Health Tips: ಬೆನ್ನುನೋವಾ? ನಿಮ್ಮ ಥೋರಾಸಿಕ್‌ ಬೆನ್ನುಮೂಳೆ ಹಾನಿಗೆ ಒಳಗಾಗಿರ್ಬೋದು ಎಚ್ಚರ

By Suvarna News  |  First Published Aug 5, 2023, 7:00 AM IST

ಮಾನವ ದೇಹದಲ್ಲಿ ಬೆನ್ನುಮೂಳೆಯ ಮಧ್ಯಭಾಗದಲ್ಲಿ ಥೋರಾಸಿಕ್‌ ಸ್ಪೈನ್‌ ಎನ್ನುವ ವಿಶೇಷ ಮೂಳೆಯೊಂದಿದೆ. ಇದರ ವೈಶಿಷ್ಟ್ಯತೆ ಎಂದರೆ, ಸುಲಭಕ್ಕೆ ಗಾಯಕ್ಕೆ, ನೋವಿಗೆ ಒಳಗಾಗುವುದಿಲ್ಲ. ಆದರೆ, ಯಾರು ದಿನಕ್ಕೆ ೩ ಗಂಟೆಗೂ ಹೆಚ್ಚು ಕಾಲ ಸ್ಕ್ರೀನ್‌ ವೀಕ್ಷಣೆ ಮಾಡುತ್ತಾರೋ ಅವರಲ್ಲಿ ಇದು ಹಾನಿಗೆ ಒಳಗಾಗುತ್ತದೆ. 
 


ಅಗತ್ಯದ ಕಾರ್ಯವಿಲ್ಲದೆಯೂ ಸುಮ್ಮನೆ ಮೊಬೈಲ್‌ ವೀಕ್ಷಿಸುವವರು, ಮೊಬೈಲ್‌ ನಲ್ಲೇ ಸಿನಿಮಾ, ಧಾರಾವಾಹಿ ನೋಡುವವರು, ಮೊಬೈಲ್‌ ಗೇಮ್‌ ಆಡುವ ಮಕ್ಕಳು ಸಾಮಾನ್ಯವಾಗಿ ಯಾರೂ ಸಹ ನೇರವಾದ ಭಂಗಿಯಲ್ಲಿ ಕುಳಿತುಕೊಂಡು ವೀಕ್ಷಣೆ ಮಾಡುವುದಿಲ್ಲ. ಸ್ಮಾರ್ಟ್‌ ಫೋನ್‌, ಚಾನೆಲ್ಸ್‌, ಕಂಪ್ಯೂಟರ್‌ ಗೇಮ್ಸ್‌, ಶೈಕ್ಷಣಿಕ ಆಪ್‌, ಆನ್‌ ಲೈನ್‌ ಚಟುವಟಿಕೆಗಳಲ್ಲಿ ಭಾಗಿಯಾಗುವಾಗ ತಮಗೆ ಅನುಕೂಲವಾಗುವಂತೆ ಹೇಗೆ ಬೇಕೋ ಹಾಗೆ ಒರಗುವವರೇ ಹೆಚ್ಚು. ಇದರಿಂದಾಗಿ, ಬೆನ್ನುನೋವಿನ ಸಮಸ್ಯೆ ವಿಶ್ವವ್ಯಾಪಿಯಾಗಿ ಕಾಡುತ್ತಿದೆ. ಜತೆಗೆ, ಇತರ ಪರಿಣಾಮಗಳು ಇರುವಂಥದ್ದೇ. ಬ್ರೆಜಿಲ್‌ ದೇಶದಲ್ಲಿ ನಡೆದಿದ್ದ ಒಂದು ಅಧ್ಯಯನದ ಪ್ರಕಾರ, ಹೈಸ್ಕೂಲ್‌ ಮಕ್ಕಳಲ್ಲಿ ಬೆನ್ನುನೋವಿನ ಸಮಸ್ಯೆ ತೀವ್ರವಾಗಿ ವ್ಯಾಪಿಸುತ್ತಿದೆ. ದಿನಕ್ಕೆ ಮೂರಕ್ಕೂ ಹೆಚ್ಚು ಗಂಟೆಗಳ ಕಾಲ ಸ್ಕ್ರೀನ್‌ ವೀಕ್ಷಣೆ ಮಾಡುವವರು ಇದರ ಫಲಾನುಭವಿಗಳಾಗಿದ್ದಾರೆ. ಕುಳಿತುಕೊಂಡು ಇಲ್ಲವೇ ಹೊಟ್ಟೆಯ ಮೇಲೆ ಬೋರಲಾಗಿ, ಅರ್ಧ ಮಲಗಿಕೊಂಡು ಸ್ಕ್ರೀನ್‌ ವೀಕ್ಷಣೆ ಮಾಡುವ ಯುವಜನಾಂಗ ಬೆನ್ನುನೋವಿನಿಂದಾಗಿಯೇ ಚಟುವಟಿಕೆರಹಿತವಾಗುವುದು  ನಿಜಕ್ಕೂ ಕಳವಳಕಾರಿ ಸಂಗತಿ. ಈ ಅಧ್ಯಯನದಲ್ಲಿ ಥೋರಾಸಿಕ್‌ ಸ್ಪೈನ್‌ ಪೇನ್‌ (ಟಿಎಸ್‌ ಪಿ- TSP) ಮೇಲೆ ಕೇಂದ್ರೀಕರಿಸಲಾಗಿತ್ತು. 

