ಮೊಬೈಲ್ ಇಲ್ದೆ ಅರೆ ಕ್ಷಣ ಇರೋದು ಕಷ್ಟ ಎನ್ನುವವರು ರಾತ್ರಿ ಬೆಡ್ ಪಕ್ಕ ಮೊಬೈಲ್ ಇಟ್ಟು ಮಲಗ್ತಾರೆ. ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿ ನಿದ್ರೆ ಬರುವವರೆಗೂ ಮೊಬೈಲ್ ಬಳಸೋದು ಈಗ ಹವ್ಯಾಸವಾಗಿದೆ. ಆದ್ರೆ ಅದ್ರಿಂದ ಏನೆಲ್ಲ ಆಗುತ್ತೆ ನಿಮಗೆ ಗೊತ್ತಾ?
ಬೆಡ್ ಕಾಫಿ (Bed coffee) ಜಾಗವನ್ನು ಮೊಬೈಲ್ (mobile) ಆವರಿಸಿದೆ. ಬೆಳಿಗ್ಗೆ ಏಳ್ತಿದ್ದಂತೆ ಮೊಬೈಲ್ ಕೈನಲ್ಲಿ ಹಿಡಿಯುವ ಜನರು, ಅದ್ರಲ್ಲಿರೋದೆಲ್ಲ ಒಮ್ಮೆ ಜಾಲಾಡಿ ನಂತ್ರ ಹಾಸಿಗೆಯಿಂದ ಏಳ್ತಾರೆ. ಮತ್ತೆ ಕೆಲವರು ಬೆಳಗಿನ ಜಾವ ಒಂದು ಬಾರಿ ಮೊಬೈಲ್ ನಲ್ಲಿ ರೀಲ್ಸ್ ಸ್ಕ್ರೋಲ್ ಮಾಡಿ ಮತ್ತೆ ಮಲಗ್ತಾರೆ. ರಾತ್ರಿ ಹಾಸಿಗೆಯಲ್ಲಿ ನಿದ್ರೆ ಕಣ್ಣು ಕಟ್ಟುವವರೆಗೂ ಮೊಬೈಲ್ ಬಳಸುವ ಜನರು ಬೆಳಿಗ್ಗೆ ಎದ್ದು ಹಸ್ತ ನೋಡ್ಕೊಳ್ಳುವ ಬದಲು ಮೊಬೈಲ್ ನೋಡಿರ್ತಾರೆ. ಮಧ್ಯೆ ಎಚ್ಚರವಾದಾಗ ಮೊಬೈಲ್ ನೋಡುವವರ ಸಂಖ್ಯೆ ಕೂಡ ಸಾಕಷ್ಟಿದೆ. ವರದಿಯೊಂದರ ಪ್ರಕಾರ, ಶೇಕಡಾ 84ರಷ್ಟು ಭಾರತೀಯರು ಎಚ್ಚರವಾದಾಗೆಲ್ಲ ಮೊಬೈಲ್ ನೋಡ್ತಾರಂತೆ.
ಮೊಬೈಲ್ ಗೆ ಜನರು ಎಷ್ಟು ಅಂಟಿಕೊಂಡಿದ್ದಾರೆಂದ್ರೆ ಅದಿಲ್ದೆ ಒಂದೈದು ನಿಮಿಷ ಇರೋದು ಕಷ್ಟ ಎಂಬ ಸ್ಥಿತಿ ಇದೆ. ಬರೀ ಯುವಕರು ಮಾತ್ರವಲ್ಲ ಮಕ್ಕಳು, ವೃದ್ಧರಿಗೂ ಮೊಬೈಲ್ ಫೆವರೆಟ್. ನೀವು ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡೋದು ಆರೋಗ್ಯಕ್ಕೆ ಒಳ್ಳೆಯದಲ್ಲ.
undefined
ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು ಯಾಕೆ?
ತಜ್ಞರ ಪ್ರಕಾರ, ಬೆಳಿಗ್ಗೆ ನಿಮ್ಮ ಮೆದುಳು ವಿಶ್ರಾಂತಿ ಸ್ಥಿತಿಯಲ್ಲಿ ಇರುತ್ತದೆ. ಸ್ವಪ್ನಮಯ ಸ್ಥಿತಿಯಲ್ಲಿ ನೀವು ಇರ್ತೀರಿ. ನೀವು ಎಚ್ಚರವಾಗಿದ್ದರೂ ಸಂಪೂರ್ಣ ಎಚ್ಚರವಾಗಿರೋದಿಲ್ಲ. ಅದನ್ನು ಡೆಲ್ಟಾ ಸ್ಥಿತಿ ಎಂದು ತಜ್ಞರು ಕರೆಯುತ್ತಾರೆ. ಈ ಸಮಯದಲ್ಲಿ ನೀವು ಮೊಬೈಲ್ ಬಳಕೆ ಮಾಡುವುದ್ರಿಂದ ವಿಶ್ರಾಂತಿ ಸ್ಥಿತಿಯಲ್ಲಿದ್ದ ಮನಸ್ಸು ಹೈ ಆಕ್ಟೀವ್ ಆಗುತ್ತದೆ. ಇದನ್ನು ಬೀಟಾ ಸ್ಥಿತಿ ಎನ್ನಬಹುದು. ಇದ್ರಿಂದ ಒತ್ತಡ ಕಾಡುತ್ತದೆ. ಆತಂಕ, ಕಿರಿಕಿರಿ ಹೆಚ್ಚಾಗುತ್ತದೆ. ವ್ಯಕ್ತಿಯ ಇಡೀ ದಿನವನ್ನು ಇದು ಹಾಳು ಮಾಡುತ್ತದೆ. ಆತನ ಕೆಲಸದ ಮೇಲೆ ಇದು ಪರಿಣಾಮ ಬೀರುತ್ತದೆ.
ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಬಳಕೆಗೆ ಮುಖ್ಯ ಕಾರಣವಾಗಿರೋದು ಸೋಶಿಯಲ್ ಮೀಡಿಯಾ ಎನ್ನುತ್ತಾರೆ ತಜ್ಞರು. ಜನರು ನ್ಯೂಸ್ ನಿಂದ ಹಿಡಿದು ಮನೋರಂಜನೆಯವರೆಗೆ ಎಲ್ಲವನ್ನೂ ಮೊಬೈಲ್ ನಲ್ಲಿಯೇ ನೋಡ್ತಾರೆ. ಮೊಬೈಲ್ ಹೊರಸೂಸುವ ನೀಲಿ ಬೆಳಕು ನಿಮ್ಮ ನಿದ್ರೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ನೀಲಿ ಬೆಳಕು, ಸುಮಾರು 460 ನ್ಯಾನೊಮೀಟರ್‌ಗಳ ತರಂಗಾಂತರವನ್ನು ಹೊಂದಿದೆ. ಮೊಬೈಲ್ ಬೆಳಕು ನೋಡಿದ ನಮ್ಮ ಮೆದುಳು, ಇನ್ನೂ ಹಗಲು ಎಂದು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇದ್ರಿಂದ ನಿದ್ರಾಹೀನತೆ ನಮ್ಮನ್ನು ಕಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಮೆಲಟೋನಿನ್ ನಿಮಗೆ ನಿದ್ರೆಗೆ ಸಹಾಯ ಮಾಡುವ ಹಾರ್ಮೋನ್. ಮಲಗುವ ಮೊದಲು ಸ್ಮಾರ್ಟ್‌ಫೋನ್ ಬಳಸುವುದರಿಂದ ನಿದ್ರೆಗೆ ದೇಹ ನೈಸರ್ಗಿಕವಾಗಿ ಸಿದ್ಧತೆವಾಗುವುದು ವಿಳಂಬವಾಗುತ್ತದೆ.
ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಬೇಕಾ? ಈ ಹಣ್ಣು ಟ್ರೈ ಮಾಡಿ
ಜಾಗತಿಕವಾಗಿ ಜನರು ಮೊಬೈಲ್ ಬಳಸುವ ಅವಧಿಯಲ್ಲಿ ಸಾಕಷ್ಟು ಬದಲಾಗಿದೆ. 2014 ರಿಂದ 2024 ರವರೆಗಿನ ಸರಾಸರಿ ಅವಧಿ 6 ಗಂಟೆ 23 ನಿಮಿಷವಾಗಿದೆ. 2021 ರ ಹೊತ್ತಿಗೆ ಇದು 6 ಗಂಟೆ 58 ನಿಮಿಷವಾಗಿ ಬದಲಾಗಿತ್ತು. ಇದು 2022 ರಲ್ಲಿ 6 ಗಂಟೆ 28 ನಿಮಿಷಗಳಿಗೆ ಇಳಿದಿತ್ತು. ಆದ್ರೂ 2024 ರ ಹೊತ್ತಿಗೆ ಇದು ಮತ್ತೆ 6 ಗಂಟೆ 35 ನಿಮಿಷಗಳಿಗೆ ಏರಿದೆ ಎಂದು ಅಧ್ಯಯನ ಹೇಳಿದೆ. ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಎದ್ದ ತಕ್ಷಣ ಮೊಬೈಲ್ ಬಳಕೆ ಮಾಡಬಾರದು. ಎದ್ದು 30 ನಿಮಿಷದಿಂದ 1 ಗಂಟೆ ನಂತ್ರ ಮೊಬೈಲ್ ಬಳಸಬೇಕು. ರಾತ್ರಿ ಕೂಡ ಮಲಗುವ ಒಂದೆರಡು ಗಂಟೆ ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡ್ಬೇಕು ಎನ್ನುತ್ತಾರೆ ತಜ್ಞರು.