ಹೆರಿಗೆಯ ಬಳಿಕ 90 ಕೆಜಿಗೆ ಏರಿದ್ದ ತೂಕ; 2 ವರ್ಷಗಳಲ್ಲಿ 27 ಕೆಜಿ ಕಡಿಮೆಯಾದ ತಾಯಿ, ಇಲ್ಲಿದೆ ಅವರ ಕಂಪ್ಲೀಟ್ ಡಯಟ್ ಪ್ಲಾನ್

Published : Jul 11, 2026, 05:53 PM IST
surbhi ghiya

ಸಾರಾಂಶ

ಗರ್ಭಾವಸ್ಥೆಯಲ್ಲಿ ಎರಡು ಬಾರಿ ಕೋವಿಡ್ ಸೋಂಕಿಗೆ ತುತ್ತಾಗಿ, ಸಿ-ಸೆಕ್ಷನ್ ಹೆರಿಗೆಯ ನಂತರ 90 ಕೆಜಿ ತೂಕ ತಲುಪಿದ್ದ ಸುರಭಿ ಘಿಯಾ, ಕಠಿಣ ಸವಾಲುಗಳನ್ನು ಮೆಟ್ಟಿನಿಂತಿದ್ದಾರೆ. ಸುಸ್ಥಿರ ಡಯಟ್‌ ಮತ್ತು ಸ್ಟ್ರೆಂಥ್‌ ಟ್ರೇನಿಂಗ್‌ ಮೂಲಕ ಕೇವಲ 2 ವರ್ಷಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡು 63 ಕೆಜಿಗೆ ತಲುಪಿದ್ದಾರೆ.

ಜೈಪುರ (ಜು.11): ಗರ್ಭಾವಸ್ಥೆಯಲ್ಲಿ ಎರಡು ಬಾರಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರಾಜಸ್ಥಾನದ ಜೈಪುರದ 33 ವರ್ಷದ ಸುರಭಿ ಘಿಯಾ, ಹೆರಿಗೆಯ ನಂತರ ಬರೋಬ್ಬರಿ 90 ಕೆಜಿ ತೂಕ ತಲುಪಿದ್ದರು. ಸಿ-ಸೆಕ್ಷನ್ ಹೆರಿಗೆ ಆಗಿದ್ದರಿಂದ ಇನ್ನು ಮುಂದೆ ಹಳೆಯ ರೂಪಕ್ಕೆ ಮರಳಲು ಸಾಧ್ಯವೇ ಇಲ್ಲ ಎಂದು ಕೆಲವರು ಹೇಳಿದ್ದರು. ಆದರೆ, ಕಠಿಣ ಸವಾಲುಗಳ ನಡುವೆಯೂ ಸುಸ್ಥಿರ ಡಯಟ್‌ ಮತ್ತು ಸ್ಟ್ರೆಂಥ್‌ ಟ್ರೇನಿಂಗ್‌ ಮೂಲಕ ಸುರಭಿ ಕೇವಲ 2 ವರ್ಷಗಳಲ್ಲಿ ತಮ್ಮ ತೂಕವನ್ನು 63 ಕೆಜಿಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಶಾರ್ಟ್‌ಕಟ್ ಬಳಸದೆ 27 ಕೆಜಿ ತೂಕ ಇಳಿಸಿಕೊಂಡ ಸುರಭಿ ಘಿಯಾ ಡಯಟ್ ಪ್ಲಾನ್ ವಿವರ ಇಲ್ಲಿದೆ.

ಗರ್ಭಾವಸ್ಥೆಯಲ್ಲಿ ಎರಡು ಬಾರಿ ಕಾಡಿದ್ದ ಕೋವಿಡ್:

ಯಾವಾಗಲೂ ಫಿಟ್‌ನೆಸ್ ಬಗ್ಗೆ ಆಸಕ್ತಿ ಹೊಂದಿದ್ದ ಸುರಭಿ ಅವರಿಗೆ ಹೆರಿಗೆಯ ನಂತರ ತನ್ನ ದೇಹದ ಬದಲಾವಣೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. "ನನಗೆ ಸಿಸೇರಿಯನ್ ಹೆರಿಗೆಯಾಗಿದ್ದರಿಂದ ಇನ್ನು ಮುಂದೆ ಎಂದಿಗೂ ಫಿಟ್‌ನೆಸ್ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಜನರು ಹೇಳಿದಾಗ ತುಂಬಾ ಬೇಸರವಾಗಿತ್ತು. ಆದರೆ ಅದು ಅಸಾಧ್ಯವಲ್ಲ ಎಂದು ನನ್ನ ಮನಸ್ಸಿಗೆ ಗೊತ್ತಿತ್ತು" ಎನ್ನುತ್ತಾರೆ ಸುರಭಿ.

ಗರ್ಭಿಣಿಯಾಗಿದ್ದಾಗ ಅವರಿಗೆ ಎರಡು ಬಾರಿ ಕೋವಿಡ್ ತಗುಲಿತ್ತು. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಸುರಭಿ ಚೇತರಿಸಿಕೊಳ್ಳಲಿ ಎಂಬ ಕಾಳಜಿಯಿಂದ ಅವರ ಕುಟುಂಬಸ್ಥರು ಹೆರಿಗೆಯ ನಂತರ ಅತಿಯಾಗಿ ತುಪ್ಪ ಸೇವಿಸುವಂತೆ ಒತ್ತಾಯಿಸಿದ್ದರು. ಅದು ಅವರ ದೇಹಕ್ಕೆ ಒಗ್ಗದಿದ್ದರೂ ತಿಂದಿದ್ದರಿಂದ ತೂಕ ನಿರಂತರವಾಗಿ ಹೆಚ್ಚಾಗಿ ಕೊನೆಗೆ 90 ಕೆಜಿಗೆ ತಲುಪಿತ್ತು.

90 ಕೆಜಿಯಿಂದ 63 ಕೆಜಿಗೆ ಇಳಿದ ಸುರಭಿ

ಮಗುವಿಗೆ 6 ತಿಂಗಳು ತುಂಬಿದಾಗ ಸುರಭಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಲು ನಿರ್ಧರಿಸಿದರು. "ಈ ಪ್ರಯಾಣ ಸುಲಭವಾಗಿರಲಿಲ್ಲ. ಹಲವು ಬಾರಿ ಸೋಲುಗಳು, ತೂಕ ಇಳಿಯದೆ ಒಂದೇ ಕಡೆ ನಿಲ್ಲುವ ಹಂತಗಳು ಮತ್ತು ನನ್ನ ಮೇಲೆಯೇ ನನಗೆ ಅನುಮಾನ ಮೂಡಿದ ಕ್ಷಣಗಳು ಎದುರಾದವು. ಆದರೆ ನಾನು ನನ್ನ ಹವ್ಯಾಸಗಳನ್ನು ಬದಲಿಸಿಕೊಳ್ಳಲು ಬದ್ಧಳಾಗಿದ್ದೆ" ಎಂದು ಸುರಭಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಕಾರ್ಡಿಯೋ ಮತ್ತು ಡಯಟ್ ಬದಲಾವಣೆಯೊಂದಿಗೆ ಅವರು 'FITTR' ಸಂಸ್ಥೆಯನ್ನು ಸೇರಿಕೊಂಡರು. ಅಲ್ಲಿನ ತರಬೇತುದಾರರು ಸುರಭಿ ಅವರ ಪೌಷ್ಟಿಕಾಂಶದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಡಯಟ್ ಚಾರ್ಟ್ ಸಿದ್ಧಪಡಿಸಿಕೊಟ್ಟರು. ಪ್ರಸ್ತುತ ತಾವು '3XL' ಗಾತ್ರದ ಉಡುಪಿನಿಂದ 'M' ಸೈಜ್‌ಗೆ ಬದಲಾಗಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತೂಕ ಇಳಿಕೆಗೆ ಸುರಭಿ ಪಾಲಿಸಿದ ಸಂಪೂರ್ಣ ಡಯಟ್ ಪ್ಲಾನ್ (Weight Loss Diet Plan)

1. ಉಪಾಹಾರ (Breakfast)

  • ಯಾವುದೇ ಎಣ್ಣೆ/ತುಪ್ಪ/ಬೆಣ್ಣೆ/ಆಲಿವ್ ಆಯಿಲ್ - 5 ಗ್ರಾಂ
  • ಓಟ್ಸ್/ಅವಲಕ್ಕಿ (ಪೋಹಾ)/ಉಪ್ಮಾ/ಕಡಲೆಹಿಟ್ಟಿನ ಚಿಲ್ಲಾ/ಶಾವಿಗೆ/ಪುರಿ - 35 ಗ್ರಾಂ
  • ಮೊಟ್ಟೆಯ ಬಿಳಿ ಭಾಗ - 2 ಪೀಸ್
  • ತರಕಾರಿಗಳು (ಯಾವ ರೂಪದಲ್ಲಾದರೂ ಬೇಯಿಸಿರಬಹುದು) - 70 ಗ್ರಾಂ

2. ಮಧ್ಯಾಹ್ನದ ಊಟ (Lunch):

  • ಯಾವುದೇ ಎಣ್ಣೆ/ತುಪ್ಪ/ಬೆಣ್ಣೆ/ಆಲಿವ್ ಆಯಿಲ್ - 5 ಗ್ರಾಂ
  • ತರಕಾರಿಗಳು - 150 ಗ್ರಾಂ
  • ಕಡಿಮೆ ಕೊಬ್ಬಿನಾಂಶವಿರುವ (Low Fat) ಪನೀರ್ - 150 ಗ್ರಾಂ
  • ಅನ್ನ ಅಥವಾ ಗೋದಿಯ ಚಪಾತಿ ಹಿಟ್ಟು (ಬೇಯಿಸದ ಹಸಿ ಹಿಟ್ಟಿನ ಅಳತೆ) - 40 ಗ್ರಾಂ

