ರಾಸಾಯನಿಕಯುಕ್ತ ಬ್ಯೂಟಿ ಕ್ರೀಂಗಳು, ನೋವು ನಿವಾರಕ ಔಷಧಗಳ ಮಾರು ಹೋಗುವ ಬದಲು ಆರೋಗ್ಯ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಔಷಧವನ್ನು ಏಕೆ ಬಳಸಿ ನೋಡಬಾರದು? ಮೆಂತೆ ಎಂಬ ಬಹೂಪಯೋಗಿ ವಸ್ತುವಿನ ಮಹತ್ವ ತಿಳಿದರೆ ನೀವದನ್ನು ಬಳಸದೆ ಬಿಡುವುದಿಲ್ಲ.
ಸೌಂದರ್ಯವರ್ಧನೆಗಾಗಿ ಬ್ಯೂಟಿ ಕ್ರೀಂಗಳಿಗೆ, ಪಾರ್ಲರ್ಗಳಿಗೆ ಸಾವಿರಾರು ರೂಪಾಯಿ ಸುರಿಯುವ ನಮಗೆ ಅಡುಗೆ ಮನೆಯೆಂಬ ಮೆಡಿಕಲ್ ಸ್ಟೋರ್ನಲ್ಲಿರುವ ಬ್ಯೂಟಿ ಪ್ರಾಡಕ್ಟ್ಗಳ ಬಗ್ಗೆ ಅಸಡ್ಡೆಯೇ ಜಾಸ್ತಿ. ಆದರೆ, ಅಡುಗೆಮನೆಯಲ್ಲಿರುವ ಕೆಲವೊಂದು ಸಾಮಗ್ರಿಗಳು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ನಮ್ಮ ದೇಹದ ಮೇಲೆ ಜಾದೂವನ್ನೇ ಮಾಡಬಲ್ಲವು. ಅದರಲ್ಲೂ ನಾಲಿಗೆಗೆ ಕಹಿ ರುಚಿ ನೀಡುವ ಮೆಂತೆ ದೇಹಕ್ಕೆ ಸಿಹಿ ಅನುಭವವನ್ನೇ ನೀಡುತ್ತದೆ. ಮೆಂತೆಯಿಂದ ಏನೆಲ್ಲ ಪ್ರಯೋಜನಗಳಿವೆ ನೋಡೋಣ ಬನ್ನಿ.
ತ್ವಚೆಯ ಕಾಂತಿ ಹೆಚ್ಚಿಸುತ್ತದೆ: ಮೆಂತೆಯಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ಚರ್ಮಕ್ಕೆ ಕಾಂತಿಯನ್ನೊದಗಿಸುತ್ತದೆ. ಮೆಂತೆಯನ್ನು ನೀವು ಫೇಸಿಯಲ್ ಸ್ಕ್ರಬ್ ಆಗಿ ಕೂಡ ಬಳಸಬಹುದು. ರಾತ್ರಿ ಮೆಂತೆಯನ್ನು ನೀರಿನಲ್ಲಿ ನೆನೆಹಾಕಿ. ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಬಳಿಕ ತೊಳೆಯಿರಿ. ಒಣ ತ್ವಚೆಯಿರುವವರು ಈ ಮಿಶ್ರಣಕ್ಕೆ ಮೊಸರು ಹಾಗೂ ಜೇನುತುಪ್ಪವನ್ನು ಬೆರೆಸಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
undefined
ತಲೆಹೊಟ್ಟಿಗೆ ರಾಮಬಾಣ : ಕೂದಲಿನ ಆರೋಗ್ಯವರ್ಧನೆಗೆ ಕೂಡ ಮೆಂತೆ ಅತ್ಯುತ್ತಮ ಔಷಧ. ರಾತ್ರಿ ಮೆಂತೆಯನ್ನು ನೆನೆ ಹಾಕಿ. ಬೆಳಗ್ಗೆ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ಮೊಸರು ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಹೊಟ್ಟೆನ ಸಮಸ್ಯೆ ನಿವಾರಣೆಯಾಗುವ ಜೊತೆಗೆ ಕೂದಲುದುರುವುದು ಕಡಿಮೆಯಾಗುತ್ತದೆ.
