
ಸೋಶಿಯಲ್ ಮೀಡಿಯಾದಲ್ಲಿ ತಲೆ ಬುಡ ಇಲ್ಲದ ವಿಚಾರಗಳು ಟ್ರೆಂಡ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಹೊಸ ಸೇರ್ಪಡೆ ಎನ್ನುವಂತೆ ಮಹಿಳೆಯೊಬ್ಬರು ಕಣ್ಣಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಿ ತನ್ನ ಮೂತ್ರದಿಂದ ಕಣ್ಣನ್ನು ವಾಶ್ ಮಾಡಿಕೊಂಡಿದ್ದು ವೈರಲ್ ಆಗಿತ್ತು. ಅದು ಮಾತ್ರಲ್ಲದೆ ಆಕೆಯ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಕಣ್ಣು ತೊಳೆಯಲು ಮೂತ್ರವನ್ನು ಬಳಸಿದ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆದ ಬೆನ್ನಲ್ಲಿಯೇ, ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.
ಕಣ್ಣಿನ ಆರೈಕೆಗೆ ಮೂತ್ರದಿಂದ ಕಣ್ಣು ತೊಳೆಯುವುದು ಸುರಕ್ಷಿತವಲ್ಲ. ಇದು ಕಣ್ಣಿನ ಕಿರಿಕಿರಿ, ಸೋಂಕು ಮತ್ತು ದೃಷ್ಟಿ ನಷ್ಟ ಸೇರಿದಂತೆ ಹಾನಿಯನ್ನುಂಟುಮಾಡಬಹುದು ಎಂದು ವೈದ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಪುಣೆ ಮೂಲದ ನೂಪುರ್ ಪಿಟ್ಟಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ತಮ್ಮನ್ನು ತಾವು ಮೆಡಿಸಿನ್ ಫ್ರೀ ಲೈಫ್ ಕೋಚ್ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ತಮ್ಮ ಎರಡು ಕಣ್ಣುಗಳನ್ನು ತೊಳೆಯುವ ಕಪ್‌ನಲ್ಲಿ ಸಂಗ್ರಹಿಸಿದ್ದ ಮೂತ್ರದಲ್ಲಿ ತೊಳೆಯಲು ಮುಂದಾಗಿದ್ದಾರೆ. ಅದನ್ನು ಅವರು ಯಶಸ್ವಿಯಾಗಿಯೂ ಮಾಡಿದ್ದಾರೆ. ಅಲ್ಲದೆ ಅದೇ ವಿಡಿಯೋದಲ್ಲಿ ಬೆಳಗಿನ ಮೊದಲ ಆರಂಭಿಕ ಕೆಲ ಸೆಕೆಂಡ್‌ನ ಮೂತ್ರವು ಕಣ್ಣುಗ ಕೆಂಪು, ಡ್ರೈನೆಸ್ ಹಾಗೂ ಕಿರಿಕಿರಿಯಂಥ ಲಕ್ಷಣಗಳನ್ನು ನಿವಾರಿಸುತ್ತದೆ ಎಂದು ಪಿಟ್ಟಿ ಹೇಳಿಕೊಂಡಿದ್ದಾರೆ.
ಈ ಪ್ರಕ್ರಿಯೆಯು ಬೆಳಗಿನ ಮೂತ್ರವನ್ನು ಸಂಗ್ರಹಿಸುವುದು, ಕಣ್ಣಿನ ಕಪ್‌ಗಳಲ್ಲಿ ಅದನ್ನು ತುಂಬುವುದು ಮತ್ತು ಕಣ್ಣುಗಳು ಕಪ್‌ನಲ್ಲಿರುವ ಮೂತ್ರದಲ್ಲಿ ಮುಳುಗಿರುವಾಗ ಹಲವಾರು ಬಾರಿ ಕಣ್ಣು ಮಿಟುಕಿಸುವುದು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು.
