ಬಾಡಿಗೆ ತಾಯ್ತನದ ನಿಯಮದಲ್ಲಿ ಬದಲಾವಣೆ, ಲಕ್ಷಾಂತರ ದಂಪತಿ ಮೊಗದಲ್ಲಿ ನಗು

By Suvarna NewsFirst Published Feb 23, 2024, 4:30 PM IST
Highlights

ಕೇಂದ್ರ ಸರ್ಕಾರ ಬಾಡಿಗೆ ತಾಯ್ತನದ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದು ಸಂತಾನವಿಲ್ಲದ ಎಷ್ಟೋ ದಂಪತಿಯ ಖುಷಿಗೆ ಕಾರಣವಾಗಿದೆ. ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಅವರು ಮಕ್ಕಳಿಗಾಗಿ ದಾನಿಗಳ ನೆರವು ಪಡೆಯಬಹುದು.  
 

ಮಡಿಲಿಗೆ ಮಗು ಬಂದ್ರೆ ಮಹಿಳೆಯಾಗಿ ಸಾರ್ಥಕ ಎಂದುಕೊಳ್ಳುವ ಮಹಿಳೆಯರ ಸಂಖ್ಯೆ ಸಾಕಷ್ಟಿದೆ. ದಂಪತಿ ಜೀವನ ಮತ್ತಷ್ಟು ಹಸನಾಗಲು ಮಗುವೊಂದು ಮನೆಯಲ್ಲಿರಬೇಕು. ಈಗಿನ ದಿನಗಳಲ್ಲಿ ಗರ್ಭಧಾರಣೆ ಸವಾಲಾಗಿದೆ. ಜೀವನ ಶೈಲಿ, ವಾತಾವರಣ, ಆಹಾರ ಸೇರಿದಂತೆ ಅನೇಕ ಕಾರಣಗಳಿಂದ ಮಹಿಳೆ ಹಾಗೂ ಪುರುಷ ಇಬ್ಬರೂ ಸಂತಾನ ಪಡೆಯುವಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆ ಮಾತ್ರವಲ್ಲ ಪುರುಷರಲ್ಲೂ ಅನೇಕ ಸಮಸ್ಯೆಗಳು ಕಾಡ್ತಿವೆ. 

ಮಕ್ಕಳಿಲ್ಲದ ಜೋಡಿ ಮಗು (Child) ಪಡೆಯಲು ನಾನಾ ಕಡೆ ಚಿಕಿತ್ಸೆಯ ಮೊರೆ ಹೋಗುತ್ತಾರೆ. ದೇವರಿಗೆ ಹರಕೆ, ಉಪವಾಸ ವೃತಗಳನ್ನು ಮಾಡ್ತಾರೆ. ಇವೆಲ್ಲ ಮಾಡಿದ್ರೂ ಎಲ್ಲರಿಗೂ ಮಗುವಿನ ಭಾಗ್ಯ ಸಿಗೋದಿಲ್ಲ. ಕಾಲ ಹಿಂದಿನಂತಿಲ್ಲ. ಹಿಂದೆ ಮಕ್ಕಳಾಗ್ಲಿಲ್ಲ ಎಂದ್ರೆ ಬೇರೆ ಪರಿಹಾರ ಇರಲಿಲ್ಲ. ಈಗ ಬಾಡಿಗೆ ತಾಯಿಯಿಂದ ಹಿಡಿದು, ವೀರ್ಯ (Sperm) ಹಾಗೂ ಮೊಟ್ಟೆ(Egg) ಯನ್ನು ದಾನಿಗಳಿಂದ ಪಡೆದು ಮಗುವನ್ನು ಪಡೆಯುವ ಸೌಲಭ್ಯ ನಮ್ಮಲ್ಲಿದೆ. 

ಮುಖ, ತುಟಿ ಊದಿಕೊಂಡಿದ್ದ ವ್ಯಕ್ತಿಯ ಟೆಸ್ಟ್ ಮಾಡಿದ ವೈದ್ಯರಿಗೇ ಶಾಕ್‌, ಮೂಗಿನೊಳಗೆ ಅಂಟಿಕೊಂಡಿತ್ತು 150 ಹುಳು!

ತಡವಾದ ಮದುವೆ, ಚಿಕಿತ್ಸೆ (Treatment) ಅಥವಾ ಅನಾರೋಗ್ಯದ ಸಂದರ್ಭದಲ್ಲಿ ಅನೇಕ ಮಹಿಳೆಯರು ತಮ್ಮ ಮೊಟ್ಟೆಯನ್ನು ಫ್ರೀಜ್ ಮಾಡಿ ನಂತ್ರ ಅದನ್ನು ಬಳಸಿಕೊಳ್ತಿದ್ದಾರೆ. ಅನಾರೋಗ್ಯದ ಸಮಯದಲ್ಲಿ ಅಥವಾ ಬೇರೆ ಕಾರಣಕ್ಕೆ ಕೆಲವರಿಗೆ ಸ್ವಂಯ ಮೊಟ್ಟೆ ಅಥವಾ ವೀರ್ಯ ಬಳಕೆ ಸಾಧ್ಯವಾಗೋದಿಲ್ಲ. ಈ ವೇಳೆ ಬೇರೆಯವರಿಂದ ವೀರ್ಯ ಹಾಗೂ ಮೊಟ್ಟೆಯನ್ನು ದಾನದ ರೂಪದಲ್ಲಿ ಪಡೆಯಲಾಗುತ್ತದೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಬಯಸುತ್ತಿರುವ ಜನರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.  ಬಾಡಿಗೆ ತಾಯ್ತನದ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ.

