
ಪ್ರತಿತಿಂಗಳ ಮುಟ್ಟು ಮುಂದಕ್ಕೆ ಹೋಗುವಾಗ ಅಥವಾ ಸಮಯಕ್ಕೆ ಸರಿಯಾಗಿ ಆಗದಿರುವಾಗ, ಮಗುವನ್ನು ಹೊಂದಲು ಯತ್ನಿಸುತ್ತಿದ್ದರೂ ಸಾಧ್ಯವಾಗದೆ ಇದ್ದಾಗ ವೈದ್ಯರ ಬಳಿ ಹೋದರೆ ಅವರು ನಿಶ್ಚಿತವಾಗಿ ಒಂದು ಪರೀಕ್ಷೆ ಮಾಡಿಸಲು ಹೇಳುತ್ತಾರೆ. ಅದು ಥೈರಾಯ್ಡ್ ಪರೀಕ್ಷೆ. ನಮ್ಮ ಕುತ್ತಿಗೆಯ ತಳಭಾಗದಲ್ಲಿರುವ ಬೆಣ್ಣೆಮುದ್ದೆಯಾಕಾರದ ಸಣ್ಣದೊಂದು ಗ್ರಂಥಿ ಇದು. ಆಕೃತಿ ಚಿಕ್ಕದಾದರೂ ನಮ್ಮ ದೇಹದಲ್ಲಿ ಇದರ ಪಾತ್ರ ಅಗಾಧ. ದೇಹದ ಮೆಟಬಾಲಿಸಂ ಮತ್ತು ಬೆಳವಣಿಗೆಗೆ ಕಾರಣವಾಗುವ ಎಲ್ಲ ಹಾರ್ಮೋನುಗಳ ಸ್ರವಿಕೆಗೆ ಮೂಲಕ ಕಾರಣವೇ ಥೈರಾಯ್ಡ್. ಥೈರಾಕ್ಸೀನ್, ಟ್ರೈಯೊಡೊಥೈರೊನೈನ್ ಮತ್ತು ಕ್ಯಾಲ್ಸಿಟೋನಿನ್ ಇವುಗಳನ್ನು ಬಿಡುಗಡೆ ಮಾಡಿ ದೇಹದ ಮೆಟಬಾಲಿಸಂ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಸಾಮಾನ್ಯವಾಗಿ ಹೇಳುವ 13, ಟಿ4 ಹಾರ್ಮೋನುಗಳು ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾಗದಿರುವಾಗ ದೇಹದಲ್ಲಿ ಸಮಸ್ಯೆ ಉಂಟಾಗುತ್ತದೆ. ಥೈರಾಯ್ಡ್ ಗ್ರಂಥಿಯಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳೆಂದರೆ ಹೈಪೋಥೈರಾಯ್ಡಿಸಂ ಹಾಗೂ ಹೈಪರ್ ಥೈರಾಯ್ಡಿಸಂ, ಥೈರೊಡಿಟಿಸ್ ಮತ್ತು ಥೈರಾಯ್ಡ್ ಕ್ಯಾನ್ಸರ್. ವಿಚಿತ್ರವೆಂದರೆ, ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಹಿಳೆಯ ಜೀವನದ ವಿವಿಧ ಹಂತಗಳಲ್ಲಿ ಥೈರಾಯ್ಡ್ ಸಮಸ್ಯೆ ಕಂಡುಬರುವುದು ಅತಿ ಸಾಮಾನ್ಯ. ಕೆಂದರೆ, ಮಹಿಳಾ ಹಾರ್ಮೋನ್ ಎಂದೇ ಗುರುತಿಸಲಾಗುವ ಈಸ್ಟ್ರೋಜೆನ್ ಮತ್ತು ಥೈರಾಕ್ಸೀನ್ ಹಾರ್ಮೋನುಗಳ ನಡುವೆ ನೇರವಾದ ಬಂಧವಿದೆ. ಹೀಗಾಗಿಯೇ, ಮುಟ್ಟಿನ ಸಮಸ್ಯೆ, ಬಂಜೆತನ ಮಹಿಳೆಯರಲ್ಲಿ ಉಂಟಾಗುತ್ತದೆ.
ಹತ್ತು ಪಟ್ಟು ಹೆಚ್ಚು!
ಪ್ರತಿವರ್ಷ ಜನವರಿ (January) ತಿಂಗಳನ್ನು ಥೈರಾಯ್ಡ್ (Thyroid) ಅರಿವು (Awareness) ಮಾಸಿಕವನ್ನಾಗಿ ಆಚರಿಸಲಾಗುತ್ತದೆ. ಥೈರಾಯ್ಡ್ ಸಮಸ್ಯೆ (Problem) ಹಾಗೂ ಅದರ ವಿವಿಧ ಆಯಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಮಹಿಳೆಯರಂತೂ (Women) ಇದರ ಬಗ್ಗೆ ಅಗತ್ಯವಾಗಿ ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಪುರುಷರಿಗಿಂತ ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆ ಉಂಟಾಗುವ ಪ್ರಮಾಣ ಹತ್ತು ಪಟ್ಟು ಹೆಚ್ಚು! ಇದಕ್ಕೆ ಪ್ರಮುಖ ಕಾರಣವೆಂದರೆ, ಆಟೋಇಮ್ಯೂನ್ ಅಥವಾ ಸ್ವಯಂ ನಿರೋಧಕ (Autoimmune) ಪ್ರತಿಕ್ರಿಯೆ. ದೇಹದ ರೋಗ ನಿರೋಧಕ ವ್ಯವಸ್ಥೆ ತನ್ನದೇ ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡಲು ಆರಂಭಿಸುವ ವಿಲಕ್ಷಣ ಸ್ಥಿತಿಯಿದು. ಇದು ಸಹ ಮಹಿಳೆಯರಲ್ಲೇ ಹೆಚ್ಚು ಎನ್ನುತ್ತಾರೆ ತಜ್ಞರು. ಇದಕ್ಕೆ ನಿರ್ದಿಷ್ಟ ಕಾರಣಗಳಿಲ್ಲವಾದರೂ ಆನುವಂಶೀಯವಾಗಿ, ಹವಾಮಾನ, ಜೀವನಶೈಲಿಯಿಂದಲೂ ಉಂಟಾಗಬಹುದು.
