
ಯೋಗ ನಿಮ್ಮ ಇಡೀ ಜೀವನವನ್ನು ಬದಲಾಯಿಸುತ್ತದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಯೋಗ ಈಗಿರುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮಕ್ಕಳಿರುವಾಗ್ಲೇ ಯೋಗ ಅಭ್ಯಾಸ ಶುರು ಮಾಡಿದ್ರೆ ಮುಂದಿನ ಭವಿಷ್ಯ ಆರೋಗ್ಯಕರವಾಗಿರುತ್ತದೆ. ಪ್ರತಿ ಮಗುವೂ ಯೋಗವನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿರಬೇಕೆಂದ್ರೆ ಯೋಗ ಮಾಡ್ಲೇಬೇಕು. ಯೋಗವು ದೈಹಿಕ ನಮ್ಯತೆಯನ್ನು ಹೆಚ್ಚಿಸುತ್ತದೆ. ಮನಸ್ಸು ಮತ್ತು ಸ್ನಾಯುಗಳ ನಡುವೆ ಉತ್ತಮ ಸಂಪರ್ಕವನ್ನು ಸ್ಥಾಪಿಸಲು ಯೋಗವು ಸಹಾಯ ಮಾಡುತ್ತದೆ. ಅನೇಕ ಬಾರಿ ಮಕ್ಕಳಿಗೆ ಆಸನ ಮಾಡಲು ಬರುವುದಿಲ್ಲ. ಉದಾಹರಣೆಗೆ ವೃಕ್ಷಾಸನ ಮಾಡಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂದಿಟ್ಟುಕೊಳ್ಳಿ, ಕಾಲುಗಳನ್ನು ಹಾಗೂ ಕೈಗಳನ್ನು ಬ್ಯಾಲೆನ್ಸ್ ಮಾಡಲು ಅವರು ಪ್ರಯತ್ನಿಸ್ತಾರೆ. ಅವರ ಗಮನ ಸಂಪೂರ್ಣವಾಗಿ ಆಸನದ ಮೇಲಿರುತ್ತದೆ. ಇದು ಮಾನಸಿಕ ಮತ್ತು ದೈಹಿಕ ಸಮತೋಲನ ತರುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಇದು ಡಿಜಿಟಲ್ (Digital) ಯುಗ. ಮಕ್ಕಳು ಇಡೀ ದಿನ ಮೊಬೈಲ್ (Mobile), ಟಿವಿ ವೀಕ್ಷಣೆಯಲ್ಲಿ ಸಮಯ ಹಾಳು ಮಾಡ್ತಿದ್ದಾರೆ. ಇದು ಅವರ ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯ (Health) ದ ಮೇಲೆ ಪರಿಣಾಮ ಬೀರ್ತಿದೆ. ತೂಕ ಹೆಚ್ಚಾಗುವ ಜೊತೆಗೆ ಏಕಾಗ್ರತೆ, ನೆನಪಿನ ಶಕ್ತಿಯನ್ನು ಮಕ್ಕಳು ಕಳೆದುಕೊಳ್ತಿದ್ದಾರೆ. ತಾಳ್ಮೆ ಕಡಿಮೆಯಾಗ್ತಿದೆ. ಕೋಪ ಹೆಚ್ಚಾಗ್ತಿದೆ. ಗೆಜೆಟ್ ಬಿಟ್ಟು ಮಕ್ಕಳ ಮನಸ್ಸು ಬೇರೆಡೆಗೆ ಹೊರಳಬೇಕು, ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಬೇಕೆಂದ್ರೆ ಯೋಗ ಬೆಸ್ಟ್. ಇಂದು ನಾವು ಮಕ್ಕಳು ದಿನ ನಿತ್ಯ ಮಾಡಬೇಕಾದ ಯೋಗಗಳ ಬಗ್ಗೆ ಮಾಹಿತಿ ನೀಡ್ತೇವೆ.
ಭ್ರಮರಿ ಪ್ರಾಣಾಯಾಮ : ಭಮ್ರರಿ ಪ್ರಾಣಾಯಾಮ ಮನಸ್ಸಿನ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಕಣ್ಣು, ಕಿವಿಯನ್ನು ಬೆರಳಿನ ಸಹಾಯದಿಂದ ಮುಚ್ಚಿ ಮ್ ಉಚ್ಚಾರ ಮಾಡಲಾಗುತ್ತದೆ. ಇದು ಜೇನಿನ ಝೇಂಕಾರದಂತೆ ಹೊರಗೆ ಬರುತ್ತದೆ. ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸ್ಮರಣೆ ಶಕ್ತಿ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.
