ದೊಡ್ಡ ಕಂಪೆನಿಗಳ ಸುಗಂಧಿತ, ನೋಡಲು ಆಕರ್ಷಕವಾಗಿರುವ ಸ್ಯಾನಿಟರಿ ಪ್ಯಾಡ್ ಗಳು ಮಹಿಳೆಯರಲ್ಲಿ ಜನಪ್ರಿಯತೆ ಗಳಿಸಿವೆ. ಆದರೆ, ಇವುಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಕಂಡುಬಂದಿದ್ದು, ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಹೀಗಾಗಿ, ರಾಸಾಯನಿಕಮುಕ್ತ ನೈಸರ್ಗಿಕ ಅಂಶಗಳುಳ್ಳ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ಇಂದಿನ ಅಗತ್ಯ.
ಸ್ಯಾನಿಟರಿ ಪ್ಯಾಡ್ ಗಳು ಮಹಿಳೆಯರಿಗೆ ಬಲವಾದ ಆತ್ಮವಿಶ್ವಾಸ ಒದಗಿಸಿರುವುದು ಸುಳ್ಳಲ್ಲ. ಮುಟ್ಟಿನ ದಿನಗಳಲ್ಲಿ ಹತ್ತಿ ಬಟ್ಟೆಯನ್ನು ಬಳಸುವುದು ಆರೋಗ್ಯಕ್ಕೆ ಹಿತವಾದರೂ ಎಷ್ಟೋ ಸಂದರ್ಭಗಳಲ್ಲಿ, ಮುಖ್ಯವಾಗಿ ಕಾರ್ಯನಿಮಿತ್ತ ಹೊರಗೆ ಹೋಗುವ ಸಮಯದಲ್ಲಿ ಅದರಿಂದ ಮುಜುಗರವೇ ಹೆಚ್ಚು. ಈ ಕಾರಣದಿಂದ ಕೋಟ್ಯಂತರ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಗಳನ್ನು ಇಂದು ಬಳಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ, ಯಾವುದೇ ಬಗೆಯ ಬಟ್ಟೆಗಿಂತ ಸ್ಯಾನಿಟರಿ ಪ್ಯಾಡ್ ಗಳೇ ಆರೋಗ್ಯಕ್ಕೆ ಸುರಕ್ಷಿತ ಎನ್ನುವುದಾಗಿ ಬಿಂಬಿಸಲಾಯಿತು. ಹಲವಾರು ಸೋಂಕುಗಳನ್ನು ಇದರಿಂದ ದೂರವಿಡಬಹುದು ಎಂದು ಹೇಳಲಾಯಿತು. ಆದರೆ, ಇತ್ತೀಚಿನ ಕೆಲವು ಅಧ್ಯಯನಗಳು ಇವೆಲ್ಲ ಸುಳ್ಳು ಎಂದು ಹೇಳುತ್ತಿವೆ. ಸ್ಯಾನಿಟರಿ ಪ್ಯಾಡ್ ಗಳಿಂದ ಕ್ಯಾನ್ಸರ್ ನಂತಹ ಮಾರಕ ರೋಗ ಬರಬಹುದು ಎಂದು ಎಚ್ಚರಿಕೆ ನೀಡುತ್ತಿವೆ. ಅಧ್ಯಯನದ ಪ್ರಕಾರ, ಭಾರತದಲ್ಲಿ ಸಿದ್ಧವಾಗುವ ಹಲವಾರು ಮಾದರಿಯ ಸ್ಯಾನಿಟರಿ ಪ್ಯಾಡ್ ಗಳು ಸುರಕ್ಷಿತವಲ್ಲ. ದೊಡ್ಡ ಕಂಪೆನಿಗಳ ಹೆಸರಿನಲ್ಲಿ ಮಾರಾಟವಾಗುವ ಪ್ಯಾಡ್ ಗಳೂ ಸಹ ಸುರಕ್ಷಿತವಲ್ಲ ಎನ್ನಲಾಗಿದೆ. ಏಕೆಂದರೆ, ಇವುಗಳಲ್ಲಿ ಹಲವು ಅಪಾಯಕಾರಿ ರಾಸಾಯನಿಕಗಳ ಇರುವಿಕೆಯನ್ನು ಗುರುತಿಸಲಾಗಿದೆ.