ಆದರೆ,ವೈದ್ಯರು ಮಾತ್ರ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. 'ನೆವರ್! ನೆವರ್! ನೆವರ್ ಡು ದಿಸ್! ಮೂತ್ರ ಯಾವಾಗಲೂ ಸೇರಬೇಕಾಗಿರೋದು ಟಾಯ್ಲೆಟ್‌ಗೆ ಮಾತ್ರ. ಮತ್ತೆಲ್ಲೂ ಅಲ್ಲ. ನಿಮ್ಮನ್ನು ನೀವು ಹಾನಿ ಮಾಡಿಕೊಳ್ಳೇಕು ಎಂದು ಯುರಾಲಾಜಿಸ್ಟ್ ಡಾ. ಜಾಸನ್ ಫಿಲಿಪ್ ಬರೆದಿದ್ದಾರೆ.
ಸಾಮಾನ್ಯ ಮಾನವ ಮೂತ್ರದ pH 5.5 ರಿಂದ 6.5 (ಆಮ್ಲೀಯ) ವರೆಗೆ ಇದ್ದರೂ, ಕಣ್ಣಿನ ತೊಳೆಯುವ ದ್ರಾವಣಗಳಿಗೆ ಸೂಕ್ತವಾದ pH ಸುಮಾರು 7.4 (ಕ್ಷಾರೀಯ) ಆಗಿದೆ ಎಂದು ಅವರು ಹೇಳಿದರು. "ಮೂತ್ರವನ್ನು ಕಣ್ಣು ತೊಳೆಯಲು ಬಳಸುವುದರಿಂದ ಉರಿಯೂತದಿಂದ ದೃಷ್ಟಿ ನಷ್ಟದವರೆಗೆ ಏನು ಬೇಕಾದರೂ ಕಾರಣವಾಗಬಹುದು" ಎಂದು ಅವರು ಬರೆದಿದ್ದಾರೆ.
"ದ ಲಿವರ್ ಡಾಕ್" ಎಂದು ಆನ್‌ಲೈನ್‌ನಲ್ಲಿ ಕರೆಯಲ್ಪಡುವ ಕೇರಳ ಮೂಲದ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಕೂಡ ಇದೇ ಮಾತು ಹೇಳಿದ್ದಾರೆ. "ದಯವಿಟ್ಟು ನಿಮ್ಮ ಕಣ್ಣುಗಳೊಳಗೆ ಮೂತ್ರ ಹಾಕಬೇಡಿ. ಮೂತ್ರವು ಸ್ಟೆರೈಲ್ ದ್ರಾವಣವಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಲ್ ಆಗಿರಲು ಪ್ರಯತ್ನಿಸುತ್ತಿರುವ ಬೂಮರ್ ಆಂಟಿಗಳು ಖಿನ್ನತೆ ಮತ್ತು ಭಯಾನಕತೆ ಉಂಟು ಮಾಡುತ್ತಿದ್ದಾರೆ." ಎಂದು ಎಚ್ಚರಿಸಿದ್ದರೆ.
ಮೂತ್ರ ಎಂದಿಗೂ ಶುದ್ಧವಲ್ಲ. ಅದರಲ್ಲೂ ಅದು ದೇಹವನ್ನು ತೊರೆದ ನಂತರ, ಶುದ್ಧವಾಗಿರಲು ಸಾಧ್ಯವೇ ಇಲ್ಲ. ಇದು ಬ್ಯಾಕ್ಟೀರಿಯಾ, ವಿಷ ಮತ್ತು ಇತರ ತ್ಯಾಜ್ಯ ಉತ್ಪನ್ನಗಳನ್ನು ಹೊಂದಿರುತ್ತದೆ, ಇವುಗಳನ್ನು ಹೊರಹಾಕಲು ಉದ್ದೇಶಿಸಲಾಗಿದೆ, ಕಣ್ಣುಗಳಂತಹ ಸೂಕ್ಷ್ಮ ಪ್ರದೇಶಗಳಿಗೆ ಹಾಕುವುದು ಒಳ್ಳೆಯದಲ್ಲ ಎಂದಿದ್ದಾರೆ.