ಥೋರಾಸಿಕ್‌ ಸ್ಪೈನ್‌ (Thoracic Spine) ಎದೆಯ ಹಿಂಭಾಗದಲ್ಲಿರುತ್ತದೆ. ಬೆನ್ನು ಮೂಳೆಯ ಮಧ್ಯಭಾಗದಲ್ಲಿ ಕತ್ತಿನಿಂದ ತುದಿಯವರೆಗೂ ಇರುತ್ತದೆ. ಇದು ವ್ಯಕ್ತಿಯ ಭಂಗಿ (Posture) ಅಥವಾ ನಿಲುವಿಗೆ ಕೊಡುಗೆ ನೀಡುತ್ತದೆ. ಈ ಅಧ್ಯಯನವನ್ನು ಬ್ರೆಜಿಲ್‌ ನ ಸಾವೋಪೌಲೊ ರಾಜ್ಯದ ಬೌರು ಎನ್ನುವ ಪುಟ್ಟ ನಗರದಲ್ಲಿ ನಡೆಸಲಾಗಿತ್ತು. ಇಲ್ಲಿನ 14-18ರ ವಯೋಮಾನದ ಹೈಸ್ಕೂಲ್‌ ಮಕ್ಕಳ (Children) ಕುರಿತು ಸಮೀಕ್ಷೆ ನಡೆಸಲಾಗಿತ್ತು. ಹುಡುಗರಿಗಿಂತ ಹುಡುಗಿಯರೇ ಟಿಎಸ್‌ ಪಿಗೆ ತುತ್ತಾಗಿದ್ದುದು ಇದರಿಂದ ಬಹಿರಂಗವಾಗಿತ್ತು.

Health Tips: ಸದಾಕಾಲ ಓವರ್ ಟೈಮ್ ಕೆಲ್ಸ ಮಾಡ್ತೀರಾ? ಆರೋಗ್ಯಕ್ಕೆ ದುಬಾರಿಯಾಗ್ಬೋದು ಎಚ್ಚರ

Tap to resize

Latest Videos

ಕೋವಿಡ್‌ ನಿಂದಾಗಿ ಮತ್ತಷ್ಟು ಏರಿಕೆ  
ಜಾಗತಿಕವಾಗಿ ಟಿಎಸ್‌ ಪಿ ಸಮಸ್ಯೆ ಅಧಿಕವಾಗಿದೆ. ಶೇ.35ರಷ್ಟು ವಯಸ್ಕರು ಮತ್ತು ಶೇ.13-35ಷ್ಟು ಮಕ್ಕಳು, ಹದಿಹರೆಯದವರಲ್ಲಿ (Teenagers) ಸಮಸ್ಯೆ ಹೆಚ್ಚಾಗಿದೆ. ಕೋವಿಡ್-‌19 ಸಾಂಕ್ರಾಮಿಕವು ಈ ಸಮಸ್ಯೆಯನ್ನು ಹೆಚ್ಚಿಸುವಲ್ಲಿ ಗಣನೀಯ ಕೊಡುಗೆ ನೀಡಿದೆ ಎನ್ನುತ್ತಾರೆ ತಜ್ಞರು. ಟಿಎಸ್‌ ಪಿಯಿಂದ ದೈಹಿಕ (Physical), ಮಾನಸಿಕ (Psychological) ಮತ್ತು ವರ್ತನೆಗೆ (Behaviour) ಸಂಬಂಧಿಸಿದ ಸಮಸ್ಯೆಗಳು ಗಮನಾರ್ಹವಾಗಿ ಏರಿಕೆಯಾಗುತ್ತವೆ. ದೈಹಿಕ ಚಟುವಟಿಕೆಯಿಲ್ಲದ ಜಡಭರಿತ (Inactive) ಜೀವನಶೈಲಿಯಿಂದ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚುವುದನ್ನು ಈಗಾಗಲೇ ಹಲವು ಅಧ್ಯಯನಗಳು ನಿರೂಪಿಸಿವೆ. ಜತೆಗೆ, ಬೆನ್ನುಮೂಳೆಯ (Spinal) ಆರೋಗ್ಯದ ಮೇಲೆಯೂ ಇವೆಲ್ಲ ಅಂಶಗಳು ಪರಿಣಾಮ ಬೀರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯು ಜಾಗತಿಕವಾಗಿ ಸಮಸ್ಯೆ ವ್ಯಾಪಿಸುತ್ತಿರುವುದನ್ನು ತಿಳಿಸಿದೆ.

