
ಇದು ಸ್ಟಾರ್ಟಪ್ (Startup)ಗಳ ಯುಗ. ಎಲ್ಲ ಕ್ಷೇತ್ರಗಳಲ್ಲೂ ನವೋದ್ಯಮಗಳು ಸದ್ದು ಮಾಡುತ್ತಿವೆ. ಹೊಸ ಹೊಸ ಆವಿಷ್ಕಾರಗಳು (Inventions), ಸೇವೆಗಳನ್ನು (Services) ನೀಡಲು ಮುಂದಾಗುತ್ತಿವೆ. ಇದಕ್ಕೆ ಆರೋಗ್ಯ (Health) ಕ್ಷೇತ್ರವೂ ಹೊರತಲ್ಲ. ನಮ್ಮ ದೇಶದಲ್ಲಂತೂ ಆರೋಗ್ಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಅಪಾರ. ಎಲ್ಲರಿಗೂ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕೇವಲ ಸರ್ಕಾರದಿಂದಷ್ಟೇ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನವೋದ್ಯಮಗಳೂ ಈಗ ಕೈ ಜೋಡಿಸುತ್ತಿವೆ. ಆದರೆ, ಮಹಿಳಾ ಆರೋಗ್ಯಕ್ಕೆಂದೇ ಮೀಸಲಾದ ಸ್ಟಾರ್ಟಪ್ ಗಳು ಕಡಿಮೆ. ಬೆಂಗಳೂರು ಮೂಲದ “ಪ್ರೊಆಕ್ಟಿವ್ ಫಾರ್ ಹರ್’ (Proactive For Her) ಎನ್ನುವ ನವೋದ್ಯಮವೊಂದು ಮಹಿಳೆಯ ಆರೋಗ್ಯ ರಕ್ಷಣೆಗಾಗಿ ವಿವಿಧ ಸೇವೆ ನೀಡಲು ಬದ್ಧವಾಗಿದೆ. ಪ್ರಿವೆಂಟಿವ್ ಮೆಡಿಸಿನ್ ಗೆ ಆದ್ಯತೆ ನೀಡುತ್ತಿದೆ.
ಮಹಿಳೆಯರ ಲೈಂಗಿಕ ಹಾಗೂ ಮಾಸಿಕ ಋತುಚಕ್ರಕ್ಕೆ ಸಂಬಂಧಿಸಿ “ಪ್ರೊಆಕ್ಟಿವ್ ಫಾರ್ ಹರ್’ ಕೆಲಸ ಮಾಡುತ್ತಿದೆ. ಡಿಜಿಟಲ್ ಕ್ಲಿನಿಕ್ (Digital Clinic) ಮಾದರಿಯಲ್ಲಿದ್ದ ಈ ಸೇವೆ ಇತ್ತೀಚೆಗಷ್ಟೇ ಆಫ್ ಲೈನ್ ಮಾದರಿಗೂ ಹೊರಳಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ಕ್ಲಿನಿಕ್ ಆರಂಭಿಸಲಾಗಿದ್ದು, ಮಹಿಳೆಯ ಪ್ರಾಥಮಿಕ ಮತ್ತು ಪ್ರಿವೆಂಟಿವ್ ಹೆಲ್ತ್ ಕೇರ್ (Preventive Healthcare) ಕ್ಷೇತ್ರದಲ್ಲಿ ಹಲವು ವಿನೂತನ ಸಾಧ್ಯತೆಗಳನ್ನು ಪರಿಚಯಿಸಿದೆ.
ಮುಜುಗರವಿಲ್ಲ....
ಮಹಿಳೆಯರ ಆರೋಗ್ಯವೆಂದರೆ ಕೇಳಬೇಕೆ? ಮುಟ್ಟು, ಲೈಂಗಿಕತೆ (Sex), ಗರ್ಭಧಾರಣೆ ಮುಂತಾದ ಸಂಗತಿಗಳನ್ನು ಇನ್ನೂ ಮುಜುಗರಪಟ್ಟುಕೊಳ್ಳುವ ವಿಚಾರಗಳಂತೆಯೇ ಭಾವಿಸಲಾಗುತ್ತದೆ. ಈ ವಿಷಯಗಳ ಕುರಿತು ಮುಕ್ತವಾದ ಮಾತುಕತೆ ನಡೆಯುವುದೇ ಕಡಿಮೆ. ಹೀಗಾಗಿ, ಮಹಿಳೆಯರಿಗೂ ವೈದ್ಯರನ್ನು ಹೊರತುಪಡಿಸಿ ಬೇರೆಯವರಲ್ಲಿ ಈ ಸಂಗತಿಗಳ ಕುರಿತು ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ, ಅದಕ್ಕಾಗಿ ಕ್ಲಿನಿಕ್ ಗೆ ಹೋಗಬೇಕು, ಕೇಳಬೇಕೆಂದುಕೊಂಡ ಅನುಮಾನಗಳು ಗಡಿಬಿಡಿಯಲ್ಲಿ ಗಂಟಲಿನಲ್ಲೇ ಉಳಿದುಹೋಗುತ್ತವೆ. ಇಂತಹ ಸಮಸ್ಯೆಗಳ ನಿವಾರಣೆಗೆ “ಪ್ರೊಆಕ್ಟಿವ್ ಫಾರ್ ಹರ್’ ಆನ್ ಲೈನ್ ಕನ್ಸಲ್ಟೇಷನ್ ನಡೆಸುತ್ತದೆ. ಮನೆಯ ಸುರಕ್ಷಿತ ವಾತಾವರಣದಲ್ಲೇ ಕೆಲವು ಡಯಾಗ್ನೈಸ್ ಮಾಡಲಾಗುತ್ತದೆ. ಹಾಗೆಯೇ ದೀರ್ಘಾವಧಿ ಬೆಂಬಲ ವ್ಯವಸ್ಥೆಯನ್ನೂ ನೀಡುತ್ತದೆ. “ಪ್ರೊಆಕ್ಟಿವ್ ಫಾರ್ ಹರ್’ ಸಂಸ್ಥೆಯ ಮೂಲ ಉದ್ದೇಶವೆಂದರೆ, ರೋಗಿ ಕೇಂದ್ರಿತ, ಮುಕ್ತ ಹಾಗೂ ಕಾಳಜಿಯುಕ್ತ ಸೇವೆ ನೀಡುವುದು. ಇದೇ ದೃಷ್ಟಿಕೋನದಿಂದ ಆರಂಭವಾಗಿರುವ ಈ ಸಂಸ್ಥೆಯು ಮಹಿಳೆಯರಿಗೆ ನಿಯಮಿತ ತಪಾಸಣೆಗೆ ಒಳಗಾಗುವಂತೆ ಮೊಟ್ಟಮೊದಲು ಪ್ರೇರಣೆ ನೀಡುತ್ತದೆ. ಏಕೆಂದರೆ, ಮಹಿಳೆಯರು ತಮ್ಮ ಆರೋಗ್ಯ ಹದಗೆಟ್ಟರೂ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಕಡಿಮೆ. ಅವರು ವೈದ್ಯರ ಬಳಿ ಹೋಗುವುದು ಮೊಟ್ಟಮೊದಲ ಆದ್ಯತೆ. ಬಳಿಕ, ನಿಯಮಿತ ತಪಾಸಣೆಯ ಮೂಲಕ ಅವರಿಗೆ ಅಗತ್ಯ ಸೇವೆ ನೀಡಲು ಸಾಧ್ಯ ಎನ್ನುವುದು ಸಂಸ್ಥೆಯ ಧೋರಣೆ.
ಇದನ್ನೂ ಓದಿ: ಸಣ್ಣಗಾಗ್ಬೇಕಾ ? ಸರಿಯಾದ ರೀತಿಯಲ್ಲಿ ನೀರು ಕುಡೀರಿ ಸಾಕು
ಎಚ್ಪಿವಿ ವ್ಯಾಕ್ಸೀನ್, ಪ್ಯಾಪ್ ಸ್ಮಿಯರ್ ಪರೀಕ್ಷೆ, ಥರ್ಮಲ್ ಮ್ಯಾಮೋಗ್ರಾಮ್, ಸಿಎ-125 ಮುಂತಾದ ಪ್ರಾಥಮಿಕ ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಮುಂದೊದಗಬಹುದಾದ ಆರೋಗ್ಯ ಅಪಾಯಗಳನ್ನು ತಡೆಯುವಲ್ಲಿ ಈ ಪರೀಕ್ಷೆಗಳು ಬಹುಮುಖ್ಯ ಕೊಡುಗೆ ನೀಡುತ್ತವೆ.
“ಪ್ರೊಆಕ್ಟಿವ್ ಫಾರ್ ಹರ್’ ಸಿಇಒ ಹಾಗೂ ಸ್ಥಾಪಕಿ ಅನಿತಾ ಜಾಕೋಬ್, “ಕಳೆದ ಎರಡು ವರ್ಷಗಳಿಂದ ಮಹಿಳಾ ಕೇಂದ್ರಿತ ಸೇವೆ ನೀಡುತ್ತ ನಾವು ಮಹಿಳೆಯರ ಆರೋಗ್ಯದ ಕುರಿತಾಗಿ ಆಳವಾದ ಅರಿವನ್ನು ಪಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಸೇವೆ ಲಭ್ಯವಾಗುವಂತೆ ಮಾಡುತ್ತೇವೆ’ ಎಂದು ಹೇಳುತ್ತಾರೆ.
ಇದನ್ನೂ ಓದಿ: ಮಕ್ಕಳಿಗೆ ಬಟ್ಟೆ ಖರೀದಿಸುವಾಗ ಹುಷಾರ್ ! ಉಡುಪುಗಳು ವಿಷಕಾರಿ ರಾಸಾಯನಿಕ ಹೊಂದಿರುತ್ತವೆ
ಮಹಿಳೆಯರು ಹರೆಯಕ್ಕೆ ಕಾಲಿಟ್ಟರೆಂದರೆ ಸಾಕು. ಹಲವು ಏರಿಳಿತಗಳಿಗೆ ಒಳಗಾಗುತ್ತಾರೆ. ಮದುವೆಯ ಮುನ್ನ, ಮದುವೆಯ ಬಳಿಕ, ಮಗುವಾದ ನಂತರ, ಮಧ್ಯವಯಸ್ಸು, ಮೆನೋಪಾಸ್ (Menopause) ಹೀಗೆಯೇ ಮಹಿಳೆಯರ ಆರೋಗ್ಯಚಕ್ರದಲ್ಲಿ ಏರಿಳಿತಗಳು ಸಂಭವಿಸುತ್ತಲೇ ಇರುತ್ತವೆ. ಮಹಿಳೆಯರ ಸೂಕ್ಷ್ಮ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು “ಪ್ರೊಆಕ್ಟಿವ್ ಫಾರ್ ಹರ್’ ಕೆಲಸ ಮಾಡುತ್ತಿದೆ. ಇಂತಹ ನವೋದ್ಯಮಗಳ ಸಂಖ್ಯೆ ಹೆಚ್ಚಬೇಕಿದೆ. ಎಲ್ಲ ಮಹಿಳೆಯರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.