ಚಳಿಗಾಲದಲ್ಲಿಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯ ಸೂಪರ್!

By Suvarna News  |  First Published Dec 23, 2019, 3:19 PM IST

ಚಳಿಗಾಲದಲ್ಲಿ ಆರೋಗ್ಯಕ್ಕೆ ನಾನಾ ಸಮಸ್ಯೆಗಳು ಕಾಡುತ್ತವೆ. ಈ ಸಂದರ್ಭದಲ್ಲಿ ನಿಮ್ಮ ತ್ವಚೆ, ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಹೆಲ್ದೀ ಆಹಾರ ಮುಖ್ಯ.
 


ಚಳಿಗಾಲ ಶುರುವಾಯ್ತು ಅಂದರೆ ಅಲರ್ಜಿ ಸಮಸ್ಯೆ ಇರುವವರು ಅಕ್ಷರಶಃ ಒದ್ದಾಡಿ ಬಿಡುತ್ತಾರೆ. ಒಂದು ಕಡೆ ಹೆಚ್ಚಾಗುವ ಧೂಳು, ಇನ್ನೊಂದು ಕಡೆ ಕೊರೆಯುವ ಚಳಿ. ಸಣ್ಣಗೆ ಮೂಗಲ್ಲಿ ಕಿರಿಕಿರಿ ಶುರುವಾಗುತ್ತೆ. ನಿಧಾನಕ್ಕೆ ಮೈ ತುಸು ಬಿಸಿಯಾದ ಅನುಭವ, ತಲೆ ಭಾರ. ಒಂಥರಾ ಮಂಕು ಮಂಕು ಮನಸ್ಸು, ದೇಹ. ಚಳಿಗಾಲದಲ್ಲಿ ಹೆಚ್ಚಿನವರ ಪ್ರಾಬ್ಲೆಂ ಇದು. ನಮ್ಮಲ್ಲಿ ಹೆಚ್ಚಿನವರು ಆಫೀಸ್‌ನಲ್ಲಿ ಎಸಿಯಲ್ಲಿ ಕೂತು ಕೆಲಸ ಮಾಡುವವರು.

ಬೆಳಗಿನ ವಾಕಿಂಗ್‌ ಮಿಸ್‌ ಆಗೋದೇ ಹೆಚ್ಚು. ಅದನ್ನು ತಪ್ಪಿಸಲು ಒಂದಿಲ್ಲೊಂದು ಕಾರಣಗಳು ಸಿಗುತ್ತಲೇ ಇರುತ್ತವೆ. ಹೆಣ್ಮಕ್ಕಳಿಗೆ ಪೀರಿಯಡ್ಸ್‌ ಒಂದು ಒಳ್ಳೆಯ ಕಾರಣ. ನಿಜ, ಈ ಸಮಯದಲ್ಲಿ ದೇಹ ವಿಶ್ರಾಂತಿ ಬಯಸುತ್ತೆ, ಮೈ ಕೈ ನೋವು ಹೆಚ್ಚಾಗಿರುತ್ತೆ. ಹಾಗಂತ ಬೆಳಗ್ಗಿನ ವಾಕ್‌ ತಪ್ಪಿಸಿಕೊಂಡರೆ.. ದೇಹ ಸೋಮಾರಿತನಕ್ಕೆ ಪಕ್ಕಾಗೋದು ಗ್ಯಾರೆಂಟಿ. ಜೊತೆಗೆ ಚಳಿ ಚಳಿ ಹವೆ ಇನ್ನೊಂದಿಷ್ಟು ಹೊತ್ತು ಮಲಗು ಅಂತ ಸೂಚನೆ ಕೊಡುತ್ತಲೇ ಇರುತ್ತದೆ.

Tap to resize

Latest Videos

ಚಳಿಗಾಲದಲ್ಲಿ ಸೂರ್ಯನ ಕಿರಣ ಮೈ ಮೇಲೆ ಬೀಳದೇ ಸಾಕಷ್ಟು ದೈಹಿಕ ಸಮಸ್ಯೆಗಳಾಗುವುದು ಸಂಶೋಧನೆಗಳಿಂದ ಪ್ರೂವ್‌ ಆಗುತ್ತಲೇ ಇದೆ. ಆದರೂ ನಾವು ಆ ಕಡೆ ಲಕ್ಷ್ಯ ಕೊಡೋದು ಅಷ್ಟರಲ್ಲೇ ಇದೆ.

