ಮೋದಿ, ಗೌಡ, ಸಿದ್ದು ವಿರುದ್ಧ ಚೀನಾ ಡಿಜಿಟಲ್ ಬೇಹುಗಾರಿಕೆ| ಭಾರತದ 1350 ಗಣ್ಯರ ಮಾಹಿತಿ ಸಂಗ್ರಹ| ಆನ್‌ಲೈನ್ ಖಾತೆಗಳ ಮೇಲೆ ಶೆಂಜೆನ್ ನಿಗಾ| 350 ಸಂಸದರು, ಮಾಜಿ ಸೇನಾ ಮುಖ್ಯಸ್ಥರು ಸೇರಿ ಸಾವಿರಾರು ಜನರ ಮಾಹಿತಿ ಸಂಗ್ರಹ| ಸಾಗರೋತ್ತರ ಪ್ರಮುಖ ಮಾಹಿತಿ ಡೇಟಾಬೇಸ್ (ಒಕೆಐಡಿಬಿ) ಸಿದ್ಧಪಡಿಸಿಟ್ಟುಕೊಂಡ ಚೀನಾ| ಇದು ನಮಗೆ ಗೊತ್ತಿತ್ತು, ಎಲ್ಲ ದೇಶಗಳೂ ಈ ಕೆಲಸ ಮಾಡುತ್ತವೆ: ಭಾರತ ಸರ್ಕಾರದ ಮೂಲಗಳು
ನವದೆಹಲಿ(ಸೆ. 15). : ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ದೇಶದ ಕನಿಷ್ಠ 1350ಕ್ಕೂ ಹೆಚ್ಚು ಗಣ್ಯವ್ಯಕ್ತಿಗಳು ಮತ್ತು ಪ್ರಭಾವಿಗಳ ಮಾಹಿತಿಯನ್ನು ಚೀನಾ ಕಲೆ ಹಾಕುತ್ತಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಚೀನಾದ ಶೆಂಜೆನ್‌ನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಯೊಂದು ಸಾಗರೋತ್ತರ ಪ್ರಮುಖ ಮಾಹಿತಿ ಡೇಟಾಬೇಸ್ (ಒಕೆಐಡಿಬಿ) ಎಂಬ ಪಟ್ಟಿಸಿದ್ಧಪಡಿಸಿದ್ದು, ಅದರಲ್ಲಿ ಭಾರತದ ಸಾವಿರಾರು ಪ್ರಭಾವಿ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಈ ವ್ಯಕ್ತಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ತನ್ನ ದತ್ತಾಂಶ ಕೋಶಕ್ಕೆ ಬಂದು ಸಂಗ್ರಹವಾಗುವ ವ್ಯವಸ್ಥೆಯನ್ನು ಈ ಕಂಪನಿ ಮಾಡಿಕೊಂಡಿದೆ. ಈ ಕಂಪನಿಯು ಚೀನಾ ಸರ್ಕಾರ ಮತ್ತು ಕಮ್ಯುನಿಸ್ಟ್ ಪಾರ್ಟಿಯ ಜೊತೆ ಸಮೀಪದ ಸಂಪರ್ಕ ಹೊಂದಿರುವುದರಿಂದ ಸದರಿ ಮಾಹಿತಿಯನ್ನು ಚೀನಾ ಸರ್ಕಾರ ನೇರವಾಗಿ ಬಳಸಿಕೊಳ್ಳುತ್ತಿರುವ ಸಾಧ್ಯತೆಗಳಿವೆ.
ಭಾರತ ವಿರುದ್ಧ ಕತ್ತಿ ಮಸೆದು ಕೈಸುಟ್ಟುಕೊಂಡ ಕ್ಸಿ ಜಿನ್‌ಪಿಂಗ್: ಅಮೆರಿಕ ಮಾಧ್ಯಮ ವರದಿ!
