ಇತ್ತೀಚಿನ ದಿನಗಳಲ್ಲಿ ಅಕ್ಕಿಯನ್ನು ಆಹಾರದಿಂದ ದೂರವಿಡುವ ಪರಿಪಾಠ ಹೆಚ್ಚಾಗಿದೆ. ಆದರೆ, ಕೆಂಪು ಅಕ್ಕಿಯಲ್ಲಿ ದೇಹಾರೋಗ್ಯಕ್ಕೆ ಬೇಕಾದ ಹಲವು ಉತ್ತಮ ಅಂಶಗಳಿರುತ್ತವೆ. ಹೀಗಾಗಿ, ಕೆಂಪು ಅಕ್ಕಿಯನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಆಯುರ್ವೇದ ತಜ್ಞರು.
ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಾತು ಬಂದಾಗಲೆಲ್ಲ “ರೈಸ್ ಹೆಚ್ಚು ತಿನ್ನಬೇಡಿ’ ಎನ್ನುವ ಸಲಹೆ ಸಾಮಾನ್ಯ. ಮಧುಮೇಹಿಗಳಿಗೆ ಅಕ್ಕಿಯ ಅನ್ನದಿಂದ ದೂರ ಉಳಿಯುವಂತೆ ಸೂಚನೆ ನೀಡಲಾಗುತ್ತದೆ. ಇನ್ನು, ಅನ್ನದಿಂದಲೇ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ, ದೇಹದ ಅನಾರೋಗ್ಯ ಉಂಟಾಗುತ್ತದೆ ಎನ್ನುವ ನಂಬಿಕೆಯೂ ಹಲವೆಡೆ ಸಾಮಾನ್ಯವಾಗಿ ಇದೆ. ಆದರೆ, ಆಯುರ್ವೇದದ ಪ್ರಕಾರ, ಅಕ್ಕಿಯಿಂದ ಆರೋಗ್ಯಕ್ಕೆ ಹೆಚ್ಚು ಲಾಭವಿದೆ. ದೇಹಕ್ಕೆ ಯಾವುದೇ ನಿರ್ದಿಷ್ಟ ಆಹಾರ ಹೆಚ್ಚಾದರೂ ಅದರಿಂದ ತೊಂದರೆಯಾಗುವುದು ಸಹಜ. ಹಾಗೆಯೇ, ಅಕ್ಕಿಯ ಆಹಾರ ಹೆಚ್ಚಾದಾಗಲೂ ದೇಹದಲ್ಲಿ ಹಲವು ರೀತಿಯ ದೋಷಗಳು ಉಂಟಾಗುತ್ತವೆ. ದೇಹಕ್ಕೆ ಸಮತೋಲನ ಆಹಾರ ಅತಿ ಅಗತ್ಯ. ಆದರೆ, ಎಲ್ಲರೂ ಭಾವಿಸುವಂತೆ ಅಕ್ಕಿ ಕೊಬ್ಬನ್ನು ಹೆಚ್ಚಿಸುವುದಿಲ್ಲ, ತೂಕ ಹೆಚ್ಚಲು ಸಹ ಕಾರಣವಾಗುವುದಿಲ್ಲ. ಈ ಬಗ್ಗೆ ಆಯುರ್ವೇದ ವೈದ್ಯೆ ಡಾ.ವೈಶಾಲಿ ಶುಕ್ಲಾ ಎನ್ನುವವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವಿಶಿಷ್ಟ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಕಿ ಹಾಗೂ ಅನ್ನದ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಿಸುವಲ್ಲಿ ಇದು ಸಹಕಾರಿ.
ಭಾರತ (India) ಸೇರಿದಂತೆ ಏಷ್ಯಾದ ಹಲವು ಪ್ರಾಂತ್ಯಗಳಲ್ಲಿ ಅಕ್ಕಿಯ (Rice) ಬಳಕೆ ವ್ಯಾಪಕವಾಗಿದೆ. ಅಕ್ಕಿಯೇ ಇಲ್ಲಿನ ಪ್ರಧಾನ ಆಹಾರ (Food). ಕೆಲವು ಪ್ರದೇಶಗಳಲ್ಲಿ ಗೋಧಿ, ರಾಗಿ, ಜೋಳದ ಆಹಾರ ಸೇವನೆ ಕಂಡುಬರುತ್ತದೆಯಾದರೂ ಅಕ್ಕಿ ಎಲ್ಲೆಡೆ ಬಳಕೆಯಲ್ಲಿದೆ. ಆಯುರ್ವೇದದಲ್ಲಿ (Ayurveda) ಅಕ್ಕಿಗೆ ಮಹತ್ವದ ಸ್ಥಾನವಿದೆ. ಇದರಿಂದ ಆರೋಗ್ಯಕ್ಕೆ (Health) ಹಲವಾರು ಲಾಭಗಳಿವೆ. ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗುವಂತಹ ಅಂಶಗಳು ಅಕ್ಕಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ.
