ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಋತುವಿನಲ್ಲಿ ಕಾಣಿಸಿಕೊಳ್ಳುವ ಕಣ್ಣಿನ ಖಾಯಿಲೆಗಳು ಸಾಕಷ್ಟಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮಡ್ರಾಸ್ ಐ ಬಗ್ಗೆ ಎಚ್ಚರವಿರಲಿ. ಗಂಭೀರ ಖಾಯಿಲೆ ಇದಲ್ಲದೆ ಹೋದ್ರೂ ನಿರ್ಲಕ್ಷ್ಯ ಮಾಡಿದ್ರೆ ಕಣ್ಣು ಕಳೆದುಕೊಳ್ಳುವ ಅಪಾಯವಿರುತ್ತದೆ.
ಸದ್ಯ ಮಡ್ರಾಸ್ ಐ ಸಮಸ್ಯೆ ಅಂದ್ರೆ ಪಿಂಕ್ ಐ ರೋಗ ಸುದ್ದಿಯಲ್ಲಿದೆ. ಮಡ್ರಾಸ್ ಐ ಸಮಸ್ಯೆ ಚೆನ್ನೈ ಹಾಗೂ ಮಂಗಳೂರು ಕರಾವಳಿ ಭಾಗದಲ್ಲಿ ಹರಡುತ್ತಿದೆ. ನಾವಿಂದು ಈ ಮಡ್ರಾಸ್ ಐ ಅಂದ್ರೇನು, ಅದರ ಲಕ್ಷಣವೇನು ಎಂಬುದರ ಮಾಹಿತಿಯನ್ನು ನಿಮಗೆ ನೀಡ್ತೇವೆ.
ಮಡ್ರಾಸ್ ಐ (Madras Eye ) ಅಂದ್ರೇನು ? : ಮಡ್ರಾಸ್ ಐ ಅನ್ನು ಪಿಂಕ್ ಐ (Pink Eye) ಎಂದೂ ಕರೆಯುತ್ತಾರೆ. ಕಾಂಜಂಕ್ಟಿವಿಟಿಸ್ (Conjunctivitis) ಎಂದೂ ಕರೆಯಲ್ಪಡುವ ಈ ರೋಗದ ಹೆಸರು ಕೇಳ್ತಿದ್ದಂತೆ ಜನರು ಹೆದರುತ್ತಾರೆ. ಆದ್ರೆ ವಿವಿಧ ವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ಕಣ್ಣಿನ ಸೋಂಕು ಇದು. ಈ ಕಣ್ಣಿನ ಕಾಯಿಲೆಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಕೆಲವು ಸರಳ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ಕಣ್ಣಿನ ರಕ್ಷಣೆ ಮಾಡಬಹುದು.
ಒಂದ್ವೇಳೆ ಮಡ್ರಾಸ್ ಐಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲವೆಂದ್ರೆ ಗಂಭೀರ ದೃಷ್ಟಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಹಾಗಾಗಿ ಸಮಸ್ಯೆ ಶುರುವಾದ ಆರಂಭದಲ್ಲಿಯೇ ವೈದ್ಯರನ್ನು ಭೇಟಿಯಾದ್ರೆ ಬೇಗ ಗುಣಮುಖರಾಗಬಹುದು. ಮಡ್ರಾಸ್ ಐ ಸಾಂಕ್ರಾಮಿಕ (Infectious) ರೋಗವಾಗಿದೆ. ಹಾಗಾಗಿ ಕಚೇರಿಯಲ್ಲಿ ಕೆಲಸ ಮಾಡುವವರು, ಅಂಗಡಿಕಾರರು, ಶಾಲಾ- ಕಾಲೇಜು ಮಕ್ಕಳು, ಶಿಕ್ಷಕರು ವಿಶೇಷವಾಗಿ ಈ ಕಾಂಜಂಕ್ಟಿವಿಟಿಸ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದು ಹೆಚ್ಚು.
ಮಡ್ರಾಸ್ ಐಗೆ ಕಾರಣ :
1. ವೈರಸ್ : ಮಡ್ರಾಸ್ ಐಗೆ ಮುಖ್ಯ ಕಾರಣ ವೈರಸ್. ಇದು ವೈರಸ್ ನಿಂದ ಉಂಟಾಗುವ ಖಾಯಿಲೆಯಾಗಿದ್ದು, ಕೆಲ ದಿನಗಳಲ್ಲಿ ತಾನಾಗಿಯೇ ಇದು ಗುಣವಾಗುತ್ತದೆ.
2. ಬ್ಯಾಕ್ಟೀರಿಯಾ : ಮಡ್ರಾಸ್ ಐ ಕೆಲ ಬ್ಯಾಕ್ಟೀರಿಯಾದಿಂದ ಕೂಡ ಉಂಟಾಗುತ್ತದೆ. ಬ್ಯಾಕ್ಟೀರಿಯಾದಿಂದ ಮಡ್ರಾಸ್ ಐ ಶುರುವಾಗಿದ್ದು, ನೀವು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಬಿಟ್ಟರೆ ಗಂಭೀರವಾದ ಕಣ್ಣಿನ ಸಮಸ್ಯೆ ಎದುರಿಸಬೇಕಾಗುತ್ತದೆ.
3. ಅಲರ್ಜಿ : ಪರಾಗ, ಧೂಳು ಮತ್ತು ಪ್ರಾಣಿಗಳ ತಲೆಹೊಟ್ಟು ಮುಂತಾದ ಅಲರ್ಜಿಯನ್ನುಂಟು ಮಾಡುವ ವಸ್ತುಗಳಿಂದ ಕೂಡ ಕಣ್ಣುಗಳ ಕಿರಿಕಿರಿ ಕಾಣಿಸಿಕೊಳ್ಳುತ್ತದೆ. ಇದನ್ನು ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಎಂದು ಕರೆಯುತ್ತಾರೆ. ಇದು ಕೆಲವೊಮ್ಮೆ ನಿಮ್ಮನ್ನು ವರ್ಷಪೂರ್ತಿ ಕಾಡುತ್ತದೆ.
ಮಡ್ರಾಸ್ ಐ ಲಕ್ಷಣಗಳು : ಮಡ್ರಾಸ್ ಐನ ಪ್ರಾಥಮಿಕ ಲಕ್ಷಣವೆಂದರೆ ಕಣ್ಣಿನ ಬಣ್ಣ ಬದಲಾಗುವುದು. ನಿಮ್ಮ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಯಾವ ಕಾರಣಕ್ಕೆ ಇದು ಶುರುವಾಗಿದೆ ಎನ್ನುವುದ್ರ ಮೇಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ವೈರಲ್ ಕಾಂಜಂಕ್ಟಿವಿಟಿಸ್‌ನಲ್ಲಿ ಕಣ್ಣಿನಲ್ಲಿ ನೀರು ತುಂಬುತ್ತದೆ. ತುರಿಕೆ ಕಾಣಿಸಿಕೊಳ್ಳುತ್ತದೆ. ಒಂದು ಅಥವಾ ಎರಡೂ ಕಣ್ಣಿನಲ್ಲಿ ನೀವು ಈ ಲಕ್ಷಣ ನೋಡಬಹುದು. ಇದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಕೆಮ್ಮು ಮತ್ತು ಸೀನುವಿಕೆಯ ಮೂಲಕ ಕೂಡ ಹರಡುತ್ತದೆ.ಇನ್ನು ಬ್ಯಾಕ್ಟೀರಿಯಾದಿಂದ ಹರಡುವ ಗುಲಾಬಿ ಐನಲ್ಲಿ ಕಣ್ಣಿನ ಮೂಲೆಯಲ್ಲಿ ಜಿಗುಟಾದ, ಹಳದಿ ಅಥವಾ ಹಸಿರು ಹಳದಿ ಬಣ್ಣದ ಜಿಡ್ಡು ಹೊರಗೆ ಬರುತ್ತದೆ. ಕಣ್ಣಿನಿಂದ ನೀರು ಕೂಡ ಬರುತ್ತದೆ. ಕಣ್ಣು ರೆಪ್ಪೆಗಳು ಅಂಟಿಕೊಳ್ಳುತ್ತವೆ. ಇದು ಕೂಡ ಸಾಂಕ್ರಾಮಿಕ ಕಣ್ಣಿನ ಕಾಯಿಲೆಯಾಗಿದೆ.
ಕಣ್ಣುಗಳಲ್ಲಿ ನೀರು, ಉರಿ, ತುರಿಕೆ ಮತ್ತು ಸಾಮಾನ್ಯವಾಗಿ ಅರೆನಿದ್ರಾವಸ್ಥೆ, ಬೆಳಕಿಗೆ ಸೂಕ್ಷ್ಮತೆ ಕಾಣಿಸಿಕೊಂಡ್ರೆ ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಆಗಿದೆ ಎಂದರ್ಥ. ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಎರಡೂ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಇದು ಸಾಂಕ್ರಾಮಿಕ ರೋಗವಲ್ಲ.
ಮಡ್ರಾಸ್ ಐ ತಡೆಗಟ್ಟಲು ಏನು ಮಾಡ್ಬೇಕು ? :
ಪಿಂಕ್ ಐ ಕಾಣಿಸಿಕೊಂಡವರ ಬಟ್ಟೆಗಳು, ಟವೆಲ್, ಕರವಸ್ತ್ರಗಳನ್ನು ಎಂದೂ ಹಂಚಿಕೊಳ್ಳಬೇಡಿ.
ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ. ಕಣ್ಣುಗಳನ್ನು ಉಜ್ಜದಂತೆ ಅಥವಾ ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಿ.
ಕೈಗಳನ್ನು ಆಗಾಗ್ಗೆ ತೊಳೆಯಿರಿ. ವಿಶೇಷವಾಗಿ ಶಾಲೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಮಯ ಕಳೆಯುವಾಗ ಕೈಗಳನ್ನು ಪದೇ ಪದೇ ತೊಳೆಯಬೇಕು. ಸದಾ ಹ್ಯಾಂಡ್ ಸ್ಯಾನಿಟೈಸರ್ ಇಟ್ಟುಕೊಳ್ಳಿ.
ಮಡ್ರಾಸ್ ಐ ಕಾಣಿಸಿಕೊಂಡವರು ಅದು ಬೇರೆಯವರಿಗೆ ಹರಡದಂತೆ ಕನ್ನಡಕದ ಧರಿಸುವುದು ಒಳ್ಳೆಯದು.
ಶಾಲೆಯಲ್ಲಿ ಮಕ್ಕಳಿಗೆ ಮಡ್ರಾಸ್ ಐ ಹರಡುತ್ತಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಖಾಯಿಲೆ ಕಾಣಿಸಿಕೊಂಡ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ನಾಲ್ಕೈದು ದಿನಗಳ ನಂತ್ರ ಸೋಂಕು ಹರಡುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತ್ರ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು.