ಕ್ಯಾನ್ಸರ್‌ಗಳಲ್ಲಿಯೇ ಬಹಳ ನೋವುಂಟು ಮಾಡುವುದು ಹೊಟ್ಟೆಯಲ್ಲಿ ಕ್ಯಾನ್ಸರ್ ಆದಾಗ. ಹೀಗೆ ಹೊಟ್ಟೆಯ ಕ್ಯಾನ್ಸರ್ ಆದಾಗ ಕೇವಲ ಹೊಟ್ಟೆನೋವಲ್ಲ, ಬೇರೆ ಬೇರೆ ರೀತಿಯಲ್ಲಿ ಇದರ ಲಕ್ಷಣಗಳಿರುತ್ತವೆ. ಅವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಮುಖ್ಯ.
ಗ್ಯಾಸ್ಟಿಕ್ ಕ್ಯಾನ್ಸರ್ ಎಂದೂ ಕರೆಯಲಾಗುವ ಹೊಟ್ಟೆಯ ಕ್ಯಾನ್ಸರ್ ಅಪಾಯಕಾರಿ ಏಕೆಂದರೆ ಅದು ಕ್ಯಾನ್ಸರ್ ಸೆಲ್‌ಗಳು ಹೊಟ್ಟೆಯ ತುಂಬಾ ಹಬ್ಬುವವರೆಗೂ ತಿಳಿಯುವುದೇ ಇಲ್ಲ. ಹೌದು, ಸ್ಟೊಮಕ್ ಕ್ಯಾನ್ಸರ್‌ನ ಲಕ್ಷಣಗಳು ಅದು ಗಂಭೀರ ಹಂತ ತಲುಪುವವರೆಗೆ ಸೈಲೆಂಟ್ ಆಗಿಯೇ ಇರುತ್ತವೆ. ಆರಂಭದ ಹಂತಗಳಲ್ಲಿಯೇ ಗುರುತಿಸಿದರೆ ಶೇ.90ರಷ್ಟು ಜನರನ್ನು ಗುಣಮುಖರಾಗಿಸಬಹುದು. ಆದರೆ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರೆ ಮಾತ್ರ ಉಳಿಸಬಹುದಾದ ಸಾಧ್ಯತೆ ಕೇವಲ ಶೇ.1ರಷ್ಟು.
ಕ್ಯಾನ್ಸರ್‌ಗಳಲ್ಲಿಯೇ ಬಹಳ ನೋವುಂಟು ಮಾಡುವುದು ಹೊಟ್ಟೆಯಲ್ಲಿ ಕ್ಯಾನ್ಸರ್ ಆದಾಗ. ಹೀಗೆ ಹೊಟ್ಟೆಯ ಕ್ಯಾನ್ಸರ್ ಆದಾಗ ಕೇವಲ ಹೊಟ್ಟೆನೋವಲ್ಲ, ಬೇರೆ ಬೇರೆ ರೀತಿಯಲ್ಲಿ ಇದರ ಲಕ್ಷಣಗಳಿರುತ್ತವೆ. ಸಾಮಾನ್ಯವಾಗಿ ಹೆಚ್ಚಿನವರು ಈ ಲಕ್ಷಣಗಳನ್ನು ಕಡೆಗಣಿಸುವುದೇ ಹೆಚ್ಚು. ಆದರೆ ತಡವಾಗುವ ಮೊದಲು ವಿಶೇಷ ಗಮನ ಕೊಟ್ಟು ಈ ಲಕ್ಷಣಗಳನ್ನು ಗುರುತಿಸಿಕೊಂಡರೆ ಚಿಕಿತ್ಸೆ ಸುಲಭವಾಗುತ್ತದೆ. ಇಂಥ ಲಕ್ಷಣಗಳ ಬಗ್ಗೆ ಇಲ್ಲಿ ಕೊಡಲಾಗಿದೆ.
