
ಎಸಿ (Ac) ಇರೋ ಆಫೀಸ್ ಗೆ ಕಾಲಿಟ್ರೆ ಒಬ್ಬರು ಹೊದ್ದು ಕುಳಿತಿರ್ತಾರೆ, ಮತ್ತೊಬ್ಬರು ಬೆವರ್ತಿರುತ್ತಾರೆ. ನಾವು ಯಾವ ಋತುವಿನಲ್ಲಿದ್ದೇವೆ ಎನ್ನುವ ಪ್ರಶ್ನೆ ಬಂದವರನ್ನು ಕಾಡುತ್ತದೆ. ಕಚೇರಿಯಲ್ಲಿ ಒಂದೇ ವಾತಾವರಣವಿದ್ರೂ ಒಬ್ಬರಿಗೆ ಸೆಕೆ ಇನ್ನೊಬ್ಬರಿಗೆ ಚಳಿ (cold) ಆಗಲು ಕಾರಣ ಇದೇ ಕೇಂದ್ರೀಕೃತ ಹವಾನಿಯಂತ್ರಣ (Central air condition). ಈ ಎಸಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಸದ್ಯ ಎಸಿ ಇಲ್ದಿರೋ ಕಚೇರಿ ಸಿಗೋದು ಬಹಳ ಕಷ್ಟ. ಕಚೇರಿಯಲ್ಲಿ ಬಳಸುವ ತಂತ್ರಜ್ಞಾನ, ಯಂತ್ರಕ್ಕೆ ತಕ್ಕಂತೆ ಎಸಿ ಸೆಟ್ ಮಾಡಲಾಗುತ್ತದೆ. ಕೆಲ ಪ್ರದೇಶ ಅತಿ ತಂಪಾಗಿದ್ದರೆ ಮತ್ತೆ ಕೆಲ ಕಚೇರಿಯಲ್ಲಿ ಸಾಮಾನ್ಯ ಎಸಿಯನ್ನು ನಾವು ಕಾಣ್ಬಹುದು. ಕೆಲಸದ ಸ್ಥಳದಲ್ಲಿರುವ ಈ ಅಹಿತಕರ ತಾಪಮಾನ, ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲ ಉತ್ಪಾದಕತೆ ಮೇಲೆಯೂ ಪ್ರಭಾವ ಬೀರುತ್ತದೆ.
ಬಹುತೇಕ ವಾಣಿಜ್ಯ ಕಟ್ಟಡಗಳು, ವಾತಾವರಣಕ್ಕೆ ತಕ್ಕಂತೆ ತಮ್ಮ ಸಿಸ್ಟಂ ಬದಲಿಸಿಕೊಳ್ಳುವ ಹವಾನಿಯಂತ್ರಣ ವ್ಯವಸ್ಥೆ ಮಾಡಿರುತ್ವೆ. ಇದ್ರಿಂದಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದ್ರೆ, ಬೇಸಿಗೆಯಲ್ಲೂ ಚಳಿಯ ವಾತಾವರಣ ಕಚೇರಿಯಲ್ಲಿರುತ್ತದೆ. ಇಷ್ಟೇ ಅಲ್ಲ, ಗಾಳಿಯ ಹರಿವು ಹೇಗಿದೆ, ಸೂರ್ಯನ ಕಿರಣ ಯಾವ ಕೊಠಡಿ ಮೇಲೆ ನೇರವಾಗಿ ಬೀಳುತ್ತದೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಸೂರ್ಯನ ಕಿರಣ ಕೊಠಡಿಗೆ ನೇರವಾಗಿ ಬಿದ್ರೆ ಎಸಿಯಿದ್ರೂ ಜನರು ಬೆವರುತ್ತಾರೆ. ಅದೇ ಸೂರ್ಯನ ಕಿರಣ ಬೀಳದ ಕೊಠಡಿಯಲ್ಲಿ ಜನರು ಚಳಿಯಲ್ಲಿ ನಡುಗುತ್ತಿರುತ್ತಾರೆ. ಕಚೇರಿಯಲ್ಲಿ ಅನೇಕರು ಚಳಿ ಚಳಿ ಎನ್ನಲು ಎಸಿ ತಾಪಮಾನ ಕಾರಣ. ತಾಪಮಾನವನ್ನು ಹೆಚ್ಚಾಗಿ 18-21°C ಗೆ ನಿಗದಿಪಡಿಸಲಾಗುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚು ತಂಪಾಗಿಸುತ್ತದೆ.