ವ್ಯಾಯಾಮದ ಕೊರತೆ, ಸೂರ್ಯನ ಶಾಖ ಮೈಮೇಲೆ ಬೀಳದೇ ಇರುವ ಕೊರತೆ, ಧೂಳು, ಚಳಿಮಿಶ್ರಿತ ಹವಾಮಾನ ಹೀಗೆ ಚಳಿಗಾಲದಲ್ಲಿ ಆರೋಗ್ಯ ಹದತಪ್ಪಲು ಅನೇಕ ಕಾರಣಗಳಿವೆ. ಇದರಿಂದ ಹೊರಬರಲು ಒಂದಿಷ್ಟು ಪ್ರಯತ್ನ ಪಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಹಾರದಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕು. ಚಳಿಗಾಲದಲ್ಲಿ ನಿಮ್ಮ ಇಮ್ಯುನಿಟಿ ಹೆಚ್ಚಿಸುವ ತರಕಾರಿ, ಆಹಾರ ಪದಾರ್ಥಗಳ ವಿವರ ಹೀಗಿದೆ.

undefined

1. ಶುಂಠಿ ಸೇವನೆ ಇರಲಿ

ಹಿಂದೆಲ್ಲ ಅಜ್ಜಿ ಮದ್ದು ಅಂತಿತ್ತು. ಪರಂಪರಾಗತವಾಗಿ ಬಂದ ಆ ಮದ್ದಿನಲ್ಲಿ ಔಷಧೀಯ ಸತ್ವಗಳು ಹೇರಳವಾಗಿದ್ದವು. ಅವುಗಳಲ್ಲಿ ಶುಂಠಿಗೆ ಮಹತ್ವದ ಪಾತ್ರ. ಇದು ವೈಜ್ಞಾನಿಕವಾಗಿಯೂ ಸತ್ಯ ಅಂತ ಪ್ರೂವ್‌ ಆಗಿದೆ. ಅಷ್ಟಕ್ಕೂ ಈ ಶುಂಠಿಯಿಂದ ದೇಹಕ್ಕೆ ಏನುಪಯೋಗ ಅನ್ನೋ ಪ್ರಶ್ನೆ ಬರಬಹುದು. ಚಳಿಗಾಲದಲ್ಲಿ ನಮ್ಮ ದೇಹದ ತಾಪಮಾನ ಇಳಿದಿರುತ್ತೆ. ಶುಂಠಿ ದೇಹದ ಉಷ್ಣತೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೆ. ನಿಮ್ಮ ಇಮ್ಯೂನಿಟಿಯನ್ನು ಹೆಚ್ಚು ಮಾಡುತ್ತೆ.

ಚಳಿಗಾಲದಲ್ಲಿ ದೇಹವನ್ನು ಕಾಡುವ ಶೀತ, ಕೆಮ್ಮು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತೆ. ಇನ್‌ಫ್ಲೆಕ್ಷನ್‌ ಇದರಿಂದ ಕಡಿಮೆಯಾಗುತ್ತೆ. ಬೆಳಗ್ಗೆ ಹಸಿಹೊಟ್ಟೆಗೆ ಶುಂಠಿ ಟೀ ಕುಡಿಯಿರಿ. ದೇಹ ಮನಸ್ಸು ಅರಳಲು ಇದು ಸಹಕಾರಿ. ಅಡುಗೆಗಳಲ್ಲಿ ಶುಂಠಿ ಬಳಸಿ. ಚಳಿಗಾಲದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಲ್ಲ. ಶುಂಠಿ ಸೇವನೆಯಿಂದ ಜೀರ್ಣವೂ ಚೆನ್ನಾಗಾಗುತ್ತೆ.

2. ಬಸಳೆ ಸೊಪ್ಪು ಉತ್ತಮ

ಮನೆಯ ಹಿತ್ತಲಲ್ಲೇ ಬೆಳೆದ ಬಸಳೆ ಸೊಪ್ಪು ಅಡುಗೆ ಮನೆಯವರೆಗೂ ಬರದೇ ಅಲ್ಲೇ ಬೆಳೆದು ವೇಸ್ಟ್‌ ಆಗೋದು ಕೆಲವೊಂದು ಮನೆಗಳಲ್ಲಿ ಸಾಮಾನ್ಯ. ಇಲ್ಲವಾದರೆ ಮನೆಯಲ್ಲೊಂದು ಪಾಟ್‌ನಲ್ಲಿ ಬಸಳೆ ಸೊಪ್ಪು ತಂದು ನೆಟ್ಟರೆ ಆಗಾಗ ಇದರ ಸಾಂಬಾರ್‌, ಪಲ್ಯ ಮಾಡಿ ತಿನ್ನಬಹುದು. ಇದಷ್ಟೇ ಅಲ್ಲ, ಪಾಲಾಕ್‌ ಸೊಪ್ಪು, ಇತರೇ ಹಸಿರು ಸೊಪ್ಪುಗಳು ಚಳಿಗಾಲದಲ್ಲಿ ನಮ್ಮ ದೈಹಿಕ ವ್ಯವಸ್ಥೆಯನ್ನು ಗಟ್ಟಿ ಮಾಡುತ್ತವೆ. ಜೀರ್ಣಕ್ರಿಯೆಗೂ ಉತ್ತಮ. ಹಸಿರು ಎಲೆಗಳಲ್ಲಿ ವಿಟಮಿನ್‌ ಎ ಮತ್ತು ವಿಟಮಿನ್‌ ಸಿ ಸತ್ವಗಳಿರುತ್ತವೆ. ಇವು ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತವೆ.

