ನೆರೆಯ ರಾಷ್ಟ್ರ ಚೀನಾದಲ್ಲಿ ಕೋವಿಡ್ ಸೋಂಕು ತೀವ್ರ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತೊಮ್ಮೆ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬೆಂಗಳೂರು (ಡಿ.21) : ನೆರೆಯ ರಾಷ್ಟ್ರ ಚೀನಾದಲ್ಲಿ ಕೋವಿಡ್ ಸೋಂಕು ತೀವ್ರ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತೊಮ್ಮೆ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ನಮ್ಮ ಪಕ್ಕದಲ್ಲಿರುವ ರಾಷ್ಟ್ರ ಚೀನಾ ಸೇರಿ ಹಲವು ಹೊರದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅಂತರಾಷ್ಟ್ರೀಯ ನಗರವಾಗಿ ಬೆಳೆದಿರುವ ಬೆಂಗಳೂರಿನಲ್ಲಿ ಎಲ್ಲ ರಾಷ್ಟ್ರಗಳ ಜನರೂ ವಾಸವಾಗಿದ್ದಾರೆ. ಹೀಗಾಗಿ, ಜನರು ಓಡಾಡುವುದು ಸಾಮಾನ್ಯವಾಗಿದ್ದು, ಮಾರಣಾಂತಿಕ ಸಾಂಕಗ್ರಾಮಿಕ ಕೋವಿಡ್ ಸೋಂಕು ಮತ್ತೊಮ್ಮೆ ವೇಗವಾಗಿ ಎಲ್ಲರಿಗೂ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ.
ತಜ್ಞರ ಸಮಿತಿಯ ಸಲಹೆ ನಂತರ ತೀರ್ಮಾನ: ಕೋವಿಡ್ ಸಲಹಾ ಸಮಿತಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಮನವಿ ಮಾಡಿದೆ. ಜೊತೆಗೆ, ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವಂತೆ ತಿಳಿಸಿದ್ದಾರೆ. ಇನ್ನು ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದೆ. ಹೊರದೇಶಗಳಿಂದ ನಗರಕ್ಕೆ ವಿದೇಶಿಗರು ಕೂಡ ಬೆಂಗಳೂರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ. ಈ ಮೊದಲ ಹಂತದಲ್ಲಿ ಯಾವುದೇ ಫೈನ್ ಇಲ್ಲದೇ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲಾಗುತ್ತದೆ. ನಂತರ ಮಾರ್ಕೆಟ್, ಮಾಲ್, ಥಿಯೇಟರ್, ಪಾರ್ಕ್ ಸೇರಿದಂತೆ ಬಹುತೇಕ ಜಾಗದಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಬಗ್ಗೆ ಸಲಹೆಯನ್ನು ಕೇಳಿದೆ. ಮಾಸ್ಕ್ ಕಡ್ಡಾಯ ಆದಲ್ಲಿ ಸಾರ್ವಜನಿಕರು ಸಂಚರಿಸುವ ಮೆಟ್ರೋ, ಬಸ್, ವಿಮಾನಯಾನಕ್ಕೂ ಜನರಿಗೆ ಮಾಸ್ಕ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ವೈರಸ್ ಪ್ರಮಾಣ ಹೆಚ್ಚಾದ್ರೆ ಫೈನ್ ಹೇರಲು ಪಾಲಿಕೆ ಚಿಂತನೆ ನಡೆಸಿದೆ.
ಕೋವಿಡ್ ಉಲ್ಬಣ: ಚೀನಾ ಆಸ್ಪತ್ರೆಗಳು ಹೌಸ್ ಫುಲ್..!
ಬಿಬಿಎಂಪಿ ವಿಶೇಷ ಆಯುಕ್ತರು ಹೇಳಿದ್ದೇನು?: ಈ ಕುರಿತು ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್‌ಚಂದ್ರ ಅವರು, ನಿನ್ನೆ ಕೇಂದ್ರ ಸರ್ಕಾರದಿಂದ ಒಂದು ಮಾರ್ಗ ಸೂಚಿ ಬಿಡುಗಡೆ ಆಗಿದೆ. ಪೂರ್ತಿ ಜಿನೋಮಿಕ್ ಸೀಕ್ವೆನ್ಸ್ ಬಗ್ಗೆ ಗಮನ ವಹಿಸುವಂತೆ ಸೂಚನೆ ನೀಡಿದೆ. ವಿಶ್ವದ ಹಲವೆಡೆ ಏನಾಗುತ್ತಿದೆ? ಬೇರೆ ಬೇರೆ ದೇಶದಲ್ಲಿ ಯಾವ ತರ ಕೋವಿಡ್ ಸ್ಥಿತಿ ಇದೆ ಅನ್ನೋದನ್ನ ಗಮನ ವಹಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಎಲ್ಲರೂ ಕೂಡ ಕೋವಿಡ್ ಅಪ್ರಾಪ್ರಿಯೆಟ್ ಬಿಹೇವಿಯರ್ ಪಾಲನೆ ಮಾಡಬೇಕು. ಯಾರು ಬೂಸ್ಟರ್ ಡೋಸ್ ತೆಗೆದು ಕೊಳ್ಳದೆ ಇರೋರು ಬೇಗ ತೆಗೆದು ಕೊಳ್ಳಬೇಕು ಎಂದು ಹೇಳಿದರು.
