
ಕೆಲ ದಿನಗಳ ಹಿಂದೆ ದೆಹಲಿ ಭಾರತ್ ಮಂಟಪದಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆಯಲ್ಲಿ ಶರ್ಟ್‌ಲೆಸ್ ಆಗಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರನ್ನು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ದೆಹಲಿ ಪೊಲೀಸರು ಬಂಧಿಸಿದ ನಂತರ ಎರಡು ರಾಜ್ಯಗಳ ಪೊಲೀಸರ ಮಧ್ಯೆ ಹೈವೋಲ್ಟೆಜ್ ಘರ್ಷಣೆ ನಡೆದಿದ್ದು, ಪೊಲೀಸರೇ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ ಘಟನೆ ನಡೆದಿದೆ.
ಬುಧವಾರ ನಡೆದ ಈ ಎರಡು ರಾಜ್ಯಗಳ ಪೊಲೀಸರ ನಡುವೆ ನಡೆದ ಈ ಅಪರೂಪದ ನಾಟಕೀಯ ಘರ್ಷಣೆಯಲ್ಲಿ ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರು ಎಫ್‌ಐಆರ್ ದಾಖಲಿಸಿ ಬಂಧಿಸಿದ್ದರು. ತಡರಾತ್ರಿಯವರೆಗೂ ಎರಡು ರಾಜ್ಯಗಳ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಕೊನೆಗೂ ಪ್ರಕರಣ ರಾತ್ರಿಯೇ ಬಗೆಹರಿಸಲ್ಪಟ್ಟಿದೆ.
2026 ರ ಎಐ ಶೃಂಗಸಭೆಯಲ್ಲಿ ಶರ್ಟ್ ಧರಿಸದೇ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿನ ರೆಸಾರ್ಟೊಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಪಡೆದ ದೆಹಲಿ ಪೊಲೀಸರು ಅಲ್ಲಿಗೆ ಭೇಟಿ ನೀಡಿ ಅವರನ್ನು ಬಂಧಿಸಿದ ಕರೆದುಕೊಂಡು ಬರಲು ಮುಂದಾಗಿದ್ದಾರೆ. ಆದರೆ ಈ ವಿಚಾರದ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಹಿಮಾಚಲ ಪ್ರದೇಶದ ಪೊಲೀಸರು ದೆಹಲಿ ಪೊಲೀಸರನ್ನೆ ತಡೆದು ಅವರ ವಿರುದ್ಧ ಅಕ್ರಮ ಬಂಧನದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
ದೆಹಲಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು
ಹಿಮಾಚಲ ಪ್ರದೇಶದಲ್ಲಿ ದೆಹಲಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸ್ಥಳೀಯ ಅಧಿಕಾರಿಗಳಿಗೆ ಪೂರ್ವ ಸೂಚನೆ ನೀಡದೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶಿಮ್ಲಾ ಪೊಲೀಸರು ಆರೋಪಿಸಿದ್ದಾರೆ. ಹಿಮಾಚಲ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಉಡುಪಿನಲ್ಲಿರುವ 15ರಿಂದ 20 ವ್ಯಕ್ತಿಗಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಪ್ರವಾಸಿಗರನ್ನು ವಾಹನಗಳಿಗೆ ಬಲವಂತವಾಗಿ ಏರಿಸಿರುವುದು ಕಂಡುಬಂದಿದೆ. ಇದಲ್ಲದೆ, ಆರೋಪಿಗಳು ತಂಗಿದ್ದ ಚನ್ಶಾಲ್ ರೆಸಾರ್ಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನು ಕೂಡ ರಶೀದಿ ನೀಡದೆ ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಲಾಗಿದೆ. ಈ ದೂರುಗಳ ನಂತರ, ಹಿಮಾಚಲ ಪೊಲೀಸರು ದೆಹಲಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಿವಾದ ಉಲ್ಬಣಗೊಂಡಿದ್ದು ಹೇಗೆ?
ದೆಹಲಿ ಪೊಲೀಸರು ಶಿಮ್ಲಾದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ರೋಹ್ರುಗೆ ನಾಲ್ಕು ವಾಹನಗಳಲ್ಲಿ ಆಗಮಿಸಿದ್ದಾರೆ. ಬುಧವಾರ ಬೆಳಿಗ್ಗೆ, ರೋಹ್ರುವಿನ ಹೋಟೆಲ್‌ನಲ್ಲಿ ತಂಗಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಅವರು ಬಂಧಿಸಿದ್ದಾರೆ. ಈ ಆರೋಪಿಗಳನ್ನು ಅರ್ಬಾಜ್, ಸೌರವ್ ಮತ್ತು ಸಿದ್ಧಾರ್ಥ್ ಎಂದು ಗುರುತಿಸಲಾಗಿದ., ಇವರು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಿವಾಸಿಗಳಾಗಿದ್ದು, ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ. ಆದರೆ ಬಂಧನದಿಂದ ತಪ್ಪಿಸಿಕೊಳ್ಳಲು ಈ ಮೂವರು ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: 22 ವರ್ಷದ ಯೋಧ ಕ್ಯಾಪ್ಟನ್ ಅಮನ್ ಸಿಂಗ್ ಸಾವು
ಈ ಮೂವರನ್ನು ದೆಹಲಿ ಪೊಲೀಸರು ಹಿಮಾಚಲದಿಂದ ಬಂಧಿಸಿ ಕರೆತರುತ್ತಿದ್ದಾಗ ಶಿಮ್ಲಾ ಪೊಲೀಸರು ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿ ಈ ಬೆಂಗಾವಲು ಪಡೆಯನ್ನು ತಡೆದರು. ಒಂದು ವಾಹನವನ್ನು ಐಎಸ್‌ಬಿಟಿ ಶಿಮ್ಲಾದಲ್ಲಿ, ಇನ್ನೊಂದು ವಾಹನವನ್ನು ಶೋಘಿಯಲ್ಲಿ ಮತ್ತು ಎರಡು ವಾಹನಗಳನ್ನು ಸೋಲನ್ ಜಿಲ್ಲೆಯ ಧರಂಪುರದಲ್ಲಿ ತಡೆಯಲಾಯ್ತು. ಇವರ ಬಳಿ ಇದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಶಿಮ್ಲಾ ಪೊಲೀಸರು ಅವರನ್ನು ಶಿಮ್ಲಾದ ಚಕ್ಕರ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಸುಮಾರು 18 ದೆಹಲಿ ಪೊಲೀಸ್ ಸಿಬ್ಬಂದಿ ಕೂಡ ನ್ಯಾಯಾಲಯದ ಆವರಣಕ್ಕೆ ತಲುಪಿದರು. ಆರೋಪಿಗಳನ್ನು ಸಂಜೆ 4:45 ರ ಸುಮಾರಿಗೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ವಿಚಾರಣೆಯು ಸಂಜೆ 6 ಗಂಟೆಯವರೆಗೆ ಮುಂದುವರೆಯಿತು.
ಪೂರ್ವ ಮಾಹಿತಿ ನೀಡದ್ದಕ್ಕೆ ಆಕ್ಷೇಪ
ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ದೆಹಲಿ ಪೊಲೀಸರು ಸ್ಥಳೀಯ ಅಧಿಕಾರಿಗಳಿಗೆ ಔಪಚಾರಿಕವಾಗಿ ತಿಳಿಸದೆ ಬಂಧನಗಳನ್ನು ನಡೆಸಿದ್ದಾರೆ ಎಂದು ಶಿಮ್ಲಾ ಪೊಲೀಸರು ನ್ಯಾಯಾಲಯದಲ್ಲಿ ಆರೋಪಿಸಿದ್ದು, ಇದನ್ನು ಅನುಚಿತ ಕಾರ್ಯವಿಧಾನ ಎಂದು ಕರೆದರು. ಹೀಗಾಗಿ ನ್ಯಾಯಾಲಯದ ಆವರಣದಲ್ಲಿ ಎರಡೂ ರಾಜ್ಯಗಳ ಪೊಲೀಸ್ ಪಡೆಗಳ ಅಧಿಕಾರಿಗಳ ನಡುವೆ ಸುದೀರ್ಘ ಚರ್ಚೆಗಳು ನಡೆದವು. ನಂತರ ಸಂಜೆ 7:25 ರ ಸುಮಾರಿಗೆ ಶಿಮ್ಲಾ ಪೊಲೀಸರು ಆರೋಪಿಗಳನ್ನು ದೆಹಲಿ ಪೊಲೀಸರಿಗೆ ಹಿಂತಿರುಗಿಸಿದರು. ಆದರೆ, ಶೋಘಿ ಬಳಿ ಜಿಲ್ಲಾ ನ್ಯಾಯಾಲಯದಿಂದ ಸುಮಾರು 6-7 ಕಿ.ಮೀ ದೂರದಲ್ಲಿ ಶಿಮ್ಲಾ ಪೊಲೀಸರು ಮತ್ತೊಮ್ಮೆ ದೆಹಲಿ ಪೊಲೀಸ್ ಬೆಂಗಾವಲು ಪಡೆಯನ್ನು ತಡೆದರು, ಇದು ಎರಡೂ ರಾಜ್ಯಗಳ ಅಧಿಕಾರಿಗಳ ನಡುವೆ ಮತ್ತೊಂದು ಸುತ್ತಿನ ಮಾತಿನ ಚಕಮಕಿಗೆ ಕಾರಣವಾಯಿತು.
ರಾತ್ರಿ ಸುಮಾರು 11:15 ರ ಸುಮಾರಿಗೆ, ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವೈದ್ಯಕೀಯ ಪರೀಕ್ಷೆಗಾಗಿ ರಿಪನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗುರುವಾರ ಅಂದರೆ ಇಂದು ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಟ್ರಾನ್ಸಿಟ್ ರಿಮಾಂಡ್ ವಿಚಾರಣೆಗೆ ಒಳಪಡಿಸಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಈ ಮೂವರು ಯುವ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬಂಧನವನ್ನು ತಪ್ಪಿಸಲು ಅವರು ಹಿಮಾಚಲ ಪ್ರದೇಶದ ರೋಹ್ರುಗೆ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