
ಸಮಯದ ಹಿಂದೆ ಓಡ್ತಿರುವ ಮನುಷ್ಯ ಹೈರಾಣಾಗಿದ್ದಾನೆ. ಮಾನಸಿಕ ನೆಮ್ಮದಿ (Mental peace) ಕಳೆದ್ಕೊಂಡಿದ್ದಾನೆ. ವಿಶ್ವದಾದ್ಯಂತ ಜನರಿಗೆ ಮಾನಸಿಕ ಸಮಸ್ಯೆ ವೇಗವಾಗಿ ಹೆಚ್ಚಾಗ್ತಿದೆ. ಭಾರತೀಯ ಜನಸಂಖ್ಯೆಯಲ್ಲಿ ಬಹುತೇಕರು ಒತ್ತಡ-ಆತಂಕಕ್ಕೆ ಬಲಿಯಾಗ್ತಿದ್ದಾರೆ. ಅಧ್ಯಯನ ಒಂದ್ರ ಪ್ರಕಾರ ಶೇಕಡಾ 77ರಷ್ಟು ಭಾರತೀಯರು ನಿಯಮಿತವಾಗಿ ಒತ್ತಡದ ಕನಿಷ್ಠ ಒಂದು ಲಕ್ಷಣವನ್ನು ಅನುಭವಿಸ್ತಿದ್ದಾರೆ. ಒತ್ತಡ ದೈನಂದಿನ ಜೀವನದ ಮೇಲೆ ಪರಿಣಾಮ ಬೀರ್ತಿದೆ. ಇದರ ಅಪಾಯ ಯುವ ಜನತೆಯಲ್ಲಿ ವಿಶೇಷವಾಗಿ ಜನರೇಷನ್ Z ನಲ್ಲಿ ಹೆಚ್ಚಾಗಿ ಕಂಡು ಬರ್ತಿದೆ. ಸದ್ದಿಲ್ಲದೆ ನಮ್ಮನ್ನು ಕಾಡುವ ಸಮಸ್ಯೆ ಒತ್ತಡ. ಇದ್ರಿಂದ ಬಳಲುವ ವ್ಯಕ್ತಿಗೆ ಕೆಲ್ಸದ ಮೇಲೆ ಗಮನಹರಿಸೋಕೆ ಸಾಧ್ಯವಾಗೋದಿಲ್ಲ. ಇಡೀ ದಿನ ಕಿರಿಕಿರಿ ಆತನನ್ನು ಕಾಡುತ್ತೆ. ಮಾನಸಿಕ ಒತ್ತಡಕ್ಕೆ ನಾನು ಬಲಿ ಆಗ್ತಿದ್ದೇನೆ ಅನ್ನೋದನ್ನೇ ಮನುಷ್ಯ ಒಪ್ಪಿಕೊಳ್ಳೋದಿಲ್ಲ. ಸೂಕ್ತ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ಸಿಗ್ದೆ ಹೋದ್ರೆ ದೀರ್ಘಾವಧಿಯಲ್ಲಿ ಇದ್ರಿಂದ ಖಿನ್ನತೆ ಅಪಾಯ ಹೆಚ್ಚಾಗುತ್ತೆ.
ಒತ್ತಡ (stress) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಈಗ ಗುಡ್ ನ್ಯೂಸ್ ಇದೆ. ಈ ಸಮಸ್ಯೆಯಿಂದ ನಿಮ್ಮನ್ನು ಉಳಿಸಲು ಪರಿಣಾಮಕಾರಿ ಪರಿಹಾರವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಒತ್ತಡದ ಕಾರ್ಟಿಸೋಲ್ ಗೆ ತುಳಸಿ ಮದ್ದು ಅಂತ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ತುಳಸಿ ಬಳಕೆಯಿಂದ ಕಾರ್ಟಿಸೋಲ್ (cortisol) ಅನ್ನು ಶೇಕಡಾ 36 ರಷ್ಟು ಕಡಿಮೆ ಮಾಡಬಹುದು ಅಂತ ಸಂಶೋಧನೆ ಹೇಳಿದೆ.
ತುಳಸಿಯಿಂದ ಆರೋಗ್ಯ : ಸದ್ಯ ನಡೆದ ಸಂಶೋಧನಾ ವರದಿ ಪ್ರಕಾರ, ಹಿಂದೂ ಧರ್ಮದಲ್ಲಿ ಪವಿತ್ರ ಎಂದು ಪೂಜಿಸಲ್ಪಡುವ ತುಳಸಿ ರಸ ಸೇವನೆ ಮಾಡೋದ್ರಿಂದ ಕಾರ್ಟಿಸೋಲ್ ಶೇಕಡಾ 36 ರಷ್ಟು ಕಡಿಮೆ ಆಗುತ್ತದೆ. ಇದ್ರಿಂದ ಒತ್ತಡ ಮತ್ತು ಆತಂಕ ಕಡಿಮೆ ಆಗುತ್ತದೆ. ತುಳಸಿ ನೈಸರ್ಗಿಕ ಔಷಧಿಯಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತುಳಸಿಯನ್ನು ಸೇವಿಸಿದರೆ, ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುವುದು ಸುಲಭ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದ್ರಿಂದ ಒತ್ತಡದ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳ ಮೇಲೆ 8 ವಾರಗಳ ಕಾಲ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ, ತುಳಸಿ ರಸ, ಕಾರ್ಟಿಸೋಲ್ ಮಟ್ಟವನ್ನು ಶೇಕಡಾ 36 ರಷ್ಟು ಕಡಿಮೆ ಮಾಡುತ್ತದೆ ಎಂಬುದು ಪತ್ತೆಯಾಗಿದೆ. ತುಳಸಿ ರಸ ಸೇವಿಸುವುದರಿಂದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನು ಹೇಗೆ ಬಳಸುವುದು? : ಪ್ರತಿಯೊಬ್ಬರ ಮನೆಯಲ್ಲಿ ಸಿಗುವ ಪರಿಣಾಮಕಾರಿ ಔಷಧ ಇದು. ತುಳಸಿ ಎಲೆಗಳನ್ನು ಸೇವಿಸುವುದು, ಚಹಾ ತಯಾರಿಸುವುದು ಅಥವಾ ಬೇರೆ ಆಹಾರಕ್ಕೆ ತುಳಸಿ ಬೆರೆಸಿ ಸೇವನೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಅನೇಕ ತುಳಸಿ ಪೂರಕಗಳು ಲಭ್ಯವಿದೆ. ಅದರ ನಿಗದಿತ ಡೋಸೇಜ್ ಸೇವನೆ ಪ್ರಯೋಜಕಾರಿ. ಪ್ರತಿದಿನ ತುಳಸಿ ಎಲೆಗಳನ್ನು ಹಾಗೆ ತಿನ್ನುವುದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸಾಂಕ್ರಾಮಿಕ ರೋಗಗಳ ಅಪಾಯ ಕಡಿಮೆ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.