ಕಿಡ್ನಿ ಕದ್ದ ಡಾಕ್ಟರ್‌, ಆತನದ್ದೇ ಅಂಗಾಂಗ ಕಸಿ ಮಾಡುವಂತೆ ಮಹಿಳೆಯ ಪಟ್ಟು

By Vinutha PerlaFirst Published Nov 17, 2022, 3:53 PM IST
Highlights

ಆರೋಗ್ಯ ಸರಿ ಮಾಡಿಕೊಳ್ಳಲು ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರು ಕಿಡ್ನಿಯನ್ನೇ ಎಗರಿಸಿಬಿಟ್ಟಿದ್ದಾರೆ. ಕಿಡ್ನಿಯನ್ನು ಕಳೆದುಕೊಂಡ ಮಹಿಳೆಯೀಗ ಡಯಾಲಿಸಿಸ್ ಮಾಡಿಕೊಳ್ಳುತ್ತಾ ನರಕ ಅನುಭವಿಸುವಂತಾಗಿದೆ. ಆರೋಪಿ ವೈದ್ಯನನ್ನು ಕೂಡಲೇ ಬಂಧಿಸಿ ಆತನ ಕಿಡ್ನಿಯನ್ನು ಕಸಿ ಮಾಡುವಂತೆ ಮಹಿಳೆ ಪಟ್ಟು ಹಿಡಿದಿದ್ದಾಳೆ.

ಗರ್ಭಾಶಯದ ಶಸ್ತ್ರಚಿಕಿತ್ಸೆಗೆಂದು ತೆರಳಿದ್ದ ಮಹಿಳೆಯ ಮೂತ್ರಪಿಂಡಗಳನ್ನು ವೈದ್ಯರು ತೆಗೆದುಹಾಕಿದ್ದು, ಈಗ ವೈದ್ಯರೇ ತಮ್ಮ ಅಂಗಗಳನ್ನು ತನಗೆ ಟ್ರಾನ್ಸ್‌ಪ್ಲೆಂಟ್ ಮಾಡಬೇಕೆಂದು ಬಿಹಾರದ ಮಹಿಳೆ ಒತ್ತಾಯಿಸಿದ್ದಾರೆ. ಬಿಹಾರದ ಮುಜಾಫರ್‌ಪುರದ ಮಹಿಳೆ ಸುನೀತಾ ದೇವಿ ಎಂಬ ಮಹಿಳೆ ತನ್ನ ಮೂತ್ರಪಿಂಡವನ್ನು ಆಸ್ಪತ್ರೆಯ ವೈದ್ಯರು ತನಗೇ ಹೇಳದೇ ತೆಗೆದುಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂಬಂಧಪಟ್ಟ ವೈದ್ಯರ ಅಂಗಗಳನ್ನು (Organ) ತನಗೆ ಕಸಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 38ರ ಹರೆಯದ ಮಹಿಳೆ ಮುಜಾಫರ್‌ಪುರ ಜಿಲ್ಲೆಯ ಬರಿಯಾರ್‌ಪುರ ಗ್ರಾಮದ ಆಸ್ಪತ್ರೆಗೆ (Hospital) ಸೆಪ್ಟೆಂಬರ್ 3ರಂದು ಶಸ್ತ್ರಚಿಕಿತ್ಸೆ ಮೂಲಕ ಗರ್ಭಕೋಶ ತೆಗೆಯಲು ಭೇಟಿ ನೀಡಿದ್ದರು. ಆದರೆ, ಆಕೆಯ ಎರಡೂ ಕಿಡ್ನಿಗಳನ್ನು ವೈದ್ಯರು (Doctors) ಯಾವುದೇ ಅನುಮೋದನೆ ಅಥವಾ ಸಂಬಂಧಿಕರಿಗೆ ತಿಳಿಸದೆಯೇ ತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವುದೇ ಅನುಮೋದನೆ ಪಡೆಯದೆ ಕಿಡ್ನಿ ತೆಗೆದ ವೈದ್ಯರು
ಶಸ್ತ್ರಚಿಕಿತ್ಸೆಯ ನಂತರ ಸುನೀತಾ ದೇವಿ ಅವರ ಆರೋಗ್ಯ (Health) ಸ್ಥಿತಿ ಹದಗೆಟ್ಟ ಕಾರಣ ಆರೋಗ್ಯ ಪರೀಕ್ಷೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂತು. ಮುಜಾಫರ್‌ಪುರದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (SKMCH) ವೈದ್ಯರು ಮೂತ್ರಪಿಂಡ (Kidney) ಕಳ್ಳತನ ಮಾಡಿರುವುದನ್ನು ತಿಳಿಸಿದರು. ಮತ್ತು ಸುನೀತಾ ಬದುಕುವುದು ಕಷ್ಟವೆಂದು ಹೇಳಿದರು. ಅಂದಿನಿಂದ ಸುನೀತಾ ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಂಡು ಬದುಕುತ್ತಿದ್ದಾರೆ.