3.ಅರಿಶಿನ ಬಳಕೆ ಹೆಚ್ಚಲಿ

ಅರಿಶಿನದಲ್ಲಿ ಹಲವು ಔಷಧೀಯ ಸತ್ವಗಳಿವೆ. ಇದು ಅಲ್ಝೈಮರ್‌ ನಂಥಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಕ್ಯಾನ್ಸರ್‌ ನಿವಾರಕ ಎಂಬ ಮಾತೂ ಇದೆ. ಚಳಿಗಾಲದಲ್ಲಿ ತೀರಾ ಸಾಮಾನ್ಯವಾದ ಉರಿಯೂತ, ಅಲರ್ಜಿಗಳನ್ನು ಇದು ಬಹಳ ಬೇಗ ನಿವಾರಿಸುತ್ತದೆ. ಚರ್ಮಕ್ಕೂ ಉತ್ತಮ. ಹಾಗಾಗಿ ಚಳಿಗಾಲದಲ್ಲಿ ನಮ್ಮ ಆಹಾರ ಪದಾರ್ಥಗಳಲ್ಲಿ ಅರಿಶಿನದ ಬಳಕೆ ಹೆಚ್ಚಿದಷ್ಟೂ ಉತ್ತಮ.

4. ನಿಂಬೆಯ ಮಹಿಮೆ

ನಿಂಬೆಯಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುವುದು ನಮಗೆಲ್ಲ ತಿಳಿದದ್ದೇ. ಬೇಸಿಗೆಯಲ್ಲಿ ನಿಂಬೆ ಶರಬತ್ತು, ನಿಂಬೆ ಹಿಂಡಿದ ಕೋಸಂಬರಿಗಳನ್ನೆಲ್ಲ ಸ್ವಾಹಾ ಮಾಡುವ ನಾವು ಚಳಿಗಾಲದ ಬಂದರೆ ನಿಂಬೆಯನ್ನು ಮರೆತೇ ಬಿಡುತ್ತೇವೆ. ಆದರೆ ಈ ಟೈಮ್‌ನಲ್ಲಿ ಕಡಿಮೆ ಬೆಲೆಗೆ ನಿಂಬೆ ಹಣ್ಣು ಸಿಗುತ್ತೆ. ಬಳಸುವವರೇ ಇರಲ್ಲ. ಯಾವ ಸೀಸನ್‌ನಲ್ಲಿ ಏನು ತರಕಾರಿ, ಹಣ್ಣು ಸಿಗುತ್ತೋ ಅದು ದೇಹಕ್ಕೆ ಉತ್ತಮವೇ ಆಗಿರುತ್ತೆ. ಹಾಗಾಗಿ ನಿಂಬೆಯ ಬಳಕೆ ಈಗ ಹೆಚ್ಚಾಗಬೇಕು. ನಿಂಬೆ ರಸ ಬೆರೆಸಿದ ಸಲಾಡ್‌, ಕೋಸಂಬರಿ, ನಿಂಬೆ ಜ್ಯೂಸ್‌ ಹೆಚ್ಚೆಚ್ಚು ಸೇವಿಸಿ. ನಿಮ್ಮ ದೇಹದ ರೋಗ ನಿರೋಧಕತೆಯೂ ಅಧಿಕವಾಗುತ್ತಾ ಹೋಗುತ್ತೆ.

5. ಸಿಹಿ ಗೆಣಸು ಬಳಕೆ ಹೆಚ್ಚಲಿ

ನಮ್ಮ ನೆಲದ ಗೆಣಸಿಗೆ ವಿಶೇಷ ಗುಣ ಇದೆ. ಹಾಗಾಗಿ ಹೊರದೇಶಗಳಲ್ಲೂ ಬೇಡಿಕೆ ಹೆಚ್ಚು. ಆದರೆ ಇದನ್ನು ಅಂಡರ್‌ ಎಸ್ಟಿಮೇಟ್‌ ಮಾಡುವವರೇ ಹೆಚ್ಚು. ನಸು ಗುಲಾಬಿ ಬಣ್ಣದ ಗೆಣಸಿನಲ್ಲಿ ದೇಹಕ್ಕೆ ಬೇಕಾದ ಕಾರ್ಬೋ ಹೈಡ್ರೇಟ್‌ ಇದೆ. ಅನೇಕ ರೋಗಗಳ ವಿರುದ್ಧ ಹೋರಾಡಿ ದೇಹವನ್ನು ರಕ್ಷಿಸುವ ಗುಣ ಇದೆ. ಗೆಣಸಿನ ಸೇವನೆ ಬಗ್ಗೆ ಉಡಾಫೆ ಬೇಡ. ಹೆಚ್ಚೆಚ್ಚು ತಿನ್ನಲಾರಂಭಿಸಿ.

click me!