Women Health: ಮುಟ್ಟಿನ ಮೂರು ದಿನ ತಲೆಸ್ನಾನ ಮಾಡಬಾರದಾ?
ಈಸ್ಟ್ರೋಜೆನ್ (Estrogen) ಏರಿಳಿತವೇ ಕಾರಣ
ಅಸಲಿಗೆ, ಈಸ್ಟ್ರೋಜೆನ್ ಹಾರ್ಮೋನ್ (Hormone) ಥೈರಾಯ್ಡ್ ಹಾರ್ಮೋನುಗಳು ಹಾಗೂ ಇವುಗಳನ್ನು ಬಂಧಿಸುವ ಪ್ರೊಟೀನ್ ಸ್ರವಿಕೆಗೆ ಉತ್ತೇಜನ ನೀಡುತ್ತದೆ. ಹಾಗೆಯೇ, ಥೈರೊಗ್ಲೊಬುಲಿನ್ ಎನ್ನುವ ಅಂಶವನ್ನೂ ಹೆಚ್ಚಿಸುತ್ತದೆ. ಈ ಈಸ್ಟ್ರೋಜೆನ್ ಹಾರ್ಮೋನ್ ಮಾಸಿಕ ಋತುಬಂಧ (Menarche), ಪ್ಯೂಬರ್ಟಿ (Puberty), ಗರ್ಭಾವಸ್ಥೆ (Pregnancy), ಹಾಲೂಡುವ (Lactating) ಸಮಯದಲ್ಲಿ ಹೆಚ್ಚುಕಡಿಮೆ ಆಗುತ್ತಲೇ ಇರುತ್ತದೆ, ಒಂದೇ ರೀತಿ ಸ್ಥಿರವಾಗಿರುವುದಿಲ್ಲ. ಪರಿಣಾಮವಾಗಿ, ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ. ಹೈಪೋಥೈರಾಯ್ಡಿಸಂ ಸಮಸ್ಯೆಯಿಂದ ಭ್ರೂಣದ (Foetus) ಬೆಳವಣಿಗೆಗೆ ಧಕ್ಕೆಯಾಗುತ್ತದೆ. ಪುರುಷರಿಗೆ (Male) ಹೋಲಿಕೆ ಮಾಡಿದರೆ ಥೈರಾಯ್ಡ್ ಕ್ಯಾನ್ಸರ್ ಕೂಡ ಮಹಿಳೆಯರಲ್ಲಿ ಹೆಚ್ಚು. ಮೆನೋಪಾಸ್ ಹಂತದಲ್ಲಿರುವ ಮಹಿಳೆಯರಲ್ಲೂ ಈಸ್ಟ್ರೋಜೆನ್ ಏರಿಳಿತ ಅತಿ ಸಾಮಾನ್ಯವಾಗಿದ್ದು, ಥೈರಾಯ್ಡ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
Mental Health : ಸಂತೋಷಕ್ಕೆ ಅಡ್ಡಿ ನಮ್ಮ ನಕಾರಾತ್ಮಕ ಆಲೋಚನೆ
ಥೈರಾಯ್ಡ್ ಸಮಸ್ಯೆ ಉಂಟಾಗಲು ಹಾಗೂ ಹೆಚ್ಚಲು ಇನ್ನೂ ಕೆಲವು ಕಾರಣವೆಂದರೆ, ಅಯೋಡಿನ್ ಕೊರತೆ, ಜಂಕ್ ಫುಡ್ ಸೇವನೆ, ನಿದ್ರೆ ಕೊರತೆ, ತಂಬಾಕು ಸೇವನೆ ಇತ್ಯಾದಿ.
ಮಹಿಳೆಯರಲ್ಲಿ ಕಾಣುವ ಸಾಮಾನ್ಯ ಲಕ್ಷಣಗಳು
· ಚರ್ಮದ (Skin) ಸಮಸ್ಯೆ
· ಅನಿಯಮಿತ ಮುಟ್ಟು (Irregular Period)
· ಬಂಜೆತನ (Infertility)
· ಅವಧಿಪೂರ್ವ ಮೆನೋಪಾಸ್ (Menopause)
· ಆತಂಕ, ಕಿರಿಕಿರಿ, ಅಧೈರ್ಯ ಹೆಚ್ಚುವುದು
· ನಿದ್ರೆಯಲ್ಲಿ (Sleep) ಸಮಸ್ಯೆ
· ಮಾಂಸಖಂಡಗಳಲ್ಲಿ ದೌರ್ಬಲ್ಯ
· ತೂಕ (Weight) ಕಳೆದುಕೊಳ್ಳುವುದು ಅಥವಾ ಹೆಚ್ಚುವುದು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.