ಮುಟ್ಟಿನ ಹೊಟ್ಟೆ ನೋವು ನಿವಾರಕ: ಮುಟ್ಟಿನ ಸಂದರ್ಭದಲ್ಲಿ ಕಾಡುವ ಹೊಟ್ಟೆನೋವಿಗೆ ಮೆಂತೆ ಕಾಫಿ ಅತ್ಯುತ್ತಮ ಮದ್ದು. ಎರಡು ಚಮಚ ಮೆಂತೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಕಾಲು ಲೋಟ ಅಕ್ಕಿಯನ್ನು ಕೂಡ ಹುರಿದುಕೊಳ್ಳಿ. ಈಗ ಇವೆರಡನ್ನು ಒಟ್ಟಿಗೆ ಮಿಕ್ಸಿಯಲ್ಲಿ ಪುಡಿ ಮಾಡಿ (ನೀರು ಹಾಕಬಾರದು). ಈ ಪೌಡರ್ ಅನ್ನು ಡಬ್ಬದಲ್ಲಿ ಹಾಕಿಟ್ಟುಕೊಂಡರೆ ಕೆಡುವುದಿಲ್ಲ, ತಿಂಗಳುಗಳ ಕಾಲ ಬಳಸಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಈ ಪೌಡರ್ ಸೇರಿಸಿ ಚೆನ್ನಾಗಿ ಕುದಿಸಬೇಕು. ಆ ಬಳಿಕ ಒಂದು ಲೋಟ ಹಾಲು ಸೇರಿಸಿ, ಸ್ವಲ್ಪ ಹೊತ್ತು ಕುದಿಸಿ ಕೆಳಗಿಳಿಸಿ. ಇದಕ್ಕೆ ಬೆಲ್ಲ ಸೇರಿಸಿ ಕುಡಿಯಿರಿ. ಇದು ಬೆನ್ನುನೋವನ್ನು ಕೂಡ ಕಡಿಮೆ ಮಾಡುತ್ತದೆ. ಬಾಣಂತಿಯರು ಇದನ್ನು ಕುಡಿದರೆ ಎದೆಹಾಲು ಹೆಚ್ಚುತ್ತದೆ. ಅಷ್ಟೇ ಅಲ್ಲ, 15 ದಿನಗಳ ಕಾಲ ಈ ಕಾಫಿಯನ್ನು ಪ್ರತಿನಿತ್ಯ ಕುಡಿದು ನೋಡಿ. ನಿಮ್ಮ ಚರ್ಮದ ಕಾಂತಿ ಹೆಚ್ಚಿರುವುದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.
ಕಾಂತಿಯುತ ಕೂದಲ ಮಂತ್ರ ಕಿಚನ್‌ನಲ್ಲಿದೆ!
ಜೀರ್ಣಕ್ರಿಯೆಗೆ ಸಹಕಾರಿ: ಮೆಂತ್ಯೆ ಜೀರ್ಣಕ್ರಿಯೆಯನ್ನು ಉತ್ತಮಪಡಿಸುವ ಜೊತೆಗೆ ಕೊಲೆಸ್ಟ್ರಾಲ್ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುತ್ತದೆ. ಮೆಂತೆಯನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಹೇಗೆಲ್ಲ ಬಳಸಬಹುದು ಗೊತ್ತಾ?
ಮೆಂತೆ ದೋಸೆ: ಒಂದು ಲೋಟ ಅಕ್ಕಿ ಹಾಗೂ ಒಂದು ಚಮಚ ಮೆಂತೆಯನ್ನು 8 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಕಾಯಿ ತುರಿ ಸೇರಿಸಿ ಇವೆರಡನ್ನೂ ರುಬ್ಬಿಕೊಳ್ಳಬೇಕು. ರುಬ್ಬುವಾಗ ಬೇಕಿದ್ದರೆ ಸ್ವಲ್ಪ ಅವಲಕ್ಕಿಯನ್ನೂ ಸೇರಿಸಬಹುದು. ಈ ಹಿಟ್ಟನ್ನು 8-9 ಗಂಟೆಗಳ ಕಾಲ ಮುಚ್ಚಿಡಿ. ಆ ಬಳಿಕ ಇದಕ್ಕೆ ಸಿಹಿ ರುಚಿ ಬರುವಷ್ಟು ಬೆಲ್ಲ ಸೇರಿಸಿ. ಸ್ವಲ್ಪ ಉಪ್ಪು ಹಾಕಿ ದೋಸೆ ಮಾಡಿ. ಮೆಂತೆ ದೋಸೆಯನ್ನು ತುಪ್ಪದ ಜೊತೆಗೆ ಸವಿದರೆ ರುಚಿ ಇನ್ನೂ ಚೆನ್ನಾಗಿರುತ್ತದೆ. ಮಕ್ಕಳು ಕೂಡ ಈ ದೋಸವನ್ನು ಇಷ್ಟಪಟ್ಟು ತಿನ್ನುತ್ತಾರೆ. ಸಿಹಿ ಇಷ್ಟಪಡದವರು ಬೆಲ್ಲ ಹಾಕದೆ ದೋಸೆ ಮಾಡಿ ಚಟ್ಟಿ ಜೊತೆ ಸವಿಯಬಹುದು.
ಹಾರ್ಮೋನ್ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್
ಮೆಂತೆ ಗಂಜಿ: ಕರಾವಳಿ ಭಾಗದಲ್ಲಿ ಬಾಣಂತಿಯರಿಗೆ ಮೆಂತೆ ಗಂಜಿಯನ್ನು ತಯಾರಿಸಿ ಕೊಡುತ್ತಾರೆ. ಇದು ಬೆನ್ನುನೋವನ್ನು ತಗ್ಗಿಸುವ ಜೊತೆಗೆ ಎದೆಹಾಲನ್ನು ಹೆಚ್ಚಿಸುತ್ತದೆ. ಒಂದು ಚಮಚ ಮೆಂತೆಯನ್ನು ಕಾಯಿ ತುರಿ ಜೊತೆಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಲೋಟ ಅಕ್ಕಿಯನ್ನು ಕುಕ್ಕರ್ನಲ್ಲಿ ಒಂದು ಸೀಟಿ ಕೂಗಿಸಿ ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಸೌಟಿನಿಂದ ಕದಡುತ್ತ ಇರಬೇಕು. ಕುದಿಯಲು ಪ್ರಾರಂಭಿಸಿದ ಬಳಿಕ ಇದಕ್ಕೆ ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ ಕೆಳಗಿಳಿಸಿ. ತುಪ್ಪದೊಂದಿಗೆ ಇದನ್ನು ಸೇವಿಸಬೇಕು.