World Heart Day 2025: ಹೃದಯಾಘಾತದ ನಂತರ ಮೊದಲ 90 ದಿನಗಳ ಜೀವನಶೈಲಿ ಹೇಗಿರಬೇಕು?

Published : Sep 29, 2025, 12:07 PM IST
World Heart Day 2025 Diet and exercise after heart attack

ಸಾರಾಂಶ

World Heart Day 2025: ಇಂದಿನ ಜೀವನಶೈಲಿಯಿಂದ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಹೃದಯಾಘಾತದಿಂದ ಚೇತರಿಸಿಕೊಳ್ಳುವ ಮೊದಲ 90 ದಿನಗಳು ಅತ್ಯಂತ ನಿರ್ಣಾಯಕವಾಗಿದ್ದು, ಈ ಸಮಯದಲ್ಲಿ ಸರಿಯಾದ ಆರೈಕೆ, ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಎರಡನೇ ಹೃದಯಾಘಾತದ ಅಪಾಯವನ್ನುತಪ್ಪಿಸಬಹುದು.

World Heart Day 2025: ವಿಶ್ವ ಹೃದಯ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ಆಚರಿಸಲಾಗುತ್ತದೆ. ಇದರ ಉದ್ದೇಶವು ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೃದಯವನ್ನು ಸುರಕ್ಷಿತವಾಗಿರಿಸುವ ಕುರಿತು ಮಾಹಿತಿ ನೀಡುವುದು. ಇಂದಿನ ಜೀವನಶೈಲಿಯಲ್ಲಿ, ತಪ್ಪು ಆಹಾರ ಪದ್ಧತಿ, ಒತ್ತಡ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

ಒಂದು ಕಾಲದಲ್ಲಿ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿದ್ದ ಈ ಸಮಸ್ಯೆಯು ಇಂದು ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿದೆ. ಹೃದಯಾಘಾತದಿಂದ ಚೇತರಿಸಿಕೊಂಡ ನಂತರ ಜೀವನಶೈಲಿಯನ್ನು ಹೇಗೆ ಬದಲಾಯಿಸಬೇಕು ಮತ್ತು ಮೊದಲ 90 ದಿನಗಳಲ್ಲಿ ಯಾವ ಆರೈಕೆಯನ್ನು ಅನುಸರಿಸಬೇಕು ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಯಿರಿ.

ಹೃದಯಾಘಾತದಿಂದ ಚೇತರಿಕೆ: 90 ದಿನಗಳ ಆರೈಕೆ ಹೇಗಿರಬೇಕು?

ಹೃದಯಾಘಾತವು ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಚೇತರಿಕೆಗೆ ಸಮಯ ಮತ್ತು ಎಚ್ಚರಿಕೆಯ ಅಗತ್ಯವಿರುತ್ತದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಸಂಪೂರ್ಣ ಗುಣಮುಖರಾಗಿದ್ದೀರಿ ಎಂದರ್ಥವಲ್ಲ. ಮೊದಲ 90 ದಿನಗಳು ತುಂಬಾ ಮುಖ್ಯ. ಹೃದಯ ಮತ್ತು ದೇಹದ ಸ್ನಾಯುಗಳು ಚೇತರಿಕೆಯಾಗಲು ಅತ್ಯಂತ ಮುಖ್ಯವಾದ ಕಾಲಾವಧಿಯಾಗಿದೆ. ಈ ಸಮಯದಲ್ಲಿ ಎರಡನೇ ಹೃದಯಾಘಾತದ ಅಪಾಯವಿರುತ್ತದೆ. ಸಂಶೋಧನೆಗಳ ಪ್ರಕಾರ, ಸರಿಯಾದ ಆರೈಕೆಯಿಂದ ಈ ಅಪಾಯವನ್ನು ಶೇಕಡಾ 23-30 ರಷ್ಟು ಕಡಿಮೆ ಮಾಡಬಹುದು. ಚೇತರಿಕೆಗೆ ಈ ವಿಷಯಗಳನ್ನು ಗಮನದಲ್ಲಿಡಿ

ವೈದ್ಯರೊಂದಿಗೆ ನಿಯಮಿತ ಸಂಪರ್ಕ:

ಚೇತರಿಕೆಯ ಸಮಯದಲ್ಲಿ ವೈದ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ. ರಕ್ತದೊತ್ತಡ, ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ಮತ್ತು ಹೃದಯ ಬಡಿತದ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿ. ವೈದ್ಯರು ಸೂಚಿಸಿದ ಔಷಧಿಗಳಾದ ರಕ್ತ ತೆಳುಗೊಳಿಸುವ ಔಷಧಿಗಳು, ಬೀಟಾ-ಬ್ಲಾಕರ್‌ಗಳು ಮತ್ತು ಸ್ಟ್ಯಾಟಿನ್‌ಗಳನ್ನು ಕಟ್ಟುನಿಟ್ಟಾಗಿ ಸೇವಿಸಿ.

ರಕ್ತದೊತ್ತಡ ಮತ್ತು ಸಕ್ಕರೆ ತಪಾಸಣೆ:

ಮನೆಯಲ್ಲಿಯೇ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಗಮನಿಸಿ. ಇದು ವೈದ್ಯರಿಗೆ ಚಿಕಿತ್ಸೆಯ ಸಮಯದಲ್ಲಿ ಸಹಾಯಕವಾಗುತ್ತದೆ.

ಲಘು ವ್ಯಾಯಾಮ:

ವೈದ್ಯರ ಸಲಹೆಯಂತೆ, ಚೇತರಿಕೆಯ ಸಮಯದಲ್ಲಿ ಪ್ರತಿದಿನ 10-15 ನಿಮಿಷಗಳ ಕಾಲ ನಡಿಗೆಯಿಂದ ಪ್ರಾರಂಭಿಸಿ. ತೀವ್ರವಾದ ದೈಹಿಕ ಚಟುವಟಿಕೆಗಳನ್ನು ತಪ್ಪಿಸಿ.

ಆಹಾರದಲ್ಲಿ ಬದಲಾವಣೆ:

ಕೊಬ್ಬಿನಾಂಶದ ಆಹಾರ, ಸಂಸ್ಕರಿಸಿದ ಆಹಾರ ಮತ್ತು ಜಂಕ್ ಫುಡ್‌ಗಳನ್ನು ಕಡಿಮೆ ಮಾಡಿ. ಹಣ್ಣುಗಳು, ತರಕಾರಿಗಳು, ಓಟ್ಸ್, ಮೀನು, ಬೀಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಗೆ ಆದ್ಯತೆ ನೀಡಿ. ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ ಮತ್ತು ಆರೋಗ್ಯಕರ ತೈಲಗಳಾದ ಆಲಿವ್ ತೈಲವನ್ನು ಬಳಸಿ.

ಒತ್ತಡ ನಿರ್ವಹಣೆ:

ಒತ್ತಡವು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಧ್ಯಾನ, ಯೋಗ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಳವಡಿಸಿಕೊಳ್ಳಿ. ಸಾಕಷ್ಟು ನಿದ್ದೆ ಮತ್ತು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿ.

ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ:

ಧೂಮಪಾನ ಮತ್ತು ಮದ್ಯಪಾನವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳನ್ನು ಸಂಪೂರ್ಣವಾಗಿ ತ್ಯಜಿಸಿ.

ವೈದ್ಯರು ಹೇಳೋದೇನು?

ಖ್ಯಾತ ಹೃದ್ರೋಗ ತಜ್ಞ ಡಾ. ಸುಧೀರ್ ಸಕ್ಸೇನಾ (ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೊಹಾಲಿ) ಹೇಳುವಂತೆ, 'ಚೇತರಿಕೆಯ 90 ದಿನಗಳ ಅವದಿಯ ಸಮಯದಲ್ಲಿ ಜೀವನಶೈಲಿಯ ಬದಲಾವಣೆಗಳ ಜೊತೆಗೆ ಔಷಧಿಗಳ ಕಡೆಗೆ ವಿಶೇಷ ಗಮನ ನೀಡಬೇಕು. ಸರಿಯಾದ ಆರೈಕೆಯಿಂದ ಎರಡನೇ ಹೃದಯಾಘಾತದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಹೃದಯಾಘಾತದ ನಂತರದ ಮೊದಲ 90 ದಿನಗಳು ಚೇತರಿಕೆಗೆ ನಿರ್ಣಾಯಕವಾಗಿವೆ. ಸರಿಯಾದ ಜೀವನಶೈಲಿ, ಔಷಧಿಗಳ ಸೇವನೆ, ವೈದ್ಯರೊಂದಿಗೆ ನಿಯಮಿತ ಸಂಪರ್ಕ ಮತ್ತು ಲಘು ವ್ಯಾಯಾಮದಿಂದ ನೀವು ಆರೋಗ್ಯಕರ ಜೀವನಕ್ಕೆ ಮರಳಬಹುದು. ವಿಶ್ವ ಹೃದಯ ದಿನದ ಸಂದರ್ಭದಲ್ಲಿ, ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ ಮತ್ತು ಎರಡನೇ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಿ. ನಿಮ್ಮ ಹೃದಯವನ್ನು ರಕ್ಷಿಸಿ, ಆರೋಗ್ಯಕರ ಜೀವನವನ್ನು ಆನಂದಿಸಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ
ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?