ನಮಗೆ ಈಗ ಸಿಕ್ಕ ಸ್ವಾತಂತ್ರ್ಯ, ಯಶಸ್ಸಿನಲ್ಲಿ ಸಂತೋಷವಿಲ್ಲ, ಬದಲಿಗೆ ಮುಂದೇನು ಎಂಬ ಚಿಂತೆಯಲ್ಲೇ ಕಳೆಯುತ್ತೇವೆ.
ನನಗೆ ಸಂತೋಷ ಕೊಡುವಂಥದ್ದೇನು?
ಟೂ ವ್ಹೀಲರ್‌ನಲ್ಲಿ ಕುಳಿತು ಕಚೇರಿಗೆ ಹೋಗುವಾಗಲೆಲ್ಲ ಪ್ರತಿದಿನ ಈ ಪ್ರಶ್ನೆ ತಲೆಯಲ್ಲಿ ಗಿರಕಿ ಹೊಡೆಯುತ್ತದೆ.
undefined
ಪ್ರಮೋಶನ್, ಹೊಸ ಉದ್ಯೋಗ, ಸಂಬಳ ಏರಿಕೆ, ಕೆಲ ದಿನಗಳ ರಜೆ, ದೂರದ ದೇಶಕ್ಕೆ ಪ್ರಯಾಣ...? ಹೀಗೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತೇನೆ. ಆದರೆ, ಅವೆಲ್ಲವೂ ಆ ಕ್ಷಣದ ಖುಷಿಗಳಷ್ಟೇ. ಮುಗಿಯುತ್ತಲೇ ಮತ್ತೆ ಪ್ರಶ್ನೆ ಧಿಗ್ಗನೆದ್ದು ಕುಳಿತುಕೊಳ್ಳುತ್ತದೆ. ಬಯಸಿ ಗಳಿಸಿದ ಉದ್ಯೋಗವೂ ಅದೆಷ್ಟು ಏಕತಾನತೆಯಾಗಿದೆ ಎಂದರೆ, ಪ್ರತಿ ವಾರಾರಂಭದಿಂದಲೇ ಶುಕ್ರವಾರ ಮುಗಿವ ಗಳಿಗೆಯ ಕನಸಿನಲ್ಲಿ ಇನ್ನು ನಾಲ್ಕು ದಿನ, ಮೂರು ದಿನ ಎಂದು ಲೆಕ್ಕ ಹಾಕಿಕೊಂಡು ಕಳೆಯುತ್ತೇನೆ, ಶನಿವಾರ ಬಂದೊಡನೆ ಬಟ್ಟೆ ಒಗೆಯುವುದು, ತಲೆಗೆ ಎಣ್ಣೆ ಹಾಕಿಕೊಂಡು ಮಲಗುವುದು, ಒಂದಿಷ್ಟು ಮೂವಿಗಳನ್ನು ನೋಡುವುದರಲ್ಲಿ ಕಳೆದು ಹೋಗಿಬಿಡುತ್ತದೆ. ಭಾನುವಾರ ಮಧ್ಯಾಹ್ನವಾಗುವ ಹೊತ್ತಿಗಾಗಲೇ ಅಯ್ಯೋ ನಾಳೆಯಿಂದ ಮತ್ತೆ ಅದೇ ಕೆಲಸವಲ್ಲ ಎಂಬ ಸಂಕಟ ಕಾಡಲಾರಂಭಿಸುತ್ತದೆ. ಜೊತೆಗೆ, ಏನೂ ಓದಲಿಲ್ಲ, ಹೊಸತೇನೂ ಕಲಿಯಲಿಲ್ಲ, ನಾನೇನೂ ಮಾಡುತ್ತಿಲ್ಲ ಎಂಬ ಪಶ್ಚಾತ್ತಾಪವೂ ಸೇರಿಕೊಳ್ಳುತ್ತದೆ. ಈ ಸೈಕಲ್‌ನಿಂದ ನನಗೆ ಬಿಡುಗಡೆಯೇ ಇಲ್ಲವೇ?