undefined
ಮಲದಲ್ಲಿ ವ್ಯತ್ಯಾಸ
ಮಲದ ಗಾತ್ರದಲ್ಲಿ ಬದಲಾವಣೆ, ಪದೇ ಪದೇ ಬೇಧಿಯಾಗುವುದು, ಮಲಬದ್ಧತೆ ಕಾಡುವುದು ಎಲ್ಲವೂ ಜೀರ್ಣಾಂಗ ನಾಳದಲ್ಲಿ ಕ್ಯಾನ್ಸರ್ ಇರುವುದನ್ನು ಸೂಚಿಸುತ್ತಿರಬಹುದು. ಇದರೊಂದಿಗೆ ಯಾವಾಗಲೂ ಹೊಟ್ಟೆಯಲ್ಲಿ ಕಿರಿಕಿರಿ ಅನುಭವವಾಗುತ್ತಿರುತ್ತದೆ. ಇದು ಹೊಟ್ಟೆಯ ಕ್ಯಾನ್ಸರ್‌ನ ಬಹಳ ಆರಂಭಿಕ ಲಕ್ಷಣಗಳಲ್ಲೊಂದು. ಮಲದಲ್ಲಿ ರಕ್ತ ಹೋದರೆ ಅದೂ ಕೂಡಾ ಎಚ್ಚರಿಕೆ ಗಂಟೆ ಕೊಟ್ಟಂತೆ. ತಕ್ಷಣ ವೈದ್ಯರನ್ನು ಕಾಣಬೇಕು.
ಹೊಟ್ಟೆ ನೋವು
ಹೊಟ್ಟೆ ನೋವು ಪದೇ ಪದೇ ಬರುತ್ತಿದ್ದು ನಿಧಾನವಾಗಿ ಅದು ನಿಮ್ಮ ದೈನಂದಿನ ಸಂಗಾತಿಯೇ ಆಗುತ್ತಿದೆ ಎಂದರೆ ಹೊಟ್ಟೆಯಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯಾಗುತ್ತಿದೆ ಎಂದರ್ಥ. ಹೀಗಾಗಿ, ಹೆಚ್ಚು ದಿನಗಳ ಕಾಲ ಹೊಟ್ಟೆನೋವಿದ್ದರೆ ಅದನ್ನು ಕಡೆಗಣಿಸದೆ ಪರೀಕ್ಷೆ ಮಾಡಿಸಿಕೊಳ್ಳಿ.
ಹಸಿವಿಲ್ಲದಿರುವುದು
ದೇಹದಲ್ಲಿ ಬಹಳಷ್ಟು ಸಣ್ಣಪುಟ್ಟ ಸಮಸ್ಯೆಗಳಾದಗಲೂ ಹಸಿವಿಲ್ಲದಂತೆ ಆಗುತ್ತದೆ. ಅಲ್ಸರ್ ಆದಾಗಲೂ ಹಸಿವು ಕಳೆದುಕೊಳ್ಳುತ್ತಾರೆ. ಆದರೆ, ಆಹಾರದ ಮೇಲೆ ಬಹಳ ದಿನದ ಕಾಲ ಈ ಜಿಗುಪ್ಸೆ ಉಳಿದರೆ ಅದು ಹೊಟ್ಟೆಯಲ್ಲಿ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ಸೂಚಿಸುತ್ತಿರಬಹುದು.
ವಿಪರೀತ ತೂಕ ಇಳಿದರೆ
ತೂಕ ಇಳಿಯುವಿಕೆ ನಿಧಾನವಾಗಿದ್ದರೆ, ಹಂತಹಂತವಾಗಿ ಸಕಾರಣವಾಗಿದ್ದರೆ ತಲೆ ಕೆಡಿಸಿಕೊಳ್ಳುವ ಪ್ರಮೇಯವಿಲ್ಲ. ಆದರೆ, ನೀವು ಡಯಟ್ ಮಾಡದೆಯೂ, ಸುಖಾಸುಮ್ಮನೆ ತೂಕ ಇಳಿಯುತ್ತಲೇ ಹೋಗುತ್ತಿದೆ ಎಂದರೆ ಇದು ಕಡೆಗಣಿಸುವಂಥ ವಿಷಯವೇ ಅಲ್ಲ. ಇದು ಹೊಟ್ಟೆಯ ಕ್ಯಾನ್ಸರ್‌ನ ವಾರ್ನಿಂಗ್ ಸೈನ್.
ಎದೆಯುರಿ
ಎದೆಯುರಿ, ಅಜೀರ್ಣಗಳು ಸ್ಟೊಮಕ್ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣ. ಗರ್ಭಿಣಿಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಹಾಗೆ ಪ್ರಗ್ನೆನ್ಸಿ ಮತ್ತಿತರೆ ಯಾವುದೇ ಗೋಚರ ಕಾರಣಗಳಿಲ್ಲದೆ ಎದೆಯುರಿ ಬರುತ್ತಿದ್ದಲ್ಲಿ ಕ್ಯಾನ್ಸರ್‌ಗಾಗಿ ಪರೀಕ್ಷೆ ಮಾಡಿಸಬೇಕು.
