Eye Health : ಕಣ್ಣಿನ ಕೆಳ ಭಾಗ ಊದಿಕೊಳ್ಳೋದೇಕೆ?

By Suvarna NewsFirst Published Aug 19, 2022, 3:47 PM IST
Highlights

ನಮ್ಮ ದೇಹದ ಅತಿ ಸೂಕ್ಷ್ಮ ಅಂಗ ಕಣ್ಣು. ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ಬೇಕು. ಕಣ್ಣಿನಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೆ ಅದನ್ನು ನಿರ್ಲಕ್ಷ್ಯ ಮಾಡದೆ, ಅದಕ್ಕೆ ಮನೆ ಮದ್ದು ಮಾಡದೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. 
 

ಕಣ್ಣಿನಲ್ಲಿ ಸಣ್ಣ ಧೂಳು ಹೋದ್ರೂ ನೀರು ತುಂಬಿಕೊಳ್ಳುತ್ತದೆ. ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ನಾವು ಕಿರಿಕಿರಿ ಅನುಭವಿಸುತ್ತೇವೆ. ಕಣ್ಣಿನಲ್ಲೂ ಅನೇಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಣ್ಣುಗಳ ಕೆಳ ಭಾಗದ ಚರ್ಮ  ಊದಿಕೊಳ್ಳುವುದು ಇದರಲ್ಲಿ ಒಂದು. ಇದು ಸಾಮಾನ್ಯವಲ್ಲ. ಈ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಪೆರಿಯರ್ಬಿಟಲ್ ಎಡಿಮಾ ಎಂದು ಕರೆಯುತ್ತಾರೆ. ಕಣ್ಣುಗಳ ಅಡಿಯಲ್ಲಿ ಊತಕ್ಕೆ ಹಲವು ಕಾರಣಗಳಿರುತ್ತವೆ. ಕಣ್ಣುಗಳ ಕೆಳಗೆ ಕಂಡುಬರುವ ಊತವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಮಯ ಕಳೆದಂತೆ ಊತದ ಜೊತೆಗೆ ನೋವು ಹೆಚ್ಚಾಗಬಹುದು ಮತ್ತು ದೃಷ್ಟಿಗೆ ಸಮಸ್ಯೆಯಾಗಬಹುದು. ಕಣ್ಣಿನ ಕೆಳ ಭಾಗದ ಚರ್ಮ ಊದಲು ಕಾರಣವೇನು ಹಾಗೆ ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.  

ಕಣ್ಣಿ (Eye) ನ ಕೆಳ ಭಾಗದ ಚರ್ಮ (Skin) ಊದಲು ಕಾರಣಗಳು : ಕಣ್ಣಿನಲ್ಲಿ ಸೋಂಕು (Infection) ಕಾಣಿಸಿಕೊಂಡಿದ್ದರೆ ಕಣ್ಣಿನ ಕೆಳ ಭಾಗದ ಚರ್ಮ ಊದಿಕೊಳ್ಳುತ್ತದೆ. ಈ  ಸೋಂಕು ಒಂದು ಕಣ್ಣಿನಿಂದ ಇನ್ನೊಂದಕ್ಕೆ ಹರಡಬಹುದು. ಕಣ್ಣುಗಳ ಸುತ್ತಲೂ ದ್ರವವು ಶೇಖರಣೆಯಾದರೆ, ಇದು ಕಣ್ಣಿನ ಊದುವಿಕೆ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದಲೂ ಕಣ್ಣಿನ ಕೆಳ ಭಾಗ ಊದುತ್ತದೆ ಎಂದು ತಜ್ಞರು ಹೇಳ್ತಾರೆ. 
ಮಾಲಿನ್ಯ ಅಥವಾ ಧೂಳಿನ ಅಲರ್ಜಿಯಿಂದ ಕಣ್ಣಿನ ಅಡಿಯಲ್ಲಿ ಊತ ಕಾಣಿಸಿಕೊಳ್ಳುವುದಿದೆ. ನಿದ್ರಾಹೀನತೆ ಅಥವಾ ಸರಿಯಾಗಿ ನಿದ್ರೆ ಮಾಡದಿರುವುದು ಕೂಡ ಕಣ್ಣಿನ ಕೆಳ ಭಾಗದ ಊತಕ್ಕೆ ಕಾರಣವಾಗಿರುತ್ತದೆ. 
ಅತಿಯಾದ ಅಳುವಿನಿಂದಲೂ ಕಣ್ಣುಗಳ ಕೆಳಗೆ ಊತ ಉಂಟಾಗುತ್ತದೆ.ವಯಸ್ಸಾದಂತೆ, ಕಣ್ಣುಗಳ ಅಂಗಾಂಶಗಳು ದುರ್ಬಲಗೊಳ್ಳುತ್ತವೆ ಮತ್ತು ಕೊಬ್ಬು ಕಣ್ಣು ರೆಪ್ಪೆಗಳಿಗೆ ಕಡಿಮೆ ಪ್ರಮಾಣದಲ್ಲಿ ಚಲಿಸುತ್ತದೆ. ಇದು ಕಣ್ಣಿನ ಕೆಳ ಭಾಗದ ಊದುವಿಕೆಗೆ ಕಾರಣವಾಗುತ್ತದೆ.  