ಬಹುಷಃ ನನ್ನ ಬದುಕಿಗೆ ಅದೆಷ್ಟು ದುರಾಸೆ ಅಂಟಿಕೊಂಡಿದೆ ಎಂದರೆ ನನಗೆ ಆಯಾ ಕ್ಷಣಗಳಲ್ಲಿ ಸಂತೋಷ ಅರಸಲು ಬರುವುದೇ ಇಲ್ಲ, ಸಂತೋಷವನ್ನು ಭವಿಷ್ಯದಲ್ಲಿ ಹುಡುಕಹೋಗಿ ಪ್ರತಿ ಬಾರಿ ಸೋಲುತ್ತೇನೆ. ಅದು ಮುಂದೆ ಹೋಗುತ್ತಲೇ ಇರುತ್ತದೆ. ಎಷ್ಟೇ ಸುಂದರವಾದದ್ದನ್ನು ತೋರಿಸಿದರೂ ಕಣ್ಣುಗಳು ಇನ್ನೂ ಹೆಚ್ಚು ಬಯಸುತ್ತವೆ, ಯಾವ ಮ್ಯೂಸಿಕ್ ಕೇಳಿಸಿದರೂ ಕಿವಿಗಳು ಸ್ವಲ್ಪ ಸಮಯದಲ್ಲೇ ಬೇರೆ ಮ್ಯೂಸಿಕ್ ಕೇಳಿಸಲು ಒತ್ತಾಯಿಸುತ್ತವೆ. ಅಂತೆಯೇ ಇತರೆ ಇಂದ್ರಿಯಗಳು ಕೂಡಾ. ನನಗೆ ಗೊತ್ತು, ಇದು ಕೇವಲ ನನ್ನ ಪಾಡಲ್ಲ- ನಮ್ಮ ತಲೆಮಾರಿನವರದು. ನಮಗೆ ಈಗ ಸಿಕ್ಕ ಸ್ವಾತಂತ್ರ್ಯ, ಯಶಸ್ಸಿನಲ್ಲಿ ಸಂತೋಷವಿಲ್ಲ, ಬದಲಿಗೆ ಮುಂದೇನು ಎಂಬ ಚಿಂತೆಯಲ್ಲೇ ಕಳೆಯುತ್ತೇವೆ.
ಇರುವುದೆಲ್ಲವ ಬಿಟ್ಟು
ನಮಗಿಂತ ಮುಂಚಿನ ತಲೆಮಾರಿನವರನ್ನು ಮಾತಾಡಿಸಿ ನೋಡಿ. ಹೆಚ್ಚಿನವರು, ನಾವು ಈಗ ಹುಟ್ಟಿದ್ದರೆ, ನಮಗೆ ಹೀಗೆ ಓದುವ ಅವಕಾಶವಿದ್ದಿದ್ದರೆ, ಹೊರಗೆ ಸುತ್ತುವ ಸ್ವಾತಂತ್ರ್ಯವಿದ್ದಿದ್ದರೆ, ನನ್ನ ಸಂಗಾತಿಯನ್ನು ನಾನೇ ಆಯ್ಕೆ ಮಾಡುವಂತಿದ್ದಿದ್ದರೆ... ಎಂದೆಲ್ಲ ನಮ್ಮನ್ನು ನೋಡಿ ಕರುಬುತ್ತಾರೆ. ಅವರಿಗಿಲ್ಲದ, ಸಿಕ್ಕಿಲ್ಲದ ಅದೆಷ್ಟು ಸೌಕರ್ಯಗಳು ನಮಗೆ ಸಿಕ್ಕಿವೆ, ಅವರಿಗಿಂತ ನಾವು ಆಳುವ ಹೊತ್ತಿಗೆ ಸಮಾಜ ಅನುಕೂಲಕರವಾಗಿ ಬಹಳಷ್ಟು ಬದಲಾಗಿದೆ. ಹಾಗಿದ್ದೂ ನಾವು ಸಂತೋಷವಾಗಿಲ್ಲ. ನಮಗೆ ಸಂತೋಷವಾಗಿರಲು ತಿಳಿದಿಲ್ಲ.
