
"ವಯಸ್ಸು 40. ಗಂಡಸು(Male). ಯಾಕೋ ಲೈಫಿನ ಬಗ್ಗೆಯೇ ಜಿಗುಪ್ಸೆ ಶುರುವಾಗಿದೆ. ಯಾರ ಜೊತೆಗೂ ಮಾತನಾಡಬೇಕು ಅನಿಸಲ್ಲ. ಬೆಳ್ಳಂಬೆಳಗ್ಗೇ ಆಫೀಸಿ(Office)ಗೆ ಬಂದು ಕೆಲಸಕ್ಕೆ ಕೂತರೆ ತೂಕಡಿಕೆ ಶುರುವಾಗುತ್ತೆ. ಬಾಸ್ ಕೆಲಸ ಹೇಳಿದ ಕೂಡಲೇ ಸಿಟ್ಟು ಏರುತ್ತದೆ. ಅದನ್ನು ನಿಯಂತ್ರಿಸುವುದೂ ಕಷ್ಟವಾಗುತ್ತೆ. ಸಹೋದ್ಯೋಗಿಗಳ ತಮಾಷೆಗೆ ಹೊಡೆದು ಬಿಡೋಣ ಅನಿಸುವಷ್ಟು ಸಿಟ್ಟು. ಕೆಲಸದಲ್ಲಿ ಧ್ಯಾನವಿಲ್ಲ. ಪದೇ ಪದೇ ತಪ್ಪುಗಳು, ಬಾಸ್ ಎಲ್ಲಿ ಬೈದು ಎಲ್ಲರೆದುರು ಮರ್ಯಾದೆ ಕಳೆಯುತ್ತಾರೋ ಎಂಬ ಆತಂಕ. ದಿನವಿಡೀ ಆಯಾಸ, ಆಗಾಗ ಸಣ್ಣಗೆ ತಲೆ ನೋವು, ಒಮ್ಮೆ ಹಾಸಿಗೆಯಲ್ಲಿ ಬಿದ್ದು ನಿದ್ರಿಸಬೇಕು ಅನ್ನೋ ಮನಸ್ಥಿತಿ. ಆದರೆ ಹಾಸಿಗೆಗೆ ಬಿದ್ದರೆ ನಿದ್ರೆ ಬರಲ್ಲ. ಹೆಂಡತಿ ಕಂಡರೆ ಸಿಟ್ಟು ಏರುತ್ತೆ. ಮನೆಯಲ್ಲಿ ಯಾರು ಏನು ಮಾತಾಡಿಸಿದರೂ ರೇಗುತ್ತೆ. ಇದು ನನ್ನ ಸ್ವಭಾವವೇ ಅಲ್ಲ. ಆದರೆ ಇತ್ತೀಚೆಗೆ ಹೀಗಾಗ್ತಿರೋದರಿಂದ ಏನು ಮಾಡಲೂ ತೋಚುತ್ತಿಲ್ಲ. ನನಗೆ ಏನಾಗಿದೆ ಅಂತಲೂ ಗೊತ್ತಾಗ್ತಿಲ್ಲ'
ಇತ್ತೀಚೆಗೆ ಕೌನ್ಸಿಲಿಂಗ್(Counselling) ಸೆಂಟರ್ ಗೆ ಹೀಗೊಂದು ಸಮಸ್ಯೆ ಹೊತ್ತು ಬರುವ ಗಂಡಸರ ಸಂಖ್ಯೆ ಹೆಚ್ಚಾಗ್ತಿದೆ. ಪುರುಷರಲ್ಲೇ ಈ ಸಮಸ್ಯೆ ಹೆಚ್ಚು. ಅವರಿಗೆ ಹೆಚ್ಹೆಚ್ಚು ಆಯಾಸವಾಗುತ್ತದೆ. ಯಾವಾಗಲೂ ಒಂದು ರೀತಿಯ ಜಡತ್ವ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದಕ್ಕೆ ಹಲವು ರೀತಿಯ ಕಾರಣಗಳಿರುತ್ತವೆ. ನಿದ್ದೆಯ ಸಮಸ್ಯೆ, ಒತ್ತಡ ಕೂಡ ಇವುಗಳಲ್ಲೊಂದು.
Monsson Fashion: ಮಳೆಗಾಲದಲ್ಲಿ ಈ ಡ್ರೆಸ್ ಧರಿಸೋದು ಬೇಡ!
ದೈಹಿಕ ಮತ್ತು ಮಾನಸಿಕ ಆಯಾಸ ಕೆಲವೊಂದು ಕಾಯಿಲೆಗಳ ಲಕ್ಷಣವೂ ಹೌದು. ಹಾಗಾಗಿ ಅದನ್ನು ನಿರ್ಲಕ್ಷಿಸಬಾರದು. ಪುರುಷರು ಹೆಚ್ಚು ಸುಸ್ತಾಗಲು ಒಂದಿಷ್ಟು ಕಾರಣಗಳಿವೆ.
