
ರಾಜೇಶ ಭಡ್ತಿ
ಸಾಗರ (ಡಿ.5) : ಗುಣಮಟ್ಟದ ಸೇವೆ ಹಾಗೂ ಸ್ವಚ್ಛತೆ, ಸಿಬ್ಬಂದಿ ಸೇವಾ ಬದ್ಧತೆಯಿಂದ ಪಟ್ಟಣದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಕೇಂದ್ರ ಸರ್ಕಾರದ ಅತ್ಯುತ್ತಮ ಆಸ್ಪತ್ರೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ.
ಕೇಂದ್ರ ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಈ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹೆರಿಗೆ ಕೊಠಡಿಯ ಗುಣಮಟ್ಟದಲ್ಲಿ ಶೇ.99ರಷ್ಟುಮತ್ತು ಹೆರಿಗೆ ಶಸ್ತ್ರಚಿಕಿತ್ಸೆ ಕೊಠಡಿಯ ಗುಣಮಟ್ಟದಲ್ಲಿ ಶೇ.93ರಷ್ಟುಗುರಿ ಮುಟ್ಟಿದ್ದರಿಂದ ಈ ಗೌರವ ದೊರಕಿದೆ. ರಾಜ್ಯದಲ್ಲಿ ನಾಲ್ಕು ಆಸ್ಪತ್ರೆಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅದರಲ್ಲಿ ಸಾಗರದ ಈ ಆಸ್ಪತ್ರೆಯೂ ಒಂದಾಗಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಸ್ಥಳೀಯ ವೈದ್ಯರು, ಸಿಬ್ಬಂದಿ ಸೇವೆಯೇ ಕಾರಣವೆಂದು ಹೇಳಲಾಗುತ್ತಿದೆ.
Weird News: ಹೆರಿಗೆ ನಂತ್ರ 15 ದಿನ ಟೆಂಟಿನಲ್ಲಿರ್ಬೇಕು ತಾಯಿ - ಮಗು
ಕಳೆದ ಕೆಲ ವರ್ಷದಿಂದ ರಾಜ್ಯಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದ ಈ ಆಸ್ಪತ್ರೆ ಇದೀಗ ದೇಶದ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ದಿನದ 24 ಗಂಟೆಯೂ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಸೇವೆ ಇಲ್ಲಿ ಲಭ್ಯವಿದ್ದು, ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದ್ದರಿಂದಲೇ ತಾಲೂಕು ಕೇಂದ್ರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಕೇಂದ್ರ ಸೇರಿದಂತೆ ಸೊರಬ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಪಕ್ಕದ ಜಿಲ್ಲೆಯ ಸಿದ್ದಾಪುರಗಳಿಂದಲೂ ಜನರು ಬರುತ್ತಾರೆ. ತಿಂಗಳಿಗೆ ಅಂದಾಜು 370 ರಿಂದ 430 ಹೆರಿಗೆಗಳು ನಡೆಯುತ್ತಿದ್ದು, ತಾಯಿ ಹಾಗೂ ಮಗುವಿನ ಮರಣ ಪ್ರಮಾಣ ಶೂನ್ಯವೆಂದೇ ಹೇಳಬಹುದು. ನಿತ್ಯವೂ 400ಕ್ಕೂ ಹೆಚ್ಚು ಹೊರ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ.