ಸದಾ ಏನೋ ಮಾಡುತ್ತಲೇ ಇರಬೇಕು, ಕಲಿಯುತ್ತಲೇ ಇರಬೇಕು ಎಂಬಂಥ ಚಿಂತನೆಯೊಂದು ನಮ್ಮನ್ನು ಕಟ್ಟಿಹಾಕುತ್ತದೆ. ಹಾಗೆ ಮಾಡಲಾಗದೆ ಹೋದರೆ ಪಶ್ಚಾತ್ತಾಪ ಆವರಿಸಿಕೊಳ್ಳುತ್ತದೆ. ಆದರೆ, ನಮ್ಮ ಅರಿವಿಗೆ ಸಿಗದುದೇನೆಂದರೆ, ಎಲ್ಲರೂ ಎಲ್ಲವನ್ನೂ ಏಕಕಾಲದಲ್ಲಿ ಮಾಡಲು, ಕಲಿಯಲು ಸಾಧ್ಯವಿಲ್ಲ, ಹಾಗೆ ಮಾಡಬೇಕಾಗಿಯೂ ಇಲ್ಲ. ನಾವೇನು ಮಾಡುತ್ತೇವೋ ಅದನ್ನು ಶ್ರದ್ಧೆಯಿಂದ ಮಾಡಿದರೆ, ಕಲಿತರೆ ಸಾಕು.
ನಾವು, ಎಷ್ಟು ಮಹತ್ವಾಕಾಂಕ್ಷಿಗಳಾಗುತ್ತಿದ್ದೇವೆ ಎಂದರೆ, ಹಣ, ಹೆಸರು, ಅಧಿಕಾರ ಗಳಿಸುವುದರಲ್ಲಿ ಬ್ಯುಸಿಯಾಗಿ, ಜೀವಿಸುವುದನ್ನು, ಜನರೊಂದಿಗೆ ಬೆರೆಯುವುದನ್ನೇ ಮರೆಯುತ್ತಿದ್ದೇವೆ. ಹಣ ಸಿಕ್ಕಿದರೆ ಖುಷಿಯಾಗಿರುತ್ತೇವೆ ಎಂದುಕೊಳ್ಳುತ್ತೇವೆ, ಆದರೆ ಹಣ ಸಿಕ್ಕಿದ ಮೇಲೆ ಇನ್ನೂ ಹೆಚ್ಚು ಹಣ ಬೇಕೆನಿಸುತ್ತದೆ, ಅಧಿಕಾರವೂ ಅಷ್ಟೇ- ಎಷ್ಟು ಸಿಕ್ಕಿದರೂ ಮತ್ತೂ ಎತ್ತರಕ್ಕೇರುವ ಬಯಕೆ ಸುತ್ತಿಕೊಳ್ಳುತ್ತಲೇ ಇರುತ್ತದೆ. ಇವೆಲ್ಲವನ್ನೂ ಗಳಿಸುತ್ತಾ ಗಳಿಸುತ್ತಾ, ವಯಸ್ಸಾಗಿಯೇ ಬಿಡುತ್ತದೆ. ಆದರೆ, ನಮಗೆ ಖುಷಿಯಾಗಿ ಕಳೆದ ಸಮಯ ನೆನಪಿಗಿರುವುದಿಲ್ಲ. ಬದಲಿಗೆ ಖುಷಿಯಾಗಿರುವುದನ್ನೇ ಬದುಕಿನ ಧ್ಯೇಯವಾಗಿಸಿಕೊಂಡರೆ ಸಿಕ್ಕ ಒಂದು ಬದುಕನ್ನು ಸಂತೋಷವಿಲ್ಲದೆ ಕಳೆದ ಕೊರಗಿನಿಂದ ತಪ್ಪಿಸಿಕೊಳ್ಳಬಹುದು.
ಪಾಸಿಟಿವ್ ಚಿಂತನೆ
ನಾವು ನಿಜವಾಗಿಯೂ ಕಲಿಯಬೇಕಾದುದು ಬದುಕನ್ನು ಭರವಸೆಯ ಭವಿಷ್ಯವಾಗಿ ನೋಡುವುದನ್ನು, ಆಯಾ ಕ್ಷಣಗಳನ್ನು ಅನುಭವಿಸುವುದನ್ನು, ನಗುವುದನ್ನು, ನಗಿಸುವುದನ್ನು, ಯಾರಿಗೂ ನೋವಾಗದಂತೆ ಮಾತನಾಡುವುದನ್ನು, ಎಲ್ಲವನ್ನೂ ಸಕಾರಾತ್ಮಕವಾಗಿ ನೋಡಿ, ಸ್ವೀಕರಿಸುವುದನ್ನು. ಹೌದು, ಪಾಸಿಟಿವ್ ಚಿಂತನೆಯೊಂದೇ ಬದುಕನ್ನು ಚೆಂದವಾಗಿಸುವುದು.