*ಟೆಸ್ಟೋಸ್ಟೆರಾನ್(Testosterone) ಪ್ರಮಾಣದಲ್ಲಿ ಇಳಿಕೆ ಯಾಗೋದು ಬಹುಮುಖ್ಯ ಕಾರಣ. ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಮಟ್ಟವು ಪುರುಷರಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ. ಪುರುಷರು ವಯಸ್ಸಾದಂತೆ, ವಿಶೇಷವಾಗಿ ಅವರು 40ರ ಆಸುಪಾಸಿನಲ್ಲಿದ್ದಾಗ, ಅವರ ಟೆಸ್ಟೋಸ್ಟೆರಾನ್ ಮಟ್ಟವು ವರ್ಷಕ್ಕೆ ಒಂದು ಪ್ರತಿಶತದಷ್ಟು ಕಡಿಮೆಯಾಗುತ್ತದೆ. ಟೆಸ್ಟೋಸ್ಟೆರಾನ್ ಕಡಿಮೆಯಾದಾಗ ಸೆಕ್ಸ್ ಡ್ರೈವ್ ಕಡಿಮೆಯಾಗುತ್ತದೆ ಮತ್ತು ನಿದ್ರೆಯ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಆಯಾಸ ಹೆಚ್ಚಾಗುತ್ತದೆ, ಶಕ್ತಿಯೇ ಇಲ್ಲದಂತೆ ಭಾಸವಾಗುತ್ತದೆ.
ಮಳೆಗಾಲದಲ್ಲಿ ಕಾಡೋ ಕಾಲ್ಬೆರಳಿನ ಫಂಗಸ್ ಸಮಸ್ಯೆ: ಮನೆಯಲ್ಲಿದೆ ಮದ್ದು!
*ಥೈರಾಯ್ಡ್ ಸಮಸ್ಯೆಯೂ ಇದಕ್ಕೆ ಕಾರಣವಾಗಿರಬಹುದು. ಥೈರಾಯ್ಡ್ ಹಾರ್ಮೋನ್ ಮಟ್ಟ ಕಡಿಮೆಯಾದರೆ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು. ಪುರುಷರಲ್ಲಿಯೂ ಈ ಸಮಸ್ಯೆ ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಅತಿಯಾದ ಸುಸ್ತು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಿ.
ಖಿನ್ನತೆ ಮತ್ತೊಂದು ಕಾರಣ. ಇದು ಬರಲು ಖಚಿತ ಕಾರಣ ಬೇಕಿಲ್ಲ. ನಮ್ಮ ಮನಸ್ಸಿನ ದುಃಖದಿಂದಾಗಿಯೇ ಸಾಕಷ್ಟು ದೈಹಿಕ ಸಮಸ್ಯೆಗಳೂ ಉಂಟಾಗುತ್ತವೆ. ಆಲಸ್ಯ, ಖಿನ್ನತೆ, ನಿದ್ರಾಹೀನತೆ, ಶಕ್ತಿಯ ಕೊರತೆ ಹೀಗೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಖಿನ್ನತೆಯ ಸಮಸ್ಯೆಯು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಖಿನ್ನತೆಯಿಂದಲೂ ಅತಿಯಾದ ಸುಸ್ತು ಉಂಟಾಗುತ್ತದೆ.
ನಿದ್ರಾಹೀನತೆ(Sleeplessness) ಯಿಂದಲೂ ಹೀಗಾಗಿರಬಹುದು. ಆಯಾಸಕ್ಕೆ ನಿದ್ರೆಯ ಕೊರತೆಯೂ ಕಾರಣವಾಗಬಹುದು. ನೀವು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಿದರೆ, ತಡರಾತ್ರಿಯಲ್ಲಿ ಎಚ್ಚರವಾಗುವುದು ಮತ್ತೆ ನಿದ್ದೆ ಬಾರದೇ ಇರುವುದು ಇಂಥವುಗಳಿಂದ ದಣಿವಾಗುತ್ತದೆ. ಹಾಗೇನಾದರೂ ಆದಲ್ಲಿ ಹಗಲಿನಲ್ಲಾದರೂ ಸ್ವಲ್ಪ ನಿದ್ದೆ ಮಾಡಿ.
ಸ್ನಾನ ಮಾಡುವಾಗ ಮೈ ಉಜ್ಜಲು ಬ್ರಶ್ ಬಳಸ್ತೀರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ನೋಡಿ
ಉತ್ತಮ ಆಹಾರ ಸೇವನೆ, ಪ್ರತಿ ನಿತ್ಯ ಬೆಳಗಿನ ವಾಕಿಂಗ್ ಇತ್ಯಾದಿಗಳು ಈ ಸಮಸ್ಯೆ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ನಲವತ್ತರ ನಂತರ ಶುಗರ್, ಇಸಿಜಿ, ಬಿಪಿ ಚೆಕ್ ಮಾಡೋದು ಅನಿವಾರ್ಯ. ಇವುಗಳಿಂದಲೂ ಈ ಸಮಸ್ಯೆ ಕಾಣಿಸಿಕೊಂಡಿರಬಹುದು. ಆದರೆ ಈ ಲಕ್ಷಣ ಕಂಡು ಬಂದರೆ ಮೊದಲು ಡಾಕ್ಟರ್ ಬಳಿ ತೋರಿಸಿ, ಪರಿಹಾರ ಕಂಡುಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.