3. ಸಂಜೆಯ ಉಪಾಹಾರ (Snacks):

  • ಸಿಪ್ಪೆ ಸಮೇತ ಹಸಿ ಆಪಲ್ - 200 ಗ್ರಾಂ
  • ವೇ ಪ್ರೋಟೀನ್ (Whey Protein) - 1 ಸ್ಕೂಪ್

4. ರಾತ್ರಿಯ ಊಟ (Dinner):

  • ತರಕಾರಿಗಳು - 150 ಗ್ರಾಂ
  • ಸೋಯಾ ಚಂಕ್ಸ್ (Nutrela) - 30 ಗ್ರಾಂ
  • ಯಾವುದೇ ಎಣ್ಣೆ/ತುಪ್ಪ/ಬೆಣ್ಣೆ/ಆಲಿವ್ ಆಯಿಲ್ - 10 ಗ್ರಾಂ
  • ತೊಗರಿ ಬೇಳೆ/ಕಡಲೆಕಾಳು/ಕಪ್ಪು ಕಡಲೆ/ಹೆಸರುಕಾಳು/ರಾಜ್ಮಾ/ಅಲಸಂದೆ ಕಾಳು (ಬೇಯಿಸದ ಹಸಿ ಅಳತೆ) - 35 ಗ್ರಾಂ
  • ಅನ್ನ ಅಥವಾ ಗೋದಿಯ ಚಪಾತಿ ಹಿಟ್ಟು (ಬೇಯಿಸದ ಹಸಿ ಹಿಟ್ಟಿನ ಅಳತೆ) - 40 ಗ್ರಾಂ

ಪ್ರಯಾಣದಲ್ಲಿ ಎದುರಾದ ಕಠಿಣ ಸವಾಲುಗಳು

ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯ ನಡುವೆ ಫಿಟ್‌ನೆಸ್‌ಗೆ ಸಮಯ ಕಂಡುಕೊಳ್ಳುವುದು ಸುರಭಿ ಅವರಿಗೆ ದೊಡ್ಡ ಸವಾಲಾಗಿತ್ತು. "ನಾನು ತುಂಬಾ ಕಡಿಮೆ ನಿದ್ದೆ ಮಾಡುತ್ತಿದ್ದೆ. ದಿನನಿತ್ಯದ ಕಠಿಣ ದಿನಚರಿಯ ನಡುವೆ ವರ್ಕೌಟ್‌ಗೆ ಸಮಯ ಹೊಂದಿಸಬೇಕಿತ್ತು. ಕೆಲವು ದಿನಗಳಲ್ಲಿ ನಾನು ಬೆಳಿಗ್ಗೆ 5 ಗಂಟೆಗೆ ಎದ್ದು ತರಬೇತಿ ಆರಂಭಿಸುತ್ತಿದ್ದೆ, ಆದರೆ ನಾನು ಎದ್ದ ಕೆಲವೇ ನಿಮಿಷಗಳಲ್ಲಿ ನನ್ನ ಮಗು ಕೂಡ ಎದ್ದುಬಿಡುತ್ತಿತ್ತು" ಎಂದು ಸುರಭಿ ತಮ್ಮ ದಿನಚರಿಯನ್ನು ನೆನೆದಿದ್ದಾರೆ. ಇದರೊಂದಿಗೆ ಹೆರಿಗೆಯ ನಂತರದ ಆಯಾಸದಿಂದಾಗಿ ಹೆಚ್ಚಾಗಿ ತಿನ್ನುವ ಹವ್ಯಾಸಕ್ಕೆ ಒಳಗಾಗುತ್ತಿದ್ದರು. ಇದು ಅವರ ತೂಕ ಇಳಿಕೆಯ ಹಾದಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದನ್ನು ಮತ್ತಷ್ಟು ಕಷ್ಟಕರವಾಗಿಸಿತ್ತು. ಆದರೂ ದೃಢ ಸಂಕಲ್ಪದಿಂದ ಅವರು ಗೆದ್ದು ತೋರಿಸಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Food: ಮಳೆಗಾಲದಲ್ಲಿ ಮೀನು ಅಥವಾ ಚಿಕನ್? ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?
ಮುದ್ದಾದ ಕಂದಮ್ಮನ ಬಲಿ ಪಡೆದ ಅನಸ್ತೇಶಿಯಾ; ವೈದ್ಯರ ಯಡವಟ್ಟಿಗೆ ಭುಗಿಲೆದ್ದ ಆಕ್ರೋಶ