ಆಕಸ್ಮಿಕವಾಗಿ ನಡೆಯುವ ಹಲವು ಅಪಘಾತಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಆಘಾತಕಾರಿ ವಿಡಿಯೋವೊಂದು ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನಗಳಲ್ಲಿ ಸಂಚರಿಸುವಾಗ ಹೇಗೆ ಅಪಾಯಗಳು ಧುತ್ತನೇ ಎದುರಾಗುತ್ತವೆ ಎಂದು ಹೇಳಲಾಗದು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಕಷ್ಟ ಅನುಭವಿಸುತ್ತಾರೆ, ಸಂಕಷ್ಟಕ್ಕೆ ಸಿಲುಕುತ್ತಾರೆ. ಅದೇ ರೀತಿ ಇಲ್ಲಿ ಲಾರಿ ಚಾಲಕನ ತಪ್ಪಿನಿಂದಾಗಿ ಬೈಕ್ ಸವಾರನಿಗೆ ಸಂಕಷ್ಟ ಎದುರಾಗಿದ್ದು, ಜೀವ ಉಳಿದಿದ್ದೆ ಗ್ರೇಟ್ ಎನಿಸಿದೆ.
ಈ ಆಘಾತಕಾರಿ ದೃಶ್ಯ ಸಮೀಪದಲ್ಲಿದ್ದ ಕ್ಯಾಮರಾದಲ್ಲಿ(cctv) ಸೆರೆ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ತಮಿಳುನಾಡಿನ ತೂತುಕುಡಿಯಲ್ಲಿ (Thoothukudi) ಈ ಆಘಾತಕಾರಿ ಅಪಘಾತ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ಗೊಬ್ಬರ ಚೀಲವೊಂದನ್ನು ಬೈಕ್‌ನ ಹಿಂಬದಿ ಇಟ್ಟುಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದಾನೆ. ಈ ವೇಳೆ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಲಾರಿಯಲ್ಲಿ ಹಗ್ಗವೊಂದು ಉರುಳಿನಂತೆ ನೇತಾಡಿಕೊಂಡಿದ್ದು, ಎದುರಿನಿಂದ ಬರುತ್ತಿದ್ದ ಬೈಕ್ ಸವಾರನ ಕುತ್ತಿಗೆಗೆ ಸಿಲುಕಿ ಆತನನ್ನು ಬೈಕ್‌ನಿಂದ ರಸ್ತೆಗುರುಳಿಸಿದೆ. ಲಾರಿಯ ಹಗ್ಗ ಸಿಲುಕಿ ಎಳೆದ ರಭಸಕ್ಕೆ ವೇಳೆ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ಆತನ ಬೈಕ್ ಒಂದು ಕಡೆ ಹಾಗೂ ಆತ ಒಂದು ಕಡೆ ಬಿದ್ದರೆ, ಬೈಕ್‌ನಲ್ಲಿದ್ದ ಗೊಬ್ಬರ ಚೀಲ ಕೂಡ ರಸ್ತೆಗೆ ಬಿದ್ದು, ಗೊಬ್ಬರ (fertilisers) ಎಲ್ಲವೂ ರಸ್ತೆ ಮೇಲೆ ಚದುರಿ ಹೋಗುತ್ತದೆ.
Bengaluru: ಪುಡಿ ರೌಡಿಗಳಿಂದ ಬೇಕರಿ ಯುವಕರ ಮೇಲೆ ಹಲ್ಲೆ, ದೃಶ ಸಿಸಿಟಿವಿಯಲ್ಲಿ ಸೆರೆ
ಆದರೆ ಅದೃಷ್ಟವಶಾತ್ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ಸವಾರನನ್ನು ತೂತುಕುಡಿ (Thoothukudi) ಜಿಲ್ಲೆಯ ಶ್ರೀವೈಕುಂಠಮ್ ನಗರದ ನಿವಾಸಿ ಮುತ್ತು ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ಬೈಕ್‌ನಲ್ಲಿ ಹೊರಟಿದ್ದ ಅವರು, ಇರಲ್ ಪ್ರದೇಶ ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಯಲ್ಲಿದ್ದ ಹಗ್ಗ ಇವರ ಕುತ್ತಿಗೆಗೆ ಬಿದ್ದು, ಇವರನ್ನು ಎಳೆದುಕೊಂಡು ಹೋಗಿದೆ. ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ.
ವಾಕಿಂಗ್ ಮಾಡ್ತಿದ್ದ ಗುಪ್ತಚರ ನಿವೃತ್ತ ಅಧಿಕಾರಿಗೆ ಕಾರು ಡಿಕ್ಕಿ; ಸಿಸಿಟಿವಿ ನೋಡಿ ಬೆಚ್ಚಿ ಬಿದ್ದ ಪೊಲೀಸರು!
ಅಪಘಾತ ಆದ ಕೂಡಲೇ ಅಲ್ಲಿದ್ದ ಕೆಲವರು ಓಡಿ ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಮುತ್ತು ಅವರ ತಲೆ ಹಾಗೂ ಮೊಣಕಾಲಿಗೆ ಗಾಯಗಳಾಗಿವೆ. ತೂತುಕುಡಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುತ್ತು ಅವರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಪ್ರಸ್ತುತ ಮುತ್ತು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ 28 ವರ್ಷದ ಕರುಪಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿರ್ಲಕ್ಷ್ಯದ ಚಾಲನೆ ಹಾಗೂ ಮತ್ತೊಬ್ಬರ ಜೀವಕ್ಕೆ ಅಪಾಯವುಂಟು ಮಾಡಿದ ಆರೋಪದಡಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 279, 337ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