
ರಾಯಚೂರು (ಡಿ.14) : ಜಿಲ್ಲೆಯ ಮಾನ್ವಿ ತಾಲೂಕು ಕೋಳಿಕ್ಯಾಂಪಿನ ಐದು ವರ್ಷದ ಮಗುವಲ್ಲಿ ಝೀಕಾ ವೈರಸ್ ಪತ್ತೆಯಾದ ಪ್ರಕರಣ ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿರುವುದರಿಂದ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೇಂದ್ರ ತಂಡದ ಅಧಿಕಾರಿ ಡಾ.ಸ್ಮಿತಾ, ಎನ್‌ಸಿಡಿಸಿ ನಿರ್ದೇಶಕಿ ಶುಭಾ, ಕೇರಳದ ಡಾ.ರೇಗೋ ಅವರನ್ನೊಳಗೊಂಡ ಕೇಂದ್ರ ಆರೋಗ್ಯ ತಜ್ಞರ ತಂಡ ಮಂಗಳವಾರ ಕೋಳಿಕ್ಯಾಂಪ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿತು. ಬಳಿಕ, ರಾಯಚೂರಿನ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ರಿಮ್ಸ್ ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ತಜ್ಞ ವೈದ್ಯರಿಗೆ ಕಾರ್ಯಾಗಾರ ನಡೆಸಿ, ಝೀಕಾ ವೈರಸ್ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಗತ್ಯ ಮಾಹಿತಿ ನೀಡಿತು.
ಕರ್ನಾಟಕಕ್ಕೂ ವಕ್ಕರಿಸಿದ ಝೀಕಾ ವೈರಸ್..!
ಈ ಮಧ್ಯೆ, ಮಾನ್ವಿ ತಾಲೂಕು ಹಾಗೂ ರಾಯಚೂರು ಜಿಲ್ಲಾ ಆರೋಗ್ಯ ಇಲಾಖೆಯ ತಂಡ, ಮಂಗಳವಾರ ಕೋಳಿಕ್ಯಾಂಪ್ ಸೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ, ಜನರಲ್ಲಿ ಜಾಗೃತಿ ಮೂಡಿಸಿತು. ಝೀಕಾ ವೈರಸ್ ಬಗ್ಗೆ ಜನರು ಭೀತಿಗೊಳ್ಳಬಾರದು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸೊಳ್ಳೆ ಪರದೆ, ಸೊಳ್ಳೆ ನಿಯಂತ್ರಣ ಔಷಧಿಗಳನ್ನು ಬಳಸಬೇಕು ಎಂದು ಸಲಹೆ ನೀಡಿತು.
ಪೋಷಕರಲ್ಲಿ ಹೆಚ್ಚಿದ ಆತಂಕ:
5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟು ಹಾಕಿದೆ. ನೆಗಡಿ, ಕೆಮ್ಮು, ಚಿಕ್ಕ ಜ್ವರ ಕಾಣಿಸಿಕೊಂಡರೂ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಸಾಲಲ್ಲಿ ನಿಂತು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಲ್ಲದೆ, ಮ್ಯಾಂಡಸ್ ಚಂಡಮಾರುತದ ಪರಿಣಾಮ ಕಳೆದ 2-3 ದಿನಗಳಿಂದ ಜಿಟಿ ಜಿಟಿ ಮಳೆ, ಚಳಿ ಹೆಚ್ಚಾಗಿದ್ದು, ನೆಗಡಿ, ಕೆಮ್ಮು-ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಇದೇ ಸಮಯದಲ್ಲಿ ಝೀಕಾ ವೈರಸ್ ಪ್ರಕರಣ ಸಹ ಪತ್ತೆಯಾಗಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
Zika Virus: ಕರ್ನಾಟಕದಲ್ಲಿ ಝೀಕಾ ವೈರಸ್ ಪತ್ತೆ: ಲಕ್ಷಣಗಳು ಏನು ಗೊತ್ತಾ?
ಇದೇ ವೇಳೆ, ಕೋಳಿಕ್ಯಾಂಪಿನ ಪವಿತ್ರಾ ನಾಗರಾಜ ಮನೆಗೆ ಮಾನ್ವಿ ತಾಪಂ ಇಒ ಎಂ.ಡಿ.ಸೈಯದ್ ಪಟೇಲ್ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು. ನಂತರ ಗ್ರಾ.ಪಂ. ಪಿಡಿಒ ಅವರಿಗೆ ಗ್ರಾಮದಲ್ಲಿ ಫಾಗಿಂಗ್ ಮತ್ತು ಬ್ಲಿಚಿಂಗ್ ಪೌಡರ್ ಹಾಕಿಸಲು, ಕುಡಿಯುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲು, ಇನ್ನಿತರ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ನೀರಮಾನ್ವಿ, ಹರವಿ ಸೇರಿ ಇನ್ನಿತರ ಗ್ರಾಮಗಳಲ್ಲಿ ಜನ ಜಾಗೃತಿ ಮೂಡಿಸಲು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೂಚಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.