2 ವರ್ಷಗಳ ಕಾಲ ಮಾಹಿತಿ ಗಣಿಗಾರಿಕೆ ನಡೆಸಿ ಶೆಂಜೆನ್‌ನ ಐಟಿ ಕಂಪನಿ ಈ ದತ್ತಾಂಶ ಕೋಶ ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮಂತ್ರಿಗಳು, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು, ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ಸಂಸದರು, ರಾಜಕಾರಣಿಗಳು, ಪ್ರಭಾವಿ ಅಭಿಪ್ರಾಯ ನಿರೂಪಕರು ಹೀಗೆ ಕನಿಷ್ಠ 1350ಕ್ಕೂ ಹೆಚ್ಚು ಜನರ ಹೆಸರಿದೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಈ ಕುರಿತು ತನಿಖಾ ವರದಿ ಪ್ರಕಟಿಸಿದೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಮೂಲಗಳು, ‘ನಮಗೆ ಮೊದಲೇ ಇದು ಗೊತ್ತಿತ್ತು. ಇದರಲ್ಲಿ ಅಚ್ಚರಿಯೇನೂ ಇಲ್ಲ. ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಚೀನಾದ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಲು ಇದೂ ಒಂದು ಕಾರಣ. ಆದರೆ, ಚೀನಾ ಸಂಗ್ರಹಿಸಿರುವ ಮಾಹಿತಿಗಳೆಲ್ಲ ಮುಕ್ತಮಾಹಿತಿಗಳೇ (ಓಪನ್ ಸೋರ್ಸ್) ಆಗಿವೆ. ಹೀಗಾಗಿ ದೇಶದ ಭದ್ರತೆಯನ್ನೇನೂ ಇದು ಉಲ್ಲಂಘಿಸಿಲ್ಲ. ಆದರೆ, ಎಲ್ಲಾ ಮಾಹಿತಿಗಳನ್ನೂ ಒಂದೇ ಕಡೆ ಕಲೆಹಾಕಿ, ಸರ್ಕಾರಕ್ಕೆ ಒಂದೇ ಜಾಗದಲ್ಲಿ ಸಿದ್ಧರೂಪದಲ್ಲಿ ಸಿಗುವಂತೆ ಮಾಡಿರುವುದರಿಂದ ನಮಗೆ ಸಮಸ್ಯೆಯಾಗಬಹುದು’ ಎಂದು ತಿಳಿಸಿವೆ.
ರಾಜತಾಂತ್ರಿಕ ಹೊಡೆತ: ಚೀನಾಗೆ ಗುಡ್ ಬೈ ಹೇಳಿ ಭಾರತದ ಜೊತೆ ಕೈ ಜೋಡಿಸಿದ ಜರ್ಮನಿ!
ಪಟ್ಟಿಯಲ್ಲಿ ಯಾರಾರಯರ ಹೆಸರಿದೆ?:
ಕನಿಷ್ಠ 700 ರಾಜಕಾರಣಿಗಳು ಹಾಗೂ 460ಕ್ಕೂ ಹೆಚ್ಚು ಅವರ ಹತ್ತಿರದ ಸಂಬಂಧಿಕರ ಹೆಸರುಗಳು ಒಕೆಐಡಿಬಿ ಪಟ್ಟಿಯಲ್ಲಿವೆ. ಕನಿಷ್ಠ 350 ಹಾಲಿ ಹಾಗೂ ಮಾಜಿ ಸಂಸದರು, 40 ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ, ಕಾಂಗ್ರೆಸ್, ಸಿಪಿಎಂ, ಆಪ್ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರು, ಕನಿಷ್ಠ 15 ಮಂದಿ ಹಾಲಿ ಹಾಗೂ ಮಾಜಿ ಸೇನಾಪಡೆ ಮುಖ್ಯಸ್ಥರು ಹಾಗೂ ಇತರ ಪ್ರಭಾವಿ ಭಾರತೀಯ ನಾಯಕರ ಹೆಸರುಗಳು ಪಟ್ಟಿಯಲ್ಲಿವೆ.
ಪಟ್ಟಿಯಲ್ಲಿರುವ ಪ್ರಮುಖರು
ನರೇಂದ್ರ ಮೋದಿ, ಸೋನಿಯಾ ಗಾಂಧಿ, ಮನಮೋಹನ ಸಿಂಗ್, ಉದ್ಧವ್ ಠಾಕ್ರೆ, ಮನೀಶ್ ಸಿಸೋಡಿಯಾ, ನವೀನ್ ಪಟ್ನಾಯಕ್, ಮಮತಾ ಬ್ಯಾನರ್ಜಿ, ಹತ್ತಾರು ನಗರಗಳ ಹಾಲಿ ಹಾಗೂ ಮಾಜಿ ಮೇಯರ್‌ಗಳು, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಕುಟುಂಬದ ಸದಸ್ಯರು, ಹತ್ತಾರು ರಾಜ್ಯಗಳ ಹಾಲಿ ಮತ್ತು ಮಾಜಿ ರಾಜ್ಯಪಾಲರು, ಪ್ರಣಬ್ ಮುಖರ್ಜಿ, ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ, ಪಿ.ವಿ. ನರಸಿಂಹರಾವ್ ಮುಂತಾದ ಮೃತ ಗಣ್ಯರು, ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 200ಕ್ಕೂ ಹೆಚ್ಚು ವ್ಯಕ್ತಿಗಳು, ಹೇಮಾಮಾಲಿನಿ, ಅನುಪಮ್ ಖೇರ್, ಮೂನ್‌ಮೂನ್ ಸೇನ್, ಪರೇಶ್ ರಾವಲ್ ಮುಂತಾದ ಸಿನಿಮಾ ನಟ ರಾಜಕಾರಣಿಗಳು, ಹೀಗೆ ಸಾಕಷ್ಟುಗಣ್ಯರ ಹೆಸರುಗಳು ಪಟ್ಟಿಯಲ್ಲಿವೆ.
