ವಿಟಮಿನ್ ಡಿ, ತೂಕ ಹೆಚ್ಚಾಗುವುದಕ್ಕೆ ಏನಾದ್ರೂ ಲಿಂಕ್ ಇದೆಯಾ?

By Suvarna News  |  First Published Dec 22, 2022, 3:55 PM IST

ಆಹಾರ ಸೇವನೆ ಅತಿಯಾಗಿದೆ, ವ್ಯಾಯಾಮ ಮಾಡಲು ಸಾಧ್ಯವಾಗ್ತಿಲ್ಲ ಹಾಗಾಗಿ ನನ್ನ ತೂಕ ಹೆಚ್ಚಾಗ್ತಿದೆ ಎಂದು ನಾವು ನೀವೆಲ್ಲ ಹೇಳ್ತಿರುತ್ತೇವೆ. ಬರೀ ಆಹಾರ ಮತ್ತು ವ್ಯಾಯಾಮ ಮಾತ್ರವಲ್ಲ ವಿಟಮಿನ್ ಕೊರತೆ ಕೂಡ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.
 


ಇಂದಿನ ಕಾಲದಲ್ಲಿ ಕೊಬ್ಬಿಲ್ಲ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಅನಾರೋಗ್ಯಕರ ಕೊಬ್ಬಿನಾಂಶ ದೇಹ ಸೇರಿರುತ್ತದೆ. ತೂಕ ಪ್ರತಿ ದಿನ ಹೆಚ್ಚಾಗ್ತಿರುತ್ತದೆ. ದಾರಿ ತಪ್ಪಿದ ಜೀವನಶೈಲಿ, ಆಹಾರ ಸೇವನೆಯಲ್ಲಿ ಅಸಡ್ಡೆ, ಅತಿಯಾದ ಒತ್ತಡ ಮತ್ತು ವ್ಯಾಯಾಮ ಮಾಡದಿರುವುದು ಮುಖ್ಯವಾಗಿ ಬೊಜ್ಜಿಗೆ ಕಾರಣವಾಗಿರುತ್ತದೆ. ಆದ್ರೆ ಇವು ಮಾತ್ರ ನಿಮ್ಮ ತೂಕ ಹೆಚ್ಚಾಗಲು ಕಾರಣವಲ್ಲ. ಕೆಲ ಬಾರಿ ವಿಟಮಿನ್ ಡಿ ಕೊರತೆಯಿಂದ ಕೂಡ ನಿಮ್ಮ ತೂಕ ಹೆಚ್ಚಾಗುತ್ತದೆ.  

ವಿಟಮಿನ್ ಡಿ (Vitamin D) ನಮ್ಮ ದೇಹಕ್ಕೆ ಅತ್ಯಗತ್ಯ. ಇದು ನಮ್ಮ ದೇಹಕ್ಕೆ ಅನೇಕ ಪೋಷಕಾಂಶ (Nutrient) ಗಳನ್ನು ಒದಗಿಸುತ್ತದೆ. ಅನೇಕ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಬೊಜ್ಜಿಗೂ, ವಿಟಮಿನ್ ಡಿಗೂ  ಸಂಬಂಧವಿದೆ ಅಂದ್ರೆ ನೀವು ನಂಬ್ಲೇಬೇಕು. ತೂಕ (Weight ) ಹೆಚ್ಚಿರುವ ಜನರದಲ್ಲಿ ವಿಟಮಿನ್ ಡಿ ಕಡಿಮೆಯಿತ್ತು ಎಂದು ಅನೇಕ ಅಧ್ಯಯನಗಳಿಂದ ಪತ್ತೆ ಮಾಡಲಾಗಿದೆ. ನಾವಿಂದು ವಿಟಮಿನ್ ಡಿ ಹಾಗೂ ಬೊಜ್ಜಿನ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೆವೆ.

Tap to resize

Latest Videos

ವಿಟಮಿನ್ ಡಿ ನೇರವಾಗಿ ನಿಮ್ಮ ತೂಕದ ಜೊತೆ ಸಂಬಂಧ ಹೊಂದಿದೆ. ದೇಹದಲ್ಲಿ ವಿಟಮಿನ್ ಡಿ ಮಟ್ಟ ಹೆಚ್ಚಾಗ್ತಿದ್ದಂತೆ ನಿಮ್ಮ ತೂಕ ಕಡಿಮೆಯಾಗುತ್ತದೆ. ವಿಟಮಿನ್ ಡಿ ದೇಹದಲ್ಲಿ ಕೊಬ್ಬಿನ ಕೋಶಗಳ ಶೇಖರಣೆಯನ್ನು ತಡೆಯುತ್ತದೆ. ದೇಹದಲ್ಲಿ ವಿಟಮಿನ್ ಡಿ ಮಟ್ಟ ಹೆಚ್ಚಿದ್ದರೆ ಅದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮತ್ತು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದಾಗ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. ವಿಟಮಿನ್ ಡಿ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. 

ಹೇರ್ ಕೇರ್ ಪ್ರಾಡಕ್ಟ್‌ನಲ್ಲಿರೋ ಈ ಕೆಮಿಕಲ್ ಕ್ಯಾನ್ಸರ್‌ಗೂ ಕಾರಣವಾಗುತ್ತೆ !

ಕ್ಯಾಲ್ಸಿಯಂ ಪ್ರಮಾಣದಲ್ಲಿ ಹೆಚ್ಚಳ : ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಾಗಿರಲು ವಿಟಮಿನ್ ಡಿ ಅಗತ್ಯ.  ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಪ್ರಮಾಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಮೂಳೆ ಬಲಗೊಳಿಸುತ್ತೆ ವಿಟಮಿನ್ ಡಿ : ಮೂಳೆಗಳನ್ನು ಬಲಗೊಳಿಸುವ ಸಾಮರ್ಥ್ಯವನ್ನು ವಿಟಮಿನ್ ಡಿ ಹೊಂದಿದೆ. ಹಲ್ಲುಗಳು ಮತ್ತು ಸ್ನಾಯುಗಳ ಬಲಕ್ಕೆ ವಿಟಮಿನ್ ಡಿ ಅತ್ಯಗತ್ಯ. ವಿಟಮಿನ್ ಡಿ  ಕೊರತೆಯಿಂದಾಗಿ ಮಕ್ಕಳಲ್ಲಿ ರಿಕೆಟ್ಸ್ ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

ಕ್ಯಾನ್ಸರ್ ದೂರವಿಡುತ್ತೆ ವಿಟಮಿನ್ ಡಿ : ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧ ಹೋರಾಡಲು ನಮ್ಮ ದೇಹವನ್ನು ಬಲಪಡಿಯ್ತದೆ. ಅನೇಕ ಅಧ್ಯಯನಗಳಿಂದ ಈ ವಿಷ್ಯ ಬಹಿರಂಗಗೊಂಡಿದೆ. ನಮ್ಮ ದೇಹಕ್ಕೆ ಅಗತ್ಯವಾದಷ್ಟು ವಿಟಮಿನ್ ಡಿ ಸಿಕ್ಕರೆ ಇದು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ.

ಸೋಂಕು ನಿಯಂತ್ರಣ : ವಿಟಮಿನ್ ಡಿ ಸೋಂಕನ್ನು ನಿಯಂತ್ರಿಸುತ್ತದೆ.  ಉರಿಯೂತ ಕಡಿಮೆ ಮಾಡುವುದಲ್ಲದೆ  ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಮಹಿಳೆಯರು ಪುರುಷರಷ್ಟೇ ನಿದ್ದೆ ಮಾಡಿದ್ರೆ ಸಾಕಾಗಲ್ಲ, ಒಂಚೂರು ಜಾಸ್ತೀನೆ ಬೇಕು

ವಿಟಮಿನ್ ಡಿ ಕೊರತೆಯನ್ನು ಹೀಗೆ ಪತ್ತೆ ಮಾಡಿ : ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿದೆ ಎಂಬುದನ್ನು ನೀವು ಕೆಲ ಲಕ್ಷಣದಿಂದ ಪತ್ತೆ ಮಾಡಬಹುದು. ನಿಮಗೆ ಅತಿಯಾದ ಆಯಾಸವಾಗ್ತಿದ್ದರೆ, ದೇಹದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ಸ್ನಾಯು ನೋವಿನಿಂದ ನೀವು ಬಳಲುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿದೆ ಎಂದೇ ಅರ್ಥ. ಇಷ್ಟೇ ಅಲ್ಲ ವಿಟಮಿನ್ ಡಿ ಕೊರತೆಯಿರುವ ವ್ಯಕ್ತಿಗೆ ಸರಿಯಾಗಿ ಹಸಿವಾಗುವುದಿಲ್ಲ. ಆಗಾಗ ಆತ ಅನಾರೋಗ್ಯಕ್ಕೆ ಒಳಗಾಗ್ತಿರುತ್ತಾನೆ. ಕೂದಲು ಅತಿಯಾಗಿ ಉದುರುವುದು ಮಾತ್ರವಲ್ಲದೆ ನಿದ್ರೆ ಸರಿಯಾಗಿ ಬರುವುದಿಲ್ಲ. ಇಂಥ ಸಮಸ್ಯೆ ನಿಮಗೂ ಕಾಣಿಸಿಕೊಂಡ್ರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ವಿಟಮಿನ್ ಡಿ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೇಕೆಂದ್ರೆ ನೀವು ದಿನದಲ್ಲಿ ಅರ್ಧಗಂಟೆಯಾದ್ರೂ ಸೂರ್ಯನ ಕಿರಣಕ್ಕೆ ನಿಮ್ಮ ಮೈ ಒಡ್ಡಬೇಕಾಗುತ್ತದೆ. ಬೆಳಗಿನ ಬಿಸಿಲು ಇಲ್ಲವೆ ಸಂಜೆ ಸೂರ್ಯ ಮುಳುಗುವ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಸೂರ್ಯನ ಕಿರಣ ತಾಗಿದ್ರೆ ವಿಟಮಿನ್ ಡಿ ದೊಡ್ಡ ಪ್ರಮಾಣದಲ್ಲಿ ನಿಮ್ಮ ದೇಹಕ್ಕೆ ಸಿಗುತ್ತದೆ. ಇದಲ್ಲದೆ ಕೆಲ ಆಹಾರ ಸೇವನೆ ಮೂಲಕ ನೀವು ವಿಟಮಿನ್ ಡಿ ಪಡೆಯಬೇಕಾಗುತ್ತದೆ. 

click me!