ಪಟ್ಟಣದ ಕೇಂದ್ರ ಸ್ಥಾನದಲ್ಲಿ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆ ಇದೆ. ಮೊದಲು ಈ ಆಸ್ಪತ್ರೆಯಲ್ಲಿಯೇ ಹೆರಿಗೆ ವಿಭಾಗವೂ ಸೇರಿಕೊಂಡಿತ್ತು. ದಿನೆ ದಿನೆ ಒತ್ತಡ ಜಾಸ್ತಿಯಾಗಿದ್ದರಿಂದ, ಜೊತೆಗೆ ಹೆರಿಗೆಗೆ ಅಲ್ಲದೆ ಬೇರೆ ಬೇರೆ ರೋಗಗಳ ಚಿಕಿತ್ಸೆಯೂ ಇಲ್ಲಿ ನಡೆಯುತ್ತಿದ್ದರಿಂದ ಹೆರಿಗೆ ವಿಭಾಗ ಪ್ರತ್ಯೇಕವಾಗಿಯೇ ಇರಬೇಕು ಎನ್ನುವ ಕಾರಣಕ್ಕಾಗಿ 50 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆಯನ್ನು 2016-17ನೇ ಸಾಲಿನಲ್ಲಿ ಆರಂಭಿಸಲಾಯಿತು. ಆಡಳಿತಾತ್ಮಕವಾಗಿ ಮುಖ್ಯ ಆಸ್ಪತ್ರೆಯ ಸುಪರ್ದಿಯಲ್ಲಿಯೇ ಈ ಆಸ್ಪತ್ರೆಯೂ ನಡೆಯುತ್ತಿದೆ.
ಹಿಂದೆ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಶಾಸಕರಾಗಿದ್ದಾಗ ಇಂಥದ್ದೊಂದು ಆಸ್ಪತ್ರೆಯ ಅವಶ್ಯಕತೆಯನ್ನು ಮನಗಂಡು ಪಟ್ಟಣದ ಪ್ರವಾಸಿ ಮಂದಿರದ ಸಮೀಪ ಜಾಗವನ್ನು ಗುರುತಿಸಿ, ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದರು. ಅದರ ಫಲವಾಗಿ ಆಸ್ಪತ್ರೆ ನಿರ್ಮಾಣವಾಗಿ 2016ರಲ್ಲಿ ಅವರು ವಿಧಾನಸಭಾಧ್ಯಕ್ಷರಾಗಿದ್ದಾಗ ಲೋಕಾರ್ಪಣೆ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಆಸ್ಪತ್ರೆಯಲ್ಲಿ ಗುಣಮಟ್ಟದ ವೈದ್ಯಕೀಯ ಸಿಬ್ಬಂದಿ, ತಜ್ಞ ಸ್ತ್ರೀರೋಗ ತಜ್ಞರು, ಸಾಮಾನ್ಯ ವಾರ್ಡ್‌ಗಳಲ್ಲದೆ ವಿಶೇಷ ವಾರ್ಡ್‌ಗಳು, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಹವಾನಿಯಂತ್ರಿತ ಡೆಲಿವರಿ ರೂಮ್, ಹೈಟೆಕ್ ಯಂತ್ರೋಪಕರಣಗಳಿದ್ದು ವೈದ್ಯರು ಹಾಗೂ ಸಿಬ್ಬಂದಿಯ ಗುಣಮಟ್ಟದ ಸೇವೆಯಿಂದಾಗಿ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನವಾಗಿದೆ.
ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಶಕೀಲಾ!
ತಾಲೂಕು ಮಟ್ಟದ ಆಸ್ಪತ್ರೆ ಕೇಂದ್ರದ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಇದಕ್ಕೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ, ಅವರ ಕೆಲಸ, ಗುಣ, ನಡತೆಯೇ ಕಾರಣ.
-ಡಾ.ಮೋಹನ್‌ತಾ.ವೈದ್ಯಾಧಿಕಾರಿ
ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ನಾಗರಾಜ್ ನಾಯಕ್ ಮತ್ತು ಲಕ್ಷ ಯೋಜನೆಯ ಜಿಲ್ಲಾ ಸಂಯೋಜಕಾರಾದ ಶಿಲ್ಪಿ, ಸ್ಪೂರ್ತಿ ಹಾಗೂ ಇಲ್ಲಿನ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಸಹಕಾರದಿಂದ ಇದು ಸಾಧ್ಯವಾಗಿದೆ. ಇಡೀ ತಂಡಕ್ಕೆ ಸಲ್ಲುವ ಗೌರವ.
ಡಾ. ಪರಪ್ಪ, ಉಪವಿಭಾಗೀಯ ಆಸ್ಪತ್ರೆ ಆಡಳಿತಾಧಿಕಾರಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.