ಯೂರೋಪ್‌ನ ರೀಜಿನಲ್ ಟ್ರಾನ್ಸ್ ರೈಲಿನ ಮಾದರಿ 100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು ಸಂಚರಿಸಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ರೈಲುಗಳು ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯವಾಗಲಿದೆ ಎಂಬ ನಿರೀಕ್ಷೆಗಳಿವೆ.
ಹೈದರಾಬಾದ್: 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ತಿಳಿಸಿದ ವಂದೇ ಭಾರತ್ ಮಾದರಿಯ ‘ವಂದೇ ಮೆಟ್ರೋ’ ಎಂಬ ಪ್ರಾದೇಶಿಕ ರೈಲು ಪ್ರಾರಂಭಿಸುವ ಯೋಜನೆಯ ಪರಿಕಲ್ಪನೆ ಕುರಿತು ಮೊದಲ ಬಾರಿ ವಿವರಣೆ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, 100 ಕಿ.ಮೀ. ವ್ಯಾಪ್ತಿಯ ಒಳಗಿರುವ ಎರಡು ದೊಡ್ಡ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು ಸಂಚರಿಸಲಿವೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ 12-16 ತಿಂಗಳಲ್ಲಿ ವಂದೇ ಮೆಟ್ರೋ (Vande Metro) ಮಾದರಿ ರೈಲು (Train) ತಯಾರಿಸಲು ಯೋಜಿಸಲಾಗಿದೆ. ಅದನ್ನು ಕನಿಷ್ಠ 1 ವರ್ಷ ಕಾಲ ಓಡಿಸಲಾಗುವುದು. ಬಳಿಕ ಕಾಯಂ ವಂದೇ ಮೆಟ್ರೋ ರೈಲುಗಳು ಆರಂಭವಾಗಲಿವೆ. ಆದಷ್ಟು ಬೇಗ ರೈಲು ವಿನ್ಯಾಸ ಹಾಗೂ ಸಿದ್ಧಪಡಿಸುವಂತೆ ಚೆನ್ನೈನ (Chennai) ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಹಾಗೂ ಲಖನೌದ (Lucknow) ರೀಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ ಆರ್ಗನೈಜೇಷನ್‌ಗೆ ಸೂಚಿಸಲಾಗಿದೆ’ ಎಂದರು.
ಇದನ್ನು ಓದಿ: ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ
ವಂದೇ ಮೆಟ್ರೋ ರೈಲಿನ ವಿಶೇಷತೆ ವಿವರಿಸಿದ ಅವರು, ‘ವಂದೇ ಭಾರತ್ ರೈಲಿಗೆ (Vande Bharat Train) 16 ಬೋಗಿಗಳು ಇದ್ದರೆ ಅದರ ಮಿನಿ ರೂಪವಾದ ವಂದೇ ಮೆಟ್ರೋ ರೈಲಿನಲ್ಲಿ 8 ಬೋಗಿಗಳು ಇರಲಿವೆ. ಇದರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ವೃತ್ತಿಪರರು, ಹತ್ತಿರದ ನಗರಕ್ಕೆ ಪಿಕ್‌ನಿಕ್ ಉದ್ದೇಶಕ್ಕೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಒಂದು ರೀತಿಯಲ್ಲಿ ಇವು ರ್‍ಯಾಪಿಡ್ ಶಟಲ್ ಪ್ಯಾಸೆಂಜರ್ ರೈಲು’ ಇದ್ದಂತೆ’ ಎಂದರು. ‘ಯುರೋಪ್‌ನಲ್ಲಿ ಈ ಮಾದರಿಯ ‘ರೀಜಿನಲ್ ಟ್ರಾನ್ಸ್’ (Regional Trans) ಎಂಬ ರೈಲುಗಳಿವೆ’ ಎಂದೂ ಹೇಳಿದರು.
ದೇಶೀಯ ವಂದೇ ಭಾರತ್ ರೈಲು ಯಶಸ್ಸಿನ ಬಳಿಕ ದೊಡ್ಡ ನಗರಗಳನ್ನು ವೇಗವಾಗಿ ಸಂಪರ್ಕಿಸಲು ವಿದೇಶಿ ಮಾದರಿಯಲ್ಲಿ ಪ್ರಾದೇಶಿಕ ರೈಲು ಸಂಚಾರ ಆರಂಭಿಸಲಾಗುವ ನೂತನ ಯೋಜನೆ ಇದಾಗಿದ್ದು ಕರ್ನಾಟಕದ ಬೆಂಗಳೂರಿನಲ್ಲಿ ವಂದೇ ಮೆಟ್ರೋ ಆರಂಭವಾಗಲಿದೆ. ಹೀಗಾಗಿ ರಾಜಧಾನಿಯಿಂದ 100 ಕಿ.ಮೀ ವ್ಯಾಪ್ತಿಯೊಳಗಿರುವ ತುಮಕೂರು, ರಾಮನಗರ, ಕೋಲಾರ ಸೇರಿದಂತೆ ಹಲವು ನಗರಗಳನ್ನು ಸಂಪರ್ಕಿಸಲು ವಿಶ್ವದರ್ಜೆ ಮಟ್ಟದ ರೈಲು ಪ್ರಾರಂಭವಾಗುವ ನಿರೀಕ್ಷೆ ಇದೆ.
ಏನಿದರ ವಿಶೇಷ..?
- 8 ಬೋಗಿಯ ಅತಿವೇಗದ ರೈಲು
- ಉತ್ತಮ ಸೌಕರ‍್ಯ, ಐಷಾರಾಮಿ ಪ್ರಯಾಣ
- ವ್ಯಾಪಾರಿಗಳು, ಪ್ರವಾಸಕ್ಕೆ ಅನುಕೂಲ
- ಇನ್ನು 16 ತಿಂಗಳಲ್ಲಿ ಮಾದರಿ ಸಿದ್ಧ
- ಇವು ರ್‍ಯಾಪಿಡ್ ಪ್ಯಾಸೆಂಜರ್ ರೈಲು
ಇದನ್ನೂ ಓದಿ: ಬರಲಿದೆ 220 ಕಿಮೀ ವೇಗದ ವಂದೇ ಭಾರತ್ ರೈಲು: ಭಾರತದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