯಾಗಗಳನ್ನು ಮಾಡಿದೆ ಎಂದು ಆಕೆಯ ತಂದೆ ಹೇಳಿದ್ದಾರೆ. 

ನ್ಯಾಯ ಸಿಗುವ ಭರವಸೆ ಇದೆ. ಆಕೆಯ ಸಾವಿನಿಂದ ನಮ್ಮ ಜೀವನದಲ್ಲಾದ ಕತ್ತಲನ್ನು ಬೇರೆ ಯಾರಿಂದಲೂ ಹೊಗಲಾಡಿಸಲು ಸಾಧ್ಯವಿಲ್ಲ, ಆದರೆ ಹೀಗೆ ಮಾಡಿದ ಅಪರಾಧಿಗಳಿಗೆ ಶಿಕ್ಷೆಯಾದರೆ ನಮಗೆ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಅವರು ಹೇಳಿದ್ದಾರೆ. ಆಕೆ ಹತ್ಯೆಯಾದಾಗ ನಮಗೆ ಆಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೊದಲಿಗೆ ಹೇಳಲಾಯ್ತು. ಆದರೆ ಸಾವಿಗೂ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿಗಿ ಕೊಲೆ ಮಾಡಲಾಗಿದೆ ಎಂಬುದು ನಂತರದಲ್ಲಿ ತಿಳಿಯಿತು.

ವೈದ್ಯೆ ರೇಪ್ & ಮರ್ಡರ್ ಆದ ಕೋಲ್ಕತ್ತಾ ಕಾಲೇಜಿನ ಕರಾಳ ಮುಖ ತೆರೆದಿಟ್ಟ ಮಹಿಳಾ ವೈದ್ಯೆಯ ಆಡಿಯೋ

ಗುರುವಾರ ಆಗಸ್ಟ್‌ 8 ರಂದು ರಾತ್ರಿ ರಾತ್ರಿಪಾಳಿಯ ಕೆಲಸಕ್ಕೆ ಬಂದ ಟ್ರೈನಿ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಆಗಸ್ಟ್ 9ರಂದು ಅನುಮಾನಾಸ್ಪದವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೆಮಿನಾರ್‌ ಹಾಲ್‌ನಲ್ಲಿ ಸಹೋದ್ಯೋಗಿಗಳ ಜೊತೆ ಆಹಾರ ಸೇವಿಸಿ 3 ಗಂಟೆಯ ವೇಳೆಗೆ ಆಕೆ ಸೆಮಿನಾರ್ ಹಾಲ್‌ನಲ್ಲಿ ವಿರಮಿಸುತ್ತಿದ್ದಾಗ ಕೃತ್ಯ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. 

ನನ್ನ ಮಗಳು ನೋವು ಪಡುವಳು... ಪರಿಹಾರ ನಿರಾಕರಿಸಿದ ಕೋಲ್ಕತ್ತಾ ಟ್ರೈನಿ ವೈದ್ಯೆಯ ತಂದೆ

ವೈದ್ಯರಾಗೋದು ಸುಲಭದ ಮಾತಲ್ಲ, ಓರ್ವ ಪರಿಪೂರ್ಣ ವೈದ್ಯರಾಗಲು ಒಬ್ಬ ವಿದ್ಯಾರ್ಥಿ ತಮ್ಮ ಬದುಕಿನ ಹಲವು ಅಮೂಲ್ಯ ಖುಷಿಯ ಕ್ಷಣಗಳನ್ನು ಕೌಟುಂಬಿಕ ಜೀವನವನ್ನು, ಲಕ್ಷಾಂತರ ರೂ ಹಣ, ಊಟ ನಿದ್ದೆಯನ್ನು ತ್ಯಾಗ ಮಾಡುತ್ತಾರೆ. ನಿರಂತರ ಓದಿನ ಜೊತೆ ಸದಾ ಅಧ್ಯಯನದಿಂದಾಗಿ ವೈದ್ಯಕೀಯ ಕೋರ್ಸ್ ಮುಗಿದು ಪದವಿ ಪಡೆಯುವ ವೇಳೆ ವಿದ್ಯಾರ್ಥಿಗಳು ಹೈರಾಣಾಗಿ ಹೋಗುತ್ತಾರೆ. ಇದರ ಜೊತೆಗೆ ಪೋಷಕರ ಶ್ರಮ, ಹಣವೂ ಅಷ್ಟೇ ಖರ್ಚಾಗಿರುತ್ತದೆ. ಆದರೆ ಮಕ್ಕಳ ಓದಿನ ಮುಂದೆ ಅದೆಲ್ಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸಾಲಸೋಲ ಮಾಡಿ ಮಕ್ಕಳನ್ನು ಓದಿಸುವ ಪೋಷಕರಿಗೆ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಾರೆನ್ನುವ ಸಮಯದಲ್ಲಿ ಇಂತಹ ಅನಾಹುತವಾದರೆ, ತಮ್ಮ ಸರ್ವಸ್ವವಾದ ಮಕ್ಕಳೇ ಬದುಕಿಲ್ಲ ಎಂದಾದರೆ ಅದನ್ನು ಸಹಿಸಿಕೊಳ್ಳುವುದಾದರು ಹೇಗೆ? ಅವರಿಗೆ ಕಾಲವೇ ಉತ್ತರ ಹೇಳಬೇಕಿದೆ. 

click me!