Sleeping: 12 ವರ್ಷದಿಂದ ದಿನಕ್ಕೆ 30 ನಿಮಿಷ ಮಾತ್ರ ನಿದ್ರೆ ಮಾಡೋ ಈತನ ಸಾಧನೆ ಏನು ನೋಡಿ!

Published : Sep 05, 2024, 08:51 PM ISTUpdated : Sep 06, 2024, 08:36 AM IST
Sleeping: 12 ವರ್ಷದಿಂದ ದಿನಕ್ಕೆ 30 ನಿಮಿಷ ಮಾತ್ರ ನಿದ್ರೆ ಮಾಡೋ ಈತನ ಸಾಧನೆ ಏನು ನೋಡಿ!

ಸಾರಾಂಶ

12 ವರ್ಷಗಳಿಂದ ಈತ ರಾತ್ರಿ ನಿದ್ರೆ ಮಾಡುವುದು ದಿನಕ್ಕೆ 30 ನಿಮಿಷ ಮಾತ್ರ. ಆದರೆ ನೀವು ಎಂದೂ ಇಂಥ ಸಾಹಸ ಮಾಡಲು ಹೋಗಬೇಡಿ!

ಸಾಮಾನ್ಯ ಮನುಷ್ಯರಿಗೆ ದಿನಕ್ಕೆ ಎಂಟು ಗಂಟೆಗಳ ನಿದ್ರೆ ಅತೀ ಅಗತ್ಯ ಅಂತ ತಜ್ಞರು ಹೇಳುತ್ತಾರೆ. ಮೂರು, ನಾಲ್ಕು ಗಂಟೆ ನಿದ್ರೆ ಮಾಡಿ ಇದೇ ಸಾಕು ಅನ್ನುವವರೂ ಇದ್ದಾರೆ. ಆದರೆ ದಿನಕ್ಕೆ ಬರೀ ಅರ್ಧ ಗಂಟೆ? ಅದೂ ಒಂದು ದಿನವಲ್ಲ, ವರ್ಷಗಟ್ಟಲೆ? 12 ವರ್ಷ ಸತತವಾಗಿ? ಊಹಿಸಲೂ ಸಾಧ್ಯವಿಲ್ಲ ಅಲ್ಲವೇ? ಆದರೆ ಜಪಾನಿನ ಒಬ್ಬ ವ್ಯಕ್ತಿ ಹೀಗೆ ಮಾಡಿ ಜೈಸಿದ್ದಾನೆ. ತಾನು ಮಾಡಿರುವುದು ಮಾತ್ರವಲ್ಲ, ಇನ್ನಿತರ ಸಾವಿರಾರು ಮಂದಿಯನ್ನೂ ತನ್ನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತಿದ್ದಾನೆ.

ಈತನ ಹೆಸರು ಡೈಸುಕೆ ಹೋರಿ. ವಯಸ್ಸು 40. ಈತನ ಉದ್ದೇಶ ಇಷ್ಟೆ- ಇರುವ ಒಂದೇ ಜೀವನದ ಅವಧಿಯನ್ನು ಡಬಲ್‌ ಮಾಡುವುದು! ಹೌದು, ಇದಕ್ಕಾಗಿ ಆತ ಕನಿಷ್ಠ ನಿದ್ರೆಗಾಗಿ ತಮ್ಮ ಮೆದುಳು ಮತ್ತು ದೇಹವನ್ನು ಟ್ಯೂನ್‌ ಮಾಡಿಕೊಂಡಿದ್ದಾರೆ. ಈತ ಪಶ್ಚಿಮ ಜಪಾನ್‌ನ ಹ್ಯೊಗೊ ಪ್ರಾಂತ್ಯದ ನಿವಾಸಿ. ಹೋರಿ ದಿನಕ್ಕೆ ಕೇವಲ 30ರಿಂದ 45 ನಿಮಿಷಗಳವರೆಗೆ ನಿದ್ರೆಯನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅಷ್ಟು ಮಾಡಿಯೂ ತನ್ನ ದೈನಂದಿನ ಕೆಲಸದ ದಕ್ಷತೆಯನ್ನು ಸುಧಾರಿಸಿಕೊಂಡಿದ್ದಾನೆ.

ಹೋರಿ ಬ್ಯುಸಿನೆಸ್‌ಮನ್.‌ ಕೆಲಸದಲ್ಲಿ ಗಮನವನ್ನು ಕಾಪಾಡಿಕೊಳ್ಳಲು ದೀರ್ಘ ನಿದ್ರೆಗಿಂತಲೂ ಉತ್ತಮ-ಗುಣಮಟ್ಟದ ನಿದ್ರೆಯು ಹೆಚ್ಚು ಮುಖ್ಯ ಎಂಬುದು  ಈತನ ವಾದ. “ನೀವು ಆಹಾರ ಸೇವಿಸುವ ಒಂದು ಗಂಟೆ ಮೊದಲು ಕ್ರೀಡೆಯಲ್ಲಿ ಭಾಗವಹಿಸುವುದು ಅಥವಾ ಕಾಫಿ ಸೇವಿಸುವುದು ಮಾಡಿದರೆ, ತೂಕಡಿಕೆಯನ್ನು ದೂರವಿಡಬಹುದು. ತಮ್ಮ ಕೆಲಸದಲ್ಲಿ ನಿರಂತರ ಗಮನ ಇಡಬೇಕಾದ ಜನ ದೀರ್ಘ ನಿದ್ರೆಗಿಂತಲೂ ಉತ್ತಮ ಗುಣಮಟ್ಟದ ನಿದ್ರೆಗೆ ಆದ್ಯತೆ ಕೊಡುತ್ತಾರೆ. ಉದಾಹರಣೆಗೆ, ವೈದ್ಯರು ಮತ್ತು ಅಗ್ನಿಶಾಮಕ ದಳದವರು ಕಡಿಮೆ ವಿಶ್ರಾಂತಿ ಅವಧಿಯನ್ನು ಹೊಂದಿದ್ದಾರೆ. ಆದರೆ ಹೆಚ್ಚಿನ ದಕ್ಷತೆಯನ್ನು ಕಾಪಾಡಿಕೊಳ್ಳುತ್ತಾರೆ" ಎಂದು ಹೋರಿ ಹೇಳುತ್ತಾನೆ.

ಹೋರಿಯ ಮಾತುಗಳು ನಿಜವೇ ಎಂದು ಜಪಾನ್‌ನ ಯೊಮಿಯುರಿ ಟಿವಿಯವರು ʼವಿಲ್ ಯು ಗೋ ವಿತ್ ಮಿʼ ಎಂಬ ಶೀರ್ಷಿಕೆಯ ರಿಯಾಲಿಟಿ ಶೋನಲ್ಲಿ ಮೂರು ದಿನಗಳ ಕಾಲ ಅವನನ್ನು ಇಟ್ಟುಕೊಂಡು ಪರಿಶೀಲಿಸಿದರು. ಕಾರ್ಯಕ್ರಮದ ಪ್ರಕಾರ ಹೋರಿ ಒಮ್ಮೆ ಕೇವಲ 26 ನಿಮಿಷಗಳ ಕಾಲ ಮಲಗಿದ ಮತ್ತು ಉತ್ಸಾಹದಿಂದಲೇ ಎಚ್ಚರಗೊಂಡ. ಉಪಹಾರದ ನಂತರ ಕೆಲಸಕ್ಕೆ ಹೊರಟ ಮತ್ತು ಜಿಮ್‌ಗೆ ಹೋದ.

ಖಾಲಿ ಕುಳಿತುಕೊಳ್ಳುವುದೇ ಧೂಮಪಾನ ಮಾಡಿದಷ್ಟು ದೇಹಕ್ಕೆ ಹಾನಿ!

2016ರಲ್ಲಿ ಈ ನಿಟ್ಟಿನಲ್ಲಿಯೇ ಕೆಲಸ ಮಾಡುವ ʼಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ʼ ಅನ್ನು ಸ್ಥಾಪಿಸಿದ. ಇದು ಕಡಿಮೆ ನಿದ್ರೆ ಮಾಡುವವರನ್ನು ಟ್ರೇನ್‌ ಮಾಡುವ ಸಂಸ್ಥೆ. ತರಬೇತಿಯ ನಂತರ ಎಂಟು ಗಂಟೆಗಳಿಂದ ಕೇವಲ 90 ನಿಮಿಷಗಳವರೆಗೆ ತಮ್ಮ ನಿದ್ರೆಯನ್ನು ಕಡಿತಗೊಳಿಸಿದವರು ಇದ್ದಾರಂತೆ. ಮತ್ತು ನಾಲ್ಕು ವರ್ಷಗಳ ಕಾಲ ಅದನ್ನು ಅನುಸರಿಸಿದವರೂ ಇದ್ದಾರೆ. ಇದರಿಂದ ಚರ್ಮ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ.

ಸಂಗೀತ, ಮೆಕ್ಯಾನಿಕಲ್ ವಿನ್ಯಾಸ ಮತ್ತು ಚಿತ್ರಕಲೆಗಳನ್ನು ಹೋರಿ ಇಷ್ಟಪಡುತ್ತಾನೆ. ಈತ 2,000 ವಿದ್ಯಾರ್ಥಿಗಳಿಗೆ ಅಲ್ಟ್ರಾ-ಶಾರ್ಟ್ ಸ್ಲೀಪರ್ಸ್ ಆಗಲು ತರಬೇತಿ ನೀಡಿದ್ದಾನಂತೆ. ಆದರೆ ನೀವು ಎಂದೂ ಇಂಥ ಸಾಹಸ ಮಾಡಲು ಹೋಗಬೇಡಿ ಎನ್ನುತ್ತಾರೆ ತಜ್ಞರು. ಅತ್ಯಂತ ಕಡಿಮೆ ನಿದ್ರೆ ದೀರ್ಘಕಾಲದ ನಿದ್ರಾಹೀನತೆಗೆ ಕಾರಣವಾಗಬಹುದು, ಇದು ಮೆಮೊರಿ, ದುರ್ಬಲಗೊಂಡ ರೋಗನಿರೋಧಕ ಶಕ್ತಿ, ಮನಸ್ಥಿತಿ ಅಸ್ವಸ್ಥತೆಗಳು ಮತ್ತು ಹೃದಯದ ಸಮಸ್ಯೆಗಳನ್ನು ಉಂಟುಮಾಡಬಹುದು. ವ್ಯಕ್ತಿ ತೀವ್ರ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಬದುಕಬೇಕಾಗಬಹುದು.

ಆ್ಯಪಲ್ ವಾಚ್‌ ಅಲರ್ಟ್‌ನಿಂದ ಉಳಿಯಿತು ತುಂಬು ಗರ್ಭಿಣಿ ಜೊತೆ ಮಗುವಿನ ಪ್ರಾಣ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