
ದಶಕಗಳಿಂದ ಜನರು ನಾನ್ ಸ್ಟಿಕ್ (Non stick) ಪಾತ್ರೆಗಳನ್ನು ಬಳಸ್ತಿದ್ದಾರೆ. ಇದ್ರಲ್ಲಿ ಆಹಾರ ಅಂಟಿಕೊಳ್ಳೋದಿಲ್ಲ. ಹಾಗಾಗಿ ಅಡುಗೆ (cooking) ಮಾಡೋದು, ಸ್ವಚ್ಛಗೊಳಿಸೋದು ಸುಲಭ. ಇದೇ ಕಾರಣಕ್ಕೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆಗಳು ಜಾಗ ಪಡೆದಿವೆ. ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ನಾನ್ ಸ್ಟಿಕ್ ಪಾತ್ರೆಗಳನ್ನು ನಾವು ಕಾಣ್ಬಹುದು. ನಾನ್ ಸ್ಟಿಕ್ ಪಾತ್ರೆಗಳಿಗೆ ಮರದ ಸೌಟುಗಳನ್ನು ಬಳಸ್ಬೇಕು. ಇದ್ರ ಬಗ್ಗೆ ಸೂಕ್ತ ಮಾಹಿತಿ ಜನರಿಗೆ ಇಲ್ಲದ ಕಾರಣ ನಾನ್ ಸ್ಟಿಕ್ ಪಾತ್ರೆಗಳಿಗೆ ಸ್ಟೀಲ್ ಸೌಟು ಬಳಸೋದಲ್ಲದೆ, ಕ್ಲೀನ್ ಮಾಡುವ ಭರಾಟೆಯಲ್ಲಿ ಚೆನ್ನಾಗಿ ಪಾತ್ರೆಯನ್ನು ಉಜ್ಜುತ್ತಾರೆ. ಇದ್ರಿಂದಾಗಿ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಗೀರು ಕಾಣಿಸಿಕೊಳ್ಳುತ್ತೆ. ಒಂದೋ ಎರಡೋ ಗೀರು ಬಿದ್ರೆ ಏನಾಗುತ್ತೆ? ಮೊದಲೇ ದುಬಾರಿ ಬೆಲೆ ಕೊಟ್ಟು ಪಾತ್ರೆ ಖರೀದಿ ಮಾಡಿದ್ದೇವೆ ಎನ್ನುವ ಸಬೂಬು ನೀಡಿ ಜನರು ಇದೇ ಪಾತ್ರೆಯಲ್ಲಿ ಅಡುಗೆಗೆ ಮುಂದುವರೆಸ್ತಾರೆ. ನೀವೂ ಗೀರು ಬಿದ್ದ ನಾನ್ ಸ್ಟಿಕ್ ಪಾತ್ರೆಯಲ್ಲೇ ಅಡುಗೆ ಮಾಡ್ತಿದ್ದರೆ ಈ ಸುದ್ದಿಯನ್ನು ಓದಿ. ಈಗ್ಲೇ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ, ಪಾತ್ರೆಯನ್ನು ಕಸಕ್ಕೆ ಹಾಕಿ.
ನಾನ್ ಸ್ಟಿಕ್ ಪಾತ್ರೆಯಲ್ಲಿ ಒಂದು ಗೀರು ಬಿದ್ರೆ ಏನಾಗುತ್ತೆ? : ನಾನ್ ಸ್ಟಿಕ್ ಪಾತ್ರೆಗಳು ಅಪಾಯಕಾರಿ ಎನ್ನುವ ಸುದ್ದಿ ಹಿಂದಿನಿಂದಲೂ ಇದೆ. ಈಗ ಮತ್ತೊಂದು ಅಧ್ಯಯನ ಇದ್ರ ಮೇಲೆ ನಡೆದಿದೆ. ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಗೀರು ಬಿದ್ರೆ ಏನಾಗುತ್ತೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಟೆಫ್ಲಾನ್ ಲೇಪಿತ ಪ್ಯಾನ್ ಮೇಲೆ ಒಂದು ಗೀರು 9,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಆಹಾರಕ್ಕೆ ಬಿಡುಗಡೆ ಮಾಡುತ್ತದೆ. ಗೀರು ಹೆಚ್ಚಾಗ್ತಿದ್ದಂತೆ ಮೈಕ್ರೋಪ್ಲಾಸ್ಟಿಕ್ ಕಣ ಆಹಾರ ಸೇರುವ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಪ್ರತಿ ಬಾರಿ ನೀವು ಅಡುಗೆ ಮಾಡುವ ಸಮಯದಲ್ಲಿ 2 ಮಿಲಿಯನ್ ಮೈಕ್ರೋಪ್ಲಾಸ್ಟಿಕ್ ಕಣ ಬಿಡುಗಡೆಯಾಗುವ ಅಪಾಯವಿದೆ.