ಶಿತ್ಕಾರಿ ಪ್ರಾಣಾಯಾಮ : ಶಿತ್ಕಾರಿ ಪ್ರಾಣಾಯಾಮದಲ್ಲಿ ಮೇಲಿನ ಹಾಗೂ ಕೆಳಗಿನ ಹಲ್ಲನ್ನು ಜೋಡಿಸಿ, ಹಲ್ಲಿನ ಮೂಲಕ ಉಸಿರನ್ನು ತೆಗೆದುಕೊಂಡು ಮೂಗಿನ ಮೂಲಕ ಉಸಿರು ಬಿಡುವುದಾಗಿದೆ. ಶಿತ್ಕಾರಿ, ಹಸಿವು ಮತ್ತು ಬಾಯಾರಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬಾಯಿ, ಗಂಟಲು ಮತ್ತು ಮೂಗು ಸಮಸ್ಯೆಗೆ ಇದು ಪರಿಣಾಮ ಬೀರುತ್ತದೆ.
ಭಸ್ತ್ರಿಕಾ ಪ್ರಾಣಾಯಾಮ : ಭಸ್ತ್ರಿಕಾ ಕೈ ಮತ್ತು ಕಣ್ಣಿನ ಸಮನ್ವಯವನ್ನು ಸುಧಾರಿಸುತ್ತದೆ. ಕಾಲುಗಳು ಮತ್ತು ಬೆನ್ನನ್ನು ಹಿಗ್ಗಿಸುತ್ತದೆ. ಭುಜಗಳನ್ನು ಸಡಿಲಗೊಳಿಸುತ್ತದೆ. ಮಾನಸಿಕ ಮತ್ತು ದೈಹಿಕ ಕ್ಷೇಮತೆಯನ್ನು ಹೆಚ್ಚಿಸುತ್ತದೆ.
HEALTH TIPS: ಊಟ ಮಾಡಿದ ನಂತರ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ
ತಾಡಾಸನ : ತಾಡಾಸನ ಮಾಡುವುದು ಕೂಡ ಸುಲಭ. ಇದು ಮಗುವಿನ ಸ್ನಾಯುಗಳನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ಉದ್ದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದ್ರಲ್ಲಿ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ.
ಅಧೋಮುಖ ಶ್ವಾನಾಸನ : ಅಧೋಮುಖ ಶ್ವಾನಾಸನವನ್ನು ಮಕ್ಕಳು ಪ್ರತಿನಿತ್ಯ ಮಾಡಿದ್ರೆ ಸಾಕಷ್ಟು ಲಾಭ ಪಡೆಯಬಹುದು. ಕಾಲು, ತೋಳು ಮತ್ತು ಭುಜದ ಸ್ನಾಯುಗಳು ಇದರಿಂದ ಬಲಗೊಳ್ಳುತ್ತವೆ. ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಅಧೋಮುಖ ಶ್ವಾನಾಸನ ಸಹಕಾರಿ. ಕಾರ್ಪಲ್ ಟನಲ್ ಸಿಂಡ್ರೋಮ ತಡೆಯಲು ಸಹಾಯ ಮಾಡುತ್ತದೆ. ಕೆಳ ಭಾಗದ ಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ.
Teenage Love: ಸೂಕ್ಷ್ಮವಾದ ವಿಷ್ಯ, ಪೋಷಕರು ಹುಷಾರಾಗರಿಬೇಕಷ್ಟೇ!
ಈ ಯೋಗ ಮಕ್ಕಳಿಗೆ ಪ್ರಯೋಜನಕಾರಿ. ಆದ್ರೆ ತರಬೇತಿಯಿಲ್ಲದೆ ಉಸಿರಾಟದ ಆಸನಗಳನ್ನು ಮಕ್ಕಳು ಮಾಡ್ಬಾರದು. ಸೂಕ್ತ ತರಬೇತಿ ಪಡೆದ ನಂತ್ರ ಅಭ್ಯಾಸ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.