ರಾಜ್ಯದ ಪ್ರಮುಖರು
ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಬೆಂಗಳೂರಿನ ಹಾಲಿ, ಮಾಜಿ ಮೇಯರ್‌ಗಳು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಬೊಮ್ಮಾಯಿ, ಮಾಜಿ ಸಂಸದೆ ರಮ್ಯಾ ದಿವ್ಯಸ್ಪಂದನಾ (ರಮ್ಯಾ)
ಭಾರತ, ನೇಪಾಳ ಬೆನ್ನಲ್ಲೇ ಮತ್ತೊಂದು ದೇಶದಲ್ಲಿ 'ಸಾಮ್ರಾಜ್ಯ' ವಿಸ್ತರಣೆಗೆ ಡ್ರ್ಯಾಗನ್ ಸಜ್ಜು!
ಎಲ್ಲ ದೇಶಗಳೂ ಇಂತಹ ಪಟ್ಟಿ ಹೊಂದಿವೆ
‘ಚೀನಾ ಜೊತೆಗಿನ ಹಾಲಿ ಗಡಿ ಸಂಘರ್ಷದಿಂದಾಗಿ ಈ ವಿಷಯಕ್ಕೆ ಮಹತ್ವ ದೊರೆತಿರಬಹುದು. ಆದರೆ, ಎಲ್ಲಾ ದೇಶಗಳೂ ತಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಇಂತಹ ಮಾಹಿತಿ ಗಣಿಗಾರಿಕೆ ನಡೆಸುತ್ತವೆ. ಉದಾಹರಣೆಗೆ, ಅಮೆರಿಕವು ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಸಿ 200ಕ್ಕೂ ಹೆಚ್ಚು ಮಾಹಿತಿ ಕೋಶಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ. ಆದರೆ, ಚೀನಾ ದೇಶ ಗೂಗಲ್, ಯೂಟ್ಯೂಬ್, ಟ್ವೀಟರ್ ಮುಂತಾದವುಗಳಿಗೆ ತನ್ನದೇ ಆದ ಸ್ಥಳೀಯ ಪರ್ಯಾಯಗಳನ್ನು ಹೊಂದಿರುವುದರಿಂದ ತನ್ನ ಮಾಹಿತಿಯನ್ನು ಇತರ ದೇಶಗಳಿಂದ ರಕ್ಷಿಸಿಕೊಂಡಿದೆ’ ಎಂದೂ ಭಾರತ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಚೀನಿ ಕಂಪನಿ ಮಾಡಿದ್ದೇನು?
ಪ್ರಮುಖ ವ್ಯಕ್ತಿಗಳು ಮತ್ತು ಅವರ ಸಂಬಂಧಿಗಳ ಸಾಮಾಜಿಕ ಜಾಲತಾಣಗಳ ಮೇಲೆ 24*7 ಕಣ್ಗಾವಲಿಟ್ಟು ಆ ಪೋಸ್ಟ್‌ಗಳ ಲೈಕ್, ಕಾಮೆಂಟ್‌ಗಳನ್ನು ವಿಶ್ಲೇಷಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಕೃತಕ ಬುದ್ಧಿಮತ್ತೆ ಬಳಸಿ, ಗ್ರಾಫಿಕ್ ಲೊಕೇಶನ್ ಮೂಲಕ ಖಾಸಗಿ ಮಾಹಿತಿಯನ್ನೂ ಕದಿಯಲಾಗುತ್ತಿದೆ.
ಶೆಂಜೆನ್‌ನ ಡೇಟಾದಿಂದ ಏನಾಗುತ್ತೆ?
