
ಹೃದಯಾಘಾತ (Heart attack) ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಕೋವಿಡ್ ನಂತ್ರ ಹೃದಯಾಘಾತಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದೇ ಸಮನೆ ಏರಿಕೆ ಆಗ್ತಿದೆ ಎನ್ನುವ ವಾದವೂ ಇದೆ. ಹಿಂದೆ ವಯಸ್ಸಾದ ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗ್ತಿದ್ದರು. ಆದ್ರೀಗ ಚಿಕ್ಕ ಮಕ್ಕಳಲ್ಲಿ ಇದು ಕಾಡಲು ಶುರುವಾಗಿದೆ. ನಿಂತಲ್ಲಿ, ಕುಳಿತಲ್ಲಿ ಕುಸಿದು ಬಿದ್ದು, ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ. 10, 14 ವರ್ಷದ ಮಕ್ಕಳು ಹೃದಯಾಘಾತಕ್ಕೆ ಬಲಿ ಆಗ್ತಿದ್ದಾರೆ. ಇದು ಪ್ರತಿಯೊಬ್ಬ ಪಾಲಕರಲ್ಲಿ ಆತಂಕ ಹುಟ್ಟುಹಾಕಿದೆ. ಮಕ್ಕಳನ್ನು ಹೇಗೆ ನೋಡಿಕೊಳ್ಬೇಕು, ಯಾವ ಆಹಾರ ನೀಡ್ಬೇಕು, ಯಾವ ಟೈಂನಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ಬೇಕು ಎಂಬೆಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮಕ್ಕಳಲ್ಲಿ ಹೃದಯಾಘಾತ ಲಕ್ಷಣ :
• ಮಗುವಿಗೆ ಎದೆಯಲ್ಲಿ ಭಾರ ಅಥವಾ ನೋವು ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ದೈಹಿಕ ಚಟುವಟಿಕೆಯ ಸಮಯದಲ್ಲಿ ನೋವು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
• ಚಿಕ್ಕ ಮಕ್ಕಳ ತುಟಿಗಳ ಸುತ್ತ ನೀಲಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಮಗುವಿನ ತುಟಿಗಳು, ಬೆರಳುಗಳು ಮತ್ತು ಚರ್ಮವು ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಹೃದಯವು ಸರಿಯಾದ ಪ್ರಮಾಣದ ರಕ್ತವನ್ನು ಪಂಪ್ ಮಾಡದ ಸಮಯದಲ್ಲಿ ಚರ್ಮದ ಬಣ್ಣ ಬದಲಾಗುತ್ತದೆ.
• ಯಾವುದೇ ಕಾರಣವಿಲ್ಲದೆ ಮಗು ದುರ್ಬಲವಾಗಿದ್ದರೆ. ತಲೆತಿರುಗುವಿಕೆ ಮತ್ತು ಮೂರ್ಛೆ ಹೋದರೆ, ಹೃದಯ ಬಡಿತ ಹೆಚ್ಚಾಗುತ್ತದೆ, ಆಗ ಇದು ಗಂಭೀರ ಹೃದಯ ಸಮಸ್ಯೆಯನ್ನೂ ಸೂಚಿಸುತ್ತದೆ.
• ಮಗುವಿಗೆ ಉಸಿರಾಡಲು ತೊಂದರೆ ಕಾಣಿಸಿಕೊಂಡ್ರೆ ಅಥವಾ ಸ್ವಲ್ಪ ಸಮಯ ನಡೆದ ನಂತರ ಉಸಿರಾಟದ ತೊಂದರೆ ಅನುಭವಿಸಿದ್ರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಮಗು ಲಘು ವ್ಯಾಯಾಮ ಮಾಡುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಉಸಿರುಗಟ್ಟಿದ ಅನುಭವ ಆದ್ರೆ , ವ್ಯಾಯಾಮದ ಸಮಯದಲ್ಲಿ ವಾಂತಿಯಾದ್ರೆ ಜಾಗರೂಕರಾಗಿರಿ.
• ಎದೆ ನೋವು, ಉಸಿರಾಟದ ತೊಂದರೆ ಹೃದಯ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ಲಕ್ಷಣಗಳು ರಕ್ತಹೀನತೆಯಿಂದ ಕೂಡ ಉಂಟಾಗಬಹುದಾದರೂ ಚಿಕಿತ್ಸೆ ಮುಖ್ಯ.
ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಕಾರಣಗಳು : ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಕೆಟ್ಟ ಲೈಫ್ ಸ್ಟೈಲ್, ಒತ್ತಡ ಮತ್ತು ಅನಾರೋಗ್ಯಕರ ಆಹಾರ. ತಜ್ಞರ ಪ್ರಕಾರ, ಇದಕ್ಕೆ ನಿಖರವಾದ ಕಾರಣ ನೀಡುವುದು ಕಷ್ಟ, ಆದ್ರೆ ಕೆಟ್ಟ ಲೈಫ್ ಸ್ಟೈಲ್, ನಿರಂತರವಾಗಿ ಕೆಟ್ಟ ಮತ್ತು ಅನಾರೋಗ್ಯಕರ ಆಹಾರ ಸೇವನೆ ಮಾಡಿದ್ರೆ, ದೈಹಿಕ ಚಟುವಟಿಕೆ ನಗಣ್ಯವಾಗಿದ್ರೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಮೊಬೈಲ್, ಟಿವಿ ಮತ್ತು ಆನ್ಲೈನ್ ತರಗತಿಗಳಲ್ಲಿ ಮುಳುಗಿರುವ ಮಕ್ಕಳ ದೈಹಿಕ ಚಟುವಟಿಕೆ ಕಡಿಮೆ ಆಗುವ ಕಾರಣ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಒತ್ತಡ, ವಿವಿಧ ಆರೋಗ್ಯ ಸಮಸ್ಯೆ, ಜನ್ಮಜಾತ ಹೃದಯ ತೊಂದರೆ, ಆನುವಂಶಿಕತೆ, ಕೆಲವು ವೈದ್ಯಕೀಯ ಸಮಸ್ಯೆ ಮತ್ತು ಕೆಲವು ಔಷಧಗಳು, ಮಾಲಿನ್ಯ ಕೂಡ ಇದಕ್ಕೆ ಕಾರಣವಾಗುತ್ತದೆ.
ಮಕ್ಕಳಲ್ಲಿ ಹೃದಯಾಘಾತ ತಡೆಯುವುದು ಹೇಗೆ? :
• ಆತಂಕ, ಉಸಿರಾಟದ ತೊಂದರೆ, ಏರಿಕೆಯಾಗುವ ಹೃದಯ ಬಡಿತ ಕಂಡು ಬಂದಲ್ಲಿ ಪೋಷಕರು ರೋಗಲಕ್ಷಣಗಳನ್ನು ಅರ್ಥಮಾಡಿಕೊಂಡು ತಕ್ಷಣ ಚಿಕಿತ್ಸೆ ಕೊಡಿಸಬೇಕು.
• ಜನನದ ಸಮಯದಲ್ಲಿಯೇ ಮಗುವಿನ ಹೃದಯವನ್ನು ಪರೀಕ್ಷಿಸಬೇಕು.
• ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ. ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್ ಸಕ್ಕರೆ ಇರುವ ಪಾನೀಯ ನೀಡಬೇಡಿ.
• ಮಕ್ಕಳನ್ನು ದೈಹಿಕ ಚಟುವಟಿಕೆಗೆ ಪ್ರೋತ್ಸಾಹಿಸಿ. ಆಟ, ಯೋಗ, ವಾಕಿಂಗ್ ಗೆ ಆದ್ಯತೆ ನೀಡಿ.
ಆರೋಗ್ಯಕರ ಹೃದಯಕ್ಕಾಗಿ ಮಕ್ಕಳ ಆಹಾರ :
• ಸಮತೋಲಿತ ಆಹಾರ ಮಗುವಿನ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
• ಸೇಬು, ಕಿತ್ತಳೆ, ಬಾಳೆಹಣ್ಣು, ಬೆರ್ರಿ ಹಣ್ಣುಗಳನ್ನು ಮಕ್ಕಳಿಗೆ ನೀಡಿ. ಇವು ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ.
• ಕ್ಯಾರೆಟ್, ಪಾಲಕ್, ಬ್ರೊಕೊಲಿ, ಕ್ಯಾಪ್ಸಿಕಂ ಆಹಾರದಲ್ಲಿರಲಿ. ಇವು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ನಾರಿನಂಶವನ್ನು ಹೊಂದಿರುತ್ತವೆ.
