ಮೂತ್ರ ವಿಸರ್ಜಿಸಲು ಟಾಯ್ಲೆಟ್ಗೆ ಹೋಗಬೇಕಲ್ಲಪ್ಪ ಎಂದು ಉದಾಸೀನ ತೋರುತ್ತ ಮುಂದೆ ಹಾಕೋ ಜಾಯಮಾನದವರು ಇದ್ರಿಂದ ಮುಂದಾಗೋ ಸಮಸ್ಯೆಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋದು ಅಗತ್ಯ.
ರಾತ್ರಿ ಗಾಢ ನಿದ್ರೆಯಲ್ಲಿರೋವಾಗ ಒಮ್ಮೆಲೇ ಎಚ್ಚರವಾಗುತ್ತದೆ. ಟಾಯ್ಲೆಟ್ಗೆ ಹೋಗ್ಬೇಕು ಅನಿಸುತ್ತೆ.ಆದ್ರೆ ಎದ್ದೇಳಲು ಉದಾಸೀನದ ಜೊತೆ ನಿದ್ರೆ ಮಂಪರು.ಹೀಗಾಗಿ ಹಾಸಿಗೆ ಬಿಟ್ಟೇಳದೆ ಮತ್ತೆ ನಿದ್ರೆಗೆ ಜಾರುತ್ತೇವೆ.ಈ ರೀತಿ ರಾತ್ರಿಯೆಲ್ಲ ಮೂತ್ರ ತಡೆದಿಟ್ಟುಕೊಂಡು ಬೆಳಗ್ಗೆ ಎದ್ದ ಬಳಿಕ ವಿಸರ್ಜಿಸೋ ಅಭ್ಯಾಸ ಅನೇಕರಿಗಿದೆ.ಹಾಗೆಯೇ ಮುಖ್ಯವಾದ ಮೀಟಿಂಗ್ನಲ್ಲಿರೋವಾಗ, ಪ್ರಯಾಣ ಮಾಡುತ್ತಿರೋವಾಗ ಅಥವಾ ರೆಸ್ಟ್ರೂಮ್ ಇಲ್ಲವೆನ್ನುವ ಸ್ಥಳಗಳಲ್ಲಿ ಮೂತ್ರ ತಡೆದಿಟ್ಟುಕೊಳ್ಳುತ್ತೇವೆ. ಈ ರೀತಿ ನಿರಂತರವಾಗಿ ಮೂತ್ರ ತಡೆದಿಟ್ಟುಕೊಳ್ಳೋದ್ರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗೋ ಸಾಧ್ಯತೆಯಿದೆ.ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಇಂಥ ಅಭ್ಯಾಸವೇ ಮೂಲವಾಗೋ ಸಾಧ್ಯತೆಯೂ ಇದೆ.
ಗಂಟಲು ಒಣಗುತ್ತಿದ್ಯಾ?
ಮೂತ್ರಕೋಶದ ಸಾಮರ್ಥ್ಯ ಎಷ್ಟು?
ಆರೋಗ್ಯವಂತ ವ್ಯಕ್ತಿಯ ಮೂತ್ರಕೋಶ 400-500 ಮಿ.ಲೀ. ಅಥವಾ ಎರಡು ಕಪ್ ಮೂತ್ರ ಹಿಡಿದಿಡಬಲ್ಲದು. ಆದ್ರೆ ಮೂತ್ರಕೋಶಕ್ಕೆ ಹಿಗ್ಗುವ ಸಾಮರ್ಥ್ಯವಿರೋ ಕಾರಣ ಇದಕ್ಕಿಂತಲೂ ಹೆಚ್ಚು ಮೂತ್ರ ಸಂಗ್ರಹವಾದರೂ ಹಿಡಿದಿಡಬಲ್ಲದು. ಹೀಗಾಗಿ ಮೂತ್ರವನ್ನು ಸ್ವಲ್ಪ ಸಮಯ ಹಿಡಿದಿಟ್ಟುಕೊಂಡ್ರೆ ಏನೂ ಸಮಸ್ಯೆಯಿಲ್ಲ.ಆದ್ರೆ ಪ್ರತಿದಿನ ಇದೇ ಅಭ್ಯಾಸ ರೂಢಿಸಿಕೊಂಡ್ರೆ ಮುಂದೆ ಸಮಸ್ಯೆಯಾಗಬಹುದು.
ದಿನದಲ್ಲಿ ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು?
ನಿರ್ದಿಷ್ಟವಾಗಿ ಇಷ್ಟೇ ಬಾರಿ ಎಂದು ಹೇಳೋದು ಕಷ್ಟ. ಇದು ವ್ಯಕ್ತಿಯ ವಯಸ್ಸು, ಆರೋಗ್ಯ, ಆತ ದಿನಕ್ಕೆ ಎಷ್ಟು ದ್ರಾವಾಹಾರ ಸೇವಿಸುತ್ತಾನೆ ಎಂಬುದನ್ನು ಅವಲಂಬಿಸಿದೆ. ಆರೋಗ್ಯವಂತ ವ್ಯಕ್ತಿ ದಿನಕ್ಕೆ 4-10 ಬಾರಿ ಮೂತ್ರ ವಿಸರ್ಜಿಸುತ್ತಾನೆ. ಹೀಗಾಗಿ ಸರಾಸರಿ ಆಧಾರದಲ್ಲಿ ಹೇಳೋದಾದ್ರೆ ದಿನದಲ್ಲಿ 6-8 ಬಾರಿ ಮೂತ್ರ ವಿಸರ್ಜನೆ ಸಹಜವೆಂದು ಪರಿಗಣಿಸಬಹುದು. ಪ್ರತಿ 3 ಗಂಟೆಗೊಮ್ಮೆ ಟಾಯ್ಲೆಟ್ಗೆ ಹೋಗಿ ಬರೋ ಅಭ್ಯಾಸ ಒಳ್ಳೆಯದು ಎನ್ನೋದು ವೈದ್ಯರ ಸಲಹೆ.
ದೀರ್ಘ ಕಾಲ ಮೂತ್ರ ಹಿಡಿದಿಟ್ಟುಕೊಂಡ್ರೆ ಏನಾಗುತ್ತೆ?
ಪ್ರತಿದಿನ ತುಂಬಾ ಸಮಯದ ತನಕ ಮೂತ್ರವನ್ನು ಹಿಡಿದಿಟ್ಟುಕೊಳ್ಳೋದ್ರಿಂದ ಮೂತ್ರಕೋಶಕ್ಕೆ ಗಂಭೀರ ಹಾನಿಯಾಗಬಹುದು. ಮೂತ್ರಕೋಶದ ಸ್ನಾಯುಗಳು ದುರ್ಬಲವಾಗೋ ಸಾಧ್ಯತೆಯೂ ಇದೆ. ನಿರಂತರವಾಗಿ ದೀರ್ಘ ಸಮಯದ ತನಕ ಮೂತ್ರ ಹಿಡಿದಿಟ್ಟುಕೊಳ್ಳೋದ್ರಿಂದ ಎದುರಾಗಬಹುದಾದ ಅಪಾಯಗಳು ಯಾವುವು?
-ಮೂತ್ರ ಸೋರಿಕೆ: ಮೂತ್ರವನ್ನು ತುಂಬಾ ಸಮಯ ಹಿಡಿದಿಟ್ಟುಕೊಳ್ಳೋದ್ರಿಂದ ಮೂತ್ರಕೋಶದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದ್ರಿಂದ ನಮ್ಮ ಅರಿವಿಗೆ ಬಾರದಂತೆ ಮೂತ್ರ ಸೋರಿಕೆಯಾಗುತ್ತದೆ.
-ಮೂತ್ರನಾಳ ಸೋಂಕು: ಮೂತ್ರವನ್ನು ನಿರಂತರವಾಗಿ ದೀರ್ಘಕಾಲ ಹಿಡಿದಿಟ್ಟುಕೊಳ್ಳೋದ್ರಿಂದ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಿ ಮೂತ್ರನಾಳದಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಅದ್ರಲ್ಲೂ ಈ ಹಿಂದೆ ಯುಟಿಐ ( ಮೂತ್ರನಾಳದ ಸೋಂಕು) ಸಮಸ್ಯೆ ಹೊಂದಿದ್ದರೆ ಅವರಿಗೆ ಸೋಂಕು ಕಾಣಿಸಿಕೊಳ್ಳೋ ಸಾಧ್ಯತೆ ಹೆಚ್ಚಿರುತ್ತೆ. ಮೂತ್ರ ವಿಸರ್ಜಿಸೋವಾಗ ತೀಕ್ಷ್ಣ ಉರಿ, ಮೂತ್ರದ ಬಣ್ಣದಲ್ಲಿ ಬದಲಾವಣೆ, ಕೆಟ್ಟ ವಾಸನೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡ್ರೆ ಸೋಂಕು ಉಂಟಾಗಿದೆ ಎಂದೇ ಅರ್ಥ.
-ಮೂತ್ರಕೋಶದ ಹಿಗ್ಗುವಿಕೆ: ದೀರ್ಘ ಸಮಯ ಮೂತ್ರ ಹಿಡಿದಿಟ್ಟುಕೊಳ್ಳೋದ್ರಿಂದ ಮೂತ್ರಕೋಶ ಹಿಗ್ಗುತ್ತದೆ. ಮೂತ್ರಕೋಶದ ಗಾತ್ರ ಹೆಚ್ಚೋದ್ರಿಂದ ಮೂತ್ರ ವಿಸರ್ಜಿಸೋವಾಗ ಸಮಸ್ಯೆ ಹಾಗೂ ಪದೇಪದೆ ಟಾಯ್ಲೆಟ್ಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಬಹುದು. ಅಲ್ಲದೆ, ತಿಳಿಯದಂತೆ ಮೂತ್ರ ಸೋರಿಕೆಯಾಗೋ ಸಾಧ್ಯತೆಯೂ ಇದೆ.
-ಯುರಿನರಿ ರಿಟೆನ್ಷನ್: ಈ ಸಮಸ್ಯೆಯಿಂದ ಮೂತ್ರಕೋಶದಲ್ಲಿರೋ ಮೂತ್ರವನ್ನು ಸಂಪೂರ್ಣವಾಗಿ ಹೊರಹಾಕಲು ಸಾಧ್ಯವಾಗೋದಿಲ್ಲ. ಇದಕ್ಕೆ ಕಾರಣ ಮೂತ್ರಕೋಶ ಹಾಗೂ ನಾಳದಲ್ಲಿನ ಬ್ಲಾಕೇಜ್ಗಳು. ಹೀಗಾಗಿ ಈ ಸಮಸ್ಯೆಯಿರೋರಿಗೆ ಪದೇಪದೆ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಹೊಟ್ಟೆ ಕೆಳಭಾಗದಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಇಂಥ ಸಮಸ್ಯೆಗಳು ಕಂಡುಬಂದ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.
-ಕಿಡ್ನಿಯಲ್ಲಿ ಕಲ್ಲು: ದೀರ್ಘಕಾಲ ಮೂತ್ರ ಹಿಡಿದಿಟ್ಟುಕೊಳ್ಳೋದ್ರಿಂದ ಅದ್ರಲ್ಲಿರೋ ಯೂರಿಕ್ ಆಮ್ಲ ಹಾಗೂ ಕ್ಯಾಲ್ಸಿಯಂ ಆಕ್ಸಲೇಟ್ ಕಿಡ್ನಿಯಲ್ಲಿ ಕಲ್ಲುಗಳನ್ನುಂಟು ಮಾಡುತ್ತವೆ. ಬಹುತೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಈ ಕಲ್ಲುಗಳನ್ನು ಹೊರತೆಗೆಯಬೇಕಾಗುತ್ತದೆ.
ಮೂತ್ರಕೋಶದ ಆರೋಗ್ಯ ಕಾಪಾಡೋದು ಹೇಗೆ?
ದಿನದಲ್ಲಿ 3 ಗಂಟೆಗೊಮ್ಮೆ ಮೂತ್ರ ವಿಸರ್ಜನೆಗೆ ಹೋಗೋ ಅಭ್ಯಾಸ ರೂಢಿಸಿಕೊಳ್ಳಬೇಕು. ಅದೆಷ್ಟೇ ಕೆಲಸವಿದ್ರೂ ದೀರ್ಘ ಸಮಯದ ತನಕ ಮೂತ್ರ ಹಿಡಿದಿಟ್ಟುಕೊಳ್ಳಬಾರದು. ಪ್ರತಿದಿನ ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು. ಮೂತ್ರನಾಳದ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.