ಸಾಮಾನ್ಯವಾಗಿ ಗಿಳಿಗಳು ಮನುಷ್ಯರ ಮಾತನ್ನು ಅನುಕರಿಸುತ್ತವೆ. ಆದರೆ ಇಲ್ಲೊಂದು ಕಾಗೆ ಮನುಷ್ಯರಂತೆ ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಗಿಳಿಗಳು ಮನುಷ್ಯರ ಮಾತನ್ನು ಅನುಕರಿಸುತ್ತವೆ. ಮನುಷ್ಯರಂತೆ ಮಾತನಾಡುತ್ತವೆ ಆದರೆ ಕಾಗೆಗಳು ಮನುಷ್ಯರಂತೆ ಮಾತನಾಡುವುದು ತೀರಾ ವಿರಳ, ಬಹುಶಃ ಯಾರು ಕೇಳಿರಲು ಸಾಧ್ಯವಿಲ್ಲ. ಆದರೆ ಅಚ್ಚರಿ ಎಂಬಂತೆ ಇಲ್ಲೊಂದು ಕಡೆ ಕಾಗೆಯೊಂದು ಮನುಷ್ಯರಂತೆ ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದು, ಈ ಕಾಗೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂದಹಾಗೆ ಮಹಾರಾಷ್ಟ್ರದ ಪಾಲ್‌ಘರ್‌ನ ವೀಡಿಯೋ ಇದಾಗಿದ್ದು, ಮನುಷ್ಯರ ಮಾತನ್ನು ಈ ಕಾಗೆ ಅನುಕರಿಸುತ್ತಿದೆ. ಹೇಳಿ ಕೇಳಿ ಕಾಗೆ ಬುದ್ಧಿವಂತ ಪಕ್ಷಿ, ಎರಡು ವರ್ಷ ಪ್ರಾಯದ ಮಕ್ಕಳ ಬುದ್ಧಿವಂತಿಕೆ ಕಾಗೆಗಳಿರುತ್ತದೆ ಎಂಬುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಇದಕ್ಕೆ ಪುಷ್ಠಿ ನೀಡುವಂತೆ ಈ ಕಾಗೆ ಮರಾಠಿ ಭಾಷೆಯಲ್ಲಿ ಮನುಷ್ಯರು ಮಾತನಾಡುವಂತೆ ಮಾತನಾಡುತ್ತಿದೆ. ಮನುಷ್ಯರ ಮಾತನ್ನು ಪುನರುಚ್ಚರಿಸುತ್ತಿದೆ. ಇನ್ಸ್ಟಾಗ್ರಾಮ್, ಟ್ವಿಟ್ಟರ್ ಲಿಂಕ್ಡಿನ್‌ನಲ್ಲಿ ಈ ಕಾಗೆಯ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಕಾಗೆ ಪಪ್ಪಾ, ಕಾಕಾ ಎಂದು ಹಾಗೂ ಇನ್ನು ಕೆಲವು ಮರಾಠೀ ಪದಗಳನ್ನು ಉಚ್ಚರಿಸುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ. ಅಂದ ಹಾಗೆ ಈ ಕಾಗೆಯನ್ನು 3 ವರ್ಷದ ಹಿಂದೆ ಮಹಿಳೆಯೊಬ್ಬರು ರಕ್ಷಣೆ ಮಾಡಿದ್ದರು. ತನುಜಾ ಮುಕ್ನೆ ಎಂಬ ಮಹಿಳೆಗೆ ಈ ಕಾಗೆ ಗಾಯಗೊಂಡ ಸ್ಥಿತಿಯಲ್ಲಿ ತಮ್ಮ ಗಾರ್ಡ್‌ನ್ ಪ್ರದೇಶದಲ್ಲಿ ಸಿಕ್ಕಿತ್ತು.
ಈ ಗಾಯಗೊಂಡಿದ್ದ ಕಾಗೆಗೆ ಅವರು 15 ದಿನಗಳ ಕಾಲ ಆರೈಕೆ ಮಾಡಿದ್ದು, ಕಾಗೆ ತನುಜಾ ಆರೈಕೆಯಲ್ಲಿ ಸುಲಭವಾಗಿ ಚೇತರಿಸಿಕೊಂಡಿತ್ತು. ಆದರೆ ಹುಷಾರಾದ ನಂತರವೂ ಈ ಕಾಗೆ ಮನೆಯವರನ್ನು ಬಿಟ್ಟು ಹೋಗಿರಲಿಲ್ಲ. ಹೀಗಾಗಿ ತನುಜಾ ಅವರ ಕುಟುಂಬದೊಂದಿಗೆ ಅದಕ್ಕೆ ಆತ್ಮೀಯ ಒಡನಾಟ ಬೆಳೆದಿತ್ತು. ಕಾಲಕ್ರಮೇಣ ಅದು ಮನುಷ್ಯರು ಮಾತನಾಡುವ ಪದಗಳನ್ನು ಅನುಕರಿಸಲು ಶುರು ಮಾಡಿತ್ತು. ಅಲ್ಲದೇ ಕ್ರಮೇಣ ಕುಟುಂಬದ ಜೊತೆ ಮನುಷ್ಯರ ಧ್ವನಿಯಲ್ಲೇ ಸಂವಹನ ನಡೆಸಲು ಶುರು ಮಾಡಿತ್ತು. ಹೀಗಾಗಿ ಪಾಲ್ಘರ್‌ನ ವಡಾ ತಾಲೂಕಿನಲ್ಲಿ ಈ ಕಾಗೆ ಸೆಲೆಬ್ರಿಟಿ ಎನಿಸಿದೆ. ಇದು ಸ್ಥಳೀಯರು ಹಾಗೂ ಪ್ರಾಣಿಗಳ ನಡವಳಿಕೆ ತಜ್ಞರು ಹೀಗೆ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.
ಇತ್ತೀಚೆಗೆ ಬಿಬಿಸಿ ಮರಾಠಿ ಈ ಕಾಗೆಯ ಬಗ್ಗೆ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ಹೀಗಾಗಿ ಈ ಕಾಗೆ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸೆಳೆಯುತ್ತಿದೆ. ವೀಡಿಯೋ ನೋಡಿದ ನೆಟ್ಟಿಗರು ಕಾಗೆಯ ಈ ಮರಾಠಿ ಭಾಷೆಗೆ ಹಲವು ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಈ ಕಾಗೆ ಎಂಎನ್‌ಎಸ್ ಕಾರ್ಯಕರ್ತರಿಂದ ಬಚವಾಗಿದೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಮಹಾರಾಷ್ಟ್ರದಲ್ಲಿ ವಾಸ ಮಾಡುವುದಕ್ಕೆ ಈಗ ಅರ್ಹವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಗೆಗೊಂದು ಆಧಾರ್ ಕಾರ್ಡ್ ನೀಡುವಂತೆ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮುಂಬೈಕರ್ ಅಲ್ಲ ಮುಂಬೈಕ್ರೌ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಕಾಗೆಯ ಮರಾಠಿ ಮಾತಿಗೆ ಅನೇಕರು ಫಿದಾ ಆಗಿದ್ದಾರೆ.
ಮರಾಠಿ ಮಾತನಾಡುವ ಕಾಗೆಯ ವೀಡಿಯೋ ಇಲ್ಲಿದೆ ನೋಡಿ
In Palghar, a rescued crow raised by family now speaks in a man’s voice pic.twitter.com/hUHn4QWg7X
— Being Punekar (@beingpunekar1)