ಬಣ್ಣಬಣ್ಣದ ಪ್ಯಾಕ್ ಗಳಲ್ಲಿ ಲಭ್ಯವಾಗುವ ಸ್ಯಾನಿಟರಿ ಪ್ಯಾಡ್ (Sanitary Pad) ಗಳು ನೋಡಲು ಶುಭ್ರವಾಗಿ, ಚೊಕ್ಕವಾಗಿರುವಂತೆ ಭಾಸವಾಗುತ್ತವೆ. ಆದರೆ, ಬಿಳಿ (White) ಬಣ್ಣದಲ್ಲಿರುವ ಇವು ಮೇಲ್ನೋಟಕ್ಕಷ್ಟೇ ಶುಭ್ರ. ಇವುಗಳ ತಯಾರಿಕೆಯಲ್ಲಿ ಅಪಾಯಕಾರಿ (Dangerous) ರಾಸಾಯನಿಕಗಳನ್ನು (Chemicals) ಬಳಸಲಾಗುತ್ತದೆ. ಕ್ಯಾನ್ಸರ್ (Cancer) ಸೇರಿದಂತೆ ಬಂಜೆತನ (Infertility), ಮಧುಮೇಹ (Diabetes) ಹಾಗೂ ಹೃದಯ ರೋಗಗಳೂ (Heart Problems) ಇವುಗಳಿಂದ ಬರುವ ಸಾಧ್ಯತೆ ಇದೆ ಎನ್ನುವುದಾಗಿ ಅಧ್ಯಯನವೊಂದು ಹೇಳಿದೆ.
ಪಿರಿಯಡ್ಸ್ ಕಿರಿಕಿರಿ ಅನ್ಬೇಡಿ, ಸರಿಯಾದ ಪ್ಯಾಡ್ ಬಳಸಿದ್ರೆ ಆರಾಮವಾಗಿರ್ಬೋದು
ದೆಹಲಿಯ ಟಾಕ್ಸಿಕ್ಸ್ ಲಿಂಕ್ (Toxics Link) ಹೆಸರಿನ ಎನ್ ಜಿಒ ನಡೆಸಿದ್ದ ಈ ಅಧ್ಯಯನದ ಪ್ರಕಾರ, ಭಾರತದಲ್ಲಿ ದೊರೆಯುವ ಪ್ರಮುಖ ಹತ್ತು ಕಂಪೆನಿಗಳ ಸ್ಯಾನಿಟರಿ ಪ್ಯಾಡ್ ಗಳಲ್ಲಿ ಥೈಲೇಟ್ (Phthalates), ವೊಲಟೈಲ್ ಆರ್ಗಾನಿಕ್ ಕಾಂಪೋಂಡ್ (Vocs) ಅಂಶಗಳು ಕಂಡುಬಂದಿವೆ. ಚಿಂತೆಯ ಸಂಗತಿ ಎಂದರೆ, ಇವೆರಡೂ ಅಂಶಗಳು ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸಲು ಕಾರಣವಾಗುತ್ತವೆ. ಈ ಅಧ್ಯಯನವು “ಮೆನ್ ಸ್ಟ್ರುವಲ್ ವೇಸ್ಟ್ 2020ʼ ಎನ್ನುವ ವರದಿಯಲ್ಲಿ ಪ್ರಕಟವಾಗಿದೆ.
ಭಾರತದಲ್ಲಿ 15-24ರ ವಯೋಮಾನದ ಶೇ.64ರಷ್ಟು ಮಹಿಳೆಯರು ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಮಾಡುತ್ತಾರೆ. ಕೆಲವು ವರ್ಷಗಳಿಂದ ಸ್ಯಾನಿಟರಿ ಪ್ಯಾಡ್ ಗಳ ಕುರಿತು ಅರಿವು ಹೆಚ್ಚಿರುವ ಪರಿಣಾಮ ದಿನದಿಂದ ದಿನಕ್ಕೆ ಇವುಗಳ ಬಳಕೆ ಏರುತ್ತಲೇ ಹೋಗಿದೆ. ಅಸಲಿಗೆ ಇವು ಹಲವು ಗಂಭೀರ ಸೋಂಕುಗಳನ್ನು (Infections) ತಡೆಗಟ್ಟಬೇಕು. ಅದಕ್ಕೆಂದೇ ಸ್ಯಾನಿಟರಿ ಪ್ಯಾಡ್ ಗಳ ಉತ್ಪಾದನೆಗೆ ಬೆಂಬಲ ದೊರೆತಿತ್ತು. ಆದರೆ, ಈಗ ದೊರೆತಿರುವ ರಾಸಾಯನಿಕಗಳು ಅತೀವ ಅಪಾಯಕಾರಿಯಾಗಿವೆ. ಹೀಗಾಗಿ, ಮಹಿಳೆಯರು ಸ್ಯಾನಿಟರಿ ನ್ಯಾಪ್ ಕಿನ್ ಆಯ್ಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಸಮಯ ಬಂದಿದೆ. ಕಡಿಮೆ ದರದಲ್ಲಿ ಸಿಗುತ್ತದೆಯೆಂದೋ, ಹಿಂದಿನಿಂದಲೂ ಬಳಸುತ್ತಿದ್ದೇವೆ ಎನ್ನುವ ಕಾರಣಕ್ಕೋ ಅಪಾಯಕಾರಿ ಪ್ಯಾಡ್ ಗಳನ್ನು ಬಳಕೆ ಮಾಡಲು ಮುಂದಾಗದೆ ಸಂಯಮ ವಹಿಸಬೇಕು.
ಸ್ಯಾನಿಟರಿ ಪ್ಯಾಡ್‌ಗಳಿಂದ ರಾಶಸ್ ಸಮಸ್ಯೆ; ಕಡಿಮೆಯಾಗಲು ಏನು ಮಾಡ್ಬೋದು ?
ಆರೋಗ್ಯದ ಮೇಲೆ ಪರಿಣಾಮ (Impact on Health)
ಥೈಲೇಟ್ಸ್ ಕೆಮಿಕಲ್ ಚರ್ಮದ ಸಂಪರ್ಕಕ್ಕೆ ಬಂದರೆ ಕ್ಯಾನ್ಸರ್, ಮಧುಮೇಹ, ಹೃದ್ರೋಗಕ್ಕೆ ಕಾರಣವಾಗಬಲ್ಲದು. ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿ ದುರ್ಬಲ ಮಾಡುತ್ತದೆ. ವೊಲಟೈಲ್ ಆರ್ಗಾನಿಕ್ ಕಾಂಪೋಂಡ್ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಅಸ್ತಮಾ ಹಾಗೂ ಕೆಲವು ರೀತಿಯ ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಜನನಾಂಗದ (Vagina) ಭಾಗದ ಚರ್ಮ ಸೂಕ್ಷ್ಮವಾಗಿರುವುದರಿಂದ ಅಪಾಯ ಹೆಚ್ಚು.
ಯಾವ ರೀತಿಯ ಪ್ಯಾಡ್ ಸುರಕ್ಷಿತ (Safe)?
ರಾಸಾಯನಿಕ ಮುಕ್ತ, ನೈಸರ್ಗಿಕ (Organic) ಪದಾರ್ಥಗಳಿಂದ ತಯಾರಿಸಿದ ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಮಾಡುವುದು ಅಗತ್ಯ. ಇಂದು ಹಲವು ನೈಸರ್ಗಿಕ ಪ್ಯಾಡ್ ಗಳು ಲಭ್ಯವಿವೆ. ಅವು ಬಯೋಡಿಗ್ರೇಡೆಬಲ್ (Biodegradable) ಕೂಡ ಆಗಿರುವುದರಿಂದ ಪರಿಸರಕ್ಕೂ ಪೂರಕವಾಗಿವೆ. ಯಾವುದೇ ಕಾರಣಕ್ಕೂ ದೊಡ್ಡ ಕಂಪೆನಿಗಳ ಸುಗಂಧಿತ (Scented) ಪ್ಯಾಡ್ ಗಳ ಬಳಕೆ ಸಲ್ಲದು. ಇವುಗಳಿಂದಲೂ ಅನಾಹುತ ಹೆಚ್ಚು.