
ಹಲವರಿಗೆ ಕುರ್ಚಿಯಿಂದ ಎದ್ದ ಬಳಿಕ ಅಥವಾ ಮಲಗಿ ಎದ್ದ ಬಳಿಕ ನಿಂತುಕೊಂಡಾಗ ಕೆಲವು ಸೆಕೆಂಡುಗಳ ತಲೆಸುತ್ತು ಬಂದಂತಾಗಿ ಇನ್ನೇನು ಮೂರ್ಚೆ ಬಿಳುತ್ತೇವೆ ಏನೋ ಎಂಬಂತಾಗುತ್ತದೆ. ಕೆಲವು ಸೆಕೆಂಡ್‌ಗಳು ಮತ್ತೆ ನಾರ್ಮಲ್ ಸ್ಥಿತಿಗೆ ಬರುತ್ತಾರೆ. ಆದರೆ ಇದು ಪ್ರತಿಸಲ ರಿಪೀಟ್ ಆಗುತ್ತಿರುತ್ತದೆ. ಅನೇಕರು ಈ ಸಮಸ್ಯೆ ಸಾಮಾನ್ಯ ಎಂದೇ ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಎಲ್ಲ ಸಮಯದಲ್ಲೂ ಇದು ನಿಜವಲ್ಲ. ದೇಹದಲ್ಲಿ ನೀರಿನಾಂಶ ಕೊರತೆ,ರಕ್ತಹೀನತೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಾಗ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಒಳಕಿವಿಯಲ್ಲಿನ ತೊಂದರೆಯಿಂದಾಗಿ ತಲೆಸುತ್ತ ಬಂದಂತಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ನೆಲದ ಮೇಲೆ ಅಥವಾ ಬೆಡ್ ಮೇಲೆ ಮಲಗಿದ್ದಾಗ ಅಥವಾ ತಾಸುಗಟ್ಟಲೇ ಕುಳಿತ ಜಾಗದಲ್ಲಿ ಕುಳಿತು ಎದ್ದು ನಿಂತಾಗ ತಕ್ಷಣ ಮುಂದೆ ಚಲಿಸಲಾಗುವುದಿಲ್ಲ. ಆ ಕ್ಷಣ ತಲೆಸುತ್ತು ಬಂದಂತಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಆರ್ಥೋಸ್ಟಾಟಿಕ್ ಅಥವಾ ಪೋಸ್ಟುರಲ್ ಹೈಪೊಟೆನ್ಷನ್ ಕೂಡ ಒಂದು. ಮಲಗಿದ್ದಾಗ ಅಥವಾ ಕುಳಿತಿದ್ದಾಗ ತಕ್ಷಣ ಎದ್ದು ನಿಂತಾಗ ಗುರುತ್ವಾಕರ್ಷಣೆಯ ಪರಿಣಾಮವಾಗಿ ರಕ್ತವು ಹೆಚ್ಚಿನ ಪ್ರಮಾಣದಲ್ಲಿ ಕಾಲುಗಳ ಕಡೆಗೆ ಹರಿಯುತ್ತದೆ. ಈ ಸಂದರ್ಭದಲ್ಲಿ ರಕ್ತದೊತ್ತಡ ಕಡಿಮೆಯಾಗಬಹುದು. ಇದರಿಂದ ತಲೆಸುತ್ತು ಅಥವಾ ತಲೆ ಹಗುರವಾದ ಅನುಭವ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು.
ಅಪರೂಪಕ್ಕೆ ತಲೆಸುತ್ತು ಕಾಣಿಸಿಕೊಳ್ಳುವುದು ಗಂಭೀರ ಸಮಸ್ಯೆ ಎಂದಲ್ಲ. ಆದರೆ ಪದೇಪದೇ ಹೀಗಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ರಕ್ತದೊತ್ತಡ ಕಡಿಮೆಯಾಗುವುದರ ಜೊತೆಗೆ ದೇಹದಲ್ಲಿ ನೀರಿನಂಶದ ಕೊರತೆಯೂ ತಲೆಸುತ್ತಿಗೆ ಕಾರಣವಾಗಬಹುದು. ಸಾಕಷ್ಟು ನೀರು ಕುಡಿಯದಿರುವುದು, ಅತಿಯಾಗಿ ಬೆವರುವುದು, ಜ್ವರ, ವಾಂತಿ - ಭೇದಿಯಂತಹ ಸಮಸ್ಯೆಗಳಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಬಹುದು.
ಅತಿಯಾದ ಬಾಯಾರಿಕೆ, ಬಾಯಿ ಒಣಗುವುದು, ಸುಸ್ತು, ತಲೆನೋವು ಹಾಗೂ ಮೂತ್ರದ ಬಣ್ಣ ಬದಲಾಗುವುದು ದೇಹದಲ್ಲಿ ನೀರಿನಂಶ ಕಡಿಮೆಯಾಗಿರುವುದರ ಲಕ್ಷಣಗಳಾಗಿರಬಹುದು. ಆದರೆ ಪದೇಪದೇ ತಲೆಸುತ್ತು ಬರುತ್ತಿದ್ದರೆ ಅದಕ್ಕೆ ನೀರಿನ ಕೊರತೆಯೇ ಕಾರಣ ಎಂದು ನಿರ್ಧರಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.
ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೂ ತಲೆಸುತ್ತು ಕಾಣಿಸಿಕೊಳ್ಳಬಹುದು. ಹಿಮೋಗ್ಲೋಬಿನ್ ಕಡಿಮೆಯಾದಾಗ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುವ ರಕ್ತದ ಸಾಮರ್ಥ್ಯ ಕುಗ್ಗುತ್ತದೆ. ಇದರಿಂದ ಸುಸ್ತು, ದೌರ್ಬಲ್ಯ, ಉಸಿರಾಟದ ತೊಂದರೆ ಹಾಗೂ ಹೃದಯಬಡಿತ ಹೆಚ್ಚಾಗುವಂತಹ ಲಕ್ಷಣಗಳ ಜೊತೆಗೆ ತಲೆಸುತ್ತು ಕೂಡ ಉಂಟಾಗಬಹುದು.
ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತಿಯಾಗಿ ಕಡಿಮೆಯಾದಾಗ ತಲೆಸುತ್ತು ಉಂಟಾಗಬಹುದು. ವಿಶೇಷವಾಗಿ ಇನ್ಸುಲಿನ್ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ಔಷಧಗಳನ್ನು ಬಳಸುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಇಂತಹ ಸಂದರ್ಭದಲ್ಲಿ ಅತಿಯಾಗಿ ಬೆವರುವುದು, ಕೈಕಾಲು ನಡುಗುವುದು, ವಿಪರೀತ ಹಸಿವಾಗುವುದು ಹಾಗೂ ಹೃದಯಬಡಿತ ಹೆಚ್ಚಾಗುವಂತಹ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.
ಕೆಲವೊಮ್ಮೆ ತಲೆಸುತ್ತಿನ ಹಿಂದೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಇರಬಹುದು. ಹೃದಯಬಡಿತದಲ್ಲಿ ಏರುಪೇರು, ಹೃದಯದ ಕವಾಟಗಳಲ್ಲಿನ ತೊಂದರೆ ಹಾಗೂ ದೇಹಕ್ಕೆ ಅಗತ್ಯವಾದಷ್ಟು ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯ ಕಡಿಮೆಯಾಗುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ ತಲೆಸುತ್ತು ಮಾತ್ರವಲ್ಲದೆ ಕೆಲವೊಮ್ಮೆ ಪ್ರಜ್ಞೆ ತಪ್ಪುವ ಅಪಾಯವೂ ಇರುತ್ತದೆ.
ತಲೆಸುತ್ತು ಕಾಣಿಸಿಕೊಂಡಾಗಲೆಲ್ಲ ಅದಕ್ಕೆ ರಕ್ತದೊತ್ತಡವೇ ಕಾರಣವಾಗಿರುವುದಿಲ್ಲ. ಸುತ್ತಮುತ್ತಲಿನ ವಸ್ತುಗಳೆಲ್ಲ ತಿರುಗುತ್ತಿರುವಂತೆ ಭಾಸವಾದರೆ ಒಳಕಿವಿಯಲ್ಲಿನ ಸಮಸ್ಯೆ ಕಾರಣವಾಗಿರಬಹುದು. ವಿಶೇಷವಾಗಿ ತಲೆ ಅಲುಗಾಡಿಸಿದಾಗ ತಲೆಸುತ್ತು ಉಂಟುಮಾಡುವ ಪೊಸಿಷನಲ್ ವರ್ಟಿಗೊ ಎಂಬ ಸಮಸ್ಯೆಯೂ ಇದಕ್ಕೆ ಕಾರಣವಾಗಬಹುದು.
ಪದೇಪದೇ ಬೀಳುವುದು ಅಥವಾ ಪ್ರಜ್ಞೆ ಕಳೆದುಕೊಳ್ಳುವಂತಹ ಸಂದರ್ಭಗಳಲ್ಲಿಯೂ ವೈದ್ಯಕೀಯ ತಪಾಸಣೆ ಅಗತ್ಯ. ವಿಶೇಷವಾಗಿ ವಯಸ್ಸಾದವರು ಹಾಗೂ ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಹೊಂದಿರುವವರು ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಸೂಚನೆ: ಆರೋಗ್ಯ ನಿಯತಕಾಲಿಕೆಯಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯಾಗಿದೆ. ತಲೆಸುತ್ತುವಿಕೆ ಸಮಸ್ಯೆ ಇದ್ದಲ್ಲಿ ತಪ್ಪದೇ ವೈದ್ಯರನ್ನ ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.