ಆಲ್ಕೋಹಾಲ್ ಸೇವನೆ ಮಾಡ್ತಿದ್ರೆ ಬೇಗ ಮುದುಕರಾದಂತೆ ಕಾಣ್ತೀರಾ ಎಚ್ಚರ!

By Suvarna NewsFirst Published Feb 2, 2024, 12:59 PM IST
Highlights

ಆಲ್ಕೋಹಾಲ್ ಅರೆ ಕ್ಷಣದಲ್ಲಿ ನಿಮ್ಮ ನೋವು ಮರೆಸಿದಂತೆ ಅನ್ನಿಸಬಹುದು. ಆದ್ರೆ ಅದ್ರ ದೀರ್ಘ ಪರಿಣಾಮ ಬರೀ ನಿಮ್ಮ ಲಿವರ್ ಮೇಲಲ್ಲ, ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತೆ. 

ಆಲ್ಕೋಹಾಲ್ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿದೆ. ಆದ್ರೂ ಅದ್ರ ಸೇವನೆ ಮಾಡೋರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಆಲ್ಕೋಹಾಲ್ ಜೇಬನ್ನು ಬರಿದು ಮಾಡೋದು ಮಾತ್ರವಲ್ಲ ಕೆಲ ಗಂಭೀರ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಯಕೃತು, ಮೂತ್ರಪಿಂಡ, ಹೃದಯಕ್ಕೆ ಇದು ಹಾನಿ ಮಾಡುತ್ತದೆ. ಮದ್ಯಪಾನವನ್ನು ನೀವು ಪ್ರತಿ ದಿನ ಮಾಡ್ತಿದ್ದರೆ ಅಥವಾ ಅದ್ರ ಸೇವನೆಯಲ್ಲಿ ಹೆಚ್ಚಳ ಕಂಡು ಬಂದರೆ ಅದರ ಪರಿಣಾಮವನ್ನು ನೀವು ಚರ್ಮದಲ್ಲೂ ಕಾಣಬಹುದು. ನಿಮ್ಮ ಚರ್ಮದ ಸೌಂದರ್ಯವನ್ನು ಆಲ್ಕೋಹಾಲ್ ಹಾಳು ಮಾಡುವುದಲ್ಲದೆ ಅನೇಕ ಚರ್ಮ ಸಂಬಂಧಿ ಸಮಸ್ಯೆಗೆ ಇದು ಕಾರಣವಾಗುತ್ತದೆ.

ಆಲ್ಕೋಹಾಲ್ (Alcohol) ಸೇವನೆಯಿಂದ ಕಾಡುವ ಚರ್ಮ (Skin) ಸಮಸ್ಯೆ :

ನಿರ್ಜಲೀಕರಣ (Dehydrates) : ನೀವು ಪ್ರತಿ ದಿನ ಅಥವಾ ವಾರಕ್ಕೆ ಮೂರ್ನಾಲ್ಕು ಬಾರಿ ಮದ್ಯ ಸೇವನೆ ಮಾಡುವವರಾಗಿದ್ದರೆ ನಿಮ್ಮ ಚರ್ಮ ನಿರ್ಜಲೀಕಣಗೊಳ್ಳುತ್ತದೆ. ಅಂದ್ರೆ ಸ್ಕಿನ್ ಒಣಗಲು ಶುರುವಾಗುತ್ತದೆ. ಚರ್ಮದ ಮೇಲೆ ಸೂಕ್ಷ್ಮ ಗೆರೆಗಳನ್ನು ನೀವು ನೋಡ್ಬಹುದು. ಅಲ್ಲದೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.

ಬೆಲ್ಲಿ ಫ್ಯಾಟ್ ಕರಗಿಸೋದು ತುಂಬಾ ಈಝಿ, ಮನೆಯಲ್ಲೇ ತಯಾರಿಸಿದ ಈ ಪಾನೀಯ ಕುಡೀರಿ ಸಾಕು

ಊತ : ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಕಾಡುವ ಇನ್ನೊಂದು ಸಮಸ್ಯೆ ಎಂದ್ರೆ ಊತ. ಇದ್ರಿಂದ ನಿಮ್ಮ ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಚರ್ಮ ಕೆಂಪಾಗುತ್ತದೆ. ರೋಸಾಸಿಯಾ ಅಥವಾ ಎಸ್ಜಿಮಾದಂತಹ ಸಮಸ್ಯೆಯಿರುವ ವ್ಯಕ್ತಿಯಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