ನೀವು ಎಸಿ ಕೊಠಡಿಯಲ್ಲಿ ಕುಳಿತುಕೊಂಡಿದ್ದು, ನಿಮಗೆ ಚಳಿಯಾಗ್ತಿದ್ದರೆ ಅಥವಾ ಆ ವಾತಾವರಣದಲ್ಲಿ ನೀವು ಬೆವರುತ್ತಿದ್ದರೆ ಇದಕ್ಕೆ ಬರೀ ಎಸಿ ಕಾರಣವಲ್ಲ. ನಿಮ್ಮ ದೇಹ ಪ್ರಕೃತಿ, ನೀವು ಯಾವ ಬಟ್ಟೆ ಧರಿಸಿದ್ದೀರಿ, ನಿಮ್ಮ ಮನಸ್ಥಿತಿ, ನಿಮ್ಮ ವಯಸ್ಸು ಎಲ್ಲವೂ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು. ಅವರ ಪ್ರಕಾರ, ಒಬ್ಬ ಉದ್ಯೋಗಿ ಕುಳಿತಲ್ಲೇ ಕೆಲಸ ಮಾಡ್ತಿದ್ದರೆ ಅವರಿಗೆ ಚಳಿಯಾಗೋದು ಹೆಚ್ಚು. ಅದೇ ಇನ್ನೊಬ್ಬ ವ್ಯಕ್ತಿ ಓಡಾಡ್ತಾ, ಟೆನ್ಷನ್ ನಲ್ಲಿ ಕೆಲಸ ಮಾಡ್ತಿದ್ದರೆ ಆತ ಬೆವರುತ್ತಾನೆ ಎಂದು ತಜ್ಞರು ಹೇಳಿದ್ದಾರೆ. ವೇರಿಯಬಲ್ ಏರ್ ವಾಲ್ಯೂಮ್ (VAV) ವ್ಯವಸ್ಥೆ ಹಾಗೂ ಹೊಸ ತಂತ್ರಜ್ಞಾನ ಕೋಣೆಯಲ್ಲಿರುವ ಜನರ ಸಂಖ್ಯೆ ಮತ್ತು ಹೊರಗಿನ ಹವಾಮಾನದ ಆಧಾರದ ಮೇಲೆ ತಾಪಮಾನವನ್ನು ಸರಿಹೊಂದಿಸುತ್ತದೆ. ಆದ್ರೆ ಎಲ್ಲ ಉದ್ಯೋಗಿಗೆ ಅನುಕೂಲವಾಗುವಂತೆ ಎಸಿ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪರಿಹಾರ ಏನು? : ಕಚೇರಿಯಲ್ಲಿ ಎಸಿ ಎಲ್ಲರಿಗೂ ಅನುಕೂಲಕರವಾಗಿರಬೇಕು ಅಂದ್ರೆ ಥರ್ಮೋಸ್ಟಾಟ್ ಅನ್ನು ಸ್ವಲ್ಪ ಹೆಚ್ಚಿಸಬೇಕು. ಇದನ್ನು 24-25°C ಗೆ ಹೊಂದಿಸಬೇಕು. ದಿನದ ಹೆಚ್ಚಿನ ಸಮಯ ಕುಳಿತುಕೊಂಡು ಕೆಲಸ ಮಾಡುವ ಕಚೇರಿ ಸಿಬ್ಬಂದಿಗೆ ಈ ತಾಪಮಾನ ತುಂಬಾ ಆರಾಮದಾಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಉತ್ಪಾದನೆ ಮೇಲೆ ಪರಿಣಾಮ : ಕಚೇರಿಯಲ್ಲಿರುವ ಎಸಿ ಆರೋಗ್ಯ ಹಾಳು ಮಾಡುತ್ತದೆ. ಇದ್ರಿಂದ ಉತ್ಪಾದಕತೆ ಮೇಲೆ ಪರಿಣಾಮ ಬೀಡುತ್ತದೆ. ಅರಿಯಾದ ತಂಪು ವಾತಾವರಣ ಶೀತ, ಆಯಾಸ ಮತ್ತು ತಲೆನೋವುಗಳಿಗೆ ಕಾರಣವಾಗಬಹುದು. ಇವೆಲ್ಲವೂ ನೌಕರರ ನೈತಿಕತೆ ಮತ್ತು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ಜನರು ದೈಹಿಕ ಅನಾರೋಗ್ಯಕ್ಕೆ ಒಳಗಾದಾಗ ತಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.