ರಾಜಕೀಯ, ಉದ್ಯಮ, ತಂತ್ರಜ್ಞಾನ ಕ್ಷೇತ್ರದ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಶೆಂಜನ್ ಕಂಪನಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಶೆಂಜನ್ ಈ ಮಾಹಿತಿಯನ್ನು ಚೀನಾ ಸರ್ಕಾರ, ಸೇನೆ, ಭದ್ರತಾ ಏಜೆನ್ಸಿಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ.
ಉದ್ದೇಶ ಏನು?
ದೇಶೀಯ ಭದ್ರತಾ ಸಂಸ್ಥೆಗಳು ಇಂತಹ ಡೇಟಾವನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಟ್ರ್ಯಾಕಿಂಗ್ ಮತ್ತಿತರ ಉದ್ದೇಶಕ್ಕೆ ಬಳಸಿಕೊಳ್ಳುತ್ತವೆ. ಆದರೆ ವಿದೇಶಿ ಏಜೆನ್ಸಿಯೊಂದು ಇಂಥ ಮಾಹಿತಿಯನ್ನು ಸಂಗ್ರಹಿಸುವುದು ದುರುದ್ದೇಶಪೂರ್ವಕವಾಗಿರುತ್ತದೆ. ಅದನ್ನು ಯುದ್ಧತಂತ್ರ ರೂಪಿಸುವುದೂ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಹಿಂಸಾತ್ಮಕ, ಮಿಲಿಟರಿ ಯುದ್ಧದ ಬದಲಾಗಿ ರಾಜಕೀಯ, ಆರ್ಥಿಕ ಮತ್ತು ತಾಂತ್ರಿಕವಾಗಿ ಯುದ್ಧ ಸಾರಲೂ ಈ ಮಾಹಿತಿಯನ್ನು ಉಪಯೋಗಿಸಬಹುದು.
ಇದು ಕಾನೂನು ಉಲ್ಲಂಘನೆಯೇ?
ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2011, ಐಟಿ ಕಾಯ್ದೆ-2000ರಡಿ ನೇರ ಮಾರುಕಟ್ಟೆಗಾಗಿ ವೈಯಕ್ತಿಕ ಡೇಟಾ ಬಳಕೆಗೆ ಯಾವುದೇ ಷರತ್ತು ವಿಧಿಸಿಲ್ಲ. ಅನೇಕ ವಾಣಿಜ್ಯ ಘಟಕಗಳು ಜಾಹೀರಾತು ಉದ್ದೇಶದಿಂದ ಅಂತಹ ಮಾಹಿತಿಯನ್ನು ಪಡೆಯುತ್ತವೆ. ಆದರೆ ತಜ್ಞರ ಪ್ರಕಾರ ಥರ್ಡ್ ಪಾರ್ಟಿ (ಶೆಂಜೆನ್ ರೀತಿ) ಒಪ್ಪಿಗೆ ಇಲ್ಲದೆ ಇಂತಹ ದತ್ತಾಂಶ ಸಂಗ್ರಹ ಮಾಡಿ ಪ್ರತಿಸ್ಪರ್ಧಿ ದೇಶಗಳೊಂದಿಗೆ ಹಂಚಿಕೊಳ್ಳುವುದು ಕಾನೂನು ಬಾಹಿರ.
ಕಕ್ಷೆ ಸೇರಲಿಲ್ಲ ಚೀನಾ ಊಡಾಯಿಸಿದ ಆಪ್ಟಿಕಲ್ ರಿಮೂಟ್ ಸೆನ್ಸಿಂಗ್ ಸ್ಯಾಟಲೈಟ್!
ಈಗಿರುವ ಆತಂಕ ಏನು?
ಭಾರತ-ಚೀನಾ ನಡುವೆ ನೈಜ ನಿಯಂತ್ರಣ ರೇಖೆಯಲ್ಲಿ ಗಡಿ ವಿಚಾರ ಸಂಬಂಧ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಭಾರತ ಚೀನಾದ 100ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಸಂದರ್ಭದಲ್ಲಿ ಶೆಂಜನ್ ಡೇಟಾಬೇಸ್ ಸಿದ್ಧಪಡಿಸಿಕೊಂಡಿರುವ ಮಾಹಿತಿ ಹೊರಬಿದ್ದಿರುವುದು ಭಾರತದ ಭದ್ರತೆ ವಿಷಯದಲ್ಲಿ ಆತಂಕ ಮೂಡಿಸಿದೆ.