ಸ್ವಯಂ ಪ್ರೇರಿತ ಮಾಸ್ಕ್ ಧರಿಸಿ: ಹೊರ ದೇಶಗಳಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸುವ ಮತ್ತು ಅಂತರ ಕಾಯ್ದುಕೊಳ್ಳುವ ಕೋವಿಡ್ ತಡೆಗಟ್ಟುವ ನಿಯಮಗಳನ್ನು ಜನರು ಪಾಲನೆ ಮಾಡಬೇಕು. ಸರ್ಕಾರದಿಂದ ಸಹಲಾ ಸಮಿತಿ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಾಗುತ್ತದೆ. ಇನ್ನು ಬಿಬಿಎಂಪಿ ವತಿಯಿಂದ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಮಾದ್ಯಮಗಳ ಮೂಲಕ ಅರಿವು ಮೂಡಿಸಲಾಗುತ್ತದೆ. 2 ವರ್ಷದಿಂದ ಹದಗೆಟ್ಟು ಹೋಗಿದ್ದ ಸ್ಥಿತಿ ಈಗ ನಾರ್ಮಲ್ ಆಗುತ್ತಿದೆ. ಎಲ್ಲವನ್ನೂ ಆಲೋಚನೆ ಮಾಡಿ ಮುಂದಿನ ಹೆಜ್ಜೆ ಇಡುತ್ತೆವೆ ಎಂದು ಹೇಳಿದರು.
ಕರಾವಳಿಯಲ್ಲಿ ಮೀನು ಸುಗ್ಗಿಗೆ ಕಾರಣ ಕೊರೊನಾ!
ಹೊಸ ವರ್ಷಾಚರಣೆ ನಿರ್ಬಂಧ ಕುರಿತು ಶೀಘ್ರ ತೀರ್ಮಾನ: ಹೊಸ ವರ್ಷಾಚರಣೆಗೆ ಈಗಾಗಲೇ ಎಲ್ಲ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ವೇಳೆ ದೇಶ ವಿದೇಶಗಳಿಂದ ಜನರು ಆಗಮಿಸಲಿದ್ದು, ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ನ್ಯೂ ಇಯರ್ ಸೆಲೆಬ್ರೇಷನ್ ಬಗ್ಗೆ ಏನನ್ನು ಕೂಡ ಸ್ಪಷ್ಟವಾಗಿ ಹೇಳೋ ಪರಿಸ್ಥಿತಿಯಲ್ಲಿ ಇಲ್ಲ. ವಾಸ್ತವ ಅಂಶ ಗಮನ ಹರಿಸಿ ತಾಂತ್ರಿಕ ಸಲಹಾ ಸಮಿತಿ ಸಲಹೆ ಕೊಡುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಲೂ ಕೂಡ ಶೇ.೨ ಪ್ರಯಾಣಿಕರನ್ನು ರ್ಯಾಂಡಮ್ ಆಗಿ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. ಎಲ್ಲಿಯೂ ಕೂಡ ನಿಗಾವಹಿಸುವ ಕಾರ್ಯ ನಿಲ್ಲಿಸಿಲ್ಲ. ಈಗ ಟೆಸ್ಟಿಂಗ್ ಹೆಚ್ಚು ಮಾಡೋ ಕೆಲಸ ಆಗುತ್ತದೆ. ಸದ್ಯ ಈಗ ಆತಂಕ ಪಡುವಂತಹ ಪರಿಸ್ಥಿತಿ ಏನು ಇಲ್ಲ. ಆದರೆ, ಸದ್ಯ ಮಾಸ್ಕ್ ಹಾಕಿ, ಬೂಸ್ಟರ್ ಡೋಸ್ ಪಡೆದುಕೊಳ್ಳದೇ ಇರೋರು ಪಡೆದು ಕೊಳ್ಳಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ. ತ್ರಿಲೋಕ್ ಚಂದ್ರ ಸಲಹೆ ನೀಡಿದ್ದಾರೆ.