
ಚರ್ಮಕ್ಕೆ ಜಿಗಣೆ ಅಂಟಿಕೊಂಡರೆ ಅದನ್ನು ನೋಡುವುದೇ ಕೆಲವರಿಗೆ ಭಯ ಹುಟ್ಟಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಜಿಗಣೆ ಕಚ್ಚುವುದರಿಂದ ಗಂಭೀರ ಅಪಾಯ ಉಂಟಾಗುವುದಿಲ್ಲ. ಜಿಗಣೆ ಅಂಟಿಕೊಂಡಾಗ ಅದನ್ನು ನೋಡಿ ಗಾಬರಿಯಾಗುವುದಕ್ಕಿಂತ ಶಾಂತವಾಗಿ, ಸರಿಯಾದ ವಿಧಾನದಲ್ಲಿ ತೆಗೆಯುವುದು ಮುಖ್ಯ. ಅದನ್ನು ಯಾವ ರೀತಿಯಾಗಿ ತೆಗೆಯಬಹುದು ನೋಡೋಣ.
ನಿಮ್ಮ ದೇಹದ ಯಾವುದಾದರೂ ಭಾಗದಲ್ಲಿ ಜಿಗಣೆ ಕಾಣಿಸಿಕೊಂಡರೆ, ಇಡೀ ದೇಹವನ್ನು ಒಮ್ಮೆ ಪರಿಶೀಲಿಸಿ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಜಿಗಣೆಗಳು ದೇಹಕ್ಕೆ ಅಂಟಿಕೊಂಡಿರಬಹುದು.
ಜಿಗಣೆಯ ತಲೆ ಮತ್ತು ಬಾಯಿಯನ್ನು ಗುರುತಿಸಿ
ಜಿಗಣೆಯ ದೇಹದ ಉಳಿದ ಭಾಗಗಳಿಗೆ ಹೋಲಿಸಿದರೆ ಅದರ ತಲೆ ಸ್ವಲ್ಪ ತೆಳುವಾಗಿರುತ್ತದೆ. ಅದು ಚರ್ಮಕ್ಕೆ ಅಂಟಿಕೊಂಡಿರುವ ಭಾಗವೇ ಅದರ ಬಾಯಿಯಾಗಿರುತ್ತದೆ. ಮೊದಲು ಈ ಭಾಗವನ್ನು ಸರಿಯಾಗಿ ಗುರುತಿಸಿಕೊಳ್ಳಿ.
ಜಿಗಣೆಯ ಸುತ್ತಲಿನ ಚರ್ಮವನ್ನು ನಿಧಾನವಾಗಿ ಎಳೆಯಿರಿ
ಒಂದು ಕೈಯಿಂದ ಜಿಗಣೆ ಅಂಟಿಕೊಂಡಿರುವ ಸುತ್ತಲಿನ ಚರ್ಮವನ್ನು ನಿಧಾನವಾಗಿ ಎಳೆಯಿರಿ. ಇದರಿಂದ ಜಿಗಣೆಯ ಬಾಯಿಯನ್ನು ಚರ್ಮದಿಂದ ಬೇರ್ಪಡಿಸಲು ಸುಲಭವಾಗುತ್ತದೆ.
ಉಗುರಿನಿಂದ ಜಿಗಣೆಯ ಬಾಯಿಯನ್ನು ಬೇರ್ಪಡಿಸಿ
ನಿಮ್ಮ ಉಗುರನ್ನು ಜಿಗಣೆಯ ಬಾಯಿಯ ಕೆಳಭಾಗಕ್ಕೆ ನಿಧಾನವಾಗಿ ತೂರಿಸಿ, ಚರ್ಮದಿಂದ ಅದನ್ನು ಬೇರ್ಪಡಿಸಿ. ಈ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮಾಡಿ. ಜಿಗಣೆಯ ಬಾಯಿ ಸಂಪೂರ್ಣವಾಗಿ ಚರ್ಮದಿಂದ ಬೇರ್ಪಡುವಂತೆ ನೋಡಿಕೊಳ್ಳಿ.
ಜಿಗಣೆಯನ್ನು ತಕ್ಷಣ ದೂರಕ್ಕೆ ಎಸೆಯಿರಿ
ಜಿಗಣೆ ಚರ್ಮದಿಂದ ಬೇರ್ಪಟ್ಟ ತಕ್ಷಣ ಅದನ್ನು ದೇಹದಿಂದ ದೂರವಿಡಿ. ಇಲ್ಲದಿದ್ದರೆ ಮತ್ತೆ ದೇಹಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ.