ಮೂಲ ವೀಡಿಯೊವನ್ನು ಆರಂಭದಲ್ಲಿ Instagram ನಲ್ಲಿ ಹಂಚಿಕೊಳ್ಳಲಾಗಿತ್ತು ಆದರೆ ಈಗ ಅದನ್ನು ಡಿಲೀಟ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಕಂಡುಬರುವ ಪರಿಶೀಲಿಸದ ಅಥವಾ ಅಸುರಕ್ಷಿತ ಮನೆಮದ್ದುಗಳನ್ನು, ವಿಶೇಷವಾಗಿ ದೈಹಿಕ ತ್ಯಾಜ್ಯವನ್ನು ಒಳಗೊಂಡಿರುವ ಮದ್ದುಗಳನ್ನು ಪಾಲಿಸಂತೆ ವೈದ್ಯರು ಎಚ್ಚರಿಸಿದ್ದಾರೆ. ಕಣ್ಣಿನ ಕಿರಿಕಿರಿಗೆ, ಸುರಕ್ಷಿತ ಪರ್ಯಾಯಗಳಲ್ಲಿ ಸ್ಟೆರೈಲ್ ಲವಣಯುಕ್ತ ದ್ರಾವಣ, ಸಂರಕ್ಷಕ-ಮುಕ್ತ ಕೃತಕ ಕಣ್ಣೀರು ಮತ್ತು ಪರವಾನಗಿ ಪಡೆದ ನೇತ್ರ ಆರೈಕೆ ವೃತ್ತಿಪರರನ್ನು ಸಂಪರ್ಕಿಸುವುದು ಸೇರಿವೆ. ಹಾನಿಕಾರಕ ವಸ್ತುಗಳೊಂದಿಗೆ ಸ್ವಯಂ-ಔಷಧಿ ಮಾಡಿಕೊಳ್ಳುವುದು ಶಾಶ್ವತ ಹಾನಿಯನ್ನುಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮೂತ್ರದ ಪ್ರಾಥಮಿಕ ಪಾತ್ರವೆಂದರೆ ಚಯಾಪಚಯ ತ್ಯಾಜ್ಯವನ್ನು ತೆಗೆದುಹಾಕುವುದು. ಇದನ್ನು ಯಾವುದೇ ಔಷಧೀಯ ಗುಣಗಳಿಲ್ಲದ ತ್ಯಾಜ್ಯ ದ್ರವವೆಂದು ಪರಿಗಣಿಸಲಾಗುತ್ತದೆ. ಇದರ pH ಸಾಮಾನ್ಯವಾಗಿ ಸ್ವಲ್ಪ ಆಮ್ಲೀಯವಾಗಿರುತ್ತದೆ, ಇದು ಕಣ್ಣನ್ನು ರಕ್ಷಿಸುವ ಮತ್ತು ನಯಗೊಳಿಸುವ ನೈಸರ್ಗಿಕ ಪದರವಾದ ಕಣ್ಣೀರಿನ ಪೊರೆಯನ್ನು ಹಾಳು ಮಾಡುತ್ತದೆ. ಮೂತ್ರವನ್ನು ಬಳಸುವುದರಿಂದ ಆ ರಕ್ಷಣಾತ್ಮಕ ಪದರವನ್ನು ತೊಳೆಯಲಾಗುತ್ತದೆ ಮತ್ತು ಅದನ್ನು ತ್ಯಜಿಸಬೇಕಾದ ಪದಾರ್ಥಗಳನ್ನು ಹೊಂದಿರುವ ದ್ರವದಿಂದ ಬದಲಾಯಿಸಲಾಗುತ್ತದೆ. ಇದು ಕಣ್ಣು ಕೆಂಪಾಗುವುದು, ಉರಿಯೂತ ಮತ್ತು ಕೆರಟೈಟಿಸ್ ಅಥವಾ ಕಾಂಜಂಕ್ಟಿವಿಟಿಸ್‌ನಂತಹ ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು.
ವಾಣಿಜ್ಯಿಕ ಕಣ್ಣಿನ ಹನಿಗಳನ್ನು ನಿರ್ದಿಷ್ಟವಾಗಿ ಕಣ್ಣಿನ ನೈಸರ್ಗಿಕ ಸ್ಥಿತಿಗೆ ಹೊಂದಿಸಲು ವಿನ್ಯಾಸಗೊಳಿಸಲಾಗಿದೆ, pH ಮಟ್ಟಗಳು ಮತ್ತು ಪದಾರ್ಥಗಳು ಸುರಕ್ಷಿತವಾಗಿ ಗುಣಪಡಿಸುವುದು ಮತ್ತು ಸೌಕರ್ಯವನ್ನು ಬೆಂಬಲಿಸುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.