ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ಈ 5 ರೊಟ್ಟಿ ತಿನ್ನಿ

By Suvarna NewsFirst Published Jun 10, 2021, 4:32 PM IST
Highlights

ಚಪಾತಿ ಬಹುತೇಕರ ಮೆಚ್ಚಿನ ಆಹಾರವಾಗಿದ್ರೂ ತೂಕ ಇಳಿಸಿಕೊಳ್ಳೋ ಪ್ರಯತ್ನದಲ್ಲಿರೋರು ಕ್ಯಾಲೋರಿ ಕಾರಣಕ್ಕೆ ಡಯಟ್‌ನಿಂದ ಹೊರಗಿಡಲೇಬೇಕಾಗುತ್ತೆ. ಹಾಗಾದ್ರೆ ಚಪಾತಿಗೆ ಪರ್ಯಾಯವಾಗಿ ಯಾವೆಲ್ಲ ರೊಟ್ಟಿಗಳನ್ನು ತಿನ್ನಬಹುದು? ಅವು ತೂಕ ಇಳಿಕೆಗೆ ಹೇಗೆ ನೆರವು ನೀಡುತ್ತವೆ?

ತೂಕ ಇಳಿಸಿಕೊಳ್ಳೋ ಪ್ರಯತ್ನದಲ್ಲಿರೋರು ದೇಹ ದಂಡನೆ ಜೊತೆ ಸೇವಿಸೋ ಆಹಾರದ ಮೇಲೂ ನಿಗಾ ವಹಿಸೋದು ಅಗತ್ಯ. ತೂಕ ಕಳೆದುಕೊಳ್ಳಲು ಕಡಿಮೆ ಕ್ಯಾಲೋರಿ ಆಹಾರಗಳನ್ನು ಸೇವಿಸೋದು ಉತ್ತಮ.ಅಂದ್ರೆ ನೀವು ಬರ್ನ್‌ ಮಾಡೋ ಕ್ಯಾಲೋರಿಗಿಂತ ಕಡಿಮೆ ಕ್ಯಾಲೋರಿ ಹೊಂದಿರೋ ಆಹಾರಗಳನ್ನು ಸೇವಿಸಬೇಕು.ಕೆಲವರು ರಾತ್ರಿ ಊಟಕ್ಕೆ ಗೋಧಿ ಹಿಟ್ಟಿನ ಚಪಾತಿ ಸೇವಿಸೋದ್ರಿಂದ ತೂಕ ಇಳಿಕೆ ಸಾಧ್ಯ ಎನ್ನುತ್ತಾರೆ.ಆದ್ರೆ ಚಪಾತಿಯಲ್ಲಿಕ್ಯಾಲೋರಿ ಹೆಚ್ಚಿದೆ. ಹೌದು, ಒಂದು ಚಪಾತಿಯಲ್ಲಿ 104 ಕ್ಯಾಲೋರಿಸ್‌ ಇದೆ. ಹೊಟ್ಟೆ ತುಂಬಲು 3-4 ಚಪಾತಿಯಂತೂ ಬೇಕೇಬೇಕು. ಹೀಗಿರೋವಾಗ ಎಷ್ಟು ಕ್ಯಾಲೋರಿಸ್‌ ಸೇವಿಸಿದಂತಾಯ್ತು ನೀವೇ ಲೆಕ್ಕ ಹಾಕಿ. ಹಾಗಂತ ನಿತ್ಯದ ಆಹಾರವಾಗಿರೋ ಚಪಾತಿಯನ್ನು ಬಿಡೋದು ಬಹುತೇಕರಿಗೆ ಸುಲಭದ ವಿಷಯವಂತೂ ಅಲ್ಲವೇ ಅಲ್ಲ.ಅಂಥವರಿಗೆ ಗೋಧಿ ಹಿಟ್ಟಿನ ಚಪಾತಿ ಅಥವಾ ರೊಟ್ಟಿ ತಿಂದಷ್ಟೇ ಸಂತೃಪ್ತಿ ಜೊತೆಗೆ ತೂಕ ಇಳಿಕೆಗೆ ನೆರವು ನೀಡೋ 5 ವಿಧದ ರೊಟ್ಟಿಗಳ ಮಾಹಿತಿಯನ್ನುಇಲ್ಲಿ ನೀಡಿದ್ದೇವೆ. 

ಕೋವಿಡ್‌ ಲಸಿಕೆ ಬಳಿಕ ರಕ್ತದೊತ್ತಡ ಏರಿಕೆ ಸಹಜವೇ?

