
ನವದೆಹಲಿ (ಫೆಬ್ರವರಿ 6, 2023): ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಅವರನ್ನು ‘ಕಾರ್ಗಿಲ್ ಯುದ್ಧದ ವಾಸ್ತುಶಿಲ್ಪಿ’ ಎಂದೇ ಕರೆಯಲಾಗುತ್ತಿತ್ತು. ಏಕೆಂದರೆ 1999ರಲ್ಲಿ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಘನಘೋರ ಯುದ್ಧಕ್ಕೆ ಕಾರಣರಾಗಿದ್ದರು.
ಕಾಶ್ಮೀರದಲ್ಲಿರುವ ಕಾರ್ಗಿಲ್ ಪ್ರದೇಶದಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ 48 ಡಿಗ್ರಿವರೆಗೂ ಕುಸಿಯುತ್ತದೆ. ಈ ಮೈಕೊರೆವ ಚಳಿಯಲ್ಲಿ ಗಡಿ ಕಾಯುವುದು ಭಾರೀ ಸವಾಲಿನ ಕೆಲಸ. ಹೀಗಾಗಿ ಚಳಿಗಾಲದಲ್ಲಿ ಭಾರತೀಯ ಸೈನಿಕರು ಈ ಪ್ರದೇಶದಿಂದ ಸ್ಥಳಾಂತರ ಆಗುತ್ತಿದ್ದರು. ಮತ್ತೆ ಬೇಸಿಗೆ ಆರಂಭವಾದ ಬಳಿಕ ಅಲ್ಲಿಗೆ ತೆರಳುತ್ತಿದ್ದರು. ಆದೆ ಇದನ್ನೇ ದುರ್ಬಳಕೆ ಮಾಡಿಕೊಂಡ ಕಪಟಿ ಪಾಕಿಸ್ತಾನ, 1999ರ ಫೆಬ್ರವರಿ ತಿಂಗಳ ಚಳಿಗಾಲದಲ್ಲಿ ತನ್ನ 5000 ಯೋಧರನ್ನು ಭಾರತಕ್ಕೆ ರಹಸ್ಯವಾಗಿ ನುಸುಳಿಸಿತು.
ಇದನ್ನು ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ
ಪಾಕ್ ನುಸುಳುಕೋರರು ಗಡಿ ನಿಯಂತ್ರಣ ರೇಖೆ ದಾಟಿ ಕಾರ್ಗಿಲ್ ಪರ್ವತದ ಶಿಬಿರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಭಾರತ-ಪಾಕ್ ನಡುವೆ ಕಾರ್ಗಿಲ್ ಯುದ್ಧ ಆರಂಭವಾಗಲು ಇದು ಕಾರಣವಾಯಿತು.
ಇದಕ್ಕೆ ಕಾರಣಕರ್ತ ಮುಷರ್ರಫ್:
ಪಾಕ್ ಸೇನೆಯ ಕಿತಾಪತಿಗೆ ಕಾರಣಕರ್ತ ಪಾಕ್‌ನ ಅಂದಿನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರ್ರಫ್. ಅಂದು ತಮ್ಮ ದೇಶದ ಪ್ರಧಾನಿ ನವಾಜ್ ಷರೀಫ್‌ಗೇ ಮಾಹಿತಿ ನೀಡದೇ ಈ ರಹಸ್ಯ ಕಾರ್ಯಾಚರಣೆಯನ್ನು ಜನರಲ್ ಮುಷರ್ರಫ್ ನಡೆಸಿದ್ದರು ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ಬಿಪಿನ್ ರಾವತ್‌ರನ್ನು 'ರಸ್ತೆ ಬದಿಯ ಗೂಂಡಾ' ಎಂದಿದ್ದ ಕಾಂಗ್ರೆಸ್‌ಗೆ ಮುಷರಫ್ ಶಾಂತಿಧೂತ!
ವಿಫಲವಾಯ್ತು ಮುಷರ್ರಫ್ ದುಸ್ಸಾಹಸ:
ಪಾಕ್‌ನ ಯೋಧರು ನುಸುಳಿದ ಬಗ್ಗ ಸ್ಥಳೀಯ ಕುರಿಗಾಹಿಗಳು ಭಾರತೀಯ ಸೈನಿಕರಿಗೆ ಸುಳುಹು ನೀಡಿದರು. ಈ ಹಿನ್ನೆಲೆಯಲ್ಲಿ ಭಾರತ 5 ಯೋಧರನ್ನು ಗಸ್ತಿಗಾಗಿ ಕಳುಹಿಸಿದಾಗ, ಪಾಕ್ ಐವರನ್ನೂ ನಿಷ್ಕರುಣೆಯಿಂದ ಕೊಂದು ಹಾಕಿತು. ಇದರಿಂದ ಕೆರಳಿದ ಭಾರತ ಸರ್ಕಾರ, ಕೂಡಲೇ ಪಾಕಿಸ್ತಾನಿ ನುಸುಳುಕೋರರನ್ನು ದೇಶದ ಸೀಮೆಯಿಂದ ಹೊರಗಟ್ಟಲು 20,000 ಯೋಧರನ್ನು ಸಜ್ಜುಗೊಳಿಸಿತು. ಭಾರತದ ಮೂರೂ ಸೇನಾಪಡೆಗಳು ಪಾಕಿಗಳ ಮೇಲೆ ಮುಗಿಬಿದ್ದವು. ಈ ಕಾರ್ಯಾಚರಣೆಗೆ ‘ಆಪರೇಶನ್ ವಿಜಯ್’ ಎಂದು ಹೆಸರಿಡಲಾಯಿತು.
ಅಂತಿಮವಾಗಿ 1999ರ ಜುಲೈ 26ರಂದು ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿತು. ಈ ದುಸ್ಸಾಹಸ ಮಾಡಲು ಹೋಗಿ ಜನರಲ್ ಮುಷರ್ರಫ್ ವಿಶ್ವದ ಮುಂದೆ ಮುಖಭಂಗಕ್ಕೆ ಒಳಗಾಗಬೇಕಾಯಿತು.
700 ಪಾಕ್ ಯೋಧರ ಸಾವು:
ಈ ಯುದ್ಧದಲ್ಲಿ ಪಾಕಿಸ್ತಾನದ 700 ಯೋಧರು ಸಾವನ್ನಪ್ಪಿದರೆ, ಭಾರತದ 524 ಯೋಧರು ಹುತಾತ್ಮರಾದರು.
1965, 1971ರ ರ ಕದನದಲ್ಲೂ ಭಾಗಿ ಆಗಿದ್ದ ಮುಷರ್ರಫ್:
1965ರಲ್ಲಿ ಹಾಗೂ 1971ರಲ್ಲಿ ಪಾಕ್-ಭಾರತ ಯುದ್ಧ ನಡೆದಿದ್ದವು. ಆಗ ಯುವಕರಾಗಿದ್ದ ಜನರಲ್
ಮುಷರ್ರಫ್ ಪಾಕ್ ಸೇನೆಯ ಪರ ಭಾರತದ ವಿರುದ್ಧ ಹೋರಾಡಿದ್ದರು.
ಇದನ್ನೂ ಓದಿ: 'ಶಿಕ್ಷೆಗೆ ಮುನ್ನ ಮುಷರ್ರಫ್ ಸತ್ತರೆ ಇಸ್ಲಾಮಾಬಾದಲ್ಲಿ 3 ದಿನ ನೇತು ಹಾಕಿ'
ಭಾರತದಲ್ಲಿ ಹುಟ್ಟಿ ಭಾರತದ ಮೇಲೇ ಯುದ್ಧ ನಡೆಸಿದ್ದರು
ದಿಲ್ಲಿಯಲ್ಲಿ ಜನಿಸಿದ್ದರೂ ವಿಭಜನೆ ಕಾಲದಲ್ಲಿ ಜನರಲ್ ಮುಷರ್ರಫ್ ಕುಟುಂಬ ಪಾಕ್‌ಗೆ ಸ್ಥಳಾಂತರಗೊಂಡಿತ್ತು. ಪಾಕ್ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಮುಷರ್ರಫ್ ಅಂದಿನ ಪ್ರಧಾನಿ ನವಾಜ್ ಷರೀಫ್‌ಗೆ ಗೊತ್ತಾಗದಂತೆ ಪಾಕ್ ಸೇನೆಯನ್ನು ಭಾರತದ ಕಾರ್ಗಿಲ್‌ಗೆ ಸಾಗಿಸಿ 1999ರಲ್ಲಿ ಯುದ್ಧಕ್ಕೆ ಕಾರಣವಾಗಿದ್ದರು. ಬಳಿಕ ಷರೀಫ್ ಅವರನ್ನು ಕ್ಷಿಪ್ರ ಕ್ರಾಂತಿಯಲ್ಲಿ ಪದಚ್ಯುತಿಗೊಳಿಸಿ ಅದೇ ವರ್ಷ ಪಾಕ್ ಚುಕ್ಕಾಣಿ ಹಿಡಿದಿದ್ದರು. ಬಳಿಕ 9 ವರ್ಷ ಪಾಕಿಸ್ತಾನವನ್ನು ಆಳಿದ್ದರು. ಇದಾದ ನಂತರ ಅಂದಿನ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಗೆ ಸಂಚು ಸೇರಿದಂತೆ ನಾನಾ ಆರೋಪ ಹೊತ್ತಿದ್ದ ಅವರು ಜೈಲು ವಾಸ ತಪ್ಪಿಸಿಕೊಳ್ಳಲು 8 ವರ್ಷದ ಹಿಂದೆ ದೇಶಭ್ರಷ್ಟರಾಗಿ ದುಬೈಗೆ ಪರಾರಿ ಆಗಿದ್ದರು.
ಇದನ್ನೂ ಓದಿ: ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