ನುಂಗಲು ಕಷ್ಟ
ಕೆಲವೊಮ್ಮೆ ಆಹಾರ ನುಂಗಲು ಕಷ್ಟವಾಗುತ್ತಿದೆ ಎಂದರೆ ಸ್ಟೊಮಕ್ ಕ್ಯಾನ್ಸರ್ ಈಸೋಫ್ಯಾಗಸ್‌ಗೆ ಹಬ್ಬಿರುವ ಕಾರಣವಿರಬಹುದು. ಇದರಿಂದ ಏನಾದರೂ ತಿನ್ನಬೇಕು ಅಥವಾ ಕುಡಿಯಬೇಕೆಂದಾಗ ಕೆಮ್ಮು ಬರುವುದು, ಗಂಟಲು ಒತ್ತಿದಂತಾಗುವ ಅನುಭವವಾಗಬಹುದು. ಊಟ ಮಾಡುತ್ತಿದ್ದಂತೆಯೇ ಊಟ ಬಾಯಿಗೆ ಬಂದಂತೆನಿಸಬಹುದು.
ಬೇಗ ಹೊಟ್ಟೆ ತುಂಬುವುದು
ಆಹಾರ ತಿನ್ನುವಾಗ ಮುಂಚಿನಂತೆ ಈಗ ತಿನ್ನಲಾಗುತ್ತಿಲ್ಲ, ಬಹಳ ಬೇಗ ಹೊಟ್ಟೆ ತುಂಬಿದಂತಾಗುತ್ತಿದೆ ಎಂದರೆ ಆ ಬಗ್ಗೆ ನೀವು ಹೆಚ್ಚಿನ ಗಮನ ಕೊಡಬೇಕು. ಹೊಟ್ಟೆಯ ಸ್ನಾಯುಗಳಿಗೆ ಆಹಾರವನ್ನು ಕರುಳುಗಳಿಗೆ ತಳ್ಳಲಾಗದ ಕಾರಣ ಹೀಗಾಗುತ್ತಿರಬಹುದು. ಹೊಟ್ಟೆಯ ಕ್ಯಾನ್ಸರ್‌ನಿಂದ ಅಲ್ಲಿ ಜಾಗವಿಲ್ಲದೆ ಬೇಗ ತುಂಬಿದಂತಾಗಬಹುದು.
ಹೊಟ್ಟೆಯ ಕ್ಯಾನ್ಸರ್‌ನಿಂದ ದೂರವುಳಿಯುವುದು ಹೇಗೆ?
ಉತ್ತಮ ಜೀವನಶೈಲಿಗೆ ಬಹಳಷ್ಟು ಕಾಯಿಲೆಗಳನ್ನು ದೂರವಿಡುವ ತಾಕತ್ತಿದೆ. ಹೊಟ್ಟೆಯ ಕ್ಯಾನ್ಸರನ್ನು ತಡೆಗಟ್ಟಲು ಕೂಡಾ ಅದು ಬಹುಮಟ್ಟಿಗೆ ಸಹಾಯಕವಾಗಿದೆ.
- ಅಲ್ಕೋಹಾಲ್ ಸೇವನೆ ಹಾಗೂ ತಂಬಾಕಿನ ಉತ್ಪನ್ನಗಳಿಂದ ದೂರವುಳಿಯುವುದು.
- ಸ್ವಚ್ಛವಾಗಿರುವ, ಸಸ್ಯಾಹಾರ ಸೇವನೆ.
- ಸ್ಮೋಕ್ಡ್ ಹಾಗೂ ಪಿಕಲ್ಡ್ ಆಹಾರಗಳಿಂದ ದೂರವುಳಿಯುವುದು.
- ಹೆಚ್ಚು ಹೆಚ್ಚು ಧ್ಯಾನ್ಯಗಳಿಂದ ಕೂಡಿದ ಆಹಾರ ಸೇವಿಸುವುದು.
- ನಿಮ್ಮ ಎತ್ತರಕ್ಕೆ ಸರಿಯಾದ ತೂಕವನ್ನು ನಿಭಾಯಿಸುವುದು
- ವರ್ಷಕ್ಕೊಮ್ಮೆ ವೈದ್ಯರಲ್ಲಿ ಫುಲ್ ಬಾಡಿ ಚೆಕಪ್ ಮಾಡಿಸುವುದು.