ಕಿಡ್ನಿ, ಸಂಧಿವಾತ ಬರಲೇಬಾರದು ಎಂದಾದ್ರೆ ಈ ಆಹಾರ ಸೇವಿಸಿ

ಎಸ್‌ಕೆಎಂಸಿಎಚ್‌ನ ವೈದ್ಯರು ಸುನೀತಾ ಅವರನ್ನು ಚಿಕಿತ್ಸೆಗಾಗಿ (Treatment) ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಪಾಟ್ನಾಕ್ಕೆ ಕಳುಹಿಸಿದ್ದಾರೆ. ಸುನಿತಾಗೆ ಕಿಡ್ನಿ ಇಲ್ಲದಿರುವುದರಿಂದ ಒಂದು ದಿನ ಡಯಾಲಿಸಿಸ್ ಮಾಡದಿದ್ದರೆ ಆಕೆ ಸಾಯಬಹುದು ಎಂದು ಮುಜಾಫರ್‌ಪುರದ ಎಸ್‌ಕೆಎಂಸಿಎಚ್‌ನ ಸೂಪರಿಂಟೆಂಡೆಂಟ್ ಡಾ.ಬಿ.ಎಸ್.ಝಾ ಹೇಳಿದ್ದಾರೆ. 

ದೇವಿ ಮೂರು ಮಕ್ಕಳ ತಾಯಿಯಾಗಿದ್ದು, ಆಕೆಯ ಪತಿ ಕೂಲಿ ಕಾರ್ಮಿಕರಾಗಿದ್ದು, ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಐಜಿಐಎಂಎಸ್‌ನಲ್ಲಿ ಸುನೀತಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರ ಸ್ಥಿತಿ ತುಂಬಾ ಗಂಭೀರ (Serious)ವಾಗಿದೆ ಎಂದು ಹೇಳಿದ್ದಾರೆ. ಐಜಿಐಎಂಎಸ್‌ನ ನೆಫ್ರಾಲಜಿ ಮತ್ತು ಕಿಡ್ನಿ ಕಸಿ ವಿಭಾಗದ ಮುಖ್ಯಸ್ಥ ಡಾಕ್ಟರ್ ಓಂ ಕುಮಾರ್ ಅವರು ಸಂತ್ರಸ್ತೆಯ ಸ್ಥಿತಿಯ ಕುರಿತು ಮಾತನಾಡುತ್ತಾ. 'ಸುನೀತಾ ನಿಯಮಿತವಾಗಿ ಡಯಾಲಿಸಿಸ್‌ನಲ್ಲಿದ್ದಾರೆ ಮತ್ತು ಅವಳ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವಳು ಮೂತ್ರಪಿಂಡ ಕಸಿಗೆ ಒಳಗಾದರೆ ಪರಿಸ್ಥಿತಿ ಸುಧಾರಿಸುತ್ತದೆ. ಆಕೆಯ ಪ್ರಮುಖ ಅಂಶಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯ ವೈದ್ಯರು, ಮಾಲೀಕರು ನಾಪತ್ತೆ
ದೇವಿ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಸುಭಕಾಂತ್ ಕ್ಲಿನಿಕ್ ಮಾಲೀಕ ಪವನ್ ಕುಮಾರ್ ಮತ್ತು ಡಾ ಆರ್ ಕೆ ಸಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಘಟನೆ ಬೆಳಕಿಗೆ ಬಂದ ನಂತರ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ. ಕ್ಲಿನಿಕ್ ನೋಂದಣಿಯಾಗಿಲ್ಲ ಮತ್ತು ವೈದ್ಯರ ಶೈಕ್ಷಣಿಕ ಅರ್ಹತೆಯೂ ನಕಲಿ ಎಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎಲೆಯ ವಾಸನೆಯಿಂದ ಕಿಡ್ನಿ ಸ್ಟೋನ್, ಮೈಗ್ರೇನ್ ಸೇರಿ ಎಲ್ಲಾ ರೋಗ ಮಾಯ!

‘ವೈದ್ಯರ ಕಿಡ್ನಿಗಳನ್ನು ನನಗೆ ಕೊಡಿ’
ಅಂಗಾಂಗ ಕಸಿ ಮಾಡಲು ಐಜಿಐಎಂಎಸ್‌ಗೆ ದಾಖಲಾಗುವಂತೆ ಸುನೀತಾ ದೇವಿಯನ್ನು ಕೇಳಲಾಗಿದೆ, ಅಲ್ಲಿ ಮೂತ್ರಪಿಂಡಗಳು ಲಭ್ಯವಾದಾಗ ಮಾತ್ರ ಕಸಿ  ಮಾಡಲಾಗುತ್ತದೆ. ಆದರೆ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಬೇಕು ಮತ್ತು ಆತನ ಕಿಡ್ನಿಯನ್ನು ತನಗೆ ನೀಡಬೇಕು ಎಂದು ಸುನೀತಾ ಒತ್ತಾಯಿಸಿದ್ದಾರೆ. ನನ್ನ ಎರಡೂ ಕಿಡ್ನಿಗಳನ್ನು ತೆಗೆದ ಆರೋಪಿ ವೈದ್ಯನನ್ನು ಕೂಡಲೇ ಬಂಧಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ. ಆತನ ಕಿಡ್ನಿಯನ್ನು ಕಸಿ ಮಾಡಲು ನನಗೆ ನೀಡಬೇಕು, ಇದರಿಂದ ನಾನು ಬದುಕುಳಿಯಬಹುದು ಎಂದು ಅವರು ಹೇಳಿದರು.

click me!