ಇಂದು ವಿಶ್ವ ಮೂತ್ರಪಿಂಡ ದಿನ. ಅವುಗಳ ಆರೋಗ್ಯ ಕಾಪಾಡುವ ಬಗ್ಗೆ ಹೆಚ್ಚು ತಿಳಿಯೋಣ. ನಮಗರಿವಿಲ್ಲದಂತೆಯೇ ನಾವು ನಮ್ಮ ಕಿಡ್ನಿಗಳಿಗೆ ಕಿರಿಕಿರಿ ಉಂಟುಮಾಡುತ್ತಾ ಇರುತ್ತೇವೆ. ಅವುಗಳನ್ನು ಆರೋಗ್ಯಯುತವಾಗಿ ಇಡೋದು ಹೇಗೆ?
ನಿಮ್ಮ ಕಿಡ್ನಿಗಳಿಗೆ (Kidneys) ಕಿರಿಕಿರಿಯಾಗೋದು ಯಾವಾಗ?
ಮೂತ್ರ (Urination) ತಡೆಹಿಡಿಯುವುದು: ಮೂತ್ರ ವಿಸರ್ಜನೆ ಮಾಡಬೇಕೆನಿಸಿದರೂ, ತಡೆಹಿಡಿಯುವ ಅಭ್ಯಾಸ ಇದ್ದರೆ ಅದನ್ನು ಕೂಡಲೇ ಬಿಟ್ಟುಬಿಡಿ. ಏಕೆಂದರೆ ಇದು ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಲು ಮತ್ತು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ.
ಅತಿ ಕಡಿಮೆ ನೀರು (Drink water) ಕುಡಿಯುವುದು: ಈ ಅಭ್ಯಾಸದಿಂದ ಕಿಡ್ನಿಗಳು ಸಕ್ರಿಯವಾಗಿರಲು ತೊಂದರೆಯಾಗುತ್ತದೆ. ಅಲ್ಲದೆ, ದೇಹದಲ್ಲಿನ ಕೆಟ್ಟ ಅಂಶಗಳು (Toxins) ಸಂಪೂರ್ಣವಾಗಿ ಹೊರಹೋಗಲು ತೊಂದರೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುವುದು ಒಳಿತು.
ಹೆಚ್ಚು ಸಕ್ಕರೆ (Sugar intake) ಸೇವನೆ: ಸಿಹಿ ತಿಂಡಿಗಳು ಇಷ್ಟವೆಂದು ಮನಬಂದಂತೆ ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಕುತ್ತು ತರುತ್ತದೆ. ಹಾಗಾಗಿ ಸಿಹಿ ತಿಂಡಿಗಳ ಸೇವನೆ ಆದಷ್ಟು ಕಡಿಮೆ ಇರಲಿ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದಿನಕ್ಕೆ 2 ಸೋಡಾ ಕುಡಿಯುವವರು ಹೆಚ್ಚು ಕಿಡ್ನಿ ಸಮಸ್ಯೆ ಎದುರಿಸುತ್ತಾರೆ ಎನ್ನಲಾಗಿದೆ.
ಹೆಚ್ಚು ಮಾಂಸಾಹಾರ (Red meat) ಸೇವನೆ: ಕುರಿ, ಮೇಕೆ, ದನ ಮೊದಲಾದ ಪ್ರಾಣಿಗಳ ಮಾಂಸ ಬಲು ರುಚಿ. ಹಾಗೆಂದು ಅದನ್ನು ಪ್ರತಿನಿತ್ಯ ಸೇವಿಸಲು ಆರಂಭಿಸಿದರೆ ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಕೆಂಪು ಮಾಂಸ ಸೇವನೆಯಿಂದ ದೂರವಿರಿ.
ಅತಿ ಹೆಚ್ಚು ಉಪ್ಪು (Salt Intake) ಸೇವನೆ: ಅತಿ ಹೆಚ್ಚು ಉಪ್ಪು ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಿ ಕಿಡ್ನಿ ಹಾನಿಗೆ ದಾರಿ ಮಾಡಿಕೊಡುತ್ತದೆ.
ನಿದ್ದೆ ಮಾಡದಿರುವುದು: (Sleep) ಕೆಲವರಿಗೆ ನಿದ್ದೆ ಎಂದರೆ ಅಲರ್ಜಿ. ಯಾವಾಗಲೂ ಮೊಬೈಲಲ್ಲಿ ಬಿಜಿ ಆಗಿರುತ್ತಾ ನಿದ್ದೆ ಮಾಡುವುದೇ ಇಲ್ಲ. ಹೀಗೆ ಕಡಿಮೆ ನಿದ್ದೆಯಿಂದಾಗಿ ಕಿಡ್ನಿಯಲ್ಲಿನ ಟಿಶ್ಯೂಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ ಕನಿಷ್ಠ 7 ತಾಸುಗಳ ನಿದ್ದೆ ಮಾಡಿದರೆ ಒಳಿತು.