ಬದಲಾಗುವ ಚರ್ಮದ ಬಣ್ಣ : ಮದ್ಯಪಾನ ಸೇವನೆ ಮಾಡುವ ಜನರ ಮುಖದಲ್ಲಿ ನೀವು ಬದಲಾವಣೆ ನೋಡಬಹುದು. ಅವರ ಮುಖದ ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ. ಇದು ರಕ್ತನಾಳವನ್ನು ಹಿಗ್ಗಿಸುವ ಕಾರಣ ಚರ್ಮದ ಬಣ್ಣ ಕೆಂಪಾಗುತ್ತದೆ. ಕೆನ್ನೆ ಮತ್ತು ಮೂಗಿನ ಸುತ್ತ ನೀವು ಈ ಬದಲಾವಣೆಯನ್ನು ಕಾಣಬಹುದು. 

ಮೊಡವೆ ಸಮಸ್ಯೆ : ಆಲ್ಕೋಹಾಲ್ ಅತಿಯಾದ ಸೇವನೆ ಮಾಡುವವರ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಸೋರಿಯಾಸಿಸ್ ಸೇರಿದಂತೆ ಚರ್ಮದ ಸಮಸ್ಯೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಆಲ್ಕೋಹಾಲ್ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆ ಮಾಡುತ್ತದೆ. ಇದ್ರಿಂದ ನಿಮ್ಮ ಚರ್ಮದಲ್ಲಿ ತೈಲ ಉತ್ಪಾದನೆ ಹೆಚ್ಚಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಚರ್ಮದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. 

ವಯಸ್ಸಾದಂತೆ ಕಾಣುವ ಚರ್ಮ : ಮದ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವ ಜನರು ಆಕ್ಸಿಡೇಟಿವ್ ಒತ್ತಡಕ್ಕೆ ಒಳಗಾಗುತ್ತಾರೆ. ಅಲ್ಲದೆ ಅವರ ವಯಸ್ಸು ಚಿಕ್ಕದಿದ್ರೂ ವಯಸ್ಸಾದಂತೆ ಭಾಸವಾಗುತ್ತದೆ. ಚರ್ಮದ ಮೇಲೆ ಗೆರೆ, ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. 

ಪೋಷಕಾಂಶದ ಕೊರತೆ : ಆಲ್ಕೋಹಾಲ್ ಸೇವನೆ ಮಾಡುವ ಜನರಲ್ಲಿ ಪೋಷಕಾಂಶದ ಕೊರತೆ ಸಾಮಾನ್ಯವಾಗಿ ಕಾಣಿಸುತ್ತದೆ. ಮದ್ಯಪಾನ, ನಿಮ್ಮ ದೇಹ ವಿಟಮಿನ್ ಎ, ಸಿ ಮತ್ತು ಇ ಮತ್ತು ಸತು ಮತ್ತು ಸೆಲೆನಿಯಮ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ನಮ್ಮ ಚರ್ಮಕ್ಕೆ ಇವೆಲ್ಲ ಪೋಷಕಾಂಶಗಳು ಬಹಳ ಮುಖ್ಯ. ಇವು ನಮ್ಮ ದೇಹವನ್ನು ಸರಿಯಾಗಿ ತಲುಪದೆ ಹೋದಾಗ ಶುಷ್ಕತೆ, ಉರಿಯೂತ ಕಾಣಿಸಿಕೊಳ್ಳುತ್ತದೆ. ಕಾಲಜನ್ ಉತ್ಪಾದನೆ ಕಡಿಮೆ ಆಗುತ್ತದೆ. 

ಮದ್ಯಪಾನದಿಂದ ಆಗುವ ಇನ್ನಷ್ಟು ಸಮಸ್ಯೆ : ಅತಿಯಾದ ಆಲ್ಕೋಹಾಲ್ ಸೇವನೆ ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಯೋಚಿಸುವ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆ. ದೀರ್ಘಕಾಲ ಆಲ್ಕೋಹಾಲ್ ಸೇವನೆ ಮಾಡುವವರ ಮೆದುಳಿನ ಗಾತ್ರ ಕುಗ್ಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆಯು ಗಂಭೀರ ರೋಗವಾದ ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತದೆ. ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಮಧುಮೇಹ ರೋಗಕ್ಕೆ ಆಲ್ಕೋಹಾಲ್ ಕಾರಣವಾಗುತ್ತದೆ. 

click me!