ಖಿನ್ನತೆ ನಿವಾರಿಸುವ ಕೇಸರಿ, ದುಬಾರಿ ಮಸಾಲೆಯಿಂದ ಆರೋಗ್ಯಕ್ಕಿದೆ ಹಲವು ಲಾಭ
• ಅಕ್ಕಿಯಿಂದ ತೂಕ (Weight) ಹೆಚ್ಚುವುದಿಲ್ಲ
ಇಂದಿನ ದಿನಗಳಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಅಕ್ಕಿಯಲ್ಲಿ ಕೊಬ್ಬಿನ (Fat) ಅಂಶ ಇರುವುದಿಲ್ಲ. ಹೀಗಾಗಿ, ಸೂಕ್ತ ಪ್ರಮಾಣದಲ್ಲಿ ಅಕ್ಕಿ ಸೇವನೆ ಮಾಡುವುದರಿಂದ ತೂಕ ಹೆಚ್ಚಳವಾಗುವ ಸಮಸ್ಯೆ ಇರುವುದಿಲ್ಲ. ಧಾನ್ಯ, ತರಕಾರಿಗಳೊಂದಿಗೆ ಅಕ್ಕಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ತೂಕ ಹೆಚ್ಚುವುದಿಲ್ಲ. ಆದರೆ, ಬಿಳಿ ಅಕ್ಕಿಯನ್ನು ಅಧಿಕ ಪ್ರಮಾಣದಲ್ಲಿ ನಿರಂತರವಾಗಿ ತಿಂದರೆ ತೂಕ ಹೆಚ್ಚಾಗಬಹುದು. ಜತೆಗೆ, ದೇಹದಲ್ಲಿ ಯಾವುದಾದರೂ ದೋಷ ತೀವ್ರವಾಗಬಹುದು. ಆಯುರ್ವೇದದ ಪ್ರಕಾರ, ವಾತ, ಪಿತ್ತ, ಕಫ ಎನ್ನುವ ಮೂರು ದೋಷಗಳಿವೆ. ವ್ಯಕ್ತಿಯ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಅಕ್ಕಿಯ ಅಧಿಕ ಸೇವನೆ ಮಾಡಿದಾಗ ದೋಷಗಳಲ್ಲಿ ವ್ಯತ್ಯಾಸವಾಗಬಹುದು.
• ಜೀರ್ಣಕ್ರಿಯೆಗೆ (Digest) ಉತ್ತಮ
ಅಕ್ಕಿಯಿಂದ ಮಾಡುವ ಆಹಾರಗಳು ಪಚನಕ್ರಿಯೆಗೆ ಅನುಕೂಲವಾಗಿವೆ. ಹೀಗಾಗಿ, ರಾತ್ರಿ ಊಟಕ್ಕೆ (Dinner) ಅಕ್ಕಿಯನ್ನು ಮಿತವಾಗಿ ಬಳಕೆ ಮಾಡುವುದು ಅನುಕೂಲ ಎನ್ನಲಾಗುತ್ತದೆ. ಇದರಿಂದ ಹಾಸಿಗೆಗೆ ಹೋಗುವ ಮುನ್ನವೇ ಆಹಾರ ಜೀರ್ಣವಾಗಿರುತ್ತದೆ. ಜೀರ್ಣಾಂಗದ ಸಮಸ್ಯೆ ಉಳ್ಳವರಿಗೆ ಅಕ್ಕಿಯನ್ನೇ ಊಟಕ್ಕೆ ಸೂಚಿಸುವುದು ಇದೇ ಕಾರಣಕ್ಕೆ. ಮೃದುವಾಗಿ ಬೇಯಿಸಿದ ಅಕ್ಕಿ ಹೊಟ್ಟೆಗೆ ಹಿತ ನೀಡುತ್ತದೆ.
ದೇವಸ್ಥಾನದ ಊಟ ಆರೋಗ್ಯಕರ, ತಪ್ಪು ಕಲ್ಪನೆ ಬೇಡ: ಖ್ಯಾತ ಡಯಟೇಶಿಯನ್ ಹೇಳಿದ್ದೇನು?
• ಅಕ್ಕಿಯಿಂದ ಶಕ್ತಿ (Energy)
ಅಕ್ಕಿಯಲ್ಲಿ ಉತ್ತಮ ಕಾರ್ಬೋಹೈಡ್ರೇಟ್ (Carbohydrate) ಇರುವುದರಿಂದ ದೇಹಕ್ಕೆ ಸೂಕ್ತ ಶಕ್ತಿ ಸಿಗುತ್ತದೆ. ಕ್ರಿಯಾಶೀಲವಾಗಿರುವ ಜನರಿಗೆ ಅಕ್ಕಿ ಅತ್ಯುತ್ತಮ ಆಹಾರ. ದಿನವಿಡೀ ದೈಹಿಕ ಶ್ರಮದ ಕೆಲಸ (Work) ಮಾಡುವವರಿಗೆ ಅಕ್ಕಿ ನಿರಂತರವಾಗಿ ಶಕ್ತಿ ನೀಡುವುದರಿಂದ ಸುಸ್ತಾಗುವುದಿಲ್ಲ.
ಯಾವ ಅಕ್ಕಿ ಬೆಸ್ಟ್?
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರಿವಿಗೆ ಬಂದಿರುವ ಸಂಗತಿ ಎಂದರೆ, ಕೆಂಪು ಅಕ್ಕಿ (Red Rice) ಆರೋಗ್ಯಕ್ಕೆ ಉತ್ತಮ ಎನ್ನುವುದು. ಆಯುರ್ವೇದ ದೇಹಕ್ಕೆ ಆರೋಗ್ಯಕ್ಕೆ ಪೂರಕ ಎಂದು ಹೇಳುವುದು ಇದೇ ಅಕ್ಕಿಯನ್ನೇ ಹೊರತು ಬಿಳಿ ಅಕ್ಕಿಯನ್ನಲ್ಲ. ಕೆಂಪು ಅಕ್ಕಿಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಆದರೆ, ಬಿಳಿ ಅಕ್ಕಿ ಹಾನಿಯುಂಟುಮಾಡುತ್ತದೆ.