ಮಾನಸಿಕ ಸಮಸ್ಯೆ ಹೆಚ್ಚಳ
ಬೆನ್ನುನೋವಿನಿಂದಾಗಿ ದೈಹಿಕ ಚಟುವಟಿಕೆ (Physical Activity) ಇನ್ನಷ್ಟು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ ಹಾಗೂ ಮಾನಸಿಕ (Mental) ಸ್ಥಿತಿಗತಿಯಲ್ಲೂ ಏರುಪೇರಾಗುತ್ತದೆ. ಕೋವಿಡ್‌ ಬಳಿಕ ಖಿನ್ನತೆ, ಆತಂಕ ಸೇರಿದಂತೆ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಹೆಚ್ಚಿರುವುದಕ್ಕೂ ಜಡಭರಿತ ಜೀವನಶೈಲಿ ಕಾರಣವಾಗಿದೆ ಎನ್ನುವುದನ್ನು ಹೇಳಲಾಗಿದೆ. ಬೆನ್ನುಮೂಳೆಯ ಮಧ್ಯಭಾಗದಲ್ಲಿರುವುದರಿಂದ ಥೋರಾಸಿಕ್‌ ಮೂಳೆಗೆ ಗಾಯವಾಗುವುದು ಅಥವಾ ಯಾವುದೇ ರೀತಿಯ ಏಟಾಗುವುದು ಕಡಿಮೆ. ಇದು ಬೆನ್ನುಮೂಳೆಯುದ್ದಕ್ಕೂ ಸ್ಥಿರವಾಗಿ ಹರಡಿರುವುದರಿಂದ ಸುರಕ್ಷಿತವಾಗಿರುತ್ತದೆ. ಆದರೆ, ಜೀವನಶೈಲಿಯೊಂದೇ (Lifestyle) ಇದರ ಆರೋಗ್ಯವನ್ನು ಹದಗೆಡಿಸಲು ಸಾಕು ಎನ್ನುತ್ತಿವೆ ಅಧ್ಯಯನಗಳು. 

ಕಿಡ್ನಿ ಸ್ಟೋನ್ ಸಮಸ್ಯೆಯಿದ್ರೆ ಸರ್ಜರಿ ಮಾಡಿಸ್ಕೊಳ್ಳೇಬೇಕಾ?

ಕಡೆಗಣಿಸಬೇಡಿ
ಟಿಎಸ್‌ ಹಾನಿಗೆ ಒಳಗಾದರೆ, ಏಕಾಏಕಿ ಬೆನ್ನುಮೂಳೆಯ ಮಧ್ಯದಲ್ಲಿ ತೀವ್ರವಾದ ನೋವು ಕಂಡುಬರಬಹುದು. ಇದರಿಂದಾಗಿ ಕೆಲವರ ಮೂಳೆಗೆ ಗಾಯವಾಗಬಹುದು. ಬೆನ್ನುಮೂಳೆಯ ಮಧ್ಯದಲ್ಲಿ ಬಿಗಿಯಾದಂತೆ, ಭಾರವಾದಂತೆ ಭಾಸವಾಗಬಹುದು. ಬೆನ್ನುನೋವು (Pain) ಹೆಚ್ಚಬಹುದು. ದೌರ್ಬಲ್ಯ ಉಂಟಾಗಬಹುದು. ಜುಮ್ಮೆನ್ನಿಸುವಂತೆ ಆಗಬಹುದು. ಇದಕ್ಕೆ ಪರಿಹಾರವೆಂದರೆ, ಚಟುವಟಿಕೆಯ ಜೀವನಶೈಲಿಯನ್ನು ರೂಢಿಸಿಕೊಳ್ಳುವುದೇ ಆಗಿದೆ. 

click me!