
ವಿಜಯವಾಡ (ಫೆಬ್ರವರಿ 7, 2023): ಮಧ್ಯ ಕರ್ನಾಟಕದ 4 ಜಿಲ್ಲೆಗಳ ಬರಪೀಡಿತ 12 ತಾಲೂಕುಗಳಿಗೆ ನೀರು ಒದಗಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ವಿರುದ್ಧ ಇದೀಗ ನೆರೆಯ ಆಂಧ್ರಪ್ರದೇಶ ತಗಾದೆ ತೆಗೆದಿದೆ. ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗೆ ಅನುಕೂಲ ಕಲ್ಪಿಸುವ ಈ ಯೋಜನೆಗೆ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 5300 ಕೋಟಿ ರೂ. ಹಂಚಿಕೆ ಮಾಡಿದ ಬೆನ್ನಲ್ಲೇ ಕ್ಯಾತೆ ತೆಗೆದಿರುವ ಆಂಧ್ರಪ್ರದೇಶ, ಯೋಜನೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುವುದಾಗಿ ಸಾರಿದೆ.
ತಕ್ಷಣವೇ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು (Upper Bhadra Project) ಸ್ಥಗಿತಗೊಳಿಸಿ, ನದಿಯ ಕೆಳಭಾಗದಲ್ಲಿ ಇರುವ ಆಂಧ್ರಪ್ರದೇಶದ (Andhra Pradesh) ಹಕ್ಕುಗಳನ್ನು ರಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಲು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ (Jagan Mohan Reddy) ಆದೇಶಿಸಿದ್ದಾರೆ. ಅದರಂತೆ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಂತೆ: ಸಿಎಂ ಬೊಮ್ಮಾಯಿ
ಆಂಧ್ರದ ಸಿಟ್ಟು ಏಕೆ?:
ಕೃಷ್ಣಾ ನದಿ (Krishna River) ನೀರು ಹಂಚಿಕೆ ಕುರಿತು ವಿಚಾರಣೆ ನಡೆಸಿದ್ದ ಬಚಾವತ್ ನ್ಯಾಯಾಧಿಕರಣ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಪ್ರಮಾಣದ ನೀರಿನ ಹಂಚಿಕೆಯನ್ನು ಮಾಡಿಲ್ಲ. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ ತುಂಗಭದ್ರಾ ಡ್ಯಾಂ, ಕೆ.ಸಿ. ನಾಲೆ, ರಾಜೋಳಿ ಬಂಡಾ ತಿರುವು ಯೋಜನೆ, ಶ್ರೀಶೈಲ, ನಾಗಾರ್ಜುನ ಸಾಗರ ಜಲಾಶಯಗಳು ಮಾತ್ರವೇ ಅಲ್ಲದೆ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ಆಂಧ್ರ ಆತಂಕ ವ್ಯಕ್ತಪಡಿಸಿದೆ.
ಹೀಗಾಗಿ, ಭದ್ರಾ ಮೇಲ್ದಂಡೆ ಯೋಜನೆಗೆ ನೀಡಿರುವ ರಾಷ್ಟ್ರೀಯ ಯೋಜನೆ ಸ್ಥಾನವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು. ಆಂಧ್ರಪ್ರದೇಶದ ಆಕ್ಷೇಪಣೆ ಪರಿಗಣಿಸದೆ ಯೋಜನೆಗೆ ಕೇಂದ್ರ ಜಲ ಆಯೋಗ ನೀಡಿರುವ ತಾಂತ್ರಿಕ ಮಾನ್ಯತೆಯನ್ನು ಬರ್ಕಾಸ್ತುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ವಾದಿಸಲು ಆಂಧ್ರ ಸರ್ಕಾರ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ, ಮಧ್ಯ ಕರ್ನಾಟಕಕ್ಕೆ ವರ: ಸಿಎಂ ಬೊಮ್ಮಾಯಿ
ನೀರಿನ ಹಂಚಿಕೆಯನ್ನೇ ಮಾಡಿಕೊಳ್ಳದೆ ಕರ್ನಾಟಕ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು 2015ರಲ್ಲಿ ಆರಂಭಿಸಿದಾಗ ಮುಖ್ಯಮಂತ್ರಿಯಾಗಿದ್ದ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರು ಮೂಕ ಪ್ರೇಕ್ಷಕರಾಗಿದ್ದರು. ತನ್ಮೂಲಕ ಕೃಷ್ಣಾ ನದಿಗೆ ಸಂಬಂಧಿಸಿದಂತೆ ಆಂಧ್ರದ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಏನಿದು ಭದ್ರಾ ಮೇಲ್ದಂಡೆ ಯೋಜನೆ : ಯಾವೆಲ್ಲಾ ಜಿಲ್ಲೆಗಳಿಗೆ ನೀರೊದಗಿಸಲಿದೆ ಭದ್ರೆ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