ದೇಹದಲ್ಲಿ ಮೈಕ್ರೋಪ್ಲಾಸ್ಟಿಕ್ಗಳು ಸಂಗ್ರಹವಾದ್ರೆ ಏನಾಗುತ್ತೆ? ಅಧ್ಯಯನದ ಪ್ರಕಾರ, ಮೈಕ್ರೋಪ್ಲಾಸ್ಟಿಕ್ಗಳು ಸೇರ ಬಾರದ ಜಾಗವನ್ನು ಸೇರುತ್ತವೆ. ರಕ್ತ, ಶ್ವಾಸಕೋಶ ಮತ್ತು ಗರ್ಭದಲ್ಲಿರುವ ಶಿಶುಗಳ ಜರಾಯುಗಳಲ್ಲಿಯೂ ಸಹ ಈ ಸಣ್ಣ ತುಣುಕುಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ನೋಡಬಹುದಾದ ಮತ್ತು ತೆಗೆಯಬಹುದಾದ ದೊಡ್ಡ ಪ್ಲಾಸ್ಟಿಕ್ ತ್ಯಾಜ್ಯಕ್ಕಿಂತ ಇದು ಭಿನ್ನವಾಗಿರುತ್ತವೆ. ಮೈಕ್ರೋಪ್ಲಾಸ್ಟಿಕ್ಗಳು ಬಹುತೇಕ ಅಗೋಚರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಅವುಗಳ ಪರಿಣಾಮ ಹೆಚ್ಚು ಮಾರಕವಾಗುತ್ತದೆ.
ನೀವು ಆಹಾರ ಸೇವನೆ ಮಾಡಿದಾಗ ಮೈಕ್ರೋಪ್ಲಾಸ್ಟಿಕ್ ಕಣಗಳು ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗುವುದಿಲ್ಲ. ಬದಲಾಗಿ, ಅವು ರಕ್ತಪ್ರವಾಹಕ್ಕೆ ಪ್ರವೇಶಿಸಿ, ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಲ್ಲಿ ಅಡಗಿಕೊಳ್ಳುತ್ತವೆ. ಮೆದುಳಿನ ಮೇಲೂ ಇವು ಪರಿಣಾಮ ಬೀರುತ್ತವೆ. ಮೈಕ್ರೋಪ್ಲಾಸ್ಟಿಕ್ ದೇಹ ಸೇರುವುದ್ರಿಂದ ಹಾರ್ಮೋನ್ ಕೆಲಸಕ್ಕೆ ಅಡ್ಡಿಯಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ದುರ್ಬಲಗೊಳಿಸುತ್ತದೆ. ದೀರ್ಘಕಾಲದ ಉರಿಯೂತಕ್ಕೆ ಇದು ಕಾರಣವಾಗಬಹುದು. ಬಂಜೆತನ, ಚಯಾಪಚಯ ಅಸ್ವಸ್ಥತೆಗಳು ಮತ್ತು ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುವುದು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಅಧ್ಯಯನ ಹೇಳಿದೆ.
ಯಾವುದೇ ಕಾರಣಕ್ಕೂ ಒಂದೇ ಒಂದು ಗೀರಾದ್ರೂ ಆ ನಾನ್ ಸ್ಟಿಕ್ ಪಾತ್ರೆಯನ್ನು ಬಳಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಾನ್ ಸ್ಟಿಕ್ ಗೆ ಪರ್ಯಾಯವಾಗಿ ಸ್ಟೇನ್ಲೆಸ್ ಸ್ಟೀಲ್, ಎರಕಹೊಯ್ದ ಕಬ್ಬಿಣ ಅಥವಾ ಸೆರಾಮಿಕ್ ಕುಕ್ವೇರ್ ಸೇರಿದಂತೆ ಸುರಕ್ಷಿತವೆಂದು ಪರಿಗಣಿಸಲಾದ ಪಾತ್ರೆ ಬಳಕೆ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.