ಮುದ್ದಾದ ಕಂದಮ್ಮನ ಬಲಿ ಪಡೆದ ಅನಸ್ತೇಶಿಯಾ; ವೈದ್ಯರ ಯಡವಟ್ಟಿಗೆ ಭುಗಿಲೆದ್ದ ಆಕ್ರೋಶ

Published : Jul 11, 2026, 02:08 PM IST
Kerala Toddler

ಸಾರಾಂಶ

ವೈದ್ಯರ ಯಡವಟ್ಟಿಗೆ ಮುದ್ದಾದ ಕಂದಮ್ಮನ ಬಲಿಯಾಗಿದೆ. ಆಸ್ಪತ್ರೆ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ. 

ಕಣ್ಣೂರು (ಕೇರಳ): ಆಟವಾಡುತ್ತಿದ್ದಾಗ ತುಟಿಗೆ ಸಣ್ಣ ಪೆಟ್ಟು ಮಾಡಿಕೊಂಡಿದ್ದ ಮಗುವಿಗೆ ಅರಿವಳಿಕೆ (Anaesthesia) ನೀಡಿದ ಬೆನ್ನಲ್ಲೇ ಮಗು ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡೆದಿದ್ದೇನು?

ಕಣ್ಣೂರಿನ ಎರಮಮ್-ಕುಟ್ಟೂರ್ ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರ 18 ತಿಂಗಳ ದೇವಾಂಶ್ ಶೌರ್ಯ ಈ ದುರ್ಘಟನೆಗೆ ಬಲಿಯಾದ ಹಸುಳೆ. ಜುಲೈ 5 ರಂದು ಮನೆಯ ಹೊರಗೆ ಆಟವಾಡುತ್ತಿದ್ದಾಗ ದೇವಾಂಶ್ ಕೆಳಗೆ ಬಿದ್ದು ತುಟಿಗೆ ಗಾಯವಾಗಿತ್ತು. ಕೂಡಲೇ ಪೋಷಕರು ಮಗುವನ್ನು ಮಠಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಗಾಯಕ್ಕೆ ಹೊಲಿಗೆ ಹಾಕಲು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಹೊಲಿಗೆ ಹಾಕುವ ಮುನ್ನ ಮಗುವಿಗೆ ಅರಿವಳಿಕೆ ನೀಡಿದ್ದರು. ಆದರೆ ಅರಿವಳಿಕೆ ನೀಡಿದ ತಕ್ಷಣ ಮಗು ಪ್ರಜ್ಞೆ ಕಳೆದುಕೊಂಡಿತು ಎಂದು ಹೇಳಲಾಗಿದೆ.

ಚಿಕಿತ್ಸೆ ಫಲಿಸದೆ ಮಗು ಸಾವು

ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಗುವನ್ನು ತಕ್ಷಣವೇ ಕಣ್ಣೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವೈದ್ಯರ ವಿರುದ್ಧ ಪ್ರಕರಣ ದಾಖಲು

ಮಗುವಿನ ಪೋಷಕರು ಇದು ವೈದ್ಯಕೀಯ ನಿರ್ಲಕ್ಷ್ಯ ಎಂದು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅರಿವಳಿಕೆ ನೀಡುವಲ್ಲಿ ಪ್ರಮಾಣ ಮೀರಿದೆಯೇ ಅಥವಾ ಇತರ ಯಾವುದಾದರೂ ಲೋಪವಾಗಿದೆಯೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಂಶ ಹೊರಬರಬೇಕಿದೆ.

ಆಸ್ಪತ್ರೆಯ ಸ್ಪಷ್ಟನೆ ಏನು?

ಈ ಆರೋಪವನ್ನು ಅಲ್ಲಗಳೆದಿರುವ ಬೇಬಿ ಮೆಮೋರಿಯಲ್ ಆಸ್ಪತ್ರೆ ಮಂಡಳಿಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತವಾಗಿ ಹೃದಯಾಘಾತ (Cardiac Arrest) ಸಂಭವಿಸಿದೆ. ತಕ್ಷಣವೇ ಮಗುವನ್ನು ವೆಂಟಿಲೇಟರ್‌ಗೆ ಹಾಕಿ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿಗೆ ಸ್ಥಳಾಂತರಿಸಲಾಯಿತು. ಅರಿವಳಿಕೆ ನೀಡುವಾಗ ಸರಿಯಾದ ಪ್ರಮಾಣ ಅನುಸರಿಸಿದರೂ ಕೆಲವೊಮ್ಮೆ ಇಂತಹ ಅನಿರೀಕ್ಷಿತ ವೈದ್ಯಕೀಯ ತೊಡಕುಗಳು ಉಂಟಾಗುತ್ತವೆ. ನಾವು ಎಲ್ಲಾ ಚಿಕಿತ್ಸಾ ನಿಯಮಗಳನ್ನು ಪಾಲಿಸಿದ್ದೇವೆ" ಎಂದು ಆಸ್ಪತ್ರೆ ಹೇಳಿಕೊಂಡಿದೆ. ಆದರೆ ಸಣ್ಣ ಗಾಯಕ್ಕೆ ಚಿಕಿತ್ಸೆ ಕೊಡಿಸಲು ಬಂದ ಮಗು ಹೆಣವಾಗಿ ಮರಳಿದ್ದು ಪೋಷಕರಲ್ಲಿ ಮತ್ತು ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾಂಸಕ್ಕಿಂತಲೂ ತುಟ್ಟಿ ಈ ತರಕಾರಿ! ಕೆಜಿಗೆ 1200 ರೂಪಾಯಿ ಆದ್ರೂ ಖರೀದಿಸಲು ಮುಗಿಬಿದ್ದ ಜನ..!
ಮಳೆ ನೀರು ಕುಡಿದ್ರೆ ಏನಾಗುತ್ತೆ..? ಆಸ್ಪತ್ರೆ ಸೇರುತ್ತೀರಿ ಎಚ್ಚರ!