ದಾನಿಗಳಿಂದ ಮೊಟ್ಟೆ ಮತ್ತು ವೀರ್ಯಾಣು ತೆಗೆದುಕೊಳ್ಳಲು ಅನುಮತಿ ನೀಡಿದೆ. ಕಳೆದ ವರ್ಷ, ಬಾಡಿಗೆ ತಾಯ್ತನದ ನಿಯಮ 7 ರ ಕಾರಣ, ದಾನಿಯಿಂದ ಮೊಟ್ಟೆ ಅಥವಾ ವೀರ್ಯವನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ದಂಪತಿ ತಮ್ಮ ಸ್ವಂತ ಮೊಟ್ಟೆ ಮತ್ತು ವೀರ್ಯವನ್ನು ಮಾತ್ರ ಬಳಸಬೇಕಾದ ಅನಿವಾರ್ಯತೆ ಇತ್ತು. ಆದ್ರೀಗ ನಿಯಮದಲ್ಲಿ ಬದಲಾವಣೆ ಆಗಿದೆ. ಮಗುವನ್ನು ಬಯಸುವ ದಂಪತಿ ದಾನಿಯಿಂದ ಮೊಟ್ಟೆ ಮತ್ತು ವೀರ್ಯವನ್ನು ಸುಲಭವಾಗಿ ಪಡೆಯಬಹುದು. 

ಈ ನಿಯಮಗಳಲ್ಲಿ ಬದಲಾವಣೆ :  ಬಾಡಿಗೆ ತಾಯ್ತನ ನಿಯಮಗಳು, 2022ಕ್ಕೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಈ ಬದಲಾವಣೆ ಮಾಡಿದೆ. ಈ ನಿಯಮದ ಪ್ರಕಾರ, ಮಗುವನ್ನು ಹೊಂದಲು ಬಯಸುವ ಪೋಷಕರು ತಮ್ಮ ಸ್ವಂತ ಅಂಡಾಣು ಮತ್ತು ವೀರ್ಯಾಣುಗಳನ್ನು ಕೆಲವು ಅನಾರೋಗ್ಯದ ಕಾರಣದಿಂದ ಬಳಸಲು ಸಾಧ್ಯವಾಗದಿದ್ದರೆ, ಅವರು ದಾನಿಗಳ ಸಹಾಯವನ್ನು ಪಡೆಯಬಹುದು. ಕೇಂದ್ರದ ಈ ನಿರ್ಧಾರ ಲಕ್ಷಾಂತರ ದಂಪತಿ ಮುಖದಲ್ಲಿ ನಗು ಮೂಡಿಸಿದೆ. 

Health tips: ಕೊಲೆಸ್ಟ್ರಾಲ್ ಹೆಚ್ಚಾದಾಗ ಕಣ್ಣಲ್ಲಾಗುವ ಈ ಬದಲಾವಣೆ ನಿಮ್ಮನ್ನು ಕುರುಡು ಮಾಡ್ಬಹುದು…

ಸ್ವಾಭಾವಿಕವಾಗಿ ಗರ್ಭಧರಿಸಲು ಸಾಧ್ಯವಾಗದ ಸಮಯದಲ್ಲಿ, ಗರ್ಭಪಾತ ಮತ್ತು ಐವಿಎಫ್ ವೈಫಲ್ಯದ ನಂತರ ಬಾಡಿಗೆ ತಾಯ್ತನದ ಸಹಾಯವನ್ನು ಭಾರತದಲ್ಲಿ ಅನೇಕ ದಂಪತಿ ಪಡೆಯುತ್ತಿದ್ದಾರೆ. ಇದಕ್ಕೆ ಆರೋಗ್ಯಕರ  ಮೊಟ್ಟೆ ಮತ್ತು ವೀರ್ಯ ಅಗತ್ಯವಿದೆ. ಪಾಲುದಾರರಿಬ್ಬರೂ ಅಂಡಾಣು ಅಥವಾ ವೀರ್ಯವನ್ನು ದಾನ ಮಾಡಲು ವಿಫಲರಾದರೆ ಆಗ ಅವರು ದಾನಿಗಳಿಂದ ಇದನ್ನು ಪಡೆಯಬಹುದು. ವೈದ್ಯಕೀಯ ಸ್ಥಿತಿಯ ಕಾರಣಕ್ಕೆ ವೀರ್ಯ ಅಥವಾ ಮೊಟ್ಟೆ ದಾನ ಸಾಧ್ಯವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣೀಕರಿಸಬೇಕು. ಆಗ ಮಾತ್ರ ದಂಪತಿ ದಾನಿಗಳಿಂದ ಇದನ್ನು ಪಡೆಯಲು ಸಾಧ್ಯ. ಇನ್ನು ಒಂಟಿ ಮಹಿಳೆ, ವಿಚ್ಛೇದಿತ ಮಹಿಳೆ ಅಥವಾ ವಿಧವೆ ಬಾಡಿಗೆ ತಾಯ್ತನದ ಮೂಲಕ ತಾಯಿಯಾಗಲು ಬಯಸಿದರೆ, ಆಕೆ ತನ್ನ ಸ್ವಂತ ಅಂಡಾಣು ಮತ್ತು ದಾನಿಗಳ ವೀರ್ಯವನ್ನು ಬಳಸಲು ಅನುಮತಿ ಇದೆ.  

click me!