ನಕಲಿ ಮದ್ಯ ಪ್ರಕರಣದಲ್ಲಿ ಸಾವಿನ ಸಂಖ್ಯೆ 65ಕ್ಕೆ ಏರಿಕೆ, ಪರಿಹಾರ ಕೇಳಲೇಬೇಡಿ ಎಂದ ಬಿಹಾರ ಸಿಎಂ!

By Santosh NaikFirst Published Dec 16, 2022, 3:53 PM IST
Highlights

ಬಿಹಾರದಲ್ಲಿ ಛಾಪ್ರಾದಲ್ಲಿ ನಡೆದಿರುವ ನಕಲಿ ಮದ್ಯ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ. ಇದರ ನಡುವೆ ಮೃತರಾದವರಿಗೆ ಪರಿಹಾರ ನೀಡುವ ಕುರಿತಾಗಿ ಪ್ರತಿಪಕ್ಷಗಳು ಕೇಳಿದ್ದಕ್ಕೆ, ಮದ್ಯಪಾನ ಮಾಡಿ ಸಾವು ಕಂಡವರಿಗೆ ಒಂದು ಪೈಸೆ ಕೂಡ ಪರಿಹಾರ ನೀಡೋದಿಲ್ಲ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಪಾಟ್ನಾ (ಡಿ.16): ಬಿಹಾರದಲ್ಲಿ ಈವರೆಗೂ ನಕಲಿ ಮದ್ಯ ಪ್ರಕರಣದಲ್ಲಿ ಸಾವು ಕಂಡ ವ್ಯಕ್ತಿಗಳ ಸಂಖ್ಯೆ 65ಕ್ಕೆ ಏರಿದೆ. ಈವರೆಗೂ ಇಲ್ಲಿನ ಛಾಪ್ರಾದ ಸರನ್‌ನಲ್ಲಿ ಮಾತ್ರವೇ ಸಾವಿನ ಬಗ್ಗೆ ವರದಿ ಆಗುತ್ತಿದ್ದವು. ಈಗ ಸಿವಾನ್‌ನಲ್ಲೂ ಸಾವಿನ ಬಗ್ಗೆ ವರದಿಯಾಗಿದೆ. ಸಿವಾನ್‌ನಲ್ಲಿ ಈವರೆಗೂ 5 ಮಂದಿ ಸಾವು ಕಂಡಿದ್ದರೆ, ಸರನ್‌ನಲ್ಲಿ 60 ಮಂದಿ ನಕಲಿ ಮದ್ಯದಿಂದ ಸಾವು ಕಂಡಿದ್ದಾರೆ. ಬೇಗುಸರೈನ ತೇಗ್ರಾದಲ್ಲಿ ಒಬ್ಬ ವ್ಯಕ್ತಿ ಸಾವು ಕಂಡಿದ್ದರೆ, ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಒಟ್ಟಾರೆ ಸಾವುಗಳ ಸಂಖ್ಯೆ 66ಕ್ಕೆ ಏರಿದೆ.  ಸತತ ಮೂರನೇ ದಿನವೂ ವಿಧಾನಸಭೆಯಲ್ಲಿ ಈ ಕುರಿತಾಗಿ ಕೋಲಾಹಲ ಉಂಟಾಯಿತು. ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ರಾಜಭವನ ತಲುಪಿದವು. ಪ್ರತಿಪಕ್ಷ ನಾಯಕ ವಿಜಯ್ ಸಿನ್ಹಾ ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮಾತನಾಡಿದ ನಿತೀಶ್, ‘ಮದ್ಯ ಸೇವಿಸಿ ಮೃತಪಟ್ಟಿದ್ದರೆ ಸರ್ಕಾರ ಪರಿಹಾರ ನೀಡಲು ಸಾಧ್ಯವೇ ಇಲ್ಲ. ಒಂದು ಪೈಸೆ ಕೂಡ ಪರಿಹಾರ ನೀಡೋದಿಲ್ಲ' ಎಂದು ಹೇಳಿದ್ದಾರೆ.

ಭಗವಾನ್‌ಪುರ ಹಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಹ್ಮಸ್ಥಾನ ಗ್ರಾಮದಲ್ಲಿ ಸಿವಾನ್‌ನಲ್ಲಿ ನಡೆದಿರುವ ಸಾವುಗಳು ಸಂಭವಿಸಿವೆ. ಇನ್ನು ಛಾಪ್ರಾ ನಕಲಿ ಮದ್ಯ ಪ್ರಕರಣದಲ್ಲಿ ಇದೀಗ ಹೊಸದೊಂದು ಸುದ್ದಿ ಬಹಿರಂಗವಾಗಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ ಸ್ಪಿರಿಟ್ ಕಂಟೈನರ್ ನಲ್ಲಿ ಅಪಾರ ಪ್ರಮಾಣದ ಸ್ಪಿರಿಟ್ ನಾಪತ್ತೆಯಾಗಿದೆ. ಇದರಿಂದ ಈ ವಿಷಯುಕ್ತ ಮದ್ಯ ತಯಾರಿಸಲಾಗಿದ್ದು, ಆ ಕಾರಣದಿಂದಲೇ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಪೊಲೀಸ್‌ ಠಾಣೆಯಿಂದಲೇ ಈ ಸ್ಪಿರಿಟ್‌ ಪೂರೈಕೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮಸ್ಥರು ವಿಡಿಯೋ ಮಾಡಿ ಅಬಕಾರಿ ಇಲಾಖೆ ಮುಖ್ಯ ಕಾರ್ಯದರ್ಶಿ ಕೆ.ಕೆ.ಪಾಠಕ್ ಅವರಿಗೆ ರವಾನಿಸಿದ್ದಾರೆ.

ದೂರಿನ ನಂತರ ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಂಡು ಜಂಟಿ ಆಯುಕ್ತ ಕೃಷ್ಣ ಪಾಸ್ವಾನ್ ಮತ್ತು ಉಪ ಕಾರ್ಯದರ್ಶಿ ನಿರಂಜನ್ ಕುಮಾರ್ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಈ ವೇಳೆ ಪೋಲೀಸರು ಸೀಜ್‌ ಮಾಡಿದ್ದ ಡ್ರಮ್‌ನಲ್ಲಿದ್ದ ಸ್ಪಿರಿಟ್‌ಗಳು ನಾಪತ್ತೆಯಾಗಿದ್ದು ಗೊತ್ತಾಗಿದೆ. ಇದರ ಸ್ಯಾಂಪಲ್‌ಅನ್ನು ಪಾಟ್ನಾಗೆ ರವಾನೆ ಮಾಡಲಾಗಿದೆ.  ಅಲ್ಲಿಂದ ಕಾವಲುಗಾರ ಹಾಗೂ ಪೊಲೀಸರ ನೆರವಿನಿಂದ ಠಾಣೆಯಿಂದಲೇ ಉದ್ಯಮಿಗಳಿಗೆ ಸ್ಪಿರಿಟ್ ಸರಬರಾಜು ಮಾಡಲಾಗುತ್ತಿತ್ತು ಎಂದು ದೂರು ನೀಡಿದವರು ತಿಳಿಸಿದ್ದಾರೆ. 

ಸರನ್‌ನಲ್ಲಿ ನಕಲಿ ಮದ್ಯದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.ಮಂಗಳವಾರ ಮೊದಲ ದಿನ 5 ಸಾವುಗಳು ಕಂಡಿದ್ದರೆ, ಬುಧವಾರ 25 ಮತ್ತು ಗುರುವಾರ 19 ಜನರು ಸಾವನ್ನಪ್ಪಿದ್ದಾರೆ. ಶುಕ್ರವಾರ 10 ಮಂದಿ ಸಾವು ಕಂಡಿದ್ದಾರೆ. ಛಾಪ್ರಾದ ಮಶ್ರಖ್, ಅಮನೂರ್ ಮತ್ತು ಮಧುರಾ ಪ್ರದೇಶಗಳಲ್ಲಿ ಗರಿಷ್ಠ ಸಾವುಗಳು ಸಂಭವಿಸಿವೆ. ನಕಲಿ ಮುದ್ಯ ಕುಡಿದ ಬಹುತೇಕ ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವುದು ಕೂಡ ಬಹಿರಂಗವಾಗಿದೆ. ಮೃತಪಟ್ಟ ವ್ಯಕ್ತಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಸಪ್ಲೈಯರ್‌ಗಳು ಕೂಡ ಸೇರಿದ್ದಾರೆ. 

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 19 ಸಾವು, ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಬಾಯ್ಮುಚ್ಚಿ ಎಂದ ನಿತೀಶ್‌ ಕುಮಾರ್‌!

ಸರ್ಕಾರ ತರಾತುರಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪೊಲೀಸ್‌ ಠಾಣೆಯ ವಾಚ್‌ಮನ್‌ ಅನ್ನು ಅಮಾನತು ಮಾಡಲಾಗಿದೆ.ಮಧುರಾ ಎಸ್‌ಡಿಪಿಒ ಅವರನ್ನು ವರ್ಗಾವಣೆ ಮಾಡಿ ಇಲಾಖಾ ಕ್ರಮ ಕೈಗೊಳ್ಳುವಂತೆ ಡಿಎಂ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

'ನಕಲಿ ಮದ್ಯ ಕುಡ್ದೋರು, ಸಾಯ್ದೆ ಇನ್ನೇನಾಗ್ತಾರೆ..' ಬಿಹಾರ ಸಿಎಂ ನಿತೀಶ್‌ ಮಾತು, ಸಾವಿನ ಸಂಖ್ಯೆ 39ಕ್ಕೆ ಏರಿಕೆ!

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಪ್ರಕರಣ: ನಕಲಿ ಮದ್ಯ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಆರ್ಯಾವರ್ತ ಮಹಾಸಭಾ ಪ್ರತಿಷ್ಠಾನವು ಈ ಪ್ರಕರಣದ ಶೀಘ್ರ ವಿಚಾರಣೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಇಡೀ ಪ್ರಕರಣವನ್ನು ಎಸ್‌ಐಟಿಯಿಂದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯ ಮಾಡಲಾಗಿದೆ. ಆದರೆ, ಶೀಘ್ರವೇ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ವಿಷಯ ಉಲ್ಲೇಖಿತ ಪಟ್ಟಿಯಲ್ಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

click me!