• ಮಕ್ಕಳಿಗೆ ದಿನವಿಡೀ ಕನಿಷ್ಠ 2-3 ರೀತಿಯ ಹಣ್ಣುಗಳು ಮತ್ತು 3-4 ರೀತಿಯ ಹಸಿರು ತರಕಾರಿಗಳನ್ನು ನೀಡಿ.
• ಓಟ್ಸ್, ಕಂದು ಅಕ್ಕಿ, ಕ್ವಿನೋವಾ, ಮಲ್ಟಿಗ್ರೇನ್ ಬ್ರೆಡ್ ನೀಡಿ. ಫೈಬರ್ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಬಿಳಿ ಅಕ್ಕಿ ಮತ್ತು ಸಂಸ್ಕರಿಸಿದ ಬ್ರೆಡ್ ಬದಲಿಗೆ, ಧಾನ್ಯಗಳನ್ನು ನೀಡಿ.
• ದ್ವಿದಳ ಧಾನ್ಯ, ಕಡಲೆ, ಕಿಡ್ನಿ ಬೀನ್ಸ್, ಕಡಲೆಕಾಯಿ, ಸೋಯಾಬೀನ್ ನೀಡಿ.
• ಮೊಟ್ಟೆ, ಮೀನು, ಕೋಳಿ ಮಾಂಸಾಹಾರಿ ಮಕ್ಕಳಿಗೆ ಉತ್ತಮ.
• ಬಾದಾಮಿ, ವಾಲ್ನಟ್ಸ್, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇವುಗಳನ್ನು ಮಕ್ಕಳಿಗೆ ನೀಡಿ.
• ಸಂಸ್ಕರಿಸಿದ ಎಣ್ಣೆಯ ಬದಲಿಗೆ ಆಲಿವ್ ಎಣ್ಣೆ, ಸಾಸಿವೆ ಎಣ್ಣೆ, ತೆಂಗಿನ ಎಣ್ಣೆಯನ್ನು ಬಳಸಿ.
• ಹಾಲು, ಮೊಸರು, ಚೀಸ್ ಮೂಳೆಗಳಿಗೆ ಕ್ಯಾಲ್ಸಿಯಂ ಮತ್ತು ಹೃದಯದ ಆರೋಗ್ಯಕ್ಕೆ ಪೊಟ್ಯಾಸಿಯಮ್ ಒದಗಿಸುತ್ತದೆ.
• ಪೂರ್ಣ ಕೊಬ್ಬಿನ ಡೈರಿಯ ಬದಲಿಗೆ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ನೀಡಿ.
• ಎಳೆ ನೀರು, ತಾಜಾ ಹಣ್ಣಿನ ರಸ, ಮಜ್ಜಿಗೆಯನ್ನು ಮಕ್ಕಳಿಗೆ ಕೊಡಬೇಕು.
ಮಕ್ಕಳಿಗೆ ಇದನ್ನು ನೀಡಬೇಡಿ :
• ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿಗೊಳಿಸಿದ ಪಾನೀಯ, ತಂಪು ಪಾನೀಯ ಮತ್ತು ಪ್ಯಾಕ್ ಮಾಡಿದ ಪಾನೀಯಗಳನ್ನು ನೀಡಬೇಡಿ.
• ಸಂಸ್ಕರಿಸಿದ ಆಹಾರ ಮತ್ತು ಪ್ಯಾಕ್ ಮಾಡಿದ ತಿಂಡಿಗಳು ಹೆಚ್ಚಿನ ಉಪ್ಪನ್ನು ಹೊಂದಿರುತ್ತವೆ. ಅವುಗಳನ್ನು ನೀಡಬೇಡಿ.
• ಚಾಕೊಲೇಟ್ಗಳು, ಪೇಸ್ಟ್ರಿಗಳು ಮತ್ತು ಕ್ಯಾಂಡಿಗಳನ್ನು ತಪ್ಪಿಸಿ.
• ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಗಳಾದ ಬರ್ಗರ್ , ಪಿಜ್ಜಾ, ಫ್ರೆಂಚ್ ಫ್ರೈಸ್, ಪ್ಯಾಕ್ ಮಾಡಿದ ಚಿಪ್ಸ್ ಹೃದಯಕ್ಕೆ ಹಾನಿಕಾರಕ.
• ಕೆಫೀನ್ ಮಾಡಿದ ಪಾನೀಯಗಳು ಮಕ್ಕಳ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.