ಜಿಗಣೆ ಕಚ್ಚಿದ ಜಾಗವನ್ನು ಸ್ವಚ್ಛಗೊಳಿಸಿ
ಜಿಗಣೆಯನ್ನು ತೆಗೆದ ನಂತರ ಆ ಜಾಗವನ್ನು ಸ್ವಚ್ಛ ನೀರು, ಆಂಟಿಸೆಪ್ಟಿಕ್ ಅಥವಾ ಪ್ರಥಮ ಚಿಕಿತ್ಸೆಗೆ ಬಳಸುವ ಕ್ಲೆನ್ಸರ್‌ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ಇದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಗಾಯಕ್ಕೆ ಸ್ವಚ್ಛವಾದ ಬ್ಯಾಂಡೇಜ್ ಹಾಕಿ
ಜಿಗಣೆ ಕಚ್ಚಿದ ನಂತರ ಸ್ವಲ್ಪ ಸಮಯದವರೆಗೆ ರಕ್ತಸ್ರಾವವಾಗುವುದು ಸಾಮಾನ್ಯ. ಏಕೆಂದರೆ ಜಿಗಣೆಯ ಜೊಲ್ಲಿನಲ್ಲಿರುವ ಕೆಲವು ಅಂಶಗಳು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ. ಆದ್ದರಿಂದ ಗಾಯವನ್ನು ಸ್ವಚ್ಛಗೊಳಿಸಿ, ಸ್ವಚ್ಛವಾದ ಸ್ಟೆರೈಲ್ ಬ್ಯಾಂಡೇಜ್ ಹಾಕಿ. ರಕ್ತಸ್ರಾವ ನಿಲ್ಲುವವರೆಗೆ ಅಗತ್ಯವಿದ್ದಂತೆ ಬ್ಯಾಂಡೇಜ್ ಬದಲಾಯಿಸುತ್ತಿರಿ.
ಜಿಗಣೆ ತನ್ನಿಂದ ತಾನೇ ಬೇರ್ಪಡುವವರೆಗೆ ಕಾಯಬಹುದೇ?
ವರದಿಯ ಪ್ರಕಾರ, ಜಿಗಣೆ ಸಾಮಾನ್ಯವಾಗಿ 30ರಿಂದ 45 ನಿಮಿಷಗಳವರೆಗೆ ರಕ್ತ ಹೀರಿದ ನಂತರ ತನ್ನಿಂದ ತಾನೇ ದೇಹದಿಂದ ಬೇರ್ಪಡುತ್ತದೆ. ಜಿಗಣೆಯನ್ನು ತೆಗೆಯಲು ನಿಮಗೆ ತೊಂದರೆಯಾಗುತ್ತಿದ್ದರೆ ಸ್ವಲ್ಪ ಸಮಯ ಕಾಯಬಹುದು. ಆದರೆ ದೀರ್ಘಕಾಲದವರೆಗೆ ಜಿಗಣೆ ಚರ್ಮಕ್ಕೆ ಅಂಟಿಕೊಂಡಿದ್ದರೆ ಅಥವಾ ದೇಹದ ಸುಲಭವಾಗಿ ತಲುಪಲಾಗದ ಭಾಗದಲ್ಲಿ ಅಂಟಿಕೊಂಡಿದ್ದರೆ ವೈದ್ಯರ ಸಹಾಯ ಪಡೆಯುವುದು ಉತ್ತಮ. ಜಿಗಣೆ ಕಚ್ಚಿದ ನಂತರ ರಕ್ತಸ್ರಾವ ನಿಲ್ಲದಿದ್ದರೆ, ಗಾಯದಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಥವಾ ಅತಿಯಾದ ನೋವು, ಊತ ಉಂಟಾದರೆ ವೈದ್ಯರನ್ನು ಸಂಪರ್ಕಿಸಿ. ಬಾಯಿಯ ಒಳಭಾಗ, ಮೂಗು ಅಥವಾ ಕಣ್ಣಿನ ಸಮೀಪ ಜಿಗಣೆ ಅಂಟಿಕೊಂಡಿದ್ದರೂ ಸ್ವತಃ ತೆಗೆಯಲು ಪ್ರಯತ್ನಿಸದೆ ವೈದ್ಯಕೀಯ ನೆರವು ಪಡೆಯಿರಿ.
ಜಿಗಣೆ ತೆಗೆಯಲು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.