ಕಣ್ಣಿನ ಕೆಳ ಭಾಗದಲ್ಲಿ ಕಾಣಿಸುವ ಊತ ತಡೆಯಲು ಸಲಹೆ :  

1. ಉಪ್ಪನ್ನು ಕಡಿಮೆ ಮಾಡಿ : ಕಣ್ಣುಗಳ ಅಡಿಯಲ್ಲಿ ಊತದ ಸಮಸ್ಯೆಯನ್ನು ತಪ್ಪಿಸಲು ನೀವು ಬಯಸಿದರೆ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಕಣ್ಣಿನ ಕೆಳಗೆ ಊತದ  ಸಮಸ್ಯೆಯನ್ನು ತಪ್ಪಿಸಲು, ಧೂಮಪಾನ ಮತ್ತು ಮದ್ಯಪಾನವನ್ನು ಸಹ ಮಾಡಬಾರದು. ಈ ಹಾನಿಕಾರಕ ವಸ್ತುಗಳನ್ನು ಸೇವಿಸುವುದರಿಂದ ಕಣ್ಣುಗಳ ಕೆಳಗೆ ಊತ ಕಾಣಬಹುದು. ಇದಲ್ಲದೆ  ಕಣ್ಣುಗಳ ಅಡಿಯಲ್ಲಿ ಊತದ ಸಮಸ್ಯೆಯನ್ನು ತಪ್ಪಿಸಲು ನೀವು ಸಾಕಷ್ಟು ನಿದ್ರೆ ಮಾಡಬೇಕಾದ ಅಗತ್ಯವಿದೆ.

2. ಮೇಕಪ್ ತಪ್ಪಿಸಿ : ಅನೇಕರಿಗೆ ಕಣ್ಣಿಗೆ ಮೇಕಪ್ ಮಾಡಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಣ್ಣಿಗೆ ಕಾಜಲ್ ಹಚ್ಚಿದಾಗ ಕಣ್ಣು ಊದಿಕೊಳ್ಳುವುದಿದೆ. ಹಾಗಾಗಿ ಆದಷ್ಟು ಕಡಿಮೆ ಮೇಕಪ್ ಬಳಸಿ. ಒಂದ್ವೇಳೆ ಅನಿವಾರ್ಯ ಎಂದಾದ್ರೆ ಗುಣಮಟ್ಟದ ಉತ್ಪನ್ನವನ್ನು ಬಳಸಿ. ಮತ್ತೆ ಮಲಗುವ ಮೊದಲು ಹಾಕಿದ ಮೇಕಪ್ ತೆಗೆಯಲು ಮರೆಯಬೇಡಿ.

Kids Health : ಏಕಾಗ್ರತೆ ಹೆಚ್ಚಲು ಮಕ್ಕಳು ಮಾಡ್ಬೇಕು ಈ ಯೋಗ  

3. ಕಣ್ಣುಗಳನ್ನು ಸ್ವಚ್ಛವಾಗಿಡಿ : ಸೋಂಕಿನಿಂದ ಕಣ್ಣನ್ನು ರಕ್ಷಿಸುವುದು ಬಹಳ ಮುಖ್ಯ. ಕಣ್ಣ ತುಂಬಾ ಸೂಕ್ಷ್ಮವಾದ ಹಾಗೂ ಅಮೂಲ್ಯವಾದ ಅಂಗವಾಗಿದೆ. ಹಾಗಾಗಿ ಅದರ ಆರೈಕೆಯನ್ನು ಹೆಚ್ಚು ಮಾಡ್ಬೇಕು. ಕಣ್ಣನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ದಿನಕ್ಕೆ ಕನಿಷ್ಠ 20 ರಿಂದ 30 ಬಾರಿ ಕಣ್ಣುಗಳ ಮೇಲೆ ನೀರು ಚಿಮುಕಿಸಬೇಕು. ಇದರಿಂದ ಕಣ್ಣುಗಳು ಸ್ವಚ್ಛವಾಗಿರುತ್ತವೆ. ಹೊರಹೋಗುವ ಮೊದಲು ಸನ್ ಗ್ಲಾಸ್ ಬಳಸಿ. ಇದಲ್ಲದೆ ನಿಮ್ಮ ಕೊಳಕು ಕೈಗಳಿಂದ ಕಣ್ಣುಗಳನ್ನು ಮುಟದಟಬೇಡಿ.  ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. 

HEALTH FOOD ವಿಟಮಿನ್ ಡಿ ಕೊರತೆ ನೀಗಿಸಲು ಸಸ್ಯಹಾರಿಗಳಿಗೆ ಈ ಫುಡ್ ಬೆಸ್ಟ್

ಕಣ್ಣಿನಲ್ಲಿ ಊತ ಕಾಣಿಸಿಕೊಂಡ್ರೆ ಏನು ಮಾಡ್ಬೇಕು ? : ಕಣ್ಣುಗಳ ಕೆಳಗೆ ಊತ ಕಾಣಿಸಿಕೊಂಡ್ರೆ ಯಾವುದೇ ಕಾರಣಕ್ಕೂ ಮನೆ ಮದ್ದಿನ ಮೊರೆ ಹೋಗ್ಬೇಡಿ. ಮೊದಲೇ ಹೇಳಿದಂತೆ ಕಣ್ಣು ಸೂಕ್ಷ್ಮ ಅಂಗ. ಹಾಗಾಗಿ ವೈದ್ಯರ ಬಳಿ ಹೋಗಿ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರು ನೀಡುವ ಔಷಧಿಯನ್ನು ಮಾತ್ರ ಬಳಕೆ ಮಾಡಿ.

click me!