ಕಿಡ್ನಿ ಯಾಕೆ ಮುಖ್ಯ? ಕಿಡ್ನಿ ಅಥವಾ ಮೂತ್ರಪಿಂಡಗಳು ನಮ್ಮ ದೇಹದಲ್ಲಿನ ಅದ್ಭುತ ಅಂಗಗಳು. ಪ್ರತಿ ಕಿಡ್ನಿಯೂ 10 ಲಕ್ಷ ಮೈಕ್ರೋಫಿಲ್ಟರ್‌ಗಳನ್ನು ಹೊಂದಿರುತ್ತದೆ. ಈ ಫಿಲ್ಟರ್‌ಗಳ ಮೂಲಕ ದೇಹದ ತ್ಯಾಜ್ಯ ದ್ರವ ಅಂಶ ಸೋಸುತ್ತದೆ. ಫಿಲ್ಟರ್‌ಗಳೂ ಸರಿಯಾಗಿ ಕಾರ್ಯ ನಿರ್ವಹಿಸದೆ ಹೋದರೆ ಕಲ್ಮಶಗಳು ನಮ್ಮ ದೇಹದಲ್ಲಿ ಉಳಿದು ಸಮಸ್ಯೆ ಉಂಟುಮಾಡುತ್ತವೆ. ದೇಹದ ದ್ರವಗಳಲ್ಲಿನ ಬದಲಾವಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮತ್ತು ಸರಿ ಹೊಂದಿಸುವ ಮೂಲಕ ಕಿಡ್ನಿಗಳು ಹೋಮಿಯೋಸ್ಟಾಸಿಸ್/ಸಮತೋಲನವನ್ನು ನಿರ್ವಹಿಸುತ್ತವೆ. ನೀರು ಮತ್ತು ಉಪ್ಪಿನಂಶವನ್ನು ಉಳಿಸಿಕೊಂಡು ಕಲ್ಮಶವನ್ನು ಮೂತ್ರದ ಮೂಲಕ ತೆಗೆದು ಹಾಕುತ್ತವೆ. ಹಿಮೋಗ್ಲೋಬಿನ್ ಮಟ್ಟ, ಮೂಳೆ ಆರೋಗ್ಯ ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತವೆ. ಆದ್ದರಿಂದ, ನಾವು ಉತ್ತಮ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಕಿಡ್ನಿ ಕಾಯಿಲೆಗಳೇನು? ಕಿಡ್ನಿಯ ಸಮಸ್ಯೆಗಳು ಆರಂಭದಿಂದಲೇ ಸೂಚನೆ ಕೊಡಲು ಆರಂಭಿಸುತ್ತವೆ. ಕಿಡ್ನಿಯಲ್ಲಿ ಕಲ್ಲು ಆದರೆ ಮೂತ್ರ ನಿಧಾನವಾಗುವುದು, ಕಟ್ಟಿ ಕಟ್ಟಿ ಬರುವುದು, ಪದೇ ಪದೇ ಮೂತ್ರಕ್ಕೆ ಹೋಗಬೇಕು ಅನಿಸುವುದು ಸಾಮಾನ್ಯ. ಇದರ ಮೊದಲ ಮತ್ತು ಎರಡನೆಯ ಹಂತದಲ್ಲಿ ವೈದ್ಯರು ಸುಲಭವಾಗಿ ಇದನ್ನು ನಿವಾರಣೆ ಮಾಡುತ್ತಾರೆ. ಮೂರನೇ ಮತ್ತು ನಾಲ್ಕನೇ ಹಂತಗಳಲ್ಲಿ ಹೆಚ್ಚಿನ ವೈದ್ಯಕೀಯ (Medical) ನಿರ್ವಹಣೆ ಬೇಕು. ಕಿಡ್ನಿ ವಿಫಲವಾಗಿದ್ದರೆ, ಕಾರ್ಯ ಸರಿಯಾಗಿ ನಿರ್ವಹಿಸಲಾಗದ ಹಂತ ತಲುಪಿದ್ದರೆ, ಡಯಾಲಿಸಿಸ್ (Dialysis) ಅಗತ್ಯ. ಆಗ ಡಯಾಲಿಸಿಸ್ ಅಥವಾ ಕಿಡ್ನಿ ಕಸಿಯ ಬಗ್ಗೆ ಚಿಂತಿಸಬೇಕಾಗುತ್ತದೆ.
ಅಧಿಕ ರಕ್ತದೊತ್ತಡ (Blood preasure), ಮಧುಮೇಹ (Diabetes), ಇತರ ಅಂಗಗಳ ವೈಫಲ್ಯಗಳು, ಸ್ವಯಂ ನಿರೋಧಕ ಕಾಯಿಲೆಗಳಂತಹ ರೋಗಗಳು ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ರೋಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತಿಮುಖ್ಯ. ಈ ಕಾಯಿಲೆಗಳಿಗಾಗಿ ನಿಯಮಿತ ತಪಾಸಣೆ, ಔಷಧಿಗಳು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.