‘ನ್ಯಾಯಾಂಗದ ಭ್ರಷ್ಟಾಚಾರ’ ಪಠ್ಯಕ್ಕೆ ಕೊಕ್‌

Kannadaprabha News   | Kannada Prabha
Published : Feb 26, 2026, 06:27 AM IST
 Books

ಸಾರಾಂಶ

ಕೇಂದ್ರೀಯ ಪಠ್ಯಕ್ರಮದ 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಪಾಠ ವಿವಾದಕ್ಕೀಡಾಗಿದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರ ಎಂಬ ವಿವರಣೆ ಇರುವುದೇ ವಿವಾದಕ್ಕೆ ಮೂಲ. ಇದಕ್ಕೆ ಖುದ್ದು ಸುಪ್ರೀಂ ಕೋರ್ಟ್‌ ಕಿಡಿಕಾರಿದೆ.

ನವದೆಹಲಿ : ಕೇಂದ್ರೀಯ ಪಠ್ಯಕ್ರಮದ 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಪಾಠ ವಿವಾದಕ್ಕೀಡಾಗಿದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರ ಎಂಬ ವಿವರಣೆ ಇರುವುದೇ ವಿವಾದಕ್ಕೆ ಮೂಲ. ಇದಕ್ಕೆ ಖುದ್ದು ಸುಪ್ರೀಂ ಕೋರ್ಟ್‌ ಕಿಡಿಕಾರಿದೆ. ಇದರ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದ್ದು, ಪಾಠದಲ್ಲಿನ ವಿವಾದಾತ್ಮಕ ಅಂಶಗಳನ್ನು ಕೈಬಿಡಲು ನಿರ್ಧರಿಸಿದೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ‘ಕೋರ್ಟ್‌ಗಳಲ್ಲಿ ಭ್ರಷ್ಟಾಚಾರ, ಭಾರಿ ಪ್ರಮಾಣದ ಪ್ರಕರಣ ಬಾಕಿ ಮತ್ತು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ಕೊರತೆ- ಇವು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು’ ಎಂದು ಬರೆಯಲಾಗಿದೆ.

ಅಲ್ಲದೆ, ‘ನ್ಯಾಯಾಧೀಶರು ನಡವಳಿಕೆಯನ್ನು ಕೋರ್ಟ್‌ನಲ್ಲಿ ಮಾತ್ರವಲ್ಲ. ಅದರ ಹೊರಗೆ ಅವರು ಹೇಗೆ ವರ್ತಿಸುತ್ತಾರೆ ಎಂಬ ಸಂಹಿತೆಯೂ ಮುಖ್ಯವಾಗುತ್ತದೆ.‘ಬೆಂಗಳೂರು ನ್ಯಾಯಾಂಗ ನಡವಳಿಕೆಯ ತತ್ವಗಳು (Bangalore Principles of Judicial conduct) ಎಂದು ಕರೆಯಲ್ಪಡುವ ಈ ಸಂಹಿತೆಯು ನ್ಯಾಯಾಧೀಶರನ್ನು ಸಾರ್ವಜನಿಕರು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ನೋಡಬೇಕು ಎಂದು ಒತ್ತಿಹೇಳುತ್ತದೆ. ಹೀಗಾಗಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾರ್ವಜನಿಕರು ಪ್ರಶ್ನಿಸುವಂಥ ಕೆಲಸ ಮಾಡಬಾರದು’ ಎಂದು ವಿವರಿಸಲಾಗಿದೆ. ಇದು ವಿವಾದದ ಮೂಲ.

ಸುಪ್ರೀಂ ಕೋರ್ಟ್ ಕಿಡಿ:

ಬುಧವಾರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಸಿಂಘ್ವಿ ಸುಪ್ರೀಂ ಕೋರ್ಟ್‌ನಲ್ಲಿ ವಿಷಯ ಪ್ರಸ್ತಾಪಿಸಿ, ಈ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯ ಕಾಂತ್ ಮತ್ತು ನ್ಯಾ। ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ತ್ರಿಸದಸ್ಯ ಕೂಡ ಅಸಮಾಧಾನ ವ್ಯಕ್ತಪಡಿಸಿ, ಪಠ್ಯದಲ್ಲಿ ಇರುವ ನ್ಯಾಯಾಂಗದ ಕುರಿತ ‘ಆಕ್ಷೇಪಾರ್ಹ’ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಲು ಒಪ್ಪಿಕೊಂಡಿತು.

ಬಳಿಕ ಕಿಡಿಕಾರಿದ ನ್ಯಾ। ಕಾಂತ್‌, ‘ಇದು ನ್ಯಾಯಾಂಗದ ಮೇಲೆ ಉದ್ದೇಶಪೂರ್ವಕವಾಗಿ ನಡೆದ ದಾಳಿಯಂತೆ ಕಾಣುತ್ತದೆ. ನ್ಯಾಯಾಂಗವನ್ನು ಕೆಣಕಲು ಮತ್ತು ಅದರ ಸಮಗ್ರತೆಯನ್ನು ಕಳಂಕಗೊಳಿಸಲು ಭೂಮಿಯಲ್ಲಿ ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದರು.

ಪ್ರಮಾದದ ಬಳಿಕ ಕೇಂದ್ರದ ಕ್ರಮ:

ಈ ನಡುವೆ, ಸುಪ್ರೀಂ ಕೋರ್ಟ್‌ ಕಿಡಿಕಾರಿದ ಬೆನ್ನಲ್ಲೇ ಎಚ್ಚೆತ್ತಿರುವ ಕೇಂದ್ರ ಸರ್ಕಾರದ ಮೂಲಗಳು, ಇದನ್ನು ಕೈಬಿಡಲು ನಿರ್ಧಸಲಾಗಿದೆ ಎಂದಿವೆ. ‘ಈ ವಿಭಾಗವನ್ನು ಬರೆಯಬಾರದಿತ್ತು. ಅಂತಹ ಅಂಶಗಳನ್ನು ಹೈಲೈಟ್ ಮಾಡುವುದು ಸೂಕ್ತವಲ್ಲ. ಇದರ ಬದಲಿಗೆ ಸ್ಫೂರ್ತಿದಾಯಕ ವಿಷಯಗಳನ್ನು ಬರೆಯಬೇಕಿತ್ತು’ ಎಂದಿವೆ.

ಇದಲ್ಲದೆ, ಎನ್‌ಸಿಇಆರ್‌ಟಿ ಮಂಡಳಿ ತುರ್ತು ಆಂತರಿಕ ಸಭೆ ಆಯೋಜಿಸಿದ್ದು, ಇದು ಪಠ್ಯದಲ್ಲಿ ನುಸುಳಿದ್ದು ಹೇಗೆ? ಇದನ್ನು ಶಿಫಾರಸು ಮಾಡಿದವರು ಯಾರು, ಒಪ್ಪಿದವರು ಯಾರು ಎಂಬ ಬಗ್ಗೆ ಪರಾಮರ್ಶೆ ನಡೆಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾರಂಟಿಯಿಂದ ರಾಜ್ಯ ಸರ್ಕಾರಕ್ಕೆ ಹೊರೆ! ಆದ್ರೂ ರಾಜ್ಯದ ಜನಕ್ಕೆ ಶಕ್ತಿ ತುಂಬುತ್ತಿದ್ದೇವೆ: ಡಿಕೆಶಿ
ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