
ಮಗು (Child) ವಿನ ತೊದಲ ಮಾತು (Talk ) ಕೇಳುವುದು ಚಂದ. ಮೊದಲ ಬಾರಿ ಅಮ್ಮ,ಅಪ್ಪ ಎಂದಾಗ ಪಾಲಕರ ಖುಷಿ ಹೇಳತೀರದು. ಪ್ರತಿಯೊಬ್ಬ ಪಾಲಕರೂ ಈ ಕ್ಷಣಕ್ಕೆ ಕಾಯ್ತಿರುತ್ತಾರೆ. ಪ್ರತಿ ಮಗು ತನ್ನ ಕುಟುಂಬ (Family) ದ ಜನರು ಮಾತನಾಡುವ ಭಾಷೆ (Language)ಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ನಿಧಾನವಾಗಿ ಮಾತನಾಡಲು ಪ್ರಯತ್ನಿಸುತ್ತದೆ. ಕೆಲವು ಮಕ್ಕಳು ಬೇಗನೆ ಮಾತನಾಡಲು ಕಲಿಯುತ್ತಾರೆ. ಕೆಲವು ಮಕ್ಕಳು ಮಾತು ಕಲಿಯುವುದು ನಿಧಾನ. ತಡವಾಗಿ ಮಾತನಾಡುವುದು ಸಾಮಾನ್ಯವಾಗಿದ್ದರೂ, ಮಗು ತನ್ನ ಗೆಳೆಯರಿಗಿಂತ ಹಿಂದುಳಿದಾಗ ಪಾಲಕರಲ್ಲಿ ಆತಂಕ ಮೂಡುತ್ತದೆ.
ಮಗು ಸಾಮಾನ್ಯವಾಗಿ ಒಂದು ವರ್ಷ ಅಥವಾ ಎರಡು ವರ್ಷವಾಗುವ ಹೊತ್ತಿಗೆ ಕನಿಷ್ಠ ಎರಡು ಪದಗಳನ್ನು ಮಾತನಾಡಲು ಕಲಿತಿರುತ್ತದೆ. ಮಕ್ಕಳು ತಮ್ಮ ಅಗತ್ಯಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಭಾಷೆಯ ಬೆಳವಣಿಗೆಯು 4 ರಿಂದ 5 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಆಗ ಮಕ್ಕಳು ತಮ್ಮ ದೃಷ್ಟಿಕೋನವನ್ನು ಇತರರಿಗೆ ವಿವರಿಸಲು ಮತ್ತು ಇತರರ ವಿಷ್ಯವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಮಾತೃಭಾಷೆ ಜೊತೆ ಬೇರೆ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಾರೆ. ಕೆಲವು ಮಕ್ಕಳು ವಯಸ್ಸಿಗೆ ಸರಿಯಾಗಿ ಮಾತನಾಡುವುದಿಲ್ಲ. ವರ್ಷ ಮೂರು ದಾಟಿದ್ರೂ ಎರಡು ಪದಗಳ ಶಬ್ದವನ್ನು ಮಾತನಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಮಾತನಾಡಲು ಮಕ್ಕಳಿಗೆ ಏಕೆ ವಿಳಂಬವಾಗ್ತಿದೆ ಮತ್ತು ಅದಕ್ಕಾಗಿ ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಪೋಷಕರಿಗೆ ಬಹಳ ಮುಖ್ಯ.
ಮಗುವಿಗೆ ಮಾತು ತಡವಾಗಲು ಕಾರಣ
ಸೂಕ್ತ ಪರಿಸರ : ಮಗು ಕಲಿಕೆಗೆ ಪರಿಸರ ಬಹಳ ಮಹತ್ವ ಪಡೆಯುತ್ತದೆ. ಮಗು ತಡವಾಗಿ ಮಾತನಾಡಲು ಮೊದಲ ಕಾರಣವೆಂದರೆ ಸರಿಯಾದ ಮಾನ್ಯತೆ ಸಿಗದಿರುವುದು. ಪೋಷಕರಾದವರು ಅರ್ಹ ಪರಿಸರ ನೀಡದೆ ಹೋದಲ್ಲಿ ಈ ಸಮಸ್ಯೆ ಕಾಡುತ್ತದೆ. ಮಗುವು ವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ಒಂದೇ ಮಗುವಾಗಿದ್ದರೆ, ಒಬ್ಬಂಟಿಯಾಗಿ ಮನೆಯಲ್ಲಿಯೇ ಇರುತ್ತಿದ್ದರೆ, ಮಾತನಾಡಲು ಯಾರೂ ಇಲ್ಲದ ಸ್ಥಳವಾಗಿದ್ದರೆ ತಡವಾಗಿ ಮಾತನಾಡುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ನರದ ಸಮಸ್ಯೆ : ನರದ ಬೆಳವಣಿಗೆಯಲ್ಲಿನ ನ್ಯೂನ್ಯತೆಯಿಂದಲೂ ಮಗು ಮಾತನಾಡುವುದು ವಿಳಂಬವಾಗುತ್ತದೆ. ಆಟಿಸಂ, ಡೌನ್ ಸಿಂಡ್ರೋಮ್ ನಂತಹ ನರಗಳ ಬೆಳವಣಿಗೆಯ ಅಸ್ವಸ್ಥತೆಗಳಿದ್ದರೂ ಸಹ, ಮಗುವಿಗೆ ಮಾತನಾಡಲು ಸಮಸ್ಯೆಯಾಗುತ್ತದೆ. ಮಗು ಏಕೆ ಮಾತನಾಡುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಪಾಲಕರು ತಜ್ಞರನ್ನು ಭೇಟಿಯಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಟಿವಿ,ಮೊಬೈಲ್ ವೀಕ್ಷಣೆ : ಅನೇಕ ಸಂಶೋಧನೆಗಳ ಪ್ರಕಾರ, ಮಗು ಚಿಕ್ಕ ವಯಸ್ಸಿನಲ್ಲಿಯೇ ಟಿವಿ,ಮೊಬೈಲ್ ವೀಕ್ಷಣೆಯನ್ನು ಹೆಚ್ಚು ಮಾಡಿದ್ದರೂ ಈ ಸಮಸ್ಯೆ ಕಾಡುತ್ತದೆ. ಮಗುವಿಗೆ ಭಾಷೆಯ ಮೇಲೆ ಹಿಡಿತ ಸಿಗದೆ ಹೋದ ಸಂದರ್ಭದಲ್ಲಿ ಅಥವಾ ಇನ್ನೂ ಮಗು ಮಾತನಾಡಲು ಶುರು ಮಾಡದೆ ಹೋದ ಸಂದರ್ಭದಲ್ಲಿ ಟಿವಿ,ಮೊಬೈಲ್ ಹೆಚ್ಚು ವೀಕ್ಷಣೆ ಮಾಡ್ತಿದ್ದರೆ ಮಗು ಅದರಲ್ಲಿ ಕಳೆದು ಹೋಗುತ್ತದೆ. ಮಾತನಾಡುವ ಪ್ರಯತ್ನವನ್ನು ಮಗು ಮಾಡುವುದಿಲ್ಲ.
HEALTH TIPS : ನೀರಲ್ಲಿ ಮಲ ತೇಲೋದೂ ಕ್ಯಾನ್ಸರ್ ಲಕ್ಷಣವೇ?
ಮಗು ಮಾತನಾಡಲು ವಿಳಂಬ ಮಾಡಿದ್ರೆ ಏನು ಮಾಡ್ಬೇಕು ? : ಮಗುವಿನೊಂದಿಗೆ ಸಂಪರ್ಕ : ಮಗುವಿನೊಂದಿಗೆ ಮಾತನಾಡುತ್ತಲೇ ಇರಿ. ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಅವರದೇ ಭಾಷೆಯಲ್ಲಿ ಕೇಳಿ. ವಸ್ತುಗಳನ್ನು ತೋರಿಸಿ ಮತ್ತು ಅದು ಏನು ಎಂದು ಕೇಳಿ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತಾಗ ಮಗು ಬೇಗನೆ ಮಾತನಾಡಲು ಕಲಿಯುತ್ತದೆ. ನೀವು ಮಗುವಿನೊಂದಿಗೆ ಎಷ್ಟು ಹೆಚ್ಚು ಮಾತನಾಡುತ್ತೀರೋ, ಅವರು ಹೆಚ್ಚು ಭಾಷೆಯನ್ನು ತಿಳಿದುಕೊಳ್ಳುತ್ತಾರೆ ಮತ್ತು ಶೀಘ್ರದಲ್ಲೇ ಅವರು ಮಾತನಾಡಲು ಕಲಿಯುತ್ತಾರೆ.
ಮಗುವಿನೊಂದಿಗೆ ಪುಸ್ತಕಗಳನ್ನು ಓದಿ : ನಿಮ್ಮ ಮಗುವಿಗೆ ಎರಡು ವರ್ಷದ ನಂತರವೂ ಸರಿಯಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ನೀವು ಭಾವಿಸಿದರೆ, ಅವರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ. ಅವರೊಂದಿಗೆ ಪುಸ್ತಕಗಳನ್ನು ಓದಿ, ಕಥೆಗಳನ್ನು ಹೇಳಿ. ಹೀಗೆ ಮಾಡುವುದರಿಂದ ಅವನು ಬೇಗನೆ ಮಾತನಾಡಲು ಕಲಿಯುತ್ತಾರೆ.
Health Tips: ವಾಯುಮಾಲಿನ್ಯದಿಂದ ಧೂಮಪಾನದಷ್ಟೇ ಅಪಾಯ ! ಆರೋಗ್ಯವಾಗಿರಲು ಹೀಗೆ ಮಾಡಿ
ಮಗುವಿಗೆ ಬೆರೆಯಲು ಕಲಿಸಿ : ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ.ಬೇರೆ ಮಕ್ಕಳ ಜೊತೆ ಮಕ್ಕಳು ಬೆರೆಯಲು ಅವಕಾಶ ಮಾಡಿ. ಮಕ್ಕಳು ಮಾತನಾಡುವುದನ್ನು ನೋಡಿದಾಗ ಇವರ ಭಾಷಾ ಕೌಶಲ್ಯ ವೃದ್ಧಿಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.