ರಾಗಿ ರೊಟ್ಟಿ
ಭಾರತದ ಅನೇಕ ಭಾಗಗಳಲ್ಲಿ ರಾಗಿ ಜನರ ಪ್ರಮುಖ ಆಹಾರವಾಗಿದೆ. ರಾಗಿ ರೊಟ್ಟಿ ತಿನ್ನಲು ರುಚಿಯಾಗಿರೋ ಜೊತೆ ಅನೇಕ ಆರೋಗ್ಯ ಲಾಭಗಳನ್ನು ಕೂಡ ಹೊಂದಿದೆ. ಇದ್ರಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಹಾಗೂ ನಾರಿನಂಶ ಅಧಿಕ ಪ್ರಮಾಣದಲ್ಲಿದೆ. ರಾಗಿಯಲ್ಲಿರೋ ನಾರಿನಂಶ ದೀರ್ಘಕಾಲ ಹಸಿವು ಕಾಡದಂತೆ ಮಾಡೋ ಮೂಲಕ ಆಗಾಗ ಏನಾದ್ರೂ ತಿನ್ನಬೇಕೆಂಬ ಬಯಕೆಯನ್ನು ದೂರ ಮಾಡುತ್ತದೆ. ರಾಗಿಯಲ್ಲಿ ಟ್ರೈಪ್ಟೊಫಾನ್‌ ಎಂಬ ಅಮಿನೋ ಆಸಿಡ್‌ ಇದ್ದು, ತೂಕ ಇಳಿಕೆಗೆ ನೆರವು ನೀಡುತ್ತದೆ. ಅಷ್ಟೇ ಅಲ್ಲ,ಹಸಿವು ಇಂಗಿಸುತ್ತದೆ ಕೂಡ. ಉಪ್ಪು,ಜೀರಿಗೆ,ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಿಟ್ಟಿಗೆ ಮಿಕ್ಸ್‌ ಮಾಡಿದ್ರೆ ರಾಗಿ ರೊಟ್ಟಿ ಘಮಲು ಹಾಗೂ ರುಚಿ ಎರಡೂ ಹೆಚ್ಚುತ್ತದೆ.

ಸಜ್ಜೆ ರೊಟ್ಟಿ
ಸಜ್ಜೆ ಅಥವಾ ಬಾಜ್ರಾ ರೊಟ್ಟಿ ಕೂಡ ತೂಕ ಇಳಿಕೆಗೆ ಸಹಾಯ ಮಾಡೋ ಜೊತೆ ಆರೋಗ್ಯಕ್ಕೂ ಹಿತಕಾರಿ. ಸಜ್ಜೆಯಲ್ಲಿ ಮೆಗ್ನೇಷಿಯಂ, ಜಿಂಕ್‌, ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿದ್ದು,ಗೋಧಿಗೆ ಪರ್ಯಾಯವಾದ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಸಜ್ಜೆರೊಟ್ಟಿಯಲ್ಲಿ ನಾರಿನಂಶ ಅಧಿಕವಾಗಿದ್ದು,ಸೇವಿಸಿದ ಬಳಿಕ ದೀರ್ಘಕಾಲದ ತನಕ ಹಸಿವು ಕಾಡೋದಿಲ್ಲ. ಇದರಲ್ಲಿರೋ ಅತ್ಯಗತ್ಯ ಜೀವಸತ್ವಗಳು ದೇಹಕ್ಕೆ ಅಗತ್ಯ ಪೋಷಣೆ ನೀಡುತ್ತವೆ. ಅಲ್ಲದೆ,ಇದರ ಸೇವನೆ ಬಳಿಕ ಹೊಟ್ಟೆಯುಬ್ಬರದಂತಹ ಸಮಸ್ಯೆ ಕಾಡೋದಿಲ್ಲ. 

ನೀರು ಕುಡಿಯಲು ಕಣಿ ಕೇಳಿ; ಯಾವ ಸಂದರ್ಭದಲ್ಲಿ ನೀರು ಕುಡೀಬೇಕು?

ಕಡ್ಲೆಹಿಟ್ಟಿನ ರೊಟ್ಟಿ
ತೂಕ ಇಳಿಕೆಗೆ ಕಡ್ಲೆಹಿಟ್ಟಿನ ರೊಟ್ಟಿ ಅತ್ಯುತ್ತಮ ಆಯ್ಕೆ. ಕಡಲೆಯಿಂದ ತಯಾರಿಸೋ ಹಿಟ್ಟಿನಲ್ಲಿ ಪೌಷ್ಟಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು,ದೀರ್ಘಕಾಲದ ತನಕ ಹಸಿವು ಕಾಡೋದಿಲ್ಲ. ಆರೋಗ್ಯಕರ ರೊಟ್ಟಿ ತಯಾರಿಸಲು ಕಡ್ಲೆಹಿಟ್ಟು ಹಾಗೂ ಬಹುದ್ವಿದಳ ಧಾನ್ಯಗಳ ಹಿಟ್ಟನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಬಹುದು. ಕಡ್ಲೆಹಿಟ್ಟಿನಲ್ಲಿ ಪ್ರೋಟೀನ್‌ ಅಧಿಕ ಪ್ರಮಾಣದಲ್ಲಿದ್ದು, ಇದು ಹಸಿವು ತಗ್ಗಿಸಲು ನೆರವು ನೀಡುತ್ತದೆ. ಇದ್ರಿಂದ ಆಗಾಗ ಬಿಸ್ಕೆಟ್ಸ್‌, ಕರಿದ ತಿಂಡಿಗಳು ಇತ್ಯಾದಿಗಳನ್ನು ತಿನ್ನುತ್ತ ಹಸಿವು ನೀಗಿಸಿಕೊಳ್ಳೋ ಅನಿವಾರ್ಯತೆ ಇರೋದಿಲ್ಲ. ಅಲ್ಲದೆ, ಈ ರೀತಿಯ ತಿನಿಸುಗಳನ್ನು ತಿಂದು ತೂಕ ಹೆಚ್ಚಿಸಿಕೊಳ್ಳೋದು ಕೂಡ ತಪ್ಪುತ್ತದೆ. 
 

ಬಾದಾಮಿ ರೊಟ್ಟಿ
ಬಾದಾಮಿ ಬೀಜ ಅಧಿಕ ಪೋಷಕಾಂಶಗಳಿಂದ ಕೂಡಿದ್ದು, ಮಿದುಳಿನ ಆರೋಗ್ಯಕ್ಕೆ ಹಾಗೂ ತೂಕ ಇಳಿಕೆಗೆ ಒಳ್ಳೆಯದು. ಕೆಟೋಜೆನಿಕ್‌ ಡಯಟ್ನಲ್ಲಿರೋರಿಗೆ ಬಾದಾಮಿ ರೊಟ್ಟಿ ಅತ್ಯುತ್ತಮ ಆಯ್ಕೆಯಾಗಿದೆ. ಇಂಟರ್ನ್ಯಾಷನಲ್‌ ಜರ್ನಲ್‌ ಆಫ್‌ ಒಬೆಸಿಟಿ ಹಾಗೂ ಮೆಟಾಬೊಲಿಕ್‌ ಡಿಸಾರ್ಡರ್ಸ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ 84 ಗ್ರಾಂ ಬಾದಾಮಿ ಬೀಜಗಳನ್ನೊಳಗೊಂಡಿರೋ ಕಡಿಮೆ ಕ್ಯಾಲೋರಿ ಡಯಟ್‌ ಕಾರ್ಬೋಹೈಡ್ರೇಟ್ಸ್‌ ಸಮೃದ್ಧ ಡಯಟ್ಗೆ ಹೋಲಿಸಿದ್ರೆ ತೂಕ ಇಳಿಕೆಗೆ ಶೇ.62ರಷ್ಟು ಹೆಚ್ಚು ಪರಿಣಾಮಕಾರಿ. ಬಾದಾಮಿ ರೊಟ್ಟಿ ರುಚಿಯಲ್ಲೂ ಸಖತಾಗಿರೋ ಕಾರಣ ಇಷ್ಟಪಟ್ಟು ಹೊಟ್ಟೆತುಂಬಾ ತಿನ್ನಬಹುದು.

ಖಿನ್ನತೆಯಿಂದ ಹೊರಬರಬೇಕೇ? ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ

ಓಟ್ಸ್‌ ರೊಟ್ಟಿ
ತೂಕ ಇಳಿಕೆಗೆ ಪ್ರಯತ್ನಿಸುತ್ತಿರೋರಿಗೆ ಓಟ್ಸ್‌ ಅತ್ಯುತ್ತಮ ಆಹಾರ. ನಾರಿನಂಶ ಸೇರಿದಂತೆ ಪೌಷ್ಟಿಕಾಂಶಗಳಿಂದ ಕೂಡಿರೋ ಓಟ್ಸ್‌ ರುಚಿಯಲ್ಲಿ ಅಷ್ಟೊಂದು ಹಿಡಿಸದಿದ್ರೂ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಮುಂತಾದ ಸಾಮಗ್ರಿಗಳನ್ನು ಸೇರಿಸಿ ರೊಟ್ಟಿ ತಯಾರಿಸಿದ್ರೆ ಕಷ್ಟಪಟ್ಟು ತಿನ್ನೋ ಬದಲು ಇಷ್ಟಪಟ್ಟು ತಿನ್ನುತ್ತೀರಿ. 

click me!