ಬಾಯಿ ಹುಣ್ಣಿಗೆ ಬೈ ಬೈ ಹೇಳೋ ಮದ್ದುಗಳು ಇಲ್ಲಿವೆ ನೋಡಿ…

By Suvarna NewsFirst Published Mar 24, 2021, 4:09 PM IST
Highlights

ಬಾಯಿ ಹುಣ್ಣು ಎಷ್ಟು ನೋವು ನೀಡುತ್ತೆ ಅನ್ನೋದು ಅನುಭವಿಸಿದವರಿಗಷ್ಟೇ ಗೊತ್ತು. ಹೊಟ್ಟೆ ಚುರುಗುಟ್ಟುತ್ತಿದ್ರೂ ಬಾಯಿಯಲ್ಲಿರೋ ತುತ್ತನ್ನು ನುಂಗೋಕ್ಕಾಗದಂತಹ ಸ್ಥಿತಿ.ಆದ್ರೆ ಮನೆಯಲ್ಲೇ ಸಿಗೋ ಕೆಲವು ವಸ್ತುಗಳು ಬಾಯಿ ಹುಣ್ಣಿನ ಸಮಸ್ಯೆಗೆ ಪರಿಹಾರ ನೀಡಬಲ್ಲವು. 

ಬಾಯಿ ಹುಣ್ಣು ಅಥವಾ ಮೌತ್ ಅಲ್ಸರ್ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡೋ ಆರೋಗ್ಯ ಸಮಸ್ಯೆಗಳಲ್ಲೊಂದು. ದೇಹದ ಉಷ್ಣತೆ ಹೆಚ್ಚಿದಾಗ ಇದು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾರ್ಮೋನ್ ಬದಲಾವಣೆ,ಕೆಲವೊಂದು ಔಷಧಗಳ ಸೇವನೆ,ವಿಟಮಿನ್ ಬಿ 12 ಕೊರತೆ ಹಾಗೂ ವೈರಸ್ ಸೋಂಕಿನಿಂದ ಕೂಡ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತೆ. ಬಾಯಿ ಹುಣ್ಣು ನೋವಿನಿಂದ ಕೂಡಿರೋ ಕಾರಣ ಆಹಾರ ಸೇವನೆ ಕಷ್ಟವಾಗುತ್ತೆ.ಕೆಲವೊಮ್ಮೆನೀರು ಕುಡಿಯಲು ಕೂಡ ಸಾಧ್ಯವಾಗೋದಿಲ್ಲ.ಕೆಲವೊಂದು ಮನೆಮದ್ದುಗಳ ಮೂಲಕ ಬಾಯಿಹುಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಬೇಸಿಗೆಯಲ್ಲಿ ಬೆಂಡಿಳಿಸೋ ಕಾಯಿಲೆಗಳು ಇವೇ ನೋಡಿ!

ಉಪ್ಪು ನೀರು
ಉಪ್ಪಿಗೆ ಸೋಂಕುನಿವಾರಕ ಗುಣವಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಒಂದು ಗ್ಲಾಸ್ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ ಅದ್ರಿಂದ ಬಾಯಿ ಮುಕ್ಕಳಿಸಬೇಕು. ಪ್ರತಿದಿನ ೨-೩ ಬಾರಿ ಈ ರೀತಿ ಮಾಡೋದ್ರಿಂದ ಬಾಯಿಹುಣ್ಣಿನ ನೋವು ಶಮನವಾಗೋ ಜೊತೆ ಕೆಲವೇ ದಿನಗಳಲ್ಲಿ ಹುಣ್ಣು ವಾಸಿಯಾಗುತ್ತೆ.  

ಜೇನು
ಜೇನು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬಾಯಿ ಹುಣ್ಣಿಗೆ ಕೂಡ ಇದೊಂದು ಉತ್ತಮ ಮದ್ದು. ಹುಣ್ಣಿರೋ ಜಾಗಕ್ಕೆ ಹನಿಯನ್ನು ಹಚ್ಚಬೇಕು. ಆದ್ರೆ ಬಾಯಿಯೊಳಗಡೆ ಆಗಿರೋ ಕಾರಣ ಜೇನು ಹುಣ್ಣಿನ ಮೇಲೆ ಜಾಸ್ತಿ ಹೊತ್ತು ಇರೋದಿಲ್ಲ. ಲಾಲಾರಸದ ಜೊತೆ ಹೊಟ್ಟೆ ಸೇರುತ್ತೆ. ಆದಕಾರಣ ಗಂಟೆಗೊಮ್ಮೆ ಜೇನನ್ನು ಹುಣ್ಣಿನ ಮೇಲೆ ಲೇಪಿಸುತ್ತಲಿರಬೇಕು. ಜೇನಿನಲ್ಲಿ ಆಂಟಿ ಮೈಕ್ರೋಬೈಯಲ್ ಗುಣವಿದ್ದು,ಯಾವುದೇ ಗಾಯವನ್ನು ಬೇಗ ವಾಸಿ ಮಾಡಬಲ್ಲದು. ಹೀಗಾಗಿ ಜೇನು ಹಚ್ಚೋದ್ರಿಂದ ಹುಣ್ಣು ಬೇಗ ಒಣಗುವ ಜೊತೆಗೆ ಆ ಜಾಗದಲ್ಲಿ ಸೋಂಕು ಮರುಕಳಿಸದಂತೆ ತಡೆಯುತ್ತದೆ. 

ಲೋಳೆಸರ
ಲೋಳೆಸರವನ್ನು ಹುಣ್ಣಿರೋ ಜಾಗಕ್ಕೆ ಹಚ್ಚೋದ್ರಿಂದ ಬೇಗ ವಾಸಿಯಾಗುತ್ತದೆ. ಇದು ನೋವನ್ನು ಕೂಡ ಕಡಿಮೆ ಮಾಡುತ್ತದೆ.

ಕಾಫಿ ,ಟೀ, ಜ್ಯೂಸ್‌ ಜೊತೆ ಔಷಧಿ ತೆಗೆದುಕೊಳ್ಳೋದು ಅಪಾಯ!

ತೆಂಗಿನೆಣ್ಣೆ
ತೆಂಗಿನೆಣ್ಣೆ ತಾಯಿ ಎದೆಹಾಲಿನಷ್ಟೇ ಪರಿಶುದ್ಧ ಎಂದು ಹೇಳಲಾಗುತ್ತೆ. ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನೊಳಗೊಂಡಿರೋ ಇದು ಬಾಯಿ ಹುಣ್ಣಿಗೂ ಪರಿಣಾಮಕಾರಿ ಔಷಧ. ಹುಣ್ಣಿರೋ ಜಾಗಕ್ಕೆ ತೆಂಗಿನೆಣ್ಣೆ ಲೇಪಿಸಬೇಕು. ರಾತ್ರಿ ಮಲಗೋ ಮುನ್ನ ಕೂಡ ಹುಣ್ಣಿರೋ ಜಾಗಕ್ಕೆ ತೆಂಗಿನೆಣ್ಣೆ ಹಚ್ಚಿ. ಜೇನಿನಂತೆ ತೆಂಗಿನೆಣ್ಣೆಯಲ್ಲಿ ಕೂಡ ಆಂಟಿಮೈಕ್ರೋಬೈಯಲ್ ಗುಣವಿದ್ದು, ಹುಣ್ಣು ಒಣಗಲು ಸಹಾಯ ಮಾಡುತ್ತೆ. ಇದು ಹುಣ್ಣಿನ ನೋವನ್ನು ಕೂಡ ಶಮನ ಮಾಡುತ್ತೆ.

ಎಳನೀರು
ಬೇಸಿಗೆಯಲ್ಲಿ ನಿತ್ಯ ಎಳನೀರು ಕುಡಿಯೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ದೇಹದ ಉಷ್ಣತೆ ಹೆಚ್ಚಳದಿಂದ ಬಾಯಿಯಲ್ಲಿ ಹುಣ್ಣುಗಳಾಗಿದ್ರೆ, ಎಳನೀರು ಕುಡಿಯೋದ್ರಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಎಳನೀರು ದೇಹದ ಅಧಿಕ ಉಷ್ಣತೆಯನ್ನು ಸಾಮಾನ್ಯ ಮಟ್ಟಕ್ಕಿಳಿಸುತ್ತದೆ. ವಿಟಮಿನ್ಸ್, ಮಿನರಲ್ಸ್, ಪೊಟ್ಯಾಷಿಯಂ, ಸೋಡಿಯಂ ಮುಂತಾದ ದೇಹಕ್ಕೆ ಅಗತ್ಯವಿರೋ ಪೌಷ್ಟಿಕಾಂಶಗಳು ಎಳನೀರಿನಲ್ಲಿ ಹೇರಳವಾಗಿವೆ. ಹೀಗಾಗಿ ಬಾಯಿಹುಣ್ಣು ಕಾಣಿಸಿಕೊಂಡಾಗ ೩-೪ ದಿನ ತಪ್ಪದೆ ಎಳನೀರು ಸೇವಿಸಿದ್ರೆ ಹುಣ್ಣು ಮಾಯವಾಗುತ್ತದೆ.  

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಜಜ್ಜಿ ಹುಣ್ಣಿನ ಮೇಲೆ ಹಚ್ಚಬೇಕು. ಕೆಲವೇ ನಿಮಿಷಗಳ ಕಾಲ ಇದನ್ನು ಇಟ್ಟುಕೊಂಡು ಆ ಬಳಿಕ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಉರಿಯ ಅನುಭವವಾದ್ರೂ ಬೆಳ್ಳುಳ್ಳಿಯಲ್ಲಿ ಸೋಂಕುನಿವಾರಕ ಗುಣವಿರೋ ಕಾರಣ ಹುಣ್ಣು ಬೇಗ ಗುಣವಾಗುತ್ತದೆ. ಹುಣ್ಣಿಗೆ ಕಾರಣವಾಗೋ ವೈರಸ್ ಅನ್ನು ಇದು ನಾಶಪಡಿಸುತ್ತೆ. ತುಂಬಾ ಉರಿಯೋ ಕಾರಣ ಮಕ್ಕಳಿಗೆ ಮಾತ್ರ ಇದನ್ನು ಬಳಸ್ಬೇಡಿ. ಪ್ರತಿದಿನ ೨ ಅಥವಾ ೩ ಬಾರಿ ಇದನ್ನು ಪುನಾರವರ್ತಿಸಿ. 

ಬೇಸಿಗೆಯಲ್ಲಿ ಕಾಡೋ ಕಣ್ಣಿನ ಉರಿ, ತುರಿಕೆಗೆ ಇಲ್ಲಿವೆ ಮನೆ ಮದ್ದು

ಅರಿಶಿಣ
ಅರಿಶಿಣದಲ್ಲಿ ಸೋಂಕುನಿವಾರಕ ಗುಣವಿರೋದು ಎಲ್ಲರಿಗೂ ತಿಳಿದಿದೆ. ಇದು ಬಾಯಿ ಹುಣ್ಣಿನ ನೋವು ಹಾಗೂ ಊತವನ್ನು ಕೂಡ ಕಡಿಮೆ ಮಾಡುತ್ತದೆ. ಅರಿಶಿಣಕ್ಕೆ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ, ಇದನ್ನು ಹುಣ್ಣಿರೋ ಭಾಗಕ್ಕೆ ಹಚ್ಚಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಪೇಸ್ಟನ್ನು ಹುಣ್ಣಿಗೆ ಹಚ್ಚಿ.ಕೆಲವು ನಿಮಿಷಗಳ ಬಳಿಕ ನೀರಿನಿಂದ ಬಾಯಿ ಮುಕ್ಕಳಿಸಿ.

ತುಪ್ಪ
ಬಾಯಿ ಹುಣ್ಣಿಗೆ ತುಪ್ಪ ಕೂಡ ಉತ್ತಮ ಮನೆಮದ್ದು. ತುಪ್ಪವನ್ನು ಹುಣ್ಣಿನ ಮೇಲೆ ಹಚ್ಚೋದ್ರಿಂದ ಊತ ಕಡಿಮೆಯಾಗುತ್ತೆ. ಶುದ್ಧ ತುಪ್ಪವನ್ನು ಕೈಬೆರಳಿನಲ್ಲಿ ಸ್ವಲ್ಪವೇ ತೆಗೆದುಕೊಂಡು ಹುಣ್ಣಿನ ಮೇಲೆ ಹಚ್ಚಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ಆ ಬಳಿಕ ನೀರಿನಿಂದ ಬಾಯಿ ಮುಕ್ಕಳಿಸಿ. ದಿನದಲ್ಲಿ ೨-೩ ಬಾರಿ ಇದನ್ನು ಪುನಾರವರ್ತಿಸಿದ್ರೆ ಹುಣ್ಣು ಬೇಗ ಗುಣವಾಗುತ್ತದೆ.

ಕಿತ್ತಳೆ ರಸ
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಬಾಯಿ ಹುಣ್ಣನ್ನು ಶಮನ ಮಾಡುತ್ತದೆ. ಬಾಯಿ ಹುಣ್ಣಿರೋವಾಗ ಕಿತ್ತಳೆ ಹಣ್ಣನ್ನು ನೇರವಾಗಿ ಸೇವಿಸೋದು ಕಷ್ಟವಾಗ್ಬಹುದು. ಹೀಗಾಗಿ ಪ್ರತಿದಿನ ೨ ಗ್ಲಾಸ್ ಕಿತ್ತಳೆ ಹಣ್ಣಿನ ರಸ ಕುಡಿಯಿರಿ. ವಿಟಮಿನ್ ಸಿ ಕೊರತೆಯಿಂದ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತೆ ಎಂದು ಕೆಲವು ಸಂಶೋಧನೆಗಳು ಕೂಡ ಹೇಳಿವೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಆ ಮೂಲಕ ಎಲ್ಲ ವಿಧದ ಸೋಂಕುಗಳು ಹಾಗೂ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ. 
 

click me!