ಕೋವಿಡ್‌ ಗುಣಮುಖರಿಗೆ ಕಾಡುತ್ತಿದೆ ಬೇರೆ ಆರೋಗ್ಯ ಸಮಸ್ಯೆ ಭೀತಿ

By Kannadaprabha News  |  First Published May 26, 2021, 8:54 AM IST
  • ಕೋವಿಡ್‌ ಚೇತರಿಕೆ ನಂತರದ ಕಾಡುತ್ತಿವೆ ವಿವಿಧ ಆರೋಗ್ಯ ಸಮಸ್ಯೆಗಳು
  • ನಿಗಾ ವಹಿಸದಿದ್ದರೆ ಜೀವವನ್ನೇ ಕಸಿದುಕೊಳ್ಳುವಂತಹ  ಅಪಾಯ
  • ಮಾರಕವಾಗುವ ಸಾಧ್ಯತೆಯೂ ಇದೆ ಎಂದು ವೈದ್ಯಕೀಯ ತಜ್ಞರ ಎಚ್ಚರಿಕೆ

ವರದಿ :  ರಾಕೇಶ್‌ ಎನ್‌.ಎಸ್‌.

 ಬೆಂಗಳೂರು (ಮೇ.26):  ಮಹಾಮಾರಿ ಕೋವಿಡ್‌ನಿಂದ ಗುಣಮುಖರಾದ ನಂತರ ಆರೋಗ್ಯದ ಬಗ್ಗೆ ನಿಗಾ ವಹಿಸದಿದ್ದರೆ ಜೀವವನ್ನೇ ಕಸಿದುಕೊಳ್ಳುವಂತಹ ಹೃದಯಾಘಾತ, ಕಪ್ಪು ಶಿಲೀಂಧ್ರ ಕಾಯಿಲೆಗಳಷ್ಟೇ ಅಲ್ಲ, ಇನ್ನು ಹಲವು ಹತ್ತು ದೈಹಿಕ ಸಮಸ್ಯೆಗಳು ಸೋಂಕಿತರನ್ನು ಕಾಡುತ್ತವೆ. ನಿರ್ಲಕ್ಷಿಸಿದರೆ ಈ ಸಮಸ್ಯೆಗಳೇ ಮಾರಕವಾಗುವ ಸಾಧ್ಯತೆಯೂ ಇದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.

Tap to resize

Latest Videos

ಹಾಗೆಂದು ಕೋವಿಡ್‌ನಿಂದ ಗುಣಮುಖರಾದ ಎಲ್ಲರಿಗೂ ಇಂತಹ ತೊಂದರೆಗೆ ಒಳಗಾಗುವುದಿಲ್ಲ, ಹತ್ತು ಜನರಲ್ಲಿ ಒಬ್ಬರಿಗೆ ಇಂತಹ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಕೋವಿಡ್‌ನಿಂದ ಗುಣಮುಖರಾದ ನಂತರ ಪ್ರತಿಯೊಬ್ಬರು ಎರಡು-ಮೂರು ತಿಂಗಳ ಕಾಲ ತಿಂಗಳಿಗೊಮ್ಮೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲೇಬೇಕು ಎಂದು ತಜ್ಞರು ಹೇಳುತ್ತಾರೆ. ಕೋವಿಡ್‌ನಿಂದ ಚೇತರಿಸಿಕೊಂಡ ಮೇಲೆ ಕೆಲವರಲ್ಲಿ ಅಲ್ಪ ಇಲ್ಲವೇ ದೀರ್ಘಕಾಲದ ಆರೋಗ್ಯ ಸಮಸ್ಯೆ ಕಂಡು ಬರುತ್ತಿರುವ ಸಾಕಷ್ಟುಉದಾಹರಣೆಗಳು ಇತ್ತೀಚೆಗೆ ಸಾಕಷ್ಟುಕೇಳಿ ಬಂದಿವೆ.

ಮೇ. 25ರ ಕೊರೋನಾ ರಿಪೋರ್ಟ್: ರಾಜ್ಯದಲ್ಲಿ ಕೊರೋನಾ ಇಳಿಮುಖ, ಸಾವಿನ ಸಂಖ್ಯೆ ಅಧಿಕ ...

10ರಲ್ಲಿ ಒಬ್ಬರು: ಸಂಶೋಧಕರ ಪ್ರಕಾರ ಕೋವಿಡ್‌ನಿಂದ ಗುಣಮುಖರಾದ ಹತ್ತರಲ್ಲಿ ಒಬ್ಬರಲ್ಲಿ ಕೋವಿಡೋತ್ತರ ಸಮಸ್ಯೆಗಳು ಕಂಡು ಬರುತ್ತವೆಯಂತೆ. ಇದರಲ್ಲಿ ಸಾಮಾನ್ಯ ಕಫ, ಆಯಾಸದ ಸಮಸ್ಯೆಗಳಿಂದ ಹಿಡಿದು ಶಿಲೀಂಧ್ರ ಕಾಟ, ಹೃದಯಾಘಾತ ಮುಂತಾದ ಮಾರಣಾಂತಿಕ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ದೈಹಿಕ, ಮಾನಸಿಕ ಸಮಸ್ಯೆ ಕೋವಿಡ್‌ ನಿಂದ ಚೇತರಿಸಿಕೊಂಡ ಬಳಿಕ ಕೆಲವರಲ್ಲಿ ಸಂಧಿ ನೋವು, ಸ್ನಾಯು ನೋವು ಮತ್ತು ತಲೆನೋವು ಒಂದೆರಡು ತಿಂಗಳ ಕಾಲ ಕಂಡು ಬರುತ್ತದೆಯಂತೆ. ಈ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಕೋವಿಡ್‌ನಂತಹ ವೈರಸ್ಸಿನ ದಾಳಿಗೆ ಒಳಗಾದ ದೇಹ ಚೇತರಿಸಿಕೊಳ್ಳಲು ತುಸು ಸಮಯ ಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇನ್ನೂ ಕೆಲವರಲ್ಲಿ ಸಣ್ಣಗೆ ಜ್ವರ ಕಾಣಿಸಿಕೊಂಡು ಅದು ಮೂರ್ನಾಲ್ಕು ದಿನಗಳ ಕಾಲ ಇರುತ್ತದೆ. ಈ ಸಂದರ್ಭದಲ್ಲಿ ಚಳಿ ಮತ್ತು ಮೈ ಕೈ ನೋವು ಕಾಣಿಸಿಕೊಂಡರೆ ಕೋವಿಡ್‌ ಸೋಂಕು ಮರುಕಳಿಸಿರುವ ಸಾಧ್ಯತೆ ಇರುವುದರಿಂದ ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕು. ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಎಂಬುದು ತಜ್ಞ ವೈದ್ಯರ ಅಭಿಪ್ರಾಯ.

ನಿದ್ರಾಹೀನತೆಯ ಸಮಸ್ಯೆ ಕೂಡ ಕೋವಿಡ್‌ನಿಂದ ಚೇತರಿಸಿಕೊಂಡವರನ್ನು ಬಾಧಿಸುತ್ತದೆಯಂತೆ. ಮಾನಸಿಕ ಒತ್ತಡ, ಆತಂಕ, ಖಿನ್ನತೆಯಿಂದ ನಿದ್ರಾಹೀನತೆ ಬರುವ ಸಾಧ್ಯತೆಯೇ ಹೆಚ್ಚು. ಕೋವಿಡ್‌ ಸೋಂಕಿತರಾಗಿದ್ದ ವೇಳೆ ಅವರು ಭಾರಿ ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕ ತೊಂದರೆಗಳಾಗಿದ್ದರೆ ಅದ್ದರಿಂದಲೂ ರೋಗಿಯೊಬ್ಬ ನಿದ್ರೆಯನ್ನು ಕಳೆದುಕೊಳ್ಳಬಹುದು. ಕಾಯಿಲೆಯಿಂದ ಚೇತರಿಸಿಕೊಳ್ಳಲು ಮತ್ತು ರೋಗ ನಿರೋಧಕತೆ ವೃದ್ಧಿಸಲು ನಿದ್ದೆ ಅತ್ಯಗತ್ಯ. ಆದ್ದರಿಂದ ನಿದ್ರಾಹೀನತೆ ಗಂಭೀರವಾಗುತ್ತಿದ್ದಂತೆ ಆಪ್ತ ಸಮಾಲೋಚನೆ, ಯೋಗದ ಮೊರೆ ಹೋಗಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಯಾವ ಸಮಸ್ಯೆ ಕಾಣಿಸಬಹುದು ಎಂದು ಅವರು ವಿವರ ನೀಡಿದ್ದಾರೆ.

ಬೆಂಗಳೂರಲ್ಲಿದೆ ಕೋವಿಡೋತ್ತರ ಆಸ್ಪತ್ರೆ

ಬೆಂಗಳೂರಿನ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಮೊದಲ ಅಲೆಯ ಸಂದರ್ಭದಲ್ಲೇ ಕೋವಿಡೋತ್ತರ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಕೋವಿಡೋತ್ತರ ಸಮಸ್ಯೆಗಳನ್ನು ಉಲ್ಲೇಖಿಸಿ ಅನೇಕ ಮಂದಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಹೆಚ್ಚಾಗಿ ಬರುತ್ತಾರೆ. ಸಾಮಾನ್ಯವಾಗಿ ಕೋವಿಡ್‌ನಿಂದ ಚೇತರಿಸಿಕೊಂಡವರ ಆರೋಗ್ಯದ ಮೇಲೆ 5-6 ವಾರ ನಿಗಾ ಇಡಲಾಗುತ್ತದೆ. ಎಕ್ಸ್‌ ರೇ, ಸಿಟಿ ಸ್ಕಾ್ಯನ್‌, ಶ್ವಾಸಕೋಶ ಕಾರ್ಯನಿರ್ವಹಣಾ ಪರೀಕ್ಷೆ (ಪಿಎಫ್‌ಟಿ) ಪರೀಕ್ಷೆ ನಡೆಸುತ್ತೇವೆ. ಈ ಸಂದರ್ಭದಲ್ಲಿ ಸಮಸ್ಯೆ ಇರುವುದು ಖಚಿತವಾಗುತ್ತದೆ.

ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಸಾಮಾನ್ಯ ಸಮಸ್ಯೆಯಗಳಲ್ಲದೆ ಕ್ಷಯ, ಪಾಶ್ರ್ವವಾಯುಂತಹ ಸಮಸ್ಯೆ ಉಂಟಾಗಿರುವ ಉದಾಹರಣೆಗಳಿವೆ. ಆದ್ದರಿಂದ ಕೋವಿಡ್‌ ನಿಂತ ಚೇತರಿಸಿಕೊಂಡವರು 1 ತಿಂಗಳ ಬಳಿಕ ಮತ್ತೊಮ್ಮೆ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕು. ಹಾಗೆಯೇ ಪ್ರತಿ ಕೋವಿಡ್‌ ಆಸ್ಪತ್ರೆಯಲ್ಲಿಯೂ ಕೋವಿಡೋತ್ತರ ಸಮಸ್ಯೆಗಳನ್ನು ನಿರ್ವಹಿಸಲು, ಆಪ್ತ ಸಮಾಲೋಚನೆ ನಡೆಸುವ ಕೇಂದ್ರ ಇರಬೇಕು.

ಇಡೀ ರಾಜ್ಯಕ್ಕೆ ಮಾದರಿಯಾದ ಮೈಸೂರು ಮಹಾನಗರ ಪಾಲಿಕೆ

- ಡಾ. ಸಿ. ನಾಗರಾಜ್‌ -  ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ

ಏಕಾತಗ್ರತೆ, ಸ್ಮರಣ ಶಕ್ತಿ ಕುಂಠಿತ: ಸೌಮ್ಯ ಲಕ್ಷಣ ಹೊಂದಿದ್ದ ಅಥವಾ ಗಂಭೀರ ಸ್ವರೂಪದಲ್ಲಿ ಕೋವಿಡ್‌ನಿಂದ ಬಾಧಿತನಾಗಿದ್ದ ಏಕಾಗ್ರತೆ, ಸ್ಮರಣ ಶಕ್ತಿ ಕುಸಿತದಂತಹ ಲಕ್ಷಣ ಕಾಣಿಸಿಕೊಳ್ಳಬಹುದು. ಇಂತಹವರು ಹೆಚ್ಚಾಗಿ ಮಂಕಾಗಿ ಇರುತ್ತಾರೆ. ಸಾಮಾನ್ಯ ಜೀವನಕ್ಕೆ ಮರಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.

ಹೃದಯ ಸಮಸ್ಯೆ: ಹೃದಯಾಘಾತದ ಸಮಸ್ಯೆಯು ಕೋವಿಡ್‌ನಿಂದ ಚೇತರಿಸಿಕೊಂಡವರ ಪ್ರಾಣಕ್ಕೆ ಎರವಾದ ಅನೇಕ ಉದಾಹರಣೆಗಳಿವೆ. ಕೋವಿಡ್‌ ಇದ್ದ ಸಂದರ್ಭದಲ್ಲೇ ಹೃದಯಾಘಾತ ಆದಂತೆ ಚೇತರಿಕೆಯ ಅವಧಿಯಲ್ಲಿಯೂ ಆಗಬಹುದು ಎಂದು ವೈದ್ಯರು ಹೇಳುತ್ತಾರೆ. ಈ ರೀತಿ ಆಗಲು ರಕ್ತ ಹೆಪ್ಪುಗಟ್ಟುವಿಕೆ ಪ್ರಮುಖ ಕಾರಣ. ಆದ್ದರಿಂದ ಕೋವಿಡ್‌ ನಿಂದ ಚೇತರಿಸಿಕೊಳ್ಳುತ್ತಿರುವವರಿಗೆ ರಕ್ತ ತೆಳುಗೊಳ್ಳುವ ಔಷಧಿ ಮುಂದುವರಿಸಬೇಕು.

ಉಸಿರಾಟದ ತೊಂದರೆ: ಉಸಿರಾಟದ ತೊಂದರೆ ಕೋವಿಡ್‌ ಮುಕ್ತರಾದವರಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಸ್ಥಿತಿ ಸಾಮಾನ್ಯವಾಗಿದ್ದಂತೆಯೇ ಒಮ್ಮೆಲೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದು ಶ್ವಾಸಕೋಶದಲ್ಲಿ ಇನ್ನೂ ಸಮಸ್ಯೆ ಉಳಿದುಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಹಾಗೆಯೇ ರಕ್ತ ಹೆಪ್ಪುಗಟ್ಟಿರುವ ಸಾಧ್ಯತೆಯನ್ನು ತಿಳಿಸುತ್ತದೆ. ಒಂದು ರೀತಿಯ ಅಮಲು, ಹೃದಯದ ಬಡಿತದಲ್ಲಿನ ಏರುಪೇರು, ಆಮ್ಲಜನಕದ ಮಟ್ಟದಲ್ಲಿನ ಏರುಪೇರು ಕಾಣಿಸಿಕೊಳ್ಳುತ್ತವೆ.

ರಾಜ್ಯದಲ್ಲಿ ಆಗಸ್ಟ್‌ವರೆಗೆ ಲಸಿಕೆ ಅಭಾವ : ಡಿಸಿಎಂ ಸುಳಿವು ..

ಮಧುಮೇಹ: ಕೋವಿಡ್‌ ರೋಗಿಗಳಲ್ಲಿ ಚಿಕಿತ್ಸೆಗೆ ಬಳಸಿದ ಔಷಧಿ ಮತ್ತು ಬದಲಾದ ಜೀವನ ಕ್ರಮದಿಂದ ಮಧುಮೇಹದ ಸಮಸ್ಯೆ ಉಲ್ಬಣಿಸಿದ ಸಾಕಷ್ಟು ಉದಾಹರಣೆಗಳಿವೆ. ಕೆಲವರಿಗೆ ಹೊಸದಾಗಿ ಮಧುಮೇಹ ಸಮಸ್ಯೆ ಸೃಷ್ಟಿಯಾಗಿದ್ದರೆ ಇನ್ನು ಕೆಲವರಿಗೆ ನಿಯಂತ್ರಣದಲ್ಲಿದ್ದ ಮಧುಮೇಹ ಅನಿಯಂತ್ರಿತವಾಗಿದೆ. ಇದು ಭೀಕರ ಶಿಲೀಂಧ್ರ ಸಮಸ್ಯೆಗಳ ಜೊತೆ ಜೊತೆಗೆ ಇನ್ನಿತರ ಸಮಸ್ಯೆಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಕೆಮ್ಮು: ಕೋವಿಡ್‌ ರೋಗಿಗಳಲ್ಲಿ ಕೆಮ್ಮು ಸಾಮಾನ್ಯ. ಇದು ಗುಣ ಹೊಂದಿದ ಬಳಿಕವೂ ವಾರಗಳ ಕಾಲ ಮುಂದುವರಿಯಬಹುದು. ಕಫದ ಔಷಧಿಯಿಂದ ಗುಣ ಪಡಿಸಬಹುದಾಗಿದೆ.

ಕೋವಿಡ್‌ ಚೇತರಿಕೆ ನಂತರದ ಸಮಸ್ಯೆಗಳು

*ಸಂಧಿ ನೋವು, ಸ್ನಾಯು ನೋವು, ತಲೆ ನೋವು

*ಸಾಮಾನ್ಯ ಕಫ, ಆಯಾಸ,

*ಕಪ್ಪು ಶಿಲೀಂದ್ರ ಸಮಸ್ಯೆ, ಹೃದಯಾಘಾತ, ಉಸಿರಾಟದ ಸಮಸ್ಯೆ

*ಏಕಾಗ್ರತೆ ಸಮಸ್ಯೆ, ಸ್ಮರಣ ಶಕ್ತಿ ಕುಂಠಿತ, ನಿದ್ರಾಹೀನತೆ

*ಹೊಸದಾಗಿ ಮಧುಮೇಹ